ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನದೇನು ತಪ್ಪಿಲ್ಲ ಎಂದು ನಿತ್ಯಾನಂದ!

By Srinath
|
Google Oneindia Kannada News

Nithyananda
ಬಿಡದಿ, ಫೆ. 1 : ಜೈಲಿನಿಂದ ಬಿಡುಗಡೆಯಾದ ನಂತರ ಪ್ರಥಮ ಬಾರಿಗೆ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಧ್ಯಾನಪೀಠಂ ಆಶ್ರಮದ ಸ್ವಾಮಿ ನಿತ್ಯಾನಂದ, ಅತ್ಯಾಚಾರ ಸೇರಿದಂತೆ ತಮ್ಮ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ವಿವಾದಾತ್ಮಕ ವಿಡಿಯೋ ಬಗ್ಗೆ ಸಾಕಷ್ಟು ವಿಸ್ತಾರವಾಗಿ ಮಾತನಾಡಿದ ನಿತ್ಯಾನಂದ, ಅತ್ಯಾಚಾರದ ಬಲಿಪಶು ಯಾರೂ ಇಲ್ಲದಿದ್ದ ಮೇಲೆ ಅತ್ಯಾಚಾರದ ಆರೋಪ ಹೊರಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. ಈ ನಕಲಿ ವಿಡಿಯೋದಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿರುವುದು ಮಾತ್ರವಲ್ಲ, ಕೋಟಿಗೂ ಹೆಚ್ಚಿರುವ ನನ್ನ ಭಕ್ತರಿಗೆ ಘಾಸಿಯನ್ನುಂಟು ಮಾಡಿದೆ ಎಂದು ಆರೋಪಿಸಿದರು.

ವಿಡಿಯೋ ಹೊರಬಂದಾಗಿನಿಂದಲೂ ತಮಿಳುನಾಡು ಪೊಲೀಸರಿಂದ ಅನಗತ್ಯವಾಗಿ ಸಲ್ಲದ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ. ಸಾಕಷ್ಟು ಸಾಕ್ಷ್ಯಗಳನ್ನು ಕೂಡ ಸೃಷ್ಟಿಸಲಾಗಿದೆ. ಆದರೆ ನನ್ನ ಬಳಿ ಇವುಗಳ ಬಗ್ಗೆ ಸೂಕ್ತ ಸಾಕ್ಷ್ಯ ಇಲ್ಲದ್ದರಿಂದ ಮತ್ತು ನ್ಯಾಯಾಲಯದ ನಿಷೇಧವಿದ್ದರಿಂದ ಇದರ ಬಗ್ಗೆ ಮಾತಾಡಿರಲಿಲ್ಲ. ಈಗ ಪ್ರತಿ ಆರೋಪಕ್ಕೂ ನನ್ನ ಬಳಿ ಸಾಕ್ಷ್ಯ ಸಂಗ್ರಹಿಸಿದ್ದೇನೆ ಎಂದು ನುಡಿದರು.

ಶಾಂತಿಪ್ರಿಯ ಕನ್ನಡಿಗ : ತಮಿಳುನಾಡಿನಲ್ಲಿ ಇರುವ ನನ್ನ ಆಶ್ರಮಗಳ ಮೇಲೆ ದಾಳಿ ನಡೆದವು. ಆಶ್ರಮಗಳಿಗೆ ನುಗ್ಗಿ ದಾಂಧಲೆಯೆಬ್ಬಿಸಿದರು. ಪತ್ರಕರ್ತರ ಸೋಗಿನಲ್ಲಿದ್ದ ದುಷ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಆದರೆ ಕರ್ನಾಟಕದಲ್ಲಿನ ಬಿಡದಿ ಆಶಮಕ್ಕೆ ಯಾವುದೇ ಆಶ್ರಮಕ್ಕೆ ಬೆಂಕಿ ಬೀಳಲಿಲ್ಲ. ಶಾಂತಿಪ್ರಿಯ ಕನ್ನಡಿಗನಿಗೆ ನಾನು ನಿಜಕ್ಕೂ ಆಭಾರಿ ಎಂದು ಸ್ವಾಮಿ ನಿತ್ಯಾನಂದ ಹೇಳಿಕೊಂಡರು. ನನ್ನ ಭಕ್ತರ ಮೇಲೆ ದೌರ್ಜನ್ಯ ನಡೆದಿದೆ. ಹೆಣ್ಣುಮಕ್ಕಳ ಸೀರೆ ಎಳೆದ ಪ್ರಸಂಗಗಳೂ ನಡೆದವು. ಆದರೆ ನಾನು ಮಾಧ್ಯಮಗಳೂ ಸೇರಿದಂತೆ ಯಾರ ವಿರುದ್ಧವೂ ಪೊಲೀಸರಿಗೆ ದೂರು ನೀಡಿಲ್ಲ ಎಂದರು.

ಈ ಮಧ್ಯೆ, ಬ್ಲ್ಯಾಕ್‌ಮೇಲ್ ತಂತ್ರ ನನ್ನ ಮೇಲೆ ಪ್ರಯೋಗಿಸಿದರು. 100 ಕೋಟಿ ರು. ನೀಡಿದರೆ ಪ್ರಕರಣದಿಂದ ಮುಕ್ತಿ ದೊರಕಿಸುವುದಾಗಿ ಪ್ರಭಾವಿಗಳಿಬ್ಬರು ನನ್ನ ಬೆನ್ನುಬಿದ್ದರು. ಆದರೆ ಅದಕ್ಕೆ ನಾನು ಸೊಪ್ಪು ಹಾಕಲಿಲ್ಲ. ಕೊನೆಗೆ 60 ಕೋಟಿಯನ್ನಾದರೂ ನೀಡುವಂತೆ ಒತ್ತಡಹಾಕಿದರು ಅದಕ್ಕೂ ನಾನು ಜಗ್ಗಲಿಲ್ಲ. ಒಂದು ಪೈಸೆಯನ್ನೂ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದೆ. ಆದಾಗ್ಯೂ ನನ್ನ ಕೆಲವು ಭಕ್ತರಿಂದ ಒಂದಷ್ಟು ಹಣ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದರು.

ಮೈಕಲ್ ಜಾಕ್‌ಸನ್ ಬಳಿಕ ನೆಟ್ ನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗಿದ್ದು ನನ್ನ ರಾಸಲೀಲೆ ಪ್ರಕರಣವೇ ಎಂದು ನಿತ್ಯಾನಂದ ವ್ಯಂಗ್ಯವಾಗಿ ನುಡಿದರು. 24 ಗಂಟೆಗಳಲ್ಲಿ ನನ್ನ ಪಾಸ್‌ಪೋರ್ಟ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಿಓಡಿ ಪೊಲೀಸರು ಇದುವರೆಗೂ ಅದನ್ನು ಹಿಂದಿರುಗಿಸಿಲ್ಲ. ಇದು ಖಂಡಿತ ನ್ಯಾಯಸಮ್ಮವಲ್ಲ. ನವೆಂಬರ್ ತಿಂಗಳಲ್ಲಿ ಕಾನೂನುಬಾಹಿರ ತಂತ್ರಗಳ ಮೂಲಕ ಸಿಓಡಿ ಪೊಲೀಸರು ನನ್ನನ್ನು ಕಾಡತೊಡಗಿದರು ಎಂದೂ ಅವರು ಅಳಲು ತೋಡಿಕೊಂಡರು. ಇನ್ನು ಬ್ಯಾಂಕ್ ಖಾತೆಗಳನ್ನೂ ಸ್ಥಗಿತಗೊಳಿಸಲಾಗಿತ್ತು. ಯಾವುದೇ ಆರ್ಥಿಕ ಅಪರಾಧ ಆರೋಪ ಇಲ್ಲದೆಯೇ ನನ್ನ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಆದರೆ ಕನಾಟಕ ಹೈಕೋರ್ಟ್ ಇದನ್ನು ತೆರವುಗೊಳಿಸಿತು ಎಂದರು.

ನಿತ್ಯಾನಂದ ಆಂದೋಲನ : ನನಗೆ ವಿಶ್ವದಾದ್ಯಂತ 197 ರಾಷ್ಟ್ರಗಳಲ್ಲಿ 1 ಕೋಟಿಗೂ ಅಧಿಕ ಅನುಯಾಯಿಗಳಿದ್ದಾರೆ. ಧಾರ್ಮಿಕತೆ ಮೇಲೆ ನಡೆದ ಇಂತಹ ದಬ್ಬಾಳಿಕೆಯನ್ನು ಸಹಿಸಲಾಗದು. ಆದ್ದರಿಂದ ಧಾರ್ಮಿಕವಾಗಿ ತುಳಿತಕ್ಕೊಳಗಾದ ಧಾರ್ಮಿಕ ನಾಯಕರ ಬೃಹತ್ ಸಮಾವೇಶ ಇದೇ ಮಾರ್ಚ್ 2ರಿಂದ 23ರವರೆಗೆ ಆಯೋಜಿಸಿರುವೆ ಎಂದು ಸ್ವಾಮೀಜಿ ತಿಳಿಸಿದರು.

21 ದಿನಗಳ ಈ ಧಾರ್ಮಿಕ ಸಮಾವೇಶದಲ್ಲಿ ವಿಶ್ವದಾದ್ಯಂತ ಧಾರ್ಮಿಕ ವಿಜ್ಞಾನಿಗಳು, ಬುದ್ಧಿ ಜೀವಿಗಳು, ಧರ್ಮ ಸಂಸ್ಥಾಪಕರು ಪಾಲ್ಗೊಳ್ಳಲಿದ್ದಾರೆ. ನನ್ನನ್ನು ಬೆಂಬಲಿಸಿ, ರಕ್ತದಲ್ಲಿ ಬೆರಳುಮುದ್ರೆಗಳನ್ನು ಒತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಪತ್ರಗಳು ನನ್ನ ಬಳಿಗೆ ಬಂದಿವೆ. ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕ ನಾಯಕರು ನನಗೆ ಬೆಂಬಲ ಸೂಚಿಸಿದ್ದಾರೆ. ನನ್ನ ವಿರುದ್ಧ ನಡೆದ ಪಿತೂರಿಯನ್ನು ಖಂಡಿಸಿ, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಈ ಪತ್ರಗಳನ್ನು ಪ್ರಧಾನಿ, ರಾಷ್ಟ್ರಪತಿ, ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ಒಂದು ವೇಳೆ ಈ ಪ್ರಯತ್ನ ವಿಫಲವಾದರೆ ಎರಡೂ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಪಾದಯಾತ್ರೆ ಕೈಗೊಳ್ಳುವುದಾಗಿ ನಿತ್ಯಾನಂದ ನುಡಿದರು.

ಕುಂಡಿಲಿನಿ ಯಾಗ : ಕುಂಡಿಲಿನಿ ಯಾಗದ ಪರಿಣಾಮಗಳ ಬಗ್ಗೆ ಸ್ವತಂತ್ರ ಸಂಶೋಧಕರು 18 ದಿನಗಳ ಕಾಲ ಅಧ್ಯಯನ ನಡೆಸಿದ್ದರು. ಮಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಈ ಅಧ್ಯಯನ ಇತ್ತೀಚೆಗೆ ನಡೆದಿತ್ತು. ಕುಂಡಿಲಿನಿ ಯಾಗದಿಂದ ಮನುಷ್ಯನ ಆಯಸ್ಸನ್ನು ಹೆಚ್ಚಿಸಬಹುದು. ಅಲೊಪತಿ, ಹೋಮಿಯೊಪತಿ ಕೊನೆಗೆ ಯೋಗದಿಂದಲೂ ಮನುಷ್ಯನ ಆಯುಷ್ಯ ವೃದ್ಧಿ ಸಾಧ್ಯವಾಗುವುದಿಲ್ಲ. ಕೇವಲ ಕುಂಡಿಲಿನಿ ಶಕ್ತಿ ಮೂಲಕ ಇದು ಸಾಧ್ಯವಾಗಲಿದೆ ಎಂದರು.

ಅಷ್ಟಕ್ಕೂ ನಾನ್ಯಾಕೆ ಈ ಅಧ್ಯಯನಕ್ಕೆ ಕೈಹಾಕಿದೆನೆಂದರೆ, ನಾನು ನನ್ನ ಅನುಯಾಯಿಗಳ ಮೇಲೆ ಪ್ರಯೋಗಿಸುತ್ತಿರುವುದೇ ಈ ಕುಂಡಿಲಿನಿ ಶಕ್ತಿಯನ್ನು. ಆದ್ದರಿಂದ ಎಲ್ಲ ರೀತಿಯಿಂದಲೂ ಇದರ ಮಹಿಮೆಯನ್ನು ಸಾಬೀತುಪಡಿಸುವ ಹೊಣೆಗಾರಿಕೆ ನನ್ನ ಮೇಲಿತ್ತು ಎಂದು ನಿತ್ಯಾನಂದ ತಮ್ಮನ್ನು ಬಲವಾಗಿ ಸಮರ್ಥಿಸಿಕೊಂಡರು.

ವಶೀಕರಣ, ಮನೋಅಧೀನತೆಯಿಂದ ಭಕ್ತರನ್ನು ತನ್ನತ್ತ ಸೆಳೆದು ವಂಚಿಸುತ್ತಾನೆ ಎಂಬ ಆರೋಪ ಎಲ್ಲೆಡೆ ಕೇಳಿಬಂದಿತ್ತು. ಆದ್ದರಿಂದ ನನ್ನ ಶಕ್ತಿಯನ್ನು ತನ್ಮೂಲಕ ಕುಂಡಿಲಿನಿ ಶಕ್ತಿಯನ್ನು ಜಗತ್ತಿಗೇ ತಿಳಿಸುವಂತೆ ವಿಜ್ಞಾನಿಗಳನ್ನು ಕೇಳಿಕೊಂಡೆ. ಕೊನೆಗೂ, ಅಪ್ಪಟ ವೈಜ್ಞಾನಿಕ ಆಧಾರದಲ್ಲಿ ನಾನು ಭಕ್ತರಿಗೆ ಜೀವರಸ ತುಂಬುತ್ತಿದ್ದೇನೆ ಎಂಬುದು ಸಾಬೀತಾಗಿದೆ ಎಂದು ಸ್ವಾಮೀಜಿ ನಿಟ್ಟುಸಿರುಬಿಟ್ಟರು.

English summary
Swami Nithyananda addresses press conference at Bidadi Dhayanapeetham, near Ramnagar, for the first time after his release from jail. Nithyananda denies all allegation including rape charges and intends to conduct a world wide rally in March against religious persecution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X