ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

One Acre agriculture, Suttur
ನಾವು ಸಣ್ಣ ಹಿಡುವಳಿದಾರರು... ನಮ್ಮದು ಒಣ ಭೂಮಿ ಅಲ್ಲಿ ಕೃಷಿ ಮಾಡೋಕ್ಕಾಗಲ್ಲ... ಎಂಬಂತಹ ಕುಂಟು ನೆಪದೊಂದಿಗೆ ಕೆಲಸ ಅರಸುತ್ತಾ ಪಟ್ಟಣದತ್ತ ಹೊರಡುವವರು ಹಾಗೂ ಕೃಷಿಯ ಬಗ್ಗೆ ಆಸಕ್ತಿಯಿರುವವರು ಮೈಸೂರಿನ ನಂಜನಗೂಡು ಬಳಿಯಿರುವ ಸುತ್ತೂರಿನಲ್ಲಿ ನಿರ್ಮಾಣಗೊಂಡಿರುವ "ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ"ಕ್ಕೆ ಒಮ್ಮೆ ಭೇಟಿ ನೀಡಿದರೆ ಖಂಡಿತಾ ಕೃಷಿಯ ಬಗ್ಗೆ ಆತ್ಮವಿಶ್ವಾಸ ಮೂಡದಿರದು.

ಒಂದು ಎಕರೆ ಪ್ರದೇಶದಲ್ಲಿ ಒಂದು ಕುಟುಂಬ (ಗಂಡ ಹೆಂಡತಿ, ಇಬ್ಬರು ಮಕ್ಕಳು) ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಹೇಗೆ ತಮ್ಮ ಜೀವನ ನಿರ್ವಹಣೆ ಮಾಡಬಹುದು ಎಂಬುವುದನ್ನು ಅಲ್ಲಿ ಸಹಜ ಕೃಷಿಯ ಮೂಲಕ ಅನಾವರಣಗೊಳಿಸಲಾಗಿದೆ. ಇದು ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವಿಶೇಷ ಅಧಿಕಾರಿಗಳಾಗಿರುವ ಪ್ರೊ. ಎಂ.ರುದ್ರಾರಾಧ್ಯರವರ ಪರಿಕಲ್ಪನೆಯಲ್ಲಿ ಜಲಾನಯನ ತತ್ವ ಹಾಗೂ ಒಕ್ಕಲುತನದ ಪದ್ಧತಿಗಳನ್ನು ಸಮ್ಮಿಲನಗೊಳಿಸಿ, ಹೆಚ್ಚು ಶ್ರಮವಿಲ್ಲದ, ಬಂಡವಾಳವಿಲ್ಲದ, ಸ್ವಾವಲಂಬನೆಯತ್ತ ಸಣ್ಣ ರೈತರನ್ನು ಕೊಂಡೊಯ್ಯುವ ದೃಷ್ಟಿಯಿಂದ ನಿರ್ಮಿಸಿದ್ದಾಗಿದೆ.

ಏನು ಬೆಳೆಯಲು ಸಾಧ್ಯ?: ಒಂದು ಎಕರೆ ಜಮೀನಿನಲ್ಲಿ ಏನೆಲ್ಲಾ ಬೆಳೆಯಬಹುದು? ಹೇಗೆ ಬೆಳೆಯಬಹುದು? ಆ ಮೂಲಕ ಒಂದು ಕುಟುಂಬ ಸೊಪ್ಪು ತರಕಾರಿ, ಕಾಳುಕಡ್ಡಿ ಸೇರಿದಂತೆ ಆಹಾರ ಪದಾರ್ಥಗಳನ್ನು ಮಾರುಕಟ್ಟೆಯಿಂದ ಖರೀದಿಸದೆ ಹೇಗೆ ಬದುಕಬಹುದು ಎಂಬುವುದು ಕೃಷಿ ಬ್ರಹ್ಮಾಂಡಕ್ಕೊಮ್ಮೆ ಕಾಲಿಟ್ಟರೆ ಅರಿವಾಗಿಬಿಡುತ್ತದೆ. ಕೃಷಿ ಜಮೀನಿನ ಸುತ್ತ ಸರ್ವೆ, ಸಿಲ್ವರ್ ಓಕ್, ಕತ್ತಾಳೆ, ಗ್ಲಿರಿಸೀಡಿಯಾ, ಚೊಗಚೆ, ಬಾಗೆ, ಬಿದಿರು, ಹೊಂಗೆ, ಬೇವು, ಸೀಬೆ, ಅಂಟುವಾಳ, ದಾಸವಾಳವನ್ನು ನೆಡುವ ಮೂಲಕ ಸಜೀವ ಬೇಲಿಯನ್ನು ನಿರ್ಮಿಸಲಾಗಿದೆ.

ಜಮೀನಿನ ಸುತ್ತ ಹಾಗೂ ನಡುವೆ ಚರಂಡಿಗಳನ್ನು ನಿರ್ಮಿಸಲಾಗಿದೆ. ಈ ಚರಂಡಿಗಳ ಮೂಲಕ ಹರಿದು ಬರುವ ನೀರು ಒಂದೆಡೆ ಶೇಖರವಾಗಲು ತಗ್ಗು ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದೆ. ಈ ಕೃಷಿ ಹೊಂಡಕ್ಕೆ ಜಮೀನಿಂದ ಹರಿದು ಬರುವ ನೀರು ಎರಡು ಕಡೆಯಿಂದ ಸೇರಲು ಅವಕಾಶ ಮಾಡಲಾಗಿದೆ. ಆದರೆ ಇಲ್ಲಿ ನೀರು ನೇರವಾಗಿ ಕೃಷಿ ಹೊಂಡ ಸೇರುವಂತಿಲ್ಲ. ಕೃಷಿ ಹೊಂಡಕ್ಕೆ ಸಮೀಪದಲ್ಲಿ ಎರಡು ಕಡೆ ಚಿಕ್ಕದಾದ ಹೊಂಡವನ್ನು ನಿರ್ಮಿಸಲಾಗಿದೆ.

ಗೊಬ್ಬರ ತಯಾರಿಕೆ: ಈ ಹೊಂಡ ತುಂಬಿದ ನಂತರ ನೀರು ಕೃಷಿ ಹೊಂಡವನ್ನು ಸೇರುತ್ತದೆ. ಇದರಿಂದ ಜಮೀನಿನ ಗೋಡು ಮಣ್ಣು ಪೋಲಾಗುವುದಿಲ್ಲ. ನೀರಿನೊಂದಿಗೆ ಹರಿದು ಬರುವ ಗೊಬ್ಬರ ಮಿಶ್ರಿತ ಮಣ್ಣು ಮೊದಲ ಚಿಕ್ಕ ಹೊಂಡದಲ್ಲಿ ಶೇಖರಣೆಯಾಗಿ ನೀರು ಮಾತ್ರ ಕೃಷಿ ಹೊಂಡವನ್ನು ಸೇರುತ್ತದೆ. ಈ ಹೊಂಡದಲ್ಲಿ ಶೇಖರಣೆಯಾಗುವ ಗೊಬ್ಬರ ಮಿಶ್ರಿತ ಮಣ್ಣು ಹಾಗೂ ಕೃಷಿ ಹೊಂಡದಲ್ಲಿ ಶೇಖರಣೆಯಾಗುವ ನೀರನ್ನು ಪುನರ್‌ಬಳಕೆ ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಕೃಷಿ ಹೊಂಡದಲ್ಲಿ ಶೇಖರಣೆಯಾಗುವ ನೀರಿನಲ್ಲಿ ಮೀನು ಸಾಕಣೆ ಕೂಡ ಮಾಡಬಹುದಾಗಿದೆ.

ಈ ಕೃಷಿ ಹೊಂಡದ ಸುತ್ತ ಬಳ್ಳಿ ತರಕಾರಿಗಳನ್ನು ಬೆಳೆಯಲಾಗಿದೆ. ಇನ್ನು ಜಮೀನಿನಲ್ಲಿ ಸುತ್ತಲೂ ನಡೆದಾಡಲು ಕಾಲು ದಾರಿಗಳಿದ್ದು, ಈ ದಾರಿಯ ಎರಡು ಬದಿಯಲ್ಲಿ ವಿವಿಧ ಬಗೆಯ ಚೆಂಡು ಹೂವಿನ ಗಿಡಗಳನ್ನು ನೆಡಲಾಗಿದ್ದು ಇವು ಹೂಬಿಟ್ಟು ಕಂಗೊಳಿಸುತ್ತಿವೆ. ಜಮೀನಿನ ಒಂದು ತುಂಡಿನಲ್ಲಿ ಕೆಲವು ಮೀಟರ್‌ಗಳ ಅಂತರದಲ್ಲಿ ತೆಂಗಿನ ಗಿಡ ನೆಡಲಾಗಿದ್ದು, ಅದರ ನಡುವೆ ಸುಮಾರು ಮೂರು ಕುಂಟೆ ಪ್ರದೇಶದಲ್ಲಿ ದಿನನಿತ್ಯದ ಮನೆಬಳಕೆಯ ಸೊಪ್ಪು ತರಕಾರಿಗಳನ್ನು ಬೆಳೆಯಲಾಗಿದೆ.

ಬಗೆ ಬಗೆ ತರಕಾರಿ, ಸೊಪ್ಪು: ಇಲ್ಲಿ ಸೊಪ್ಪುಗಳಾದ ಹಸಿರು ದಂಟು, ಬಿಳಿ ದಂಟು, ಸಬ್ಬಸಿಗೆ, ಮೆಂತ್ಯೆ, ಬಿಳಿಕೀರೆ, ತರಕಾರಿಗಳಾದ ಟೊಮೆಟೋ, ಹಸಿಮೆಣಸು, ಸಿಹಿಕುಂಬಳ, ಸೋರೆಕಾಯಿ, ಹಾಗಲ, ಹೀರೆ, ಈರುಳ್ಳಿ ನಡುವೆ ಎಲೆಕೋಸು, ಮುಂತಾದವುಗಳನ್ನು ಬೆಳೆಯಲಾಗಿದೆ. ಅಲಸಂದೆ, ಅವರೆ, ತೊಗರಿ, ಬಟಾಣಿ, ಹೆಸರು, ಸೋಯಾ ಅವರೆ, ಸೂರ್ಯಕಾಂತಿ, ಮುಂತಾದವುಗಳನ್ನು ಬೆಳೆಯಲಾಗಿದೆ. ಇನ್ನು ರಾಗಿ ನಡುವೆ ಸಾಸಿವೆಯನ್ನು, ಹಿಪ್ಪುನೇರಳೆ ನಡುವೆ ಹರಳನ್ನು ಮಿಶ್ರಬೆಳೆಯಾಗಿ ಬೆಳೆಸಲಾಗಿದೆ. ಇಲ್ಲಿ ಗೋಧಿ ಹಾಗೂ ಚಿನ್ನಂಪೊನ್ನಿ ಎಂಬ ತಳಿಯ ಭತ್ತವನ್ನು ಬೆಳೆಯಲಾಗಿದೆ. ಇದರ ವಿಶೇಷತೆ ಏನೆಂದರೆ ಇದಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ತೇವಾಂಶದಲ್ಲಿ ಬೆಳೆಯಬಹುದಾದ ತಳಿಯಾಗಿದೆ.

ಜಮೀನಿನ ಇನ್ನೊಂದು ಭಾಗದಲ್ಲಿ ಪಪ್ಪಾಯಿ ಹಾಗೂ ಬಾಳೆಯನ್ನು ಬೆಳೆಯಲಾಗಿದ್ದು, ಬಾಳೆಯ ನಡುವೆ ವಿವಿಧ ಬಗೆಯ ಎಲೆಕೋಸು, ಅವರೆ, ಮರಗೆಣಸು, ಸಿಹಿಗೆಣಸನ್ನು ನೆಡಲಾಗಿದೆ. ಪಕ್ಕದಲ್ಲಿ ಔಷಧಿ ಗುಣಗಳ ಸಸ್ಯಗಳಾದ ಪುದಿನ, ಚಕ್ರಮುನಿ, ಆಡುಸೋಗೆ, ಅಮೃತಬಳ್ಳಿ, ನಾಗದಾಳಿ, ನಿಂಬೆ, ಗುಲಗಂಜಿ, ಬಸಳೆ, ಬೆಳ್ಳುಳ್ಳಿ ಹೀಗೆ ಹತ್ತು ಹಲವು ಸೊಪ್ಪು, ತರಕಾರಿ, ಹಣ್ಣುಗಳನ್ನು ಜಮೀನಿನಲ್ಲಿ ತುಂಡು ತಾಕುಗಳನ್ನಾಗಿ ವಿಂಗಡಿಸಿ ಬೆಳೆಯಲಾಗಿದೆ. ಮಧ್ಯೆ ಅಡ್ಡ ಬದುಗಳನ್ನು ನಿರ್ಮಿಸಲಾಗಿದೆ. ಈ ಬದು ನಿರ್ಮಾಣದಿಂದ ಮಳೆಯ ನೀರು ಹಾಗೂ ಮಣ್ಣಿನ ಸವಕಳಿ ತಡೆಯಲು ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲದೆ, ಹಸು, ಕುರಿ, ಕೋಳಿ, ಮೊಲ ಸಾಕಣೆ ಮಾಡಲು ಕೊಟ್ಟಿಗೆ ನಿರ್ಮಿಸಲಾಗಿದೆ. ಜಮೀನಿನಲ್ಲಿ ಬೆಳೆಗಳ ಪರಾಗಸ್ಪರ್ಶಕ್ಕೆ ಅನುಕೂಲ ಹಾಗೂ ಮನೆಬಳಕೆಗೆ ಜೇನುಸಾಕಣೆಯನ್ನು ಕೂಡ ಮಾಡಬಹುದಾಗಿದೆ. ಹಸಿ ಮೇವಾಗಿ ಅಜೋಲ ಕೃಷಿ, ಜಮೀನಿನಲ್ಲಿ ದೊರೆಯುವ ರಾಗಿ ಕಡ್ಡಿ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಎಸೆಯದೆ ಅವುಗಳನ್ನು ಬಳಸಿ ಮೂರು ವಿಧದಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದನ್ನು ಮತ್ತೆ ಗಿಡಗಳಿಗೆ ಗೊಬ್ಬರವಾಗಿ ಹಾಕಲಾಗುತ್ತದೆ.

ಇಲ್ಲಿ ಎರೆಘಟಕವನ್ನು ಕೂಡ ಕಾಣಬಹುದಾಗಿದೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ತರಕಾರಿ, ಇನ್ನಿತರ ಬೆಳೆಗಳನ್ನು ಬೆಳೆಯುವುದರಿಂದ ಖರ್ಚು ಕಡಿಮೆ, ಆರೋಗ್ಯದಾಯಕ ತರಕಾರಿ ಪದಾರ್ಥಗಳನ್ನು ಪಡೆಯಲು ಸಾಧ್ಯ ಎಂಬುದನ್ನು ಕೃಷಿ ಬ್ರಹ್ಮಾಂಡ ತೋರಿಸಿಕೊಟ್ಟಿದ್ದು, ಆಸಕ್ತಿಯುಳ್ಳವರು ವರ್ಷದ ಯಾವುದೇ ದಿನದಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. [ಕೃಷಿ]

English summary
One Acre Wonder Agriculture can be seen at Suttur. With the help of Shivarathreeshwara Rural Development Centre and Prof M. Rudraradhya guidance live bunds, biogas plant, compost preparations, fruit crops, kitchen garden is established. Farm house surrounded by Coconuts, arecanut, betelvine, pepper. lemon, curry leaves and other medicinal plants
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X