ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬಂಧನ ನಿಶ್ಚಿತ : ಬಂಗಾರಪ್ಪ ಭವಿಷ್ಯ

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

S Bangarappa
ಶಿವಮೊಗ್ಗ, ಜ. 28 : 'ನಾನು ಕೂಡ ಓರ್ವ ವಕೀಲನಾಗಿದ್ದು, ಕಾನೂನಿನ ಅರಿವು ಇದೆ. ಇದರ ಪ್ರಕಾರ ಹೇಳುವುದಾದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಂಧನ ನಿಶ್ಚಿತ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ' ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ವಿರುದ್ದ ಈಗಾಗಲೇ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ 15 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸ್ವಜನ ಪಕ್ಷಪಾತ, ಭೂ ಹಗರಣ, ಭ್ರಷ್ಟಾಚಾರ ಮೊದಲಾದ ಆರೋಪಗಳನ್ನು ಅವರ ವಿರುದ್ದ ಹೊರಿಸಲಾಗಿದೆ. ಅವರು ಬಂಧನದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.

ವಕೀಲರಿಬ್ಬರು ದಾಖಲಿಸಿರುವ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಷ್ಟರಲ್ಲಿಯೇ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡುವ ಸಾಧ್ಯತೆಯಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಿಜವಾದ ಆಟ ಆರಂಭವಾಗಲಿದೆ. ಆಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದೆ ಎಂದರು.

ಯಡಿಯೂರಪ್ಪ ಅವರು ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ. ಅವರು ಸೇರಿದಂತೆ ಸಂಪುಟದ ಹಲವು ಮಂತ್ರಿಗಳು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ಹಿಂದೆಂದು ರಾಜ್ಯದ ಜನ ನೋಡಿಲ್ಲ. ಯಡಿಯೂರಪ್ಪ ವಿರುದ್ದ ಹಗರಣಗಳಿಗೆ ಸಂಬಂಧಿಸಿದಂತೆ ಆರೋಪಗಳ ಮೇಲೆ ಆರೋಪ ಕೇಳಿಬಂದರೂ, ಬಿಜೆಪಿ ಪಕ್ಷದ ಹೈಕಮಾಂಡ್ ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಯಡಿಯೂರಪ್ಪಗೆ ಹೆದರಿ ಸುಮ್ಮನೆ ಕುಳಿತಿದೆ. ಬಿಜೆಪಿ ಪಕ್ಷದ ಹೈಕಮಾಂಡ್ ಅತ್ಯಂತ ದುರ್ಬಲ, ನಿಶ್ಯಕ್ತವಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಭಸ್ಮಾಸುರನ ಹಸ್ತ : ಕೇಂದ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜನವಿರೋಧಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರು ಜೀವನ ನಡೆಸುವುದೇ ದುರ್ಭರವಾಗಿದೆ. ಅಭಯ ನೀಡಬೇಕಾದ ಹಸ್ತ, ಭಸ್ಮಾಸುರನ ಹಸ್ತದಂತಾಗಿದೆ. ಜನವಿರೋಧಿಯಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೊಲಗಬೇಕು ಎಂದು ಅವರು ಹೇಳಿದರು.

ಚುನಾವಣೆಗೆ ಸ್ಪರ್ಧೆ : ಮುಂದಿನ ವಿಧಾನಸಭೆ ಚುನಾವಣೆಗೆ ತಾವು ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ತಮ್ಮನ್ನು ನೋಡಿದರೆ, ನಿಮಗೆ ಏನನ್ನಿಸುತ್ತದೆ?' ಎಂದು ಪತ್ರಕರ್ತರಿಗೇ ಮರುಪ್ರಶ್ನೆ ಹಾಕಿದರು. ಯಡಿಯೂರಪ್ಪ ವಿರುದ್ದವೇ ಮತ್ತೆ ಸ್ಪರ್ಧೆ ಮಾಡಬೇಕೇ? ಏನೆಂಬುವುದನ್ನು ಪರದೆಯ ಮೇಲಿನ ಮಾತು. ಕಾದು ನೋಡಿ. ಎಲ್ಲ ಗೊತ್ತಾಗುತ್ತದೆ ಎಂದು ತಮ್ಮ ಎಂದಿನ ಶೈಲಿಯಲ್ಲಿ ಉತ್ತರಿಸಿದರು.

ಸೋಮಶೇಖರ್ ವರದಿ ಒಪ್ಪಲ್ಲ : ರಾಜ್ಯದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿಗಳಲ್ಲಿ ಸಂಘ-ಪರಿವಾರದ ಕೈವಾಡವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಸೋಮಶೇಖರ್ ಆಯೋಗ ಇಂದು ಸಲ್ಲಿಸಿದ ವರದಿಯನ್ನು ಒಪ್ಪಲು ಸಾಧ್ಯವಿಲ್ಲವೆಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಈ ಆಯೋಗ ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಸಂಘ-ಪರಿವಾರದ ಕೈವಾಡವಿರುವ ಶಂಕೆಯನ್ನು ವ್ಯಕ್ತಪಡಿಸಿತ್ತು. ಆದರೆ ಅಂತಿಮ ವರದಿಯಲ್ಲಿ ಸಂಘ-ಪರಿವಾರದ ಯಾವುದೇ ಕೈವಾಡವಿಲ್ಲವೆಂದು ಹೇಳುತ್ತಿರುವುದು ಸರಿಯಲ್ಲವೆಂದು ಅವರು ಹೇಳಿದರು. ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದ್ದು, ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಸರ್ಕಾರ ನುಣುಚಿಕೊಳ್ಳಬಾರದು ಎಂದು ಆಗ್ರಹಿಸಿದರು. [ನಾಗರಿಕ ಪತ್ರಕರ್ತ]

English summary
Former chief minister of Karnataka S Bangarappa, who has joined JD(S) recently has predicted that BS Yeddyurappa will be arrested and he has to resign, as 15 criminal cases have been filed against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X