ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾನದಲ್ಲಿ ಲೀನವಾದ ಗಂಧರ್ವ ಭೀಮಸೇನ ಜೋಶಿ

By Prasad
|
Google Oneindia Kannada News

Pandit Bhimsen Joshi
ಬೆಂಗಳೂರು/ಪುಣೆ, ಜ. 24 : ಸಂಗೀತ ಲೋಕದ ಧ್ರುವತಾರೆ, ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ಭೀಮಸೇನ ಜೋಶಿ ಅವರು ಸಹಸ್ರಾರು ಅಭಿಮಾನಿಗಳ ಶೋಕಸಮುದ್ರದ ನಡುವೆಯೇ ಸಕಲ ಗೌರವಗಳೊಂದಿಗೆ ಗಾನಲೋಕದಲ್ಲಿ ಲೀನವಾದರು. ಪುಣೆಯ ವೈಕುಂಠ ಚಿತಾಗಾರದಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಸಲಾಯಿತು.

ಪುಣೆಯಲ್ಲಿರುವ ಅವರ ನಿವಾಸದ ಮುಂದೆ ಬೆಳಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದು ಅಂತಿಮ ದರ್ಶನ ಪಡೆದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಮೊದಲಾದವರು ಅಂತಿಮ ದರ್ಶನ ಪಡೆದು ಗಾನಗಂಧರ್ವರನ್ನು ನೆನೆದರು.

ಗಣ್ಯರ ಕಂಬನಿ : ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅದ್ಭುತ ಸಂಗೀತ ಸುಧೆ ಹರಿಸಿದ ಗದಗದ ಮಣ್ಣಿನ ಮಗ ಜೋಶಿ ಅವರನ್ನು ಕಳೆದುಕೊಂಡಿದ್ದಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಅವರ ಗೌರವಾರ್ಥವಾಗಿ ಇಂದು ಶೋಕಾಚರಣೆ ಮಾಡುತ್ತಿರುವುದಾಗಿ ಕರ್ನಾಟಕ ಸರಕಾರ ತಿಳಿಸಿದೆ.

ರಾಜ್ಯಪಾಲ ಹಂಸರಾಜ್ ಅವರು, 'ಜೋಶಿ ಅವರ ನಿಧನದಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡಂತೆ ಭಾಸವಾಗುತ್ತಿದೆ. ಕಿರಾಣಾ ಘರಾಣಾದ ಬಾದಷಾ ಅವರಾಗಿದ್ದರು. ತಮ್ಮ ಗಂಧರ್ವಸ್ವರೂಪಿ ಕಂಠದಿಂದ ವಿಶ್ವದಾದ್ಯಂತ ಪಂಡಿತರು ಮತ್ತು ಪಾಮರರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಿದ್ದರು' ಎಂದು ಕಂಬನಿ ಮಿಡಿದಿದ್ದಾರೆ.

ದೆಹಲಿಯಲ್ಲಿ ಪ್ರತಿಭಾ ಪಾಟೀಲರನ್ನು ಭೇಟಿಯಾಗಿ ರಾಜ್ಯಪಾಲರ ವಿರುದ್ಧ ತಮ್ಮ ಅಹವಾಲು ಸಲ್ಲಿಸಿದ ನಂತರ, ಜೋಶಿ ಅವರ ಅಂತ್ಯಕ್ರಿಯೆಗಾಗಿ ಪುಣೆಗೆ ತೆರಳುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇಡೀ ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ಗಾಯಕನನ್ನು ಕಳೆದುಕೊಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಜೋಶಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವ ವಾರ್ತಾ ಇಲಾಖೆಯ ನಿರ್ದೇಶಕ ಮುದ್ದುಮೋಹನ್ ಅವರು, ಭಾರತೀಯ ಸಂಗೀತ ಲೋಕದ ಧ್ರುವತಾರೆ, ಭಾರತರತ್ನ ಭೀಮಸೇನ ಜೋಶಿ ಅವರ ನಿಧನದಿಂದ ಸಂಗೀತದ ಉಸಿರೇ ನಿಂತಂತಾಗಿದೆ ಎಂದು ಅಂಜಲಿ ಸುರಿಸಿದ್ದಾರೆ. ಜೋಶಿ ಅವರ ಅಂತ್ಯದಿಂದಾಗಿ ಸಂಗೀತ ಲೋಕದ ಕಂಠವೇ ಬಿಗಿದುಕೊಂಡಂತಾಗಿದೆ. ಪ್ರಧಾನಿ ಡಾ. ಮನಮೋಹನ ಸಿಂಗ್, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕೂಡ ವಿಶ್ವ ಸಂಗೀತ ಲೋಕಕ್ಕೆ ಭೀಮಸೇನ ಜೋಶಿ ಅವರು ನೀಡಿರುವ ಕೊಡುಗೆಯನ್ನು ಕೊಂಡಾಡಿದ್ದಾರೆ.

ಖ್ಯಾತ ಸಿತಾರ ವಾದಕ ಪಂಡಿತ ರವಿಶಂಕರ್ ಅವರು, 'ಜೋಶಿ ಅವರು ನಿರ್ವಿವಾದವಾಗಿ ದೇಶದ ಅತ್ಯಂತ ಜನಪ್ರಿಯ ಸಂಗೀತಗಾರರಾಗಿದ್ದರು. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಅಪಾರ ಅಭಿಮಾನಿಗಳ ಪ್ರೀತಿ ಗಳಿಸಿದ್ದರು. ಅವರು ಅನಾರೋಗ್ಯದಿಂದ ಬಳಲುತ್ತಿರುವುದು ತಿಳಿದಿದ್ದರೂ ಅವರ ಸಾವು ಅನಿರೀಕ್ಷಿತವಾಗಿದೆ ಮತ್ತು ತೀವ್ರ ಆಘಾತ ತಂದಿದೆ' ಎಂದು ಶೋಕ ಸಂದೇಶ ಕಳಿಸಿದ್ದಾರೆ.

ಬಹುಮುಖ ವ್ಯಕ್ತಿತ್ವ : ಭಾವಲೋಕದಲ್ಲಿ ತೇಲಾಡುವಂತೆ ಸಂಗೀತಸುಧೆ ಹರಿಸುವುದರ ಜೊತೆಗೆ ಭೀಮಸೇನ ಜೋಶಿ ಅವರು ಬಹುಮುಖ ವ್ಯಕ್ತಿತ್ವದವರಾಗಿದ್ದರು. ನಿರಂತರ ಸಂಗೀತ ತಾಲೀಮಿನ ಜೊತೆಗೆ ದೇಹದಾರ್ಧ್ಯ ಬೆಳೆಸುವ ತಾಲೀಮು ಕೂಡ ನಡೆಸುತ್ತಿದ್ದರು. ವೇಗವಾಗಿ ಸಾಗುವ ಕಾರುಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕಣ್ಣುಚ್ಚಿ ಸಂಗೀತದಲ್ಲಿ ಮುಳುಗುವಂತೆ ಕಾರು ಓಡಿಸುವಾಗ ಕೂಡ ಯರ್ರಾಬಿರ್ರಿ ಓಡಿಸುತ್ತಿದ್ದರು. ಒಂದೆರಡು ಬಾರಿ ಭಾರೀ ಅಪಘಾತದಿಂದ ಕೂಡ ಪಾರಾಗಿದ್ದರು.

ಜೊತೆಗೆ ಉತ್ತಮ ಈಜುಪಟುವೂ ಆಗಿದ್ದರು ಜೋಶಿಯವರು. ಯೋಗ ಮತ್ತು ಫುಟ್ಬಾಲ್ ಆಟದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು. ಕುಡಿತ ತಮ್ಮ ವಿಕ್ನೆಸ್ಸು ಎಂದು ಒಪ್ಪಿಕೊಂಡಿದ್ದ ಅವರು ಮತ್ತಿನಲ್ಲಿದ್ದಾಗ ಅಷ್ಟೇ ಅದ್ಭುತವಾಗಿ ಹಾಡುತ್ತಿದ್ದರೆಂಬುದು ಕೂಡ ಅಷ್ಟೇ ಸತ್ಯ. [ಭೀಮಸೇನ ಜೋಶಿ]

English summary
Pandit Bhimsen Joshi last rites performed in Pune with due respect amid sea of gloom. Governor Hansraj Bharadwaj and Karnataka Chief Minister BS Yeddyurappa and others condole the death of Hindustani music maestro Pandit Bhimsen Joshi in Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X