ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರದಲ್ಲಿ ಒಂದು ಚಿರತೆ ಹಿಡಿದ ಕಥೆ...

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Cheetah captures near Jalamangala Village
ರಾಮನಗರ, ಜ.17: ಚಿರತೆಯೊಂದು ಹೊಲದಲ್ಲಿ ಹಾಕಿದ್ದ ಉರುಳಿಗೆ ಸಿಕ್ಕಿ ಬಿಡಿಸಿಕೊಳ್ಳಲು ನರಳಾಡುತ್ತಿತ್ತು. ಮಧ್ಯರಾತ್ರಿಯಾದರೂ ರಾಮನಗರದ ಜಾಲಮಂಗಲ ಗ್ರಾಮಸ್ಥರೆಲ್ಲರೂ ಚಿರತೆಯ ಆತಂಕ ಭಯದಿಂದಲೇ ಎಚ್ಚರವಾಗಿದ್ದರು. ಚಿರತೆ ಉರುಳಿಗೆ ಸಿಲುಕಿದ್ದರು ಎಲ್ಲಿ ಬಿಡಿಸಿಕೊಂಡು ಬಂದು ದಾಳಿ ಮಾಡುತ್ತೋ ಎಂಬ ಭಯ ಅಲ್ಲಿ ಮನೆ ಮಾಡಿತ್ತು.

ಗ್ರಾಮಸ್ಥರಿಗೆ ಚಿರತೆಯ ಭಯವಿದ್ದರೆ, ಉರುಳಿಗೆ ಸಿಲುಕಿದ್ದ ಚಿರತೆ ಉರುಳು ಬಿಡಿಸಿಕೊಂಡು ಜೀವ ಉಳಿಸಿಕೊಂಡರೆ ಸಾಕಪ್ಪ ಎನ್ನುವಂತಿತ್ತು. ಒಂದೆಡೆ ಗ್ರಾಮಸ್ಥರಿಗೆ ಚಿರತೆ ಸೆರೆ ಸಿಕ್ಕಿರುವ ಬಗ್ಗೆ ಅಲ್ಪ ಮಟ್ಟಿಗೆ ಸಮಾಧಾನ, ಆದರೆ ಉರುಳಿಗೆ ಸಿಲುಕಿರುವ ಚಿರತೆಯ ಜೀವಕ್ಕೆ ಎಲ್ಲಿ ಅಪಾಯವಾಗುತ್ತೋ ಎಂಬ ಆತಂಕವೂ ಇತ್ತು.

ಭಾನುವಾರ ಸಂಜೆ 7 ಗಂಟೆಯಿಂದ ಇಂತಹ ಪರಿಸ್ಥಿತಿ ಜಾಲಮಂಗಲ ಗ್ರಾಮದಲ್ಲಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ದರೂ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ರಾತ್ರಿ ಒಂಬತ್ತೂವರೆ ಗಂಟೆಯಾಗಿತ್ತು. ಅಷ್ಟರಲ್ಲಿ ಉರುಳಿನಿಂದ ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದ ಚಿರತೆ ಸಾಕಷ್ಟು ಬಳಲಿ ಬೆಂಡಾಗಿತ್ತು.

ಹಗ್ಗ ಕಟ್ಟಿದ ಗ್ರಾಮಸ್ಥರು : ಚಿರತೆಯನ್ನ ಸುರಕ್ಷಿತವಾಗಿ ಸೆರೆಹಿಡಿದು ರಕ್ಷಿಸುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ವಿಳಂಭ ಮಾಡಿದ್ದರಿಂದ. ಗ್ರಾಮಸ್ಥರೇ ಚಿರತೆಯನ್ನ ಬಡಿಗೆಗಳಿಂದ ಅದುಮಿಡಿದು ನಾಲ್ಕು ಕಾಲುಗಳಿಗೆ ಹಗ್ಗ ಕಟ್ಟಿ ಓಡಿಹೋಗದಂತೆ ಮಾಡಿದರು. ಚಿರತೆಗೆ ಯಾವುದೇ ಅಪಾಯವಾಗದಂತೆ ಕಟ್ಟಿಹಾಕುವಲ್ಲಿ ಜಾಲಮಂಗಲ ಗ್ರಾಮಸ್ಥರು ಧೈರ್ಯವಹಿಸಿ ಮಾಡಿದ ಕಸರತ್ತು ಮೆಚ್ಚಲೇಬೇಕಾದದ್ದು.

ಖಾಲಿ ಕೈಯಲ್ಲಿ ಬಂದವರು : ಜಾಲಮಂಗಲದಲ್ಲಿ ಚಿರತೆ ಉರುಳಿಗೆ ಬಿದ್ದು ಬಿಡಿಸಿಕೊಳ್ಳಲು ಹೆಣಗಾಡಿ ಸುಸ್ತಾಗಿತ್ತು. ಇಷ್ಟೆಲ್ಲಾ ಆದರೂ ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿಗಳು ಎರಡೂವರೆಗಂಟೆ ನಂತರ ಬಂದರೂ ಚಿರತೆ ರಕ್ಷಿಸಲು ಯಾವುದೇ ಪರಿಕರಗಳನ್ನ ಮತ್ತು ಅನುಭವಿಗಳ ತಂಡವಿಲ್ಲದೇ ಖಾಲಿ ಕೈಯಲ್ಲಿ ಬಂದಿದ್ದರು.

ಹಿಂದೆ ಒಮ್ಮೆ ಉರುಳಿಗೆ ಬಿದ್ದಿದ್ದ ಚಿರತೆಯೊಂದು ಬಿಡಿಸಿಕೊಳ್ಳಲಾರದೇ ಮೃತಪಟ್ಟಿತ್ತು. ಚಿರತೆಗೆ ಅಪಾಯವಿದೆ ಎಂಬ ಪರಿಜ್ಞಾನವಿದ್ದರೂ ಅರಣ್ಯ ಇಲಾಖೆ ಮಾತ್ರ ಚಿರತೆಯನ್ನ ರಕ್ಷಿಸಲು ಮುಂದಾಗಲೇ ಇಲ್ಲ. ಕಾರಣ ಏನಂದ್ರೆ, ಜಿಲ್ಲೆಯಾಗಿ ಮೂರು ವರ್ಷವಾಗಿದ್ದರೂ ಜಿಲ್ಲಾ ಅರಣ್ಯ ಇಲಾಖೆಯಲ್ಲಿ ಕನಿಷ್ಠ ಪ್ರಾಣಿ ಸೆರೆಹಿಡಿಯುವ ಬೋನ್ ಇಲ್ಲ, ಅನುಭವಿಗಳ ತಂಡವಿರಲಿಲ್ಲ. "ಇಲ್ಲ"ಗಳ ಸಂತೆಯಾಗಿರುವ ಜಿಲ್ಲಾ ಅರಣ್ಯ ಇಲಾಖೆಯ ಬೇಜವಾಬ್ಧಾರಿತನ ನಿರ್ಲಕ್ಷ್ಯ ನಿನ್ನೆ ಅನಾವರಣಗೊಂಡಿತು.

ಅಂತೂ ಇಂತೂ ಜೀವ ಉಳಿಯಿತು : ಉರುಳಿನಿಂದ ಚಿರತೆ ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಉರುಳು ಮತ್ತಷ್ಟು ಬಿಗಿಯಾಗುತ್ತಿತ್ತು. ಇದರಿಂದ ಚಿರತೆ ದೈಹಿಕವಾಗಿ ಜರ್ಜರಿತಗೊಂಡಿತ್ತು ಬಾಯಲ್ಲಿ ಅಲ್ಪ ಮಟ್ಟಿಗೆ ರಕ್ತಸ್ರಾವವೂ ಆಗಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಬೋನ್ ಮತ್ತು ಬಲೆ ಬರುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು.

ಬನ್ನೇರುಘಟ್ಟದಿಂದ ಬೋನ್ ಮತ್ತು ಬಲೆ ಬಂದಿದ್ದರೂ ಅಪಾಯದಲ್ಲಿ ಚಿರತೆಯನ್ನ ಸುರಕ್ಷಿತವಾಗಿ ಸೆರೆ ಹಿಡಿದು ಪ್ರಾಥಮಿಕ ಚಿಕಿತ್ಸೆ ನೀಡಲು ಅನುಭವಿಗಳ ತಂಡ ಬಂದಿರಲೇ ಇಲ್ಲ. ಆದರೂ ಚಿರತೆಯನ್ನೇ ಬೋನಿಗೆ ಸೇರಿಸಬೇಕಾದ ಜವಾಬ್ಧಾರಿ ಇದ್ದುದರಿಂದ ಗ್ರಾಮಸ್ಥರ ಸಹಾಯದಿಂದ ಕಾಲಿಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿಯೇ ಇದ್ದ ಚಿರತೆಯನ್ನ ಬೋನಿಗೆ ತಳ್ಳಲಾಯಿತು.

ಅಂತೂ ಇಂತೂ ಬೋನಿನೊಳಗೆ ಸೇರಿಕೊಂಡ ಚಿರತೆಯ ಕಾಲಿಗೆ ಸುತ್ತಿಕೊಂಡಿದ್ದ ತಂತಿ ಮತ್ತು ಹಗ್ಗದ ಕಟ್ಟು ಹಾಗೆಯೇ ಇದ್ದವು. ಬೋನಿನೊಳಗೆ ಸೇರಿಕೊಂಡ ನಂತರ ಸ್ಥಳೀಯ ಅರಣ್ಯ ಇಲಾಖಾ ಸಿಬ್ಬಂದಿಗಳೇ ಚಿರತೆಗೆ ಕಟ್ಟಲಾಗಿದ್ದ ಹಗ್ಗ ತಂತಿಯನ್ನ ಸಾಹಸ ಮಾಡಿ ಬಿಚ್ಚಿದರು. ಅಷ್ಟರಲ್ಲಿ ಸಾಕಷ್ಟು ಸುಸ್ತಾಗಿ ಬಳಲಿದಂತೆ ಕಂಡು ಬಂದ ಚಿರತೆ ಬದುಕಿದೆಯಾ ಬಡಜೀವವೇ ಎಂದು ಬೋನಿನೊಳಗೇ ಘರ್ಜಿಸುತ್ತಲೇ ನಿಟ್ಟುಸಿರು ಬಿಟ್ಟಿತು.

ಬಯಲಾದ ಇಲಾಖೆ ನಿರ್ಲಕ್ಷ್ಯ : ಸಾವನದುರ್ಗ, ತಗಚಗುಪ್ಪೆ, ಜಾಲಮಂಗಲ, ಮಾಕಳಿ, ಸಾತನೂರು ದಟ್ಟ ಅರಣ್ಯ ಪ್ರದೇಶ ಸೇರಿದಂತೆ ಹತ್ತಾರು ಅರಣ್ಯ ಪ್ರದೇಶಗಳು ಜಿಲ್ಲಾ ವ್ಯಾಪ್ತಿಯಲ್ಲೇ ಇವೆ. ದಟ್ಟ ಕಾನನಗಳು ಹೆಚ್ಚಾಗಿರುವುದರಿಂದ ಹೆಚ್ಚಿನ ಕಾಡುಪ್ರಾಣಿಗಳು ಗ್ರಾಮಗಳತ್ತ ದಾಂಗುಡಿ ಇಟ್ಟು ಜಾನುವಾರುಗಳನ್ನ ಬಲಿತೆಗೆದುಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಕನಿಷ್ಠ ಬೋನ್ ಮತ್ತು ಬಲೆಯೂ ಕೂಡ ಇಲ್ಲವಾಗಿವೆ. ಮತ್ತು ಕಾಡು ಪ್ರಾಣಿಗಳ ಸೆರೆ ಹಿಡಿಯಲು ರಕ್ಷಿಸಲು ಅನುಭವಿಗಳೂ ಇಲ್ಲವಾಗಿದ್ದಾರೆ. ಇಲ್ಲಗಳ ನಡುವೆಯೇ ನಾಮ್ಕಾವಸ್ಥೆ ಆಢಳಿತ ನಡೆಸುತ್ತಿರುವ ರಾಮನಗರ ಜಿಲ್ಲಾ ಅರಣ್ಯ ಇಲಾಖೆ ಎಲ್ಲದಕ್ಕೂ ಬನ್ನೇರುಘಟ್ಟವನ್ನೇ ಆಶ್ರಯಿಸುತ್ತಿದ್ದಾರೆ. ಎಲ್ಲದಕ್ಕೂ ವಿಳಂಭ ನಿರ್ಲಕ್ಷ್ಯ ಬೇಜವಾಬ್ಧಾರಿತನ ತೋರುತ್ತಿರುವ ಅರಣ್ಯ ಇಲಾಖೆ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಅನಾಹುತ ನಡೆದುಹೋಗಿರುತ್ತದೆಂದು ಜನತೆ ಆಕ್ರೋಶವ್ಯಕ್ತಪಡಿಸಿದರು.

ಕಿಲುಬಿಡಿದಿದ್ದ ಬೋನ್ : ನಿನ್ನೆ ರಾತ್ರಿ ಚಿರತೆ ಸೆರೆಹಿಡಿಯಲು ತಂದಿದ್ದ ಬೋನ್ ಕೂಡ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಬೋನಿನ ಗೇಟ್ ತೆಗೆದರೇ ಹಾಕಲಾಗುತ್ತಿರಲಿಲ್ಲ, ಮುಚ್ಚಿದರೆ ತೆಗೆಯಲಾಗುತ್ತಿರಲಿಲ್ಲ. ಗ್ರಾಮಸ್ಥರೇ ಕಿಲುಬಿಡಿದಿದ್ದ ಬೋನಿನ ಗೇಟ್‌ಗೆ ಕೊಬ್ಬರಿಎಣ್ಣೆಯನ್ನ ಸುರಿದು ತಾತ್ಕಾಲಿಕವಾಗಿ ಬೋನನ್ನ ಸರಿಪಡಿಸಲು ಗ್ರಾಮಸ್ಥರೇ ಸಹಕರಿಸಿದರು.

ಇಲಾಖೆಯ ಸಿದ್ಧ ಉತ್ತರ : ಜಾಲಮಂಗಲದಲ್ಲಿ ಸೆರೆಸಿಕ್ಕಿದ್ದ 9 ವರ್ಷದ ಚಿರತೆಯನ್ನ ಉರುಳಿನಿಂದ ಬಿಡಿಸಿಕೊಳ್ಳಲು ಸಾಕಷ್ಟು ಸುಸ್ತಾಗಿರುವುದರಿಂದ ಸೂಕ್ತ ಚಿಕಿತ್ಸೆಯನ್ನ ನೀಡಲಾಗುವುದೆಂದು ಸ್ಥಳೀಯ ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ ಹೇಳಿದರು. ಇಷ್ಟೆಲ್ಲಾ ಆದರೂ ಜಿಲ್ಲಾ ವಲಯ ಅರಣ್ಯಾಧಿಕಾರಿ ಸತ್ಯನಾರಾಯಣ್‌ರವರಂತೂ ಚಿರತೆ ಸೆರೆಸಿಕ್ಕಿದ್ದ ಸ್ಥಳಕ್ಕೆ ಆಗಮಿಸಲೇ ಇಲ್ಲ. ತಿಮ್ಮರಾಯಪ್ಪ ಮತ್ತು ಸಿಬ್ಬಂದಿಗಳು ಗ್ರಾಮಸ್ಥರ ಸಹಕಾರದೊಂದಿಗೆ "ಆಪರೇಷನ್ ಚೀತಾ ಇನ್ ಮಿಡ್‌ನೈಟ್"ನ್ನ ತಕ್ಕಮಟ್ಟಿಗೆ ಯಶಸ್ವಿಯಾಗಿ ಮುಗಿಸಿದರು. [ಅರಣ್ಯ]

English summary
Ramanagara District Forest Offcier Satyanarayana lead team had tough time in capturing 9 year old cheetah which created menace in and around Savana durga, Jalamangala village, Makali, Satanur of Ramanagara. Though farmers helped forest officials in capturing Cheetah.later blamed the department for not having proper equipments and First Aid box to treat animals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X