ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಖನೌದಲ್ಲಿ ಚಳಿಗಾಳಿ, ಕನ್ನಡಿಗನ ಮಾತಲ್ಲೇ ಕೇಳಿ

By * ವಿವೇಕ ಬೆಟ್ಕುಳಿ, ಲಖನೌ
|
Google Oneindia Kannada News

Cold wave grips North India
ಲಖನೌ, ಜ. 14 : ಉತ್ತರ ಭಾರತದಾದ್ಯಂತ ಭೀಕರ ಚಳಿಗಾಳಿ ಅಮರಿಕೊಂಡಿದೆ. ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಸೂರ್ಯ ಬಂದಿಲ್ಲ. ಈ ಸಂಕ್ರಾಂತಿಗಾದರೂ ದರ್ಶನ ಕೊಡುತ್ತಾನಾ? ಕಾದು ನೋಡಬೇಕು. ಆದರೂ ಬೆಚ್ಚದ ಜನ ಬೆಚ್ಚಗಿರಲು ನಾನಾ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ, ನಾನಾ ವೇಷಗಳಲ್ಲಿ ಹುದುಗಿಕೊಳ್ಳುತ್ತಿದ್ದಾರೆ.

ಬೀದಿ ಬೀದಿಯಲ್ಲಿ ಮೊಟ್ಟೆ, ಆಮ್ಲೇಟ್ ವ್ಯಾಪಾರ ಬಹು ಜೋರಾಗಿದೆ. ಮುಖ್ಯ ಬೀದಿಯಲ್ಲಿ ಚಳಿಗಾಲಕ್ಕಾಗಿ ಪ್ರಾರಂಭವಾದ ಕಾನಪುರ ಶೂ, ಲುಧಿಯಾನ್ ಉಲನ್ ಬಟ್ಟೆಗಳ ಅಂಗಡಿಯಲ್ಲಿ ವ್ಯಾಪಾರದ ಬರಾಟೆ ಜೋರಾಗಿದೆ. ಬೀದಿಗಳಲ್ಲಿ ಓಡಾಡುವ ಒಬ್ಬ ವ್ಯಕ್ತಿಯ ಮೈಯಲ್ಲಿ ಈಗ ಇರುವ ಬಟ್ಟೆಗಳು ಯಾವ ಸಂದರ್ಭದಲ್ಲಿಯೂ ಇರಲಾರದು ಅನಿಸುತ್ತದೆ. ಬನಿಯನ್, ನಿಕರ್, ಇನರ್ (ಚಳಿಗಾಗಿ ಧರಿಸುವ ಟೈಟ್ 3/4 ಪ್ಯಾಂಟ್ ಮತ್ತು ಪುಲ್ ಶರ್ಟ್) ಅದರ ಮೇಲೆ ಪುಲ್ ಶರ್ಟ್, ಪ್ಯಾಂಟ್, ಅದರ ಮೇಲೆ ಸ್ವೇಟರ್, ಸ್ವೇಟರ್ ಮೇಲೆ ಜರ್ಕಿನ್. ಕಾಲಲ್ಲಿ ಸಾಕ್ಸ್ ಮತ್ತು ಶೂ, ತಲೆಗೆ ಕಿವಿ ಮುಚ್ಚುವಂತಹ ಟೋಪಿ, ಮತ್ತು ಮಫ್ಲರ್, ಕೈಗೆ ಹ್ಯಾಂಡ್ ಗ್ಲೌಸ್ ಇಷ್ಟು ಸಾಮಗ್ರಿಗಳು ಸರಾಸರಿಯಾಗಿ ಮೈಮೇಲೆ ಇದ್ದೇ ಇರುವುದು. ಈ ದೃಶ್ಯ ಎಲ್ಲೆಡೆ ಸರ್ವೇಸಾಮಾನ್ಯ.

ಇನ್ನೂ ಮನೆಗಳಲ್ಲಿ ರೂಂ ಹೀಟರ್(ಗ್ಲೋಬರ್) ಕಡ್ಡಾಯವಿರಲೇಬೇಕು. ಕಳೆದ ಕೆಲ ದಿನಗಳಿಂದ ಲಖನೌದ ಯಾವ ಅಂಗಡಿಯಲ್ಲಿಯೂ ರೂಂ ಹೀಟರ್ ಸಿಗುತ್ತಿಲ್ಲ. ಗೀಸರ್, ಹೀಟರ್, ರೂಂ ಹೀಟರ್, ಥರ್ಮಾಸ್ ಫ್ಲಾಸ್ಕ್ ಇವುಗಳು ಹೆಚ್ಚು ವ್ಯಾಪಾರವಾಗುತ್ತಿವೆ. ವರ್ತಕರು ಹೇಳಿದ್ದೇ ಬೆಲೆ ಎಂಬಂತೆ ಆಗಿದೆ. ಕೇಳಿದ್ದಷ್ಟು ಬೆಲೆ ತೆತ್ತು ಕೊಂಡುಕೊಳ್ಳದೆ ಬೇರೆ ವಿಧಿಯೇ ಇಲ್ಲ.

ಸಂಜೆ ಹೊತ್ತಿಗೆ ಮೊಟ್ಟೆ ವ್ಯಾಪಾರ ತುಂಬಾ ಜೋರಾಗಿರುವುದು. 5 ರು.ಗೆ ಸಿಗುತ್ತಿದ್ದ ಬೇಯಿಸಿದ ಮೊಟ್ಟೆ ಈಗ 6 ರು. ಆಗಿದೆ. 10 ರು. ಇದ್ದ ಆಮ್ಲೇಟ್ 12ಕ್ಕೆ ಏರಿದೆ. ಬಿಸಿ ಬಿಸಿ ದಾಲ್, ಮತ್ತು ರೋಟಿಯ ವ್ಯಾಪ್ಯಾರವು ಜೋರಾಗಿದೆ. ಹೊರೆದ ಶೇಂಗಾ, ಚುರುಮುರಿ ಲಾಡು, ಚಿಕ್ಕಿ, ಬಟಾಣಿಯಂತಹ ಬಾಯಾಡಿಸವ ಪದಾರ್ಥಗಳು ಗಲ್ಲಿ ಗಲ್ಲಿಯಲ್ಲಿ ಸಿಗುತ್ತಿವೆ. ಬನ್ ಮಖ್ಖನ್ (ಬ್ರೆಡ್ ನಡುವೆ ಬೆಣ್ಣೆ) ಮತ್ತು ಟೀ, ಬಿಸಿ ಬಿಸಿ ಜಿಲೇಬಿ, ಬ್ರೆಡ್ ಪಕೋಡ್, ಪುರಿ, ತಾಜಾ ತಾಜಾ ಆಗಿ ಮಾಡಿ ಕೊಡುತ್ತಿರುವುದರಿಂದ ಜನರು ಅಂಗಡಿಗಳ ಮಂದೆ ಜಮಾಯಿಸುತ್ತಿದ್ದಾರೆ. ಹಸಿ ಶುಂಠಿ ಜಜ್ಜಿ ಹಾಕಿ ಮಾಡಿದ ಚಹಾ ಹೀರುವವರನ್ನು ಎಲ್ಲೆಡೆ ಕಾಣಬಹುದು.

ರಾಜಧಾನಿಯ ತುಂಬಾ ಇರುವ ಸೈಕಲ್ ರಿಕ್ಷಾದವರು ಮಾತ್ರ ಇಂತಹ ಚಳಿಯಲ್ಲಿಯೂ ಅಲ್ಲಲ್ಲಿ ಪ್ರಾಯಾಣಿಕರಿಗೆ ಕಾದು ಬೆಂಕಿ ಕಾಯಿಸುತ್ತಾ ಕುಳಿತಿರುವುದು, ಪ್ರಯಾಣಿಕರನ್ನು ಏರಿಸಿಕೊಂಡು ನಡುಗುತ್ತಾ ಸೈಕಲ್ ತುಳಿಯುವುದು, ಕೂಲಿ ಮಾಡುವ ಜನರ ದೈನಂದಿನ ಓಡಾಟ ಇವೆಲ್ಲವೂ ಎಂದಿನಂತೆ ಇದೆ. ಆದರೆ, ಈ ಹವಾಮಾನದಲ್ಲಿ ಅವರುಗಳು ಪಡುವ ಕಷ್ಟ ಮಾತ್ರ ಬದುಕಿನ ಇನ್ನೊಂದು ಮುಖವನ್ನು ತೋರಿಸುತ್ತದೆ. ಒಂದು ದಿನ ಸೈಕಲ್ ತುಳಿಯದಿದ್ದರೆ, ಒಂದು ದಿನ ಕೂಲಿಗೆ ಹೋಗದಿದ್ದರೆ ಆ ದಿನ ಮನೆಯಲ್ಲಿ ತಿನ್ನಲು ಏನು ಇಲ್ಲದ ಸ್ಥಿತಿ.

ಒಟ್ಟಾರೆ ಅತಿಯಾದ ಚಳಿಯ ಈ ಅನುಭವವನ್ನು ಪಡೆಯಲು ಈ ಸಂದರ್ಭದಲ್ಲಿ ಒಮ್ಮೆ ಉತ್ತರ ಭಾರತಕ್ಕೆ ಬರುವುದನ್ನು ಮರೆಯಬೇಡಿ.

ಲೇಖಕರ ಬಗ್ಗೆ : ವಿವೇಕ ಬೆಟ್ಕುಳಿ ಅವರು ಮೂಲತಃ ಕಾರವಾರ ಜಿಲ್ಲೆಯವರು. ಈಗ ಕಾರ್ಯನಿಮಿತ್ತ ಲಖನೌದಲ್ಲಿ ಬೀಡು ಬಿಟ್ಟಿದ್ದಾರೆ. [ಚಳಿಗಾಲ]

English summary
Cold wave has gripped North Karnataka. People are finding many ways to fight the cold. Kannadiga Vivek Betkuli, originally from Karawar, presently in Lucknow reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X