ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಚಾದ್ರಿ ವೈಭವ:ಮಲೆನಾಡಿನ ವಿಶಿಷ್ಟ ಮೇಳ

By Mahesh
|
Google Oneindia Kannada News

Kodachadri Vaibhava from Jan 7
ಕಳೆದ ಮೂರು ವರ್ಷಗಳಿಂದ ಮಲೆನಾಡಿನಲ್ಲಿ ಹೊಸ ಶಕೆಯನ್ನು ಸೃಷ್ಟಿಸಿರುವ ಮೇಳ. ಗ್ರಾಮೀಣ ಮಹಿಳೆಯರ ಆಶಾಕಿರಣವಾಗಿ, ಸಹಕಾರಿ ಕ್ಷೇತ್ರದ ಎಲ್ಲರಿಗೂ ಮಾದರಿಯಾಗಿ ರೂಪುಗೊಂಡ ಈ ವೈಭವ ವರ್ಷದಿಂದ ವರ್ಷಕ್ಕೆ ಹೊಸ ಮೆರಗು ಸಿಗುತ್ತಿದೆ.

ರಾಜ್ಯ ಅಪೆಕ್ಸ್ ಬ್ಯಾಂಕ್ ಅದ್ಯ್ಯಕ್ಷ ಆರ್. ಎಂ. ಮಂಜುನಾಥಗೌಡರ ಕಲ್ಪನೆಯ ಕೂಸಾಗಿ ಮೈದಳೆದ ಈ ವೈಭವದ ಉದ್ದೇಶವನ್ನು ಈಡೇರಿಸುತ್ತಿದೆ. ಗ್ರಾಮೀಣ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ, ಅವರ ಬದುಕನ್ನು ಹಸನುಗೊಳಿಸುವ, ಅವರು ಉತ್ಪಾದಿಸಿದ ಗೃಹ ಕೈಗಾರಿಕೆಗಳ ಉತ್ಪನ್ನಗಳಿಗೆ ಪ್ರಚಾರ ನೀಡುವ, ಮಾರುಕಟ್ಟೆ ಕಲ್ಪಿಸುವ ಪ್ರಯತ್ನವೇ ಈ ಕೊಡಚಾದ್ರಿ ವೈಭವ. ಗ್ರಾಮೀಣ ಜನರ ಜೊತೆಗೆ ನಗರದ ಬಡ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ನಿರ್ದಿಷ್ಟ ಉದ್ದೇಶದೊಂದಿಗೆ ಕೊಡಚಾದ್ರಿ ಗ್ರಾಮೀಣ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು.

ಈವರೆಗೆ ಟ್ರಸ್ಟ್ ವತಿಯಿಂದ 6015 ಸಾವಿರ ಸ್ವಸಹಾಯ ಗುಂಪುಗಳ ರಚನೆ ಮಾಡಲಾಗಿದ್ದು, ಇವುಗಳ ಪೈಕಿ 5093 ಮಹಿಳಾ ಗುಂಪುಗಳಿವೆ. ಒಟ್ಟು 1,02,150 ಸದಸ್ಯರಿದ್ದಾರೆ. ಇದರಲ್ಲಿ 8,817 ಮಹಿಳಾ ಸದಸ್ಯರಿದ್ದಾರೆ. ಈ ಗುಂಪುಗಳು ಒಟ್ಟು 17.79 ಕೋಟಿ ರೂ.ಗಳ ಉಳಿತಾಯ ಸಂಗ್ರಹಿಸಿವೆ. ಈ ಗುಂಪುಗಳ ಪೈಕಿ 4383 ಗುಂಪುಗಳು 60.60 ಕೋಟಿ ರೂ. ಸಾಲ ಪಡೆದಿದ್ದು, ಸಾಲ ಮರುಪಾವತಿ ಶೇ.99 ರಷ್ಟಿದೆ.

ತರಬೇತಿ: ಈ ಗುಂಪುಗಳ ಸದಸ್ಯರಿಗೆ ಅಗರಬತ್ತಿ, ಬ್ಯಾಗುಗಳ ತಯಾರಿಕೆ, ಗೊಂಬೆಗಳ ತಯಾರಿಕೆ, ಟೈಲರಿಂಗ್, ಎಂಬ್ರಾಡಯಿರಿ, ಕೃತಿಕ ಆಭರಣಗಳ ತಯಾರಿಕೆ, ಕಸೂತಿ, ಶುಂಠಿ ಸಂಸ್ಕರಣೆ, ಅಡಿಕೆ ಹಾಳೆ ಉತ್ಪನ್ನಗಳ ತಯಾರಿಕೆ, ಬಾಳೆ ನಾರಿನ ಉತ್ಪನ್ನಗಳ ತಯಾರಿಕೆ, ಬಿದಿರಿನ ಉತ್ಪನ್ನಗಳ ತಯಾರಿಕೆ, ಆಹಾರ ಉತ್ಪನ್ನಗಳ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತರಬೇತಿ ನೀಡಲಾಗಿದೆ. ಈ ರೀತಿ ತರಬೇತಿ ಪಡೆದ ಸಂಘಗಳು ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿದ್ದು, ಕಳೆದ ಸಾಲಿನಲ್ಲ್ಲಿ ಒಟ್ಟು 1.22 ಕೋಟಿ ರೂ.ವಹಿವಾಟು ನಡೆಸಿದ್ದಾರೆ.

ಕೊಡಚಾದ್ರಿ ವೈಭವ:
ಈ ಸ್ವಸಹಾಯ ಸಂಘಗಳ ಸದಸ್ಯರು ಈ ರೀತಿ ಬೆಳವಣಿಗೆ ಸಾಧಿಸುತ್ತಿರುವುದನ್ನು ನೋಡಿ ಇವರು ಉತ್ಪಾದಿಸಿದ ವಸ್ತುಗಳಿಗೆ ನಿರ್ದಿಷ್ಟ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಹೊಸ ಕಲ್ಪನೆಯಾಗಿ ಕೊಡಚಾದ್ರಿ ವೈಭವ ಎಂಬ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಯಿತು. ತಮ್ಮ 3 ದಶಕಗಳ ಸಹಕಾರಿ ಅನುಭವದಲ್ಲಿ ಇಂತಹ ಕಾರ್ಯಕ್ರಮಕ್ಕೆ ಆರ್.ಎಂ. ಮಂಜುನಾಥಗೌಡರು ರೂಪ ಕೊಟ್ಟರು. ನಿರೀಕ್ಷೆಗೂ ಮೀರಿ ಯಶಸ್ವಿಯಾದ ಈ ಕೊಡಚಾದ್ರಿ ವೈಭವ ಇದೀಗ ಸಹಕಾರಿ ಮತ್ತು ಸ್ವಸಹಾಯ ಸಂಘಗಳ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ನಾಡಿನ ಎಲ್ಲ ಸಹಕಾರಿಗಳ ಕಣ್ಣು ಇದರ ಮೇಲೆ ಬಿದ್ದಿದೆ. ಇದರ ಯಶಸ್ಸು, ಯಶೋಗಾಥೆಯನ್ನು ಅಧ್ಯಯನ ಮಾಡಲು ಇಲ್ಲಿಗೆ ಬರುತ್ತಿದ್ದಾರೆ. ಸರ್ಕಾರ ಸ್ವಯಂ ಪ್ರೇರಿತವಾಗಿ ಇಂತಹ ಕಾರ್ಯಕ್ರಮದ ಕಡೆ ಆಕರ್ಷಿತವಾಗಿರುವುದು ವಿಶೇಷ. ನಬಾರ್ಡ್ ಕೂಡ ಮೆಚ್ಚುಗೆಯ ಮಾತನಾಡುತ್ತಲೇ ಟ್ರಸ್ಟ್ ತನ್ನ ಆರ್ಥಿಕ ನೆರವನ್ನು ಘೋಷಿಸಿದೆ.

ಈ ವೈಭವ ಒಂದು ನಿರ್ದಿಷ್ಟ ಉದ್ದೇಶದ ತಳಹದಿಯ ಮೇಲೆ ವಿವಿಧ ಮಗ್ಗುಲಗಳನ್ನು ಹರವಿಕೊಂಡು ಬೆಳೆಯಿತು. ಹೀಗಾಗಿ ಇದರ ಯಶಸ್ಸು ದಾಖಲಾಯಿತು. ಪ್ರತಿಯೊಬ್ಬರನ್ನು ಈ ಮಾರುಕಟ್ಟೆಯ ಬಾಗಿಲಿಗೆ ಕರೆತರಲು ವಿವಿಧ ಕಾರ್ಯಕ್ರಮಗಳನ್ನು ಇಲ್ಲಿ ಜೋಡಿಸಲಾಯಿತು. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಈ ವೈಭವದ ಆಕರ್ಷಣೆಗೆ ಮರುಳಾಗುವಂತೆ ಮಾಡಲಾಯಿತು.

'ಉತ್ಪಾದನೆಯಲ್ಲಿ ಗ್ರಾಮೀಣರು-ಮಾರುಕಟ್ಟೆಯಲ್ಲಿ ರಾಷ್ಟ್ರೀಯರು" ಆಗದ ಹೊರತು ನಮ್ಮ ಏಳಿಗೆ ಸಾಧ್ಯವಿಲ್ಲ. ಇಂದು ಮುಂಚೂಣಿಯಲ್ಲಿರುವ ಉತ್ಪಾದನಾ ವಸ್ತುಗಳು ಆಕರ್ಷಕ ಜಾಹೀರಾತುಗಳು ಮತ್ತು ವಿವಿಧ ಆಮಿಷಗಳ ಮೂಲಕ ತಮ್ಮ ಮಾರುಕಟ್ಟೆಯನ್ನು ಗಟ್ಟಿಗೊಳಿಸಿಕೊಂಡಿವೆ. ಇವುಗಳ ಎದುರು ನಮ್ಮ ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಸುಲಭದ ಕೆಲಸವಲ್ಲ. ಆದರೆ ಇವುಗಳಿಗೆ ಜಾಹೀರಾತು ಮೂಲಕ ಮಾರುಕಟ್ಟೆ ಕಲ್ಪಿಸಲು ಆಗದ ಮಾತು.

2009 ರಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆಯಿತು. ಪ್ರತಿ ವರ್ಷ ಜ. 7 ರಿಂದ 14 ರವರೆಗೆ ಈ ವೈಭವ ನಡೆಯುತ್ತದೆ. ಮೊದಲ ವೈಭವದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯ ಒಟ್ಟು 180 ಸ್ವಸಹಾಯ ಸಂಘಗಳು ಪಾಲ್ಗೊಂಡಿದ್ದವು. ಸುಮಾರು 2 ಕೋಟಿ ರೂ.ಗಳ ವಹಿವಾಟು ಈ ಏಳು ದಿನದಲ್ಲಿ ನಡೆಯಿತು.

ಎರಡನೆ ವರ್ಷದಲ್ಲಿ ಸತತ ಮೂರು ತಿಂಗಳ ಪೂರ್ವಭವಿ ಸಿದ್ಧತೆಯೊಂದಿಗೆ ಹಿಂದಿನ ವರ್ಷದ ಸಣ್ಣಪುಟ್ಟ ದೋಷಗಳನ್ನು ತಿದ್ದಿಕೊಂಡು ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಒಟ್ಟು 300 ಮಳಿಗೆಗಳಿದ್ದವು. ಈ ಬಾರಿ ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾಂ, ದಾವಣಗೆರೆ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಸ್ವಸಸಾಯ ಸಂಘಗಳು ಪಾಲ್ಗೊಂಡಿದ್ದವು. ಮಳಿಗೆಗಳಿಗಾಗಿ ನೂಕುನುಗ್ಗಲಾಯಿತು. ಮೊದಲು ಬಂದವರಿಗೆ ಮೊದಲ ಆದ್ಯತೆಯಾಗಿ ನೀಡಲಾಯಿತು. ಈ ವೈಭವದಲ್ಲಿ ಸರಿ ಸುಮಾರು ಕೋಟಿ ರೂ.ವಹಿವಾಟು ನಡೆಯಿತು.

ಒಟ್ಟಾರೆ ಕೊಡಚಾದ್ರಿ ವೈಭವ ಇಡೀ ಮಲೆನಾಡಿನಲ್ಲಿ ಮಾತ್ರವಲ್ಲ, ರಾಜ್ಯದಲ್ಲಿಯೇ ಹೊಸ ಸಂಚಲನವೊಂದನ್ನು ಸೃಷ್ಟಿಸಿದೆ. ಹೊಸ ಹೊಸ ಸಾ'ತೆಗಳನ್ನು ತೆರೆದಿದೆ. ಮಹಿಳೆಯರಲ್ಲಿ ಹೊಸ ಆಶಾಕಿರಣ ಸೃಷ್ಟಿಸಿದೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಅವರ ಬದುಕಿಗೊಂದು ಹೊಸ ತಿರುವು ಸಿಕ್ಕಿದೆ.

ಯಶೋಗಾಥೆಗಳು: ಈಕೆಯ ಹೆಸರು ದೇವಿಬಾಯಿ. ಇವರ ಜೊತೆಗಾತಿ ಲಲಿತಾಬಾಯಿ. ಇವರಿಬ್ಬರೂ ಹಿಂದುಳಿದ ಲಂಬಾಣಿ ಜನಾಂಗಕ್ಕೆ ಸೇರಿದವರು. 2006 ರವರೆಗೂ ಸಾಮಾನ್ಯ ಕೂಲಿಕಾರ್ಮಿಕರಾಗಿದ್ದರು. ಇವರು ಇಂದು ಶ್ರೀ ಸೇವಾಲಾಲ್ ಸ್ತ್ರೀಶಕ್ತಿ ಸಂಘ ರಚಿಸಿಕೊಂಡು ಲಂಬಾಣಿ ಉಡುಪು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆರ್ಥಿಕವಾಗಿ ಸದೃಢರಾಗಿದ್ದಾರೆ. ಇವೆಲ್ಲಾ ಸಾಧ್ಯವಾಗಿದ್ದು ಈ ಲಂಬಾಣಿ ತಾಂಡದಲ್ಲಿ ಕೊಡಚಾದ್ರಿ ಟ್ರಸ್ಟ್ ಹಮ್ಮಿಕೊಂಡ ಕಾರ್ಯಕ್ರಮದಿಂದ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಬಡವಂ ಬಲ್ಲಿದಾನಗನೇ..?: ಕಾಫಿಬಾಯಿ, ಶೇಬಿ ವಿಚಿತ್ರ ಹೆಸರಿನ ಇವರು ಹಕ್ಕಿ ಪಿಕ್ಕಿ ಅಲೆಮಾರಿ ಜನಾಂಗಕ್ಕೆ ಸೇರಿದವರು. ಇಂದು ಒಂದೂರು, ನಾಳೆ ಇನ್ನೊಂದೂರು ಎಂದು ಅಲೆಯುತ್ತಿದ್ದವರು. ಒಂದೆಡೆ ನಿಲ್ಲುವಂತಾಗಿದ್ದೇ ದೊಡ್ಡ ಸಾಧನೆ. ಸರ್ಕಾರದ ಯೋಜನೆಯಂತೆ ಇವರು ಒಂದೆಡೆ ನೆಲೆ ನಿಂತರೂ ಇವರ ಆರ್ಥಿಕ ಸ್ಥಿತಿ ತೀರಾ ದುಸ್ತರವಾಗಿತ್ತು. ಇವರ ನೆರವಿಗೆ ಧಾವಿಸಿದ್ದು ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್.

ಇಲ್ಲಿನ ಮಹಿಳೆಯರನ್ನ್ನು ಸೇರಿಸಿಕೊಂಡು ಶಿವಜ್ಯೋತಿ ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಲಾಯಿತು. ಮಣಿಸರ, ರುದ್ರಾಕ್ಷಿಸರ, ವಿವಿಧ ಬಗೆಯ ಹೂವಿನ ಹಾರಗಳನ್ನು ತಯಾರಿಸುವ ತರಬೇತಿ ನೀಡಲಾಯಿತು. ಆರಂಭದಲ್ಲಿ 2 ಸಾವಿರ ರೂ. ಬಂಡವಾಳದ ನೆರವಿನೊಂದಿಗೆ ಆರಂಭಗೊಂಡ ಈ ಉತ್ಪಾದನೆ ಇಂದು ಲಕ್ಷಾಂತರ ರೂ.ಗಳ ವಹಿವಾಟು ನಡೆಯುತ್ತಿದೆ. ನಿಜಕ್ಕೂ ಇದು ಇತರ ಮಹಿಳಾ ಸಂಘಗಳಿಗೆ ಪ್ರೇರಕವಾಗಿದೆ. [ಜಿಲ್ಲಾಸುದ್ದಿ]

English summary
Kodachadri Vaibhava a unique fair is a vision of Apex Bank president Manunath. It has provided a market for home made products and strengthened Self Help Groups in Malnad region. Hakki Pikki community has benefited a lot from this rural fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X