ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಪ್ರವಾಸಿಗರಿಗಾಗಿ ಆತಿಥ್ಯದ ಮನೆಗಳು

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Homestays in Coorg, Karnataka
ಭಾರತದ ಸ್ವಿಟ್ಜರ್‌ಲ್ಯಾಂಡ್, ಕರ್ನಾಟಕದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ತನ್ನದೇ ಆದ ಪ್ರಾಕೃತಿಕ ಸೌಂದರ್ಯದಿಂದ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಬೇಸಿಗೆಯ ತಂಪು ಹವೆ... ಮಳೆಗಾಲದಲ್ಲಿ ಜಿಟಿಜಿಟಿ ಮಳೆ... ಚಳಿಗಾಲದಲ್ಲಿ ಮಂಜಿನ ಮುಸುಕು ಹಾಕಿ ಸಣ್ಣಗೆ ನಡುಕ ಹುಟ್ಟಿಸುವ ಚಳಿ... ಇಲ್ಲಿಗೆ ಭೇಟಿ ನೀಡಿದವರಿಗೊಂದು ಆಹ್ಲಾದಕರ ಅನುಭವ ನೀಡುತ್ತದೆ.

ಇತ್ತೀಚಿನ ದಿನಗಳಲ್ಲಿ ಕೊಡಗಿನತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲೆಲ್ಲಾ ಇಲ್ಲಿಗೆ ಬರುವ ಪ್ರವಾಸಿಗರು ಬೆಟ್ಟಗುಡ್ಡಗಳ, ಕಾಫಿ, ಏಲಕ್ಕಿ ತೋಟಗಳ ನಡುವೆ ಇರುವಂತಹ ಪ್ರವಾಸಿ ತಾಣಗಳನ್ನು ನೋಡಬೇಕೆಂದರೆ ಹರ ಸಾಹಸಪಡಬೇಕಿತ್ತು. ಈಗ ರಸ್ತೆ, ವಾಹನ ಸೌಲಭ್ಯವಿದೆ. ಆದರೆ ಇನ್ನೂ ಕೂಡ ಕೆಲವು ತಾಣಗಳಿಗೆ ವಾಹನದಲ್ಲಿ ತೆರಳಲು ರಸ್ತೆಗಳೇ ಇಲ್ಲ ಹಾಗಾಗಿ ನಡೆದುಕೊಂಡೇ ಹೋಗಬೇಕಾಗುತ್ತದೆ.

ಕೊಡಗಿನ ನಿಸರ್ಗ ಸೌಂದರ್ಯವೇ ಹಾಗಿದೆ. ಮಳೆಗಾಲದಲ್ಲಿ ಹೆಚ್ಚು ಮಳೆಸುರಿದಾಗ ನದಿ, ತೊರೆಗಳು ತುಂಬಿ ಹರಿಯುತ್ತವೆಯಲ್ಲದೆ ಬೆಟ್ಟದ ಮೇಲಿಂದ ಧುಮುಕಿ ಅಸಂಖ್ಯ ಜಲಪಾತಗಳನ್ನು ಸೃಷ್ಟಿಸುತ್ತವೆ. ಇವುಗಳನ್ನು ಸುರಿಯುವ ಮಳೆಯಲ್ಲಿ ನೋಡುವುದೇ ಒಂದು ರೀತಿಯ ಮಜಾ. ಬೆಟ್ಟಗುಡ್ಡ, ಕಾಡು, ತೋಟಗಳ ನಡುವೆ ಕೇವಲ ಜಲಪಾತ ಮಾತ್ರವಲ್ಲದೆ, ದೇವಾಲಯಗಳು, ಪ್ರಕೃತಿ ತಾಣಗಳಿವೆ. ಇವು ಜನಜಂಗುಳಿಯಿಲ್ಲದೆ ಪ್ರಶಾಂತವಾಗಿರುತ್ತವೆ. ಇವುಗಳನ್ನು ಒಂದೇ ದಿನದಲ್ಲಿ ವೀಕ್ಷಿಸಿ ಹಿಂತಿರುಗಲಾಗುವುದಿಲ್ಲ. ಹಾಗೆಂದು ಹೇಗಪ್ಪಾ ಕಾಡಿನಲ್ಲಿರುವುದೆಂದು ತಲೆಕೆಡಿಸಿಕೊಳ್ಳುವ ಅಗತ್ಯವೂ ಈಗ ಇಲ್ಲ.

ಹೋಂಸ್ಟೇಗಳು : ಬೆಟ್ಟಗುಡ್ಡಗಳ, ಕಾಫಿ, ಏಲಕ್ಕಿ ತೋಟಗಳ ಸುಂದರ ನಿಸರ್ಗವನ್ನು ಸವಿಯುತ್ತಾ ಹಾಯಾಗಿರಲು ಜಿಲ್ಲೆಯಾದ್ಯಂತ ನೂರಾರು ಹೋಂಸ್ಟೇಗಳು(ಆತಿಥ್ಯದ ಮನೆಗಳು) ಹುಟ್ಟಿಕೊಂಡಿವೆ. ಈ ಹೋಂಸ್ಟೇಗಳು ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವುದಲ್ಲದೆ, ನಿಸರ್ಗ ರಮಣೀಯತೆಯನ್ನು ಸವಿಯುತ್ತಾ ಕೊಡಗಿನ ಸಂಸ್ಕೃತಿ ಹಾಗೂ ಜನಜೀವನ, ತಿಂಡಿ-ತಿನಿಸು ಮುಂತಾದವುಗಳ ಪರಿಚಯ ಮಾಡಿಕೊಡುತ್ತವೆಯಲ್ಲದೆ, ಕೊಡಗಿನ ಹೆಸರುವಾಸಿ ಖಾದ್ಯ ಕಡುಬು ಪಂದಿಕರಿಯಂತಹ ಭೋಜನವನ್ನು ಸಹ ಸವಿಯಬಹುದಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ ಸುಮಾರು ನಾನೂರಕ್ಕೂ ಹೆಚ್ಚು ಹೋಂಸ್ಟೇಗಳು ಕಾರ್ಯಾಚರಿಸುತ್ತಿದ್ದು, ಈ ಹೋಂಸ್ಟೇಗಳನ್ನು ಹೆಚ್ಚಾಗಿ ಕಾಫಿ ಬೆಳೆಗಾರರೇ ನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ. ಕೆಲವು ವರ್ಷಗಳ ಹಿಂದೆ ಕಾಫಿ ಬೆಲೆ ಕುಸಿತಗೊಂಡಾಗ ಕಾಫಿ ಬೆಳೆಗಾರರು ಕಂಡುಕೊಂಡ ಪರ್ಯಾಯ ಮಾರ್ಗವೇ ಈ ಹೋಂಸ್ಟೇಗಳಾಗಿವೆ.

ಹಾಗೆ ನೋಡಿದರೆ ಕೊಡಗಿನ ನಿಸರ್ಗದ ನಡುವೆ ನೆಲೆನಿಂತಿದ್ದ ಹಲವಾರು ತಾಣಗಳು ಪ್ರವಾಸಿಗರಿಂದ ದೂರವೇ ಉಳಿದಿದ್ದವು. ಆದರೆ ಈಗ ಹೋಂಸ್ಟೇಗಳು ಅಸ್ತಿತ್ವಕ್ಕೆ ಬಂದ ಬಳಿಕ ಅಲ್ಲಿಗೂ ಪ್ರವಾಸಿಗರು ತೆರಳುವಂತಾಗಿದೆ. ದೂರದಿಂದ ಬರುವ ಪ್ರವಾಸಿಗರಿಗೆ ಮನೆಯ ವಾತಾವರಣ ನಿರ್ಮಿಸಿಕೊಡುವುದರೊಂದಿಗೆ ಅವರು ಬಯಸಿದ ತಿಂಡಿ ತಿನಿಸುಗಳು, ಟ್ರೆಕ್ಕಿಂಗ್‌ಗೆ ಮಾರ್ಗದರ್ಶನ ಮುಂತಾದವುಗಳನ್ನು ನೀಡಲಾಗುತ್ತದೆ. ಈ ಹಿಂದೆ ಜಿಲ್ಲೆಗೆ ಆಗಮಿಸುತ್ತಿದ್ದ ಪ್ರವಾಸಿಗರು ಪಟ್ಟಣಕ್ಕೆ ಸಮೀಪವಿರುವ ಕೆಲವು ತಾಣಗಳನ್ನು ಮಾತ್ರ ನೋಡಿಕೊಂಡು ಹಿಂತಿರುಗುತ್ತಿದ್ದರು. ದೂರದ ಇರ್ಪು, ನಾಲ್ಕುನಾಡು ಅರಮನೆ, ಇಗ್ಗುತ್ತಪ್ಪ ದೇವಾಲಯ ಇನ್ನಿತರ ತಾಣಗಳಿಗೆ ತೆರಳುವುದು ಕಷ್ಟಸಾಧ್ಯವಾಗಿತ್ತು. ಈ ತಾಣಗಳು ಪಟ್ಟಣಗಳಿಗೆ ಸಮೀಪವಿಲ್ಲದ ಕಾರಣ ವಾಸ್ತವ್ಯ ಹೂಡಲು ಹೋಟೆಲ್‌ಗಳ ಸೌಲಭ್ಯವಿಲ್ಲದೆ ಪರದಾಡುವಂತಾಗಿತ್ತು. ಹಾಗಾಗಿ ತಾಣಗಳಿಗೆ ಭೇಟಿ ನೀಡಿದರೂ ತರಾತುರಿಯಲ್ಲಿ ಹಿಂತಿರುಗಬೇಕಾಗಿತ್ತು. ಇದರಿಂದಾಗಿ ಬಹಳಷ್ಟು ಪ್ರವಾಸಿ ತಾಣಗಳಿಗೆ ತೆರಳುವ ಪ್ರಯತ್ನವನ್ನು ಪ್ರವಾಸಿಗರು ಮಾಡುತ್ತಿರಲಿಲ್ಲ. ಈಗ ಹಾಗಿಲ್ಲ ಬಿಡಿ ಎಲ್ಲಡೆಯೂ ಹೋಂಸ್ಟೇಗಳಿರುವುದರಿಂದ ಒಂದೆರಡು ದಿನ ನೆಮ್ಮದಿಯಾಗಿದ್ದು ಬರಬಹುದಾಗಿದೆ.

ನಗರದ ಕಾಂಕ್ರೀಟ್ ಕಾಡುಗಳ ಮಧ್ಯೆ ಸದಾ ಒತ್ತಡದ ಕೆಲಸ ಕಾರ್ಯಗಳಲ್ಲಿ ನಿರತರಾದವರು, ಐಟಿ-ಬಿಟಿ ಉದ್ಯೋಗಿಗಳು ತಮ್ಮೆಲ್ಲಾ ಜಂಜಾಟಗಳನ್ನು ಬದಿಗೊತ್ತಿ ಪ್ರಶಾಂತ ವಾತಾವರಣದಲ್ಲಿ, ಹಕ್ಕಿಗಳ ಚಿಲಿಪಿಲಿ ಇಂಚರ, ಜೇನುನೊಣಗಳ ಝೇಂಕಾರದಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು, ಕಿತ್ತಳೆಗಳ ಕಂಪನ್ನು ಸವಿಯಲು ಇಲ್ಲಿಗೆ ಆಗಾಗ್ಗೆ ಬರುತ್ತಿರುತ್ತಾರೆ.

ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೋಂಸ್ಟೇಗಳು ಸಹಕಾರಿಯಾಗಿವೆ. ಇಲ್ಲಿ ಇನ್ನೂ ಅಭಿವೃದ್ಧಿ ವಂಚಿತವಾಗಿರುವ ಹಲವಾರು ತಾಣಗಳಿದ್ದು, ಅವುಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರು ಅಲ್ಲಿಗೆ ತೆರಳುವಂತೆ ಮಾಡುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಇದರಿಂದ ಹೋಂಸ್ಟೇಗಳಿಗೂ ಅನುಕೂಲವಾಗುತ್ತದೆಯಲ್ಲದೆ, ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿ ಜಿಲ್ಲೆಯಿಂದ ಬೇರೆಡೆಗೆ ವಲಸೆಹೋಗುವುದು ತಪ್ಪುತ್ತದೆ. ಪ್ರವಾಸಿಗರ ಸಾಮರ್ಥ್ಯಕ್ಕೆ ತಕ್ಕಂತಹ ಹೋಂಸ್ಟೇಗಳಿರುವುದರಿಂದ ಪ್ರವಾಸಿಗರಿಗೆ ಹೊರೆಯಾಗುವುದಿಲ್ಲ.

ಹೋಂಸ್ಟೇ ಬುಕ್ಕಿಂಗ್ ಗಾಗಿ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ
* ಸೈಲೆಂಟ್ ವ್ಯಾಲಿ ಕಾಟೇಜಸ್
* ಸ್ಪೈಸ್ ವ್ಯಾಲಿ ಬಂಗ್ಲೋ
* ಹನಿ ಪಾಟ್ ಹೋಂಸ್
* ಅಲತ್-ಕ್ಯಾಡ್ ಎಸ್ಟೇಟ್ ಹಾಲಿಡೇ ಹೋಂಸ್
* ಜಂಗಲ್ ಟ್ರೇಲ್ಸ್
* ಮಿಸ್ಟಿ ಮೀಡೋಸ್
* ತಾಮರ
* ಗೌರಿ ನಿವಾಸ್, ಮಡಿಕೇರಿ
* ಹಳ್ಳಿ ಮನೆ, ಕುಶಾಲನಗರ
* ದಿ ಜೇಡ್, ಕೂರ್ಗ್

English summary
Homestays in Coorg, the Kashmir of Karnataka. Madikeri and the tourist places around are one the best vacation spots in Karnataka and India. An article on homestays in Coorg by BM Lavakumar, citizen journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X