ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗೆ ಬ್ಯಾಟಿಂಗ್ ಬೌಲಿಂಗ್ ಎರಡೂ ಗೊತ್ತಿಲ್ಲ

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

HD Kumaraswamy
ಶಿವಮೊಗ್ಗ, ಡಿ. 23 : ಮುಖ್ಯಮಂತ್ರಿ ಯಡಿಯೂರಪ್ಪ ರಾಷ್ಟ್ರ ರಾಜಕಾರಣದತ್ತ ಆಸಕ್ತಿ ತೋರಿರುವುದು ಏಕೆಂದರೆ, ರಾಜ್ಯ ರಾಜಕಾರಣ ಸೀಮಿತವಾದ ಜಾಗವಾಗಿದ್ದು, ಹಗರಣವನ್ನು ಸೀಮಿತವಾಗಿ ಮಾಡಬಹುದಾಗಿದೆ. ಹೀಗಾಗಿಯೇ ರಾಷ್ಟ್ರ ರಾಜಕಾರಣವೆಂಬ ದೊಡ್ಡ ಮೈದಾನವನ್ನು ಹುಡುಕಿಕೊಂಡು ಹೊರಟಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಜಿಲ್ಲಾ ವತ್ತು ತಾಲೂಕಾ ಪಂಚಾಯತಿ ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತ, ಇನ್ನೂ ಸಾಕಷ್ಟು ಹಗರಣಗಳನ್ನು ಬಹಿರಂಗಗೊಳಿಸುವುದು ಬಾಕಿಯುಳಿದಿದೆ. ಜಿ.ಪಂ ಹಾಗೂ ಗ್ರಾ.ಪಂ. ಚುನಾವಣೆಯ ನಂತರ ರಾಜ್ಯಸರ್ಕಾರ ಮಾಡಿರುವಂತಹ ಹಗರಣದ 2ನೇ ಇನ್ನಿಂಗ್ಸ್‌ನ್ನು ಬಹಿರಂಗಗೊಳಿಸುತ್ತೇನೆ ಎಂದು ಉತ್ತರ ನೀಡಿದರು. ಹಾಗೆಯೇ, ಹಗರಣಗಳ ಬಗ್ಗೆ ಆಡಳಿತ ಪಕ್ಷದವರು ನೀಡುತ್ತಿರುವಂತಹ ಉತ್ತರವನ್ನು ನೋಡಿದರೆ, ಮುಖ್ಯಮಂತ್ರಿಗಳಿಗೆ ಹಾಗೂ ಅವರ ಸಹೋದ್ಯೋಗಿಗಳಿಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನೂ ಮಾಡಿ ಗೊತ್ತಿಲ್ಲ ಎಂದು ಹಾಸ್ಯ ಮಾಡಿದರು.

ಯಡಿಯೂರಪ್ಪನವರ ಉದ್ಧಟತನ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಪತ್ರಕ್ಕೆ ವಿವರಣೆ ಕೊಡದೆ ಉದ್ಧಟತನದ ಹೇಳಿಕೆ ನೀಡುತ್ತಾ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿದರು. ರಾಜ್ಯಪಾಲರು ಕಳಿಸಿರುವಂತಹ ಪತ್ರಕ್ಕೆ ಮುಖ್ಯ ಮಂತ್ರಿಗಳು ಪ್ರತಿಕ್ರಿಯೆ ಕೊಡಬೇಕು. ಅದುಬಿಟ್ಟು ರಾಜ್ಯಪಾಲರು ಪತ್ರ ಕಳಿಸಿರುವುದು ಅವಮಾನ ಎನ್ನುವಂತೆ ಮುಖ್ಯಮಂತ್ರಿಗಳು ಮಾತನಾಡುತ್ತಿರುವುದನ್ನು ಗಮನಿಸಿದರೆ, ಸಂವಿಧಾನ ಚೌಕಟ್ಟಿನಲ್ಲಿ ನಡೆಯಲು ಮುಖ್ಯಮಂತ್ರಿಗಳಿಗೆ ಇಷ್ಟವಿಲ್ಲ ಎನಿಸುತ್ತಿದೆ ಎಂದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವಂತಹ ಹಗರಣಗಳ ಬಗ್ಗೆ ಸಾಕಷ್ಟು ದಾಖಲೆಗಳಿವೆ ಎಂದ ಅವರು, ರಾಜ್ಯಪಾಲರು ವಿವರಣೆ ಕೇಳುವುದೇ ತಪ್ಪು ಎಂದಾದರೆ ರಾಜ್ಯಪಾಲರ ಕೆಲಸವಾದರೂ ಏನು ಎಂದು ಪ್ರಶ್ನಿಸಿದರು. ಹಾಗೆಯೇ, ರಾಜ್ಯಪಾಲರ ಕಚೇರಿ ಇರುವುದು ವಿರಾಮ ತೆಗೆದುಕೊಳ್ಳಲು ಅಲ್ಲ ಎಂದು ಸಿಡಿಮಿಡಿಗೊಂಡರು.

ಬಿಜೆಪಿ ಸರ್ಕಾರ ಮಾಡಿರುವಂತಹ ಹಗರಣಗಳ ದಾಖಲೆಗಳನ್ನು ಮಾಧ್ಯಮಗಳೇ ಬಹಿರಂಗ ಪಡಿಸಿವೆ. ಇಷ್ಟಾದರೂ ಮುಖ್ಯಮಂತ್ರಿಗಳು ಭಂಡತನವನ್ನು ಪ್ರದರ್ಶಿಸುತ್ತಿದ್ದು, ಇವರಿಗೆ ಇನ್ನ್ಯಾವ ದಾಖಲೆಗಳು ಬೇಕು? ಈಗ ರಾಷ್ಟ್ರರಾಜಕಾರಣ ಮಾಡುತ್ತೇನೆ ಎಂಬಂತಹ ಹೇಳಿಕೆ ನೀಡುತ್ತಿದ್ದು, ಅವರು ನೀಡುತ್ತಿರುವಂತಹ ಹೇಳಿಕೆಯನ್ನು ಗಮನಿಸಿದರೆ, ಅವರಲ್ಲಿಯೇ ಸಹಮತವಿದ್ದಂತೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.

English summary
Former chief minister of Karnataka HD Kumaraswamy makes fun of BS Yeddyurappa in Shivamogga during panchayat election campaign. Shivamogga district news by KR Somanath, citizen journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X