ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿನ ಮಗ ನಂಜೇಗೌಡರನ್ನು ಮರೆತವರುಂಟೆ

By * ಜಯಕುಮಾರ್ ಅರಕಲಗೂಡು
|
Google Oneindia Kannada News

HN Nanje Gowda, Hassan
ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂದರ್ಭ. ಸಲ್ಲದ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ತಾಂತ್ರಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ರೈತರ ಹಿತಾಸಕ್ತಿಗೆ ಕುಂದು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿತ್ತು. ನಮ್ಮ ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿಯ ನೀರಿನ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾರದೇ ಅಸಹಾಯಕತೆ ಪ್ರದರ್ಶಿಸಿದ ಸರ್ಕಾರಕ್ಕೆ ನೆರವಿಗೆ ಬಂದದ್ದು ಕರ್ನಾಟಕ ರಾಜ್ಯದ ನೀರಾವರಿ ಭಗೀರಥ ಎಚ್ಎನ್ ನಂಜೇಗೌಡ.

ನದಿ ನೀರು ವಿವಾದ ಕುರಿತಂತೆ ಹೋರಾಟ ನಡೆಸುತ್ತಿದ್ದ ಕನ್ನಡ ಸಂಘಟನೆಗಳ ಹೋರಾಟಕ್ಕೆ ನೈತಿಕ ಬಲ ತುಂಬಿದ್ದು ಎಚ್ಎನ್ ನಂಜೇಗೌಡರು. ನದಿ ನೀರಿನ ವಿವಾದ ಕುರಿತ ಪ್ರತ್ಯೇಕ ಪ್ರಾಧಿಕಾರದ ಮುಂದೆ ವಾದ ಮಂಡಿಸಲು ಹೆಗಲಿಗೆ ಹೆಗಲು ಕೊಟ್ಟು ಮಾಹಿತಿ ನೀಡಿದ್ದು ಅದೇ ಎಚ್ ಎನ್ ನಂಜೇಗೌಡ. ಹೌದು ತನಗಾಗಿ ಏನನ್ನೂ ಮಾಡಿಕೊಳ್ಳದೇ ಜನರ ಸೇವೆಗಾಗಿ ತನ್ನ ವಿದ್ವತ್ತನ್ನು ಮುಡಿಪಾಗಿಟ್ಟ ಅಪರೂಪದ ರಾಜಕಾರಣಿ ಎಚ್ಎನ್ ನಂಜೇಗೌಡ. ನೀರಾವರಿ ವಿಚಾರದಲ್ಲಿ ರಾಜ್ಯದ ಜನತೆ ಸದಾ ನೆನಪಿಟ್ಟುಕೊಳ್ಳ ಬೇಕಾದ ನಂಜೇಗೌಡರು ಗತಿಸಿ ಇಂದಿಗೆ 3 ವರ್ಷ ಸಂದಿದೆ. ಈ ಸಂದರ್ಭದಲ್ಲಿ ಅವರ ಬಗೆಗೆ ಮೆಲುಕು ಹಾಕುವುದು ಅವರಿಗೆ ಸಲ್ಲಿಸುವ ಗೌರವವಾಗಬಹುದೇನೋ.

ಇವತ್ತು ರಾಜ್ಯದಲ್ಲಿ ಹಲವು ಮಂದಿ ರಾಜಕಾರಣಿಗಳನ್ನು ನೀವು ನೋಡಿದ್ದೀರಿ. ಹಿಂದಿನ ದಶಕಗಳಲ್ಲಿ ಇದ್ದ ರಾಜಕಾರಣಿಗಳಿಗೂ ಇಂದಿನ ರಾಜಕಾರಣಿಗಳಿಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂತಹ ವ್ಯವಸ್ಥೆಯ ನಡುವೆ ಹಳೆ ಹೊಸ ತಲೆಮಾರಿನ ರಾಜಕಾರಣಿಗಳ ನಡುವೆ ತಾನು ನಂಬಿದ ಸಿದ್ದಾಂತಗಳಿಗೆ, ನೈತಿಕ ಮೌಲ್ಯಗಳಿಗೆ ನಿಷ್ಠುರ ಬದ್ದತೆಯನ್ನು ಪ್ರದರ್ಶಿಸಿ ಬದುಕಿದ ಛಲಗಾರ ಎಚ್ಎನ್ ನಂಜೇಗೌಡ. ಅವರ ಕುರಿತು ಮಾತನಾಡುವ ಮುನ್ನ ಚೂರು ಮಾಹಿತಿ ನಿಮಗಾಗಿ.

ಮಹಾರಾಜಾ ಕಾಲೇಜು ವಿದ್ಯಾರ್ಥಿ : ಲಭ್ಯ ಮಾಹಿತಿಗಳನ್ನಾಧರಿಸಿ ಹೇಳುವುದಾದರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಂಜೇಗೌಡರ ಎರಡನೇ ಪತ್ನಿ ಕಮಲಮ್ಮನವರ ಪುತ್ರ ಎಚ್ಎನ್ ನಂಜೇಗೌಡ. ತಾಯಿಯ ಊರು ಅರಕಲಗೂಡು ತಾಲೂಕಿನ ಗಂಗೂರು ಗ್ರಾಮ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಧ್ಯಾಭ್ಯಾಸಗಳನ್ನು ಪೂರೈಸಿದ ನಂಜೇಗೌಡರು ಬಿಎ ಪದವಿಗಾಗಿ ಮೈಸೂರಿಗೆ ತೆರಳಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗೌಡರು ಕಾಲೇಜು ದಿನಗಳಲ್ಲೆ ಉತ್ತಮ ವಾಗ್ಮಿಯೂ ಆಗಿದ್ದರು. ವಿದ್ಯಾರ್ಥಿ ಸಂಘದ ಮುಖಂಡರೂ ಆಗಿ ಹೆಸರು ಗಳಿಸಿದ್ದ ಗೌಡರು ಸದಾ ಚಟುವಟಿಕೆಯ ಚಿಲುಮೆ. ಅಂದಿನ ದಿನಗಳಲ್ಲಿಯೇ ವಿದ್ಯಾರ್ಥಿ ಚಳವಳಿಗಳಲ್ಲೂ ಮುಂದಾಳಾಗಿರುತ್ತಿದ್ದರು. ಪದವಿಯ ನಂತರ ಕಾನೂನು ಪದವಿ ಕಲಿತ ಗೌಡರು 60ರ ದಶಕದ ಆರಂಭದಲ್ಲಿ ಅರಕಲಗೂಡಿಗೆ ವಾಪಸಾದರು. ಆ ವೇಳೆಗಾಗಲೇ ರಾಜಕಾರಣದ ಕಿಚ್ಚು ಹೊತ್ತಿಸಿಕೊಂಡಿದ್ದ ಗೌಡರು ತಾಲೂಕಿನಲ್ಲಿಯೂ ಚಳವಳಿಗಳ ಮುಂದಾಳತ್ವ ವಹಿಸುತ್ತಿದ್ದರು.

ರೈತರ ಬಗೆಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಅವರು ರೈತರಿಗಾಗಿ ಏನನ್ನಾದರೂ ಮಾಡಬೇಕೆಂಬ ತುಡಿತ ಹತ್ತಿಸಿಕೊಂಡಿದ್ದರು. 1960-61ರಲ್ಲಿ ಅರಕಗಲೂಡು ವಿಧಾನಸಭಾ ಸದಸ್ಯ ಸ್ಥಾನಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪುಟ್ಟೇಗೌಡರಿಗೆ ಸಾಥ್ ನೀಡಿದರು. ಮುಂದೆ 1962ರಲ್ಲಿ ಪ್ರಜಾಸೋಷಲಿಸ್ಟ್ ಪಕ್ಷದಿಂದ ಅಭ್ಯರ್ಥಿಯಾದ ಎಚ್ಎನ್ ನಂಜೇಗೌಡ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ನ ಜಿ ಎ ತಿಮ್ಮಪ್ಪಗೌಡರ ವಿರುದ್ದ ಸ್ಪರ್ಧಿಸಿ ಸೋಲುಂಡರು. ಮತ್ತೆ ರಾಜ್ಯದಲ್ಲಿ ನಿಜಲಿಂಗಪ್ಪನವರ ಸರ್ಕಾರವಿದ್ದಾಗ 1967ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ ಕೆ ಬಿ ಮಲ್ಲಪ್ಪನವರ ವಿರುದ್ದ ಗೆಲುವು ಸಾಧಿಸಿದರು. ಮತ್ತೆ 1972ರಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಂಜೇಗೌಡರು ಎದುರಾಳಿ ಕೆ ಬಿ ಮಲ್ಲಪ್ಪನವರನ್ನು ಎರಡನೇ ಬಾರಿಗೆ ಸೋಲಿಸಿದರು. ಆಗ ಆಡಳಿತಕ್ಕೆ ಬಂದ ಅರಸು ಸರ್ಕಾರದಲ್ಲಿ ಭಾರೀ ನೀರಾವರಿ ಖಾತೆಯ ಸಚಿವರಾದ ಗೌಡರಿಗೆ ತಾವು ಅಂದುಕೊಂಡಿದ್ದನ್ನು ಮಾಡುವ ಅವಕಾಶ ಸಿಕ್ಕಿತ್ತು.

ಅಷ್ಟು ಹೊತ್ತಿಗಾಗಲೇ ಹೇಮಾವತಿ ಜಲಾಶಯ ಯೋಜನೆ ಜಾರಿಯಲ್ಲಿತ್ತು. ಸದರಿ ಜಲಾಶಯದ ಹಿನ್ನೀರಿನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಚಾಲನೆ ನೀಡಿದ ಗೌಡರು ಹಾರಂಗಿ ಜಲಾಶಯ ಯೋಜನೆಯ ನೀರನ್ನು ತಾಲೂಕಿನ ರೈತರಿಗೆ ದೊರಕಿಸುವ ಸಾಹಸ ಮಾಡಿದರು. ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆಗಳಾದವು ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಜನರ ಆರ್ಥಿಕಾಭಿವೃದ್ದಿಗೆ ಹೆಗಲು ನೀಡುವ ಬ್ಯಾಂಕಿಂಗ್ ಯೋಜನೆಯನ್ನು ಅನುಷ್ಠಾನಕ್ಕೆ ತಂದರು, ಪರಿಣಾಮ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮೀಣ ಬ್ಯಾಂಕ್ ಸೇವೆಯನ್ನು ಪಡೆಯುವಂತಾಯಿತು.

ದಿಟ್ಟೆದೆಯ ರಾಜಕಾರಣಿ : ಅಧಿಕಾರದಲ್ಲಿದ್ದಾಗ ಯಾವುದಕ್ಕೂ ರಾಜೀ ಮಾಡಿಕೊಳ್ಳದ ಗೌಡರು ತಮ್ಮ ನಿರ್ದಾಕ್ಷಿಣ್ಯ ನಡೆಗಳಿಂದಾಗಿ ರಾಜೀನಾಮೆ ನೀಡಬೇಕಾಯಿತು. ಅಧಿಕಾರಕ್ಕೆ ಅಂಟಿ ಕೂರದೇ ಅಂದುಕೊಂಡದ್ದನ್ನು ಮಾಡಿ ಮುಗಿಸುವ, ಇದ್ದದ್ದನ್ನು ಇದ್ದಂತೆ ನೇರವಾಗಿ ಕಠಿಣವಾಗಿ ಹೇಳುವ ಛಾತಿಯಿಂದಾಗಿ ಮತ್ತು ಅಧಿಕಾರಕ್ಕೆ ಅಂಟಿಕೂರದ ನಡವಳಿಕೆ ಎಚ್ಎನ್ ನಂಜೇಗೌಡರನ್ನು ಎತ್ತರದಲ್ಲಿ ಕೂರುವಂತೆ ಮಾಡಿದೆ. ಮುಂದೆ ಸರ್ಕಾರ ಪತನಗೊಂಡಾಗ 1978ರಲ್ಲಿ ಮತ್ತೆ ಸ್ಪರ್ಧಿಸಿದ ನಂಜೇಗೌಡರು ಸೋಲನುಭವಿಸಿದರು. ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಎತ್ತರಕ್ಕೇರಿದ ಅವರು 1980ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಸಂಸತ್ ನಲ್ಲಿ ತಮ್ಮ ಪಕ್ಷದವರೇ ಆದ ಪ್ರಧಾನಿ ರಾಜೀವ್ ಗಾಂಧಿ ವಿರುದ್ದ ಬೋಫೋರ್ಸ್ ಹಗರಣ ಬಹಿರಂಗವಾದಾಗ ಅತ್ಯಂತ ಕಟುವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪಕ್ಷದಿಂದಲೇ ಹೊರಬಿದ್ದರು.

ರಾಜ್ಯದಲ್ಲಿ ಜೆಡಿಯು ತೆಕ್ಕೆಗೆ ಹೋಗಿ ಸೋಲನುಭವಿಸಿದರು ನಂತರ ಬಿಜೆಪಿಗೆ ಸೇರಿ ಬಸವನಗುಡಿಯಲ್ಲಿ ಸೋಲು ಕಂಡು 'ಗರ್ಭಗುಡಿಯ ಪಕ್ಷ'ವೆಂದು ಜರಿದು ಪಕ್ಷ ತೊರೆದರು. ಗೌಡರು ಯಾವುದೇ ಪಕ್ಷದಲ್ಲಿದ್ದರು ನೀರಾವರಿ ಕುರಿತು ವಹಿಸಿದ್ದ ಆಸ್ಥೆ ಮತ್ತು ರೈತರ ಪರವಾಗಿದ್ದ ಕಾಳಜಿಯಿಂದಾಗಿ ಕಾಲಕಾಲಕ್ಕೆ ಸರ್ಕಾರಕ್ಕೆ ಮತ್ತು ಹೋರಾಟಗಾರರಿಗೆ ಮಾಹಿತಿ ನೀಡಿದರು. ಯಾವುದೇ ದಾಖಲೆಗಳನ್ನು ಎದುರಿಗಿಟ್ಟುಕೊಳ್ಳದೇ ಬ್ರಹ್ಮಾಂಡದಂತಹ ನೀರಾವರಿ ಅಂಕಿಅಂಶಗಳನ್ನು ಸುಲಲಿತವಾಗಿ ಹೇಳುತ್ತಿದ್ದ ಗೌಡರು ನೀರಾವರಿ ಕುರಿತು ಉಂಟಾದ ಸಂಕಟ ಸಮಯದ ಆಪದ್ಬಾಂಧವರಾಗಿರುತ್ತಿದ್ದರು. ವಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಂದಿಗೂ ಸಮುದಾಯದ ಚಟುವಟಿಕೆಗಳಿಂದ ದೂರವಿದ್ದ ಗೌಡರು ಎಲ್ಲ ಜನಾಂಗದ ಜನರ ಅನುರಾಗಿಯಾಗಿದ್ದರು.

ಸ್ಮರಣೆ ಲೇಸು : ಎಲ್ಲಾ ಪಕ್ಷಗಳ ರಾಜಕಾರಣಿಗಳು ಗೌಡರೊಂದಿಗೆ ಸೌಹಾರ್ದಯುತ ಸಂಬಂಧವಿರಿಸಿಕೊಂಡಿದ್ದರು. ಗೌಡರ ನೀರಾವರಿ ಬಗೆಗಿನ ಕಾಳಜಿಗೆ ಎಚ್ ಕೆ ಪಾಟೀಲ್ ಮತ್ತು ನಿಜಲಿಂಗಪ್ಪನವರ ಸರ್ಕಾರದಲ್ಲಿ ಸಚಿವರಾಗಿದ್ದ ಬಸಪ್ಪನವರ ಮಾರ್ಗದರ್ಶನವೂ ಕಾರಣವಾಗಿತ್ತು. ಒಬ್ಬ ನಿಷ್ಠುರ, ಜನಪರ ಕಾಳಜಿಯ ನಂಬಿದ ಸಿದ್ದಾಂತಗಳನ್ನು ಪ್ರತಿಪಾದಿಸುವ ಸಾಧಕನ ನೆನಪು ನಮಗೆ ಸದಾ ಸ್ಮರಣೀಯ. ನಂಜೇಗೌಡರು ಸಿದ್ದಾಂತ ಮತ್ತು ಚಳವಳಿಯ ವಿಚಾರದಲ್ಲಿ ಗೋಪಾಲಗೌಡರ ಮಟ್ಟಿಗೆ ಬೆಳೆಯುವ ಸಾಧ್ಯತೆಗಳಿತ್ತಾದರೂ ಒಂದು ಪಕ್ಷದಲ್ಲಿ ನೆಲೆ ನಿಲ್ಲದ ಗೌಡರಿಗೆ ಅದು ಸಾಧ್ಯವಾಗಲಿಲ್ಲ.

ಆದರೆ ಒಂದು ಶಕ್ತಿಯಾಗಿ, ಸಮೂಹದ ಪ್ರೇರಕ ಶಕ್ತಿಯಾಗಿ ಬದುಕಿದರೆಂಬುದು ಮಾತ್ರ ದಿಟವೇ ಹೌದು. ಇಂದು ಗೌಡರು ಬದುಕಿದ್ದಿದ್ದರೆ 77ವರ್ಷ ತುಂಬುತ್ತಿತ್ತು ಆದರೆ ಇವತ್ತು ಅವರಿಲ್ಲ ಆದರೆ ಅವರ ವಿಚಾರ ನಮ್ಮೊಂದಿಗಿದೆ, ರಾಜಧಾನಿ ಬೆಂಗಳೂರಿನಲ್ಲಿ ಎಚ್ಎನ್ ಸಂಸ್ಮರಣೆ ಕರ್ನಾಟಕ ಸರ್ಕಾರದ ಸಚಿವಾಲಯದ ಟಿ ಚನ್ನಬಸಪ್ಪ ಸಭಾಂಗಣದಲ್ಲಿ ಶನಿವಾರ, ಡಿ.18ರಂದು ಸಂಜೆ 5.30ಕ್ಕೆ ಏರ್ಪಾಟಾಗಿದೆ. ಅರಕಲಗೂಡು ನಾಗರಿಕ ವೇದಿಕೆಯ ಯೋಗಾರಮೇಶ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರ ಸಹವರ್ತಿಗಳು ಎಚ್ ಎನ್ ನಂಜೆಗೌಡರನ್ನು ಸ್ಮರಿಸಿಕೊಳ್ಳಲಿದ್ದಾರೆ. ನೀವೂ ಜೊತೆಯಾಗಿ. (ಅಭಿವ್ಯಕ್ತಿ)

English summary
HN Nanjegowda was water expert who relentlessly fought for optimum utilization of water resources in the Karnataka. On his 3rd death anniversary Jayakumar Arakalagudu pays rich tribute to the seasoned politician, irrigation expert, visionary and a proud son of the soil from Hasan in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X