• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರೈಂ ವಿರುದ್ಧ ದೊಡ್ಡಪೇಟೆ ಎಸ್ ಐ ಚಿತ್ರ ಅಭಿಯಾನ

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|

ಶಿವಮೊಗ್ಗ, ಡಿ.16: ಸಮಾಜದಲ್ಲಿ ವಿವಿಧ ಕಾರಣಗಳಿಂದಾಗಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಸಾರ್ವಜನಿ ಕರನ್ನು ವಂಚಿಸಿ ವಿವಿಧ ಬಗೆಯ ಅಪರಾಧಗಳನ್ನು ಎಸಗಲಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅಪರಾಧಗಳನ್ನು ತಡೆ ಗಟ್ಟುವ ನಿಟ್ಟಿನಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಸ್ಲೈಡ್‌ಶೋ ಮೂಲಕ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಬೀದಿ ನಾಟಕಗಳ ಮೂಲಕ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಸೀಗೆಹಟ್ಟಿ ಹಳೇ ಮಂಡ್ಲಿ, ನ್ಯೂಮಂಡ್ಲಿ, ಗಾಂಧಿಬಜಾರ್‌ನ ಬಸವಣ್ಣ ದೇವಸ್ಥಾನ, ಭರ್ಮಪ್ಪ ನಗರದಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನ ನಡೆದಿದೆ. ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಸಾಕ್ಷ್ಯಚಿತ್ರ ಪ್ರದರ್ಶನವು ಈ ಮಾಸಾಂತ್ಯದವರೆಗೂ ದಿನನಿತ್ಯ ಸಂಜೆ ಹಾಗೂ ರಾತ್ರಿ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಎಚ್ಚರ ಬೀದಿ ನಾಟಕ: ಅಪರಾಧಗಳ ಬಗ್ಗೆ ಜನಜಾಗೃತಿ ಗಾಗಿ ಕೊಟ್ರಪ್ಪ ನೇತೃತ್ವದ ರಂಗಬೆಳಕು ತಂಡ "ಎಚ್ಚರ" ಎಂಬ ಸಮಾರು 30 ನಿಮಿಷಗಳ ಬೀದಿನಾಟಕವನ್ನು ಪ್ರದರ್ಶಿಸುತ್ತಿದೆ. ಈಗಾಗಲೇ 9 ಕಡೆ ಈ ನಾಟಕ ಪ್ರದರ್ಶನ ಕಂಡಿದ್ದು, ಡಿ.17 ಮತ್ತು 18 ರಂದು ಒಟ್ಟು 11 ಪ್ರದರ್ಶನಗಳ ಮೂಲಕ ಅಂತ್ಯ ಕಾಣಲಿದೆ.

ಚಿತ್ರ ನಿರ್ಮಾತೃ ಮಂಜುನಾಥ್ :ದೊಡ್ಡಪೇಟೆ ಠಾಣೆ ಎಸ್‌ಐ ಮಂಜುನಾಥ್ ಅವರ ಆಸ್ಥೆ ಹಾಗೂ ಆಸಕ್ತಿಯ ಫಲವಾಗಿ ಸುಮಾರು 45 ನಿಮಿಷಗಳ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ. ಸ್ವತಃ ಮಂಜುನಾಥ್ ಅವರೇ ಇದಕ್ಕೆ ಧ್ವನಿ ನೀಡಿದ್ದಾರೆ. ಅಲ್ಲದೆ ದೊಡ್ಡಪೇಟೆ ಠಾಣೆಯ ಪೇದೆಗಳಾದ ಸೈಯದ್ ಇಮ್ರಾನ್ ಹಾಗೂ ಮರ್ದಾನ್ ಪಾತ್ರಧಾರಿಗಳಾಗಿ ನಟಿಸಿದ್ದಾರೆ.

ಒಂಟಿ ಮಹಿಳೆಯನ್ನು ವಂಚಿಸಿ ಒಡವೆ ದೋಚುವಿಕೆ, ನಕಲಿ ಬಂಗಾರವನ್ನು ಅಸಲಿ ಎಂದು ನಂಬಿಸಿ ಮಾರಾಟ ಮಾಡುವುದು, ಪಿಕ್‌ಪಾಕೇಟ್, ಪ್ರಯಾಣಿಕರ ಸೂಟ್‌ಕೇಸ್-ಬ್ಯಾಗ್ ಕಳವು, ದ್ವಿಚಕ್ರ ವಾಹನ ಕಳವು, ಎಟಿಎಂ ವಂಚನೆ, ಕಿಟಕಿ ಮೂಲಕ ಕಳವು, ಸರ ಅಪಹರಣ, ಅಪ್ರಾಪ್ತರು ಡ್ರಗ್ಸ್ ವ್ಯಸನಿಗಳಾಗುವುದು, ಪಾಲಿಶ್ ನೆಪದಲ್ಲಿ ಬೆಳ್ಳಿ-ಬಂಗಾರ ಆಭರಣ ಕಳವು... ಹೀಗೆ, ವಿವಿಧ ಅಪರಾಧಗಳ ಬಗ್ಗೆ ವೀಡಿಯೋ ಮೂಲಕ ಸಾಮಾನ್ಯ ಜನರಿಗೂ ಕೂಡಾ ಮನ ದಟ್ಟಾಗುವ ರೀತಿಯಲ್ಲಿ ಸಾಕ್ಷ್ಯ ಚಿತ್ರವನ್ನು ರೂಪಿಸಲಾಗಿದೆ.

"ಸ್ಲೈಡ್‌ಶೋ ಮೂಲಕ ಪ್ರದರ್ಶಿಸಲಾಗುತ್ತಿರುವ ಸಾಕ್ಷ್ಯಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ಜಾಗೃತಿ ವಹಿಸಿದಲ್ಲಿ ಅಪರಾಧಗಳನ್ನು ತಡೆಗಟ್ಟಲು ಸಹಾಯಕವಾಗಲಿದೆ. ಇದಕ್ಕೆ ಪೂರಕವಾಗಿ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ" ಎಂದು ದೊಡ್ಡಪೇಟೆ ಠಾಣೆಯ ಎಸ್‌ಐ ಮಂಜುನಾಥ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ದೊಡ್ಡಪೇಟೆ ಪೊಲೀಸರು ಇಂತಹ ಸಾಕ್ಷ್ಯಚಿತ್ರವನ್ನು ರೂಪಿಸಿದ್ದು, ಇದೇ ದೃಶ್ಯಾವಳಿಯೊಂದಿಗೆ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು ಸಾಕ್ಷ್ಯಚಿತ್ರವನ್ನು ತಯಾರಿಸುತ್ತಿದ್ದಾರೆ. ಈ ಮೂಲಕ ದೊಡ್ಡಪೇಟೆ ಠಾಣೆ ಪೊಲೀಸರು ವಿವಿಧ ಠಾಣೆಗಳ ಪೊಲೀಸರಿಗೆ ಮಾದರಿಯಾಗಿದ್ದಾರೆ.

2007-08ರಲ್ಲಿ ಶಿವಮೊಗ್ಗ ಟ್ರಾಫಿಕ್ ಠಾಣೆಯ ಎಸ್‌ಐ ಆಗಿದ್ದ ಮಂಜುನಾಥ್ ಸಂಚಾರ ನಿಯಮಾವಳಿಗಳ ಬಗ್ಗೆ ಸಾಕ್ಷ್ಯಚಿತ್ರದ ಮೂಲಕ ಜನರಲ್ಲಿ ಅರಿವು ಮೂಡಿಸಲು ಯಶಸ್ವಿಯಾಗಿದ್ದರು. ಈ ಅನುಭವದ ಹಿನ್ನೆಲೆಯಲ್ಲಿ ಅವರೀಗ ಸಾಕ್ಷ್ಯಚಿತ್ರದ ಪ್ರದರ್ಶನದ ಮೂಲಕ ಅಪರಾಧಗಳ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಟಿವಿ ಚಾನಲ್‌ನಲ್ಲಿ ಪ್ರಸಾರ: ಅಪರಾಧಗಳ ಬಗ್ಗೆ ಜನಜಾಗೃತಿಗಾಗಿ ದೊಡ್ಡಪೇಟೆ ಠಾಣೆ ಪೊಲೀಸರು ತಯಾರಿಸಿರುವ ಸುಮಾರು 45 ನಿಮಿಷಗಳ ಸಾಕ್ಷ್ಯಚಿತ್ರವು ಇಂದಿನಿಂದ ಒಂದು ವಾರ ಶಿವಮೊಗ್ಗದ ಸ್ಥಳೀಯ ಟಿವಿಚಾನಲ್‌ಗಳಾದ ಸ್ಕೈಲೈನ್ ಹಾಗೂ ಅಮೋಘದಲ್ಲಿ ಸಂಜೆ 6 ಗಂಟೆಯಿಂದ ಪ್ರಸಾರವಾಗಲಿದೆ ಎಂದು ದೊಡ್ಡಪೇಟೆ ಠಾಣೆಯ ಎಸ್‌ಐ ಮಂಜುನಾಥ್ ತಿಳಿಸಿದ್ದಾರೆ.

English summary
Doddapet Station Sub Inspector Manjunath has come up with a new idea to conduct Crime Prevention Month in Shivamogga. He has prepared Crime related documentaries, short films, slide shows, street play and conducting special shows in many localities to awake the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X