For Daily Alerts
ಸಂಸತ್ ದಾಳಿ : ಹುತಾತ್ಮರಿಗೆ ಶ್ರದ್ಧಾಂಜಲಿ
ನವದೆಹಲಿ, ಡಿ. 13 : ದೇಶದ ಹೃದಯಭಾಗ ಸಂಸತ್ ಮೇಲೆ ಉಗ್ರರು ದಾಳಿ ನಡೆಸಿ ಇಂದಿಗೆ 9 ವರ್ಷ ಮುಗಿಯಿತು. ಈ ಸಂದರ್ಭದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರಯೋಧರಿಗೆ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಸದನದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.
2001ರಲ್ಲಿ ಭಾರತದ ಹೃದಯಭಾಗ ಸಂಸತ್ ಮೇಲೆ ಲಷ್ಕರ್ ಇ ತೊಯ್ಬಾ ಮತ್ತು ಜೈಷೆ ಇ ಮೊಹ್ಮದ್ ಸಂಘಟನೆಗಳಿಗೆ ಸೇರಿದ ಶಸ್ತ್ರಸಜ್ಜಿತ ಐವರು ಉಗ್ರರು ಸಂಸತ್ ಆವರಣದೊಳಗೆ ನುಸುಳಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 5 ಮಂದಿ ಭದ್ರತಾ ಸಿಬ್ಬಂದಿ ಹಾಗೂ ಒಬ್ಬ ನಾಗರಿಕ ಸಾವನ್ನಪ್ಪಿದ್ದರು.
ಒಂದು ವರ್ಷದ ಸತತ ಪ್ರಯತ್ನದ ನಂತರ ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಸೇರಿ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಅಫ್ಜಲ್ ಗುರು ಜೈಷೆ ಮೊಹ್ಮದ್ ಸಂಘಟನೆಯ ಪ್ರಮುಖ ಉಗ್ರನಾಗಿದ್ದಾನೆ. ವಿಚಾರಣೆ ನಂತರ ಅಫ್ಜಲ್ ಗುರು ಅಪರಾಧಿ ಎಂದು ಸಾಬೀತಾಗಿದ್ದು, ಆತನಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಶ್ನಿಸಿರುವ ಗುರು ಕ್ಷಮಾದಾನ ಕೋರಿ ರಾಷ್ಟ್ರಪತಿ ಅವರಿಗೆ ಅರ್ಜಿ ಸಲ್ಲಿಸಿದ್ದಾನೆ.