ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಲ್ ಕೂಲ್ ಕ್ಯಾಪ್ಟನ್ ಗೌತಮ್ ಗಂಭೀರ್

By Prasad
|
Google Oneindia Kannada News

Gautam Gambhir
ಬರೋಡ ಡಿ. 4 : ಭಾರತದಲ್ಲಿ ನ್ಯೂಜಿಲಂಡ್ ಕ್ರಿಕೆಟಿಗರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಮೂರನೇ ಬಾರಿಗೆ ಸೋಲುಂಡಿದ್ದು, ಐದು ಪಂದ್ಯಗಳ ಸರಣಿಯನ್ನು ಭಾರತಕ್ಕೆ ಕಾಣಿಕೆಯಾಗಿ ನೀಡಿದೆ.

ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿಯಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಹಂಗಾಮಿ ನಾಯಕ ಗೌತಮ್ ಗಂಭೀರ್ ಸತತ ಎರಡನೇ ಶತಕ ದಾಖಲಿಸಿದ್ದು ನಾಯಕನಾಗಿ ಗೆಲುವಿನ ಪಯಣವನ್ನು ಮುಂದುವರಿಸಿದ್ದಾರೆ. ಸತತವಾಗಿ ಎರಡು ಶತಕ ದಾಖಲಿಸಿದ ಎಂಟನೇ ಕ್ಯಾಪ್ಟನ್ ಗೌತಮ್ ಗಂಭೀರ್.

ರಿಲಾಯನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂದಿನ ಪಂದ್ಯದಲ್ಲಿ 9 ವಿಕೆಟ್ ಗಳಿಂದ ಜಯ ಗಳಿಸಿದ ಭಾರತದ ಮುಂದೆ ನ್ಯೂಜಿಲಂಡ್ ಉತ್ತಮ ಮೊತ್ತ ಪೇರಿಸಲು ವಿಫಲವಾಯಿತು. ಒಂದು ಹಂತದಲ್ಲಿ 106 ರನ್ನಿಗೆ 7 ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿದ್ದ ನ್ಯೂಜಿಲಂಡ್ 50 ಓವರುಗಳಲ್ಲಿ 224 ರನ್ ಗಳಿಸಲಷ್ಟೇ ಯಶಸ್ವಿಯಾಯಿತು. ಈ ಮೊತ್ತವನ್ನು ಬೆನ್ನತ್ತಿದ ಭಾರತ ಕೇವಲ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡು 39.3 ಓವರುಗಳಲ್ಲಿ ನಿರಾಯಾಸವಾಗಿ ಗುರಿ ಮುಟ್ಟಿತು. [ಸ್ಕೋರ್ ವಿವರ ನೋಡಿರಿ]

ನಾಯಕ ಗಂಭೀರ್ 16 ಬೌಂಡರಿಗಳಿದ್ದ 126 ರನ್ ಪೇರಿಸಿ ಪಂದ್ಯದ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಅವರಿಗೆ ಉತ್ತಮ ಬೆಂಬಲ ನೀಡಿದ ಉತ್ತಮ ಫಾರಂನಲ್ಲಿರುವ ಕೋಹ್ಲಿ 63 ರನ್ ಗಳಿಸಿ ಅಜೇಯರಾಗುಳಿದರು. ಮುಂದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿ.7ರಂದು ಮತ್ತು ಕೊನೆಯ ಪಂದ್ಯ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಡಿ.10ರಂದು ನಡೆಯಲಿವೆ.

ಭಾರತಕ್ಕೆ ಸಿಕ್ಕ ಬೋನಸ್ : ಹಿಂದಿನ ಕೆಲ ಪಂದ್ಯಗಳಲ್ಲಿ ಫಾರಂ ಕಳೆದುಕೊಂಡರಂತೆ ಕಾಣುತ್ತಿದ್ದ ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಮತ್ತೆ ತಮ್ಮ ಎಂದಿನ ನೈಜ ಆಟಕ್ಕೆ ಮರಳಿರುವುದು ಭಾರತಕ್ಕೆ ಸಂತಸದ ಸಂಗತಿಯಾದರೆ, ನಾಯಕನಾಗಿಯೂ ಗೆಲುವಿನ ಸರಣಿ ಮುಂದುವರಿಸಿರುವುದು ಭಾರತಕ್ಕೆ ಸಿಕ್ಕ ಬೋನಸ್. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮುಂತಾದವರನ್ನು ಉಪನಾಯಕರನ್ನಾಗಿ ಮಾಡಿದ್ದರೂ ಸ್ಥಿರತೆಯನ್ನು ಕಾಯ್ದುಕೊಳ್ಳಲು ವಿಫಲರಾಗಿದ್ದರು. ಈಗ ಆ ಸ್ಥಾನವನ್ನು ಗಂಭೀರ್ ಗಂಭೀರವಾಗಿಯೇ ತುಂಬಿದ್ದಾರೆ.

ಅತ್ಯಂತ ಲೀಲಾಜಾಲವಾಗಿ ನಾಯಕತ್ವದ ಹೊಣೆಯನ್ನು ಗಂಭೀರ್ ಹೊತ್ತಿರುವುದು ಭಾರತಕ್ಕೆ ಇನ್ನೊಬ್ಬ ಉತ್ತಮ ನಾಯಕನನ್ನು ನೀಡಿದೆ. ಟ್ವೆಂಟಿ20 ಪಂದ್ಯಗಳಲ್ಲಿ ದೆಹಲಿಯ ಡೇರ್ ಡೆವಿಲ್ಸ್ ತಂಡವನ್ನೂ ಮುನ್ನಡೆಸುವ ಗಂಭೀರ್ ಕೂಲ್ ಹೆಡೆಡ್ ಆಟಗಾರ. ಮೈದಾನದಲ್ಲಿ ಯಾವುದೇ ಉದ್ವೇಗಕ್ಕೊಳಗಾಗದೆ ಚಾಕಚಕ್ಯತೆಯಿಂದ ಪಂದ್ಯವನ್ನು ಮುನ್ನಡೆಸುವ ತಂತ್ರಗಾರಿಕೆಯನ್ನು ಅವರು ಮೈಗೂಡಿಸಿಕೊಂಡಿದ್ದಾರೆ.

ಏಕದಿನದ ಪಂದ್ಯಗಳೇ ಇರಲಿ, ಟೆಸ್ಟ್ ಪಂದ್ಯಗಳೇ ಇರಲಿ ಆರಂಭಿಕ ಆಟಗಾರನಾಗಿ ಗಂಭೀರ್ ನಂಬಿಕಾರ್ಹ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅವರ ಮತ್ತೊಂದು ಹೆಗ್ಗಳಿಕೆಯೆಂದರೆ, ಸತತ ನಾಲ್ಕು ಸರಣಿಗಳಲ್ಲಿ 300ಕ್ಕೂ ಹೆಚ್ಚು ರನ್ ಪೇರಿಸಿದ ಏಕೈಕ ಆಟಗಾರ. ಮತ್ತು ಟೆಸ್ಟ್ ಪಂದ್ಯಗಳಲ್ಲಿ ಸತತ ಐದು ಸೆಂಚುರಿ ಬಾರಿಸಿದ ಏಕೈಕ ಭಾರತದ ಆಟಗಾರ.

ಏಪ್ರಿಲ್ 11, 2003ರಲ್ಲಿ ಬಾಂಗ್ಲಾದೇಶದ ವಿರುದ್ದ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಗಂಭೀರ್ ಇದುವರೆಗೆ 103 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನವೆಂಬರ್ 3, 2004ರಲ್ಲಿ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಕ್ರಿಕೆಟ್ ಆಡಲು ಆರಂಭಿಸಿದ ಗಂಭೀರ್ ಇದುವರೆಗೆ 36 ಪಂದ್ಯಗಳನ್ನು ಆಡಿದ್ದಾರೆ.

ಗಂಭೀರ್ ಅವರ ಪ್ರೊಫೈಲ್ ಇಂತಿದೆ:

ಏಕದಿನ : ಪಂದ್ಯ :103; ಗಳಿಸಿದ ರನ್ : 3653, ಶತಕ : 8; ಅರ್ಧ ಶತಕ : 21; ಸ್ಟ್ರೈಕ್ ರೇಟ್ :85.83
ಟೆಸ್ಟ್ : ಪಂದ್ಯ : 36; ಗಳಿಸಿದ ರನ್ : 2992; ಶತಕ :9, ಅರ್ಧ ಶತಕ :13; ಸ್ಟ್ರೈಕ್ ರೇಟ್ :54 .23
ಟಿ20 : ಪಂದ್ಯ - 23, ಗಳಿಸಿದ ರನ್ - 621, ಅರ್ಧ ಶತಕ - 6, ಸ್ಟ್ರೈಕ್ ರೇಟ್ : 124 .20

ಗಂಭೀರ್ ಇದುವರೆಗೆ ಏಕದಿನ ದಿನ ಪಂದ್ಯದಲ್ಲಿ ಒಂದು ಓವರ್ ಅಷ್ಟೇ ಬೌಲ್ ಮಾಡಿರುವ ಗಂಭೀರ್ 31 ಕ್ಯಾಚ್ ಹಿಡಿದರೆ, ಟೆಸ್ಟ್ ಪಂದ್ಯದಲ್ಲಿ 28 ಮತ್ತು ಟಿ20 ಪಂದ್ಯದಲ್ಲಿ ಐದು ಕ್ಯಾಚ್ ಅನ್ನು ಹಿಡಿದಿದ್ದಾರೆ.

English summary
Cool-composed-Percentage batsman Gautam Gambhir an Indian Cricketing legend, in the making. An over view of Gambhir through the matches, Test Cricket and ODI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X