ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ’ಕಾರಂಜಿ’ ಕೆರೆಯಲ್ಲಿ ಬದಲಾವಣೆ ಗಾಳಿ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Karanji Lake, Mysore
ಮೊದಲೆಲ್ಲಾ ಮೈಸೂರಿನ ಕಾರಂಜಿ ಕೆರೆಯತ್ತ ಬಂದು ಹೋದವರು ಈಗ ಕೆರೆಯತ್ತ ಹೆಜ್ಜೆ ಹಾಕಿದರೆ ಒಂದು ಕ್ಷಣ ಬೆರಗಾಗಿ ಬಿಡುತ್ತಾರೆ. ಏಕೆ ಗೊತ್ತಾ? ಈಗ ಕಾರಂಜಿ ಕೆರೆ ಬದಲಾಗಿದೆ. ದೂರದಿಂದ ವಲಸೆ ಬಂದ ಹಕ್ಕಿಗಳು ಇಲ್ಲಿ ಚಿಲಿಪಿಲಿ ಗುಟ್ಟಿದರೆ, ಪಾತರಗಿತ್ತಿಗಳು ಎಲ್ಲೆಂದರಲ್ಲಿ ಹಾರಿ ಕಚಗುಳಿಯಿಡುತ್ತವೆ. ಕೆರೆಯ ದಡದಲ್ಲಿ ಬೆಳೆದು ನಿಂತ ಮರಗಳ ಪೊದೆಗಳಾಚೆಗೆ ಕಾಲೇಜಿಗೆ ಬಂಕ್ ಮಾಡಿಯೋ, ಇನ್ನೆಲ್ಲಿಂದಲೋ ಬಂದ ಜೋಡಿಗಳು ಪಿಸುಗುಡುತ್ತವೆ.

ಹೌದು! ಕಾರಂಜಿಕೆರೆಯಲ್ಲೀಗ ಪ್ರೇಮಿಗಳ ಪಿಸುಮಾತು ಹಕ್ಕಿಗಳ ಚಿಲಿಪಿಲಿಯನ್ನೂ ಮೀರಿಸುವಂತಿದೆ. ಹಕ್ಕಿಗಳು ಹೇಗೆ ಸುರಕ್ಷಿತ ತಾಣಗಳನ್ನು ಹುಡುಕಿಕೊಂಡು ಬರುತ್ತವೆಯೋ... ಹಾಗೆಯೇ ಈ ಜೋಡಿಗಳು ಕೂಡ. ಈ ಹಿಂದೆ ಕುಕ್ಕರಳ್ಳಿ ಕೆರೆ ದಂಡೆಯಲ್ಲಿ ಲಲ್ಲೆಗೆರೆಯುತ್ತಿದ್ದವರಿಗೆ ಈಗ ಅಲ್ಲಿ ನಿರ್ಬಂಧ ಹೇರಿದ ಮೇಲೆ ಅತ್ತಕಡೆ ಹೋಗುವಂತಿಲ್ಲ ಇದರಿಂದಾಗಿ ಪ್ರೇಮಿಗಳೆಲ್ಲಾ ಕಾರಂಜಿಕೆರೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೆರೆ ಅಭಿವೃದ್ಧಿ ಕಾರ್ಯ ಕಾಮಗಾರಿ ಆರಂಭವಾದ ಮೇಲೆ ಕ್ರಮೇಣ ಬದಲಾಗುತ್ತಿದೆ.

ಯಾರಿಗೂ ಬೇಡವಾಗಿದ್ದ ಕೆರೆ: ಹಾಗೆ ನೋಡಿದರೆ ಕಾರಂಜಿಕೆರೆ ಹಿಂದೆ ಈಗಿದ್ದಂತೆ ಇರಲಿಲ್ಲ. ನಗರದಲ್ಲಿರುವ ಇತರೆ ಕೆರೆಗಳು ಹೇಗಿದ್ದವೋ ಹಾಗೆಯೇ ಇದು ಸಹ ಇತ್ತು. ಸುಮಾರು 90 ಎಕರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ನೆಲೆನಿಂತು ಸುತ್ತಮುತ್ತಲಿನ ಹಳ್ಳಿಯ ರೈತರ ಭೂಮಿಗೆ ನೀರುಣಿಸುತ್ತಾ ಸಾಗಿತ್ತು. ಆದರೆ ನಗರ ಬೆಳೆದಂತೆಲ್ಲಾ ಸುತ್ತಮುತ್ತಲಿನ ಕೊಳಕು, ಹೂಳು ತುಂಬಿ ಕೆರೆ ಕಲ್ಮಶವಾಯಿತು. ಜನ ಕೆರೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಹಾಗಾಗಿ ಕಾರಂಜಿಕೆರೆ ಬಹಳ ಸಮಯದವರೆಗೆ ಜನರ ಗಮನಸೆಳೆಯದೆ ತನ್ನ ಪಾಡಿಗೆ ತಾನು ಎಂಬಂತೆ ಇತ್ತು. ಕೆರೆಯ ಸುತ್ತಲೂ ಬೆಳೆದು ನಿಂತ ಮರಗಿಡ ಪೊದೆಗಳಲ್ಲಿ ದೂರದಿಂದ ಬಂದ ಹಕ್ಕಿಗಳು ಗೂಡು ಕಟ್ಟಿ ಸಂಸಾರ ಹೂಡುತ್ತಿದ್ದವು. ಗಣೇಶ ಚತುರ್ಥಿ ಸಂದರ್ಭ ಗಣಪತಿಯ ವಿಸರ್ಜನೆಗೆ ಇತ್ತ ಬಂದರೆ, ಉಳಿದಂತೆ ಹಳ್ಳಿಯ ರೈತರು ದನ ಮೇಯಿಸಲು ಬರುತ್ತಿದ್ದರು. ಆದರೆ ತನ್ನದೇ ನಿಸರ್ಗ ಚೆಲುವನ್ನು ಮೈಗೂಡಿಸಿಕೊಂಡಿದ್ದ ಈ ಕೆರೆ 1967ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂತು. ಆದರೆ ಕೆರೆಯನ್ನು ಅಭಿವೃದ್ಧಿಗೊಳಿಸಿ ಅದನ್ನು ಒಂದು ವಿಹಾರ ತಾಣವನ್ನಾಗಿ ರೂಪುಗೊಳಿಸುವ ಐಡಿಯಾ ಯಾರಿಗೂ ಬಂದಿರಲಿಲ್ಲ.

ಜೀವ ತಂದ ಚಿಟ್ಟೆ ಪಾರ್ಕ್ :ಕೆಲವು ವರ್ಷಗಳ ಹಿಂದೆ ಕಾರಂಜಿಕೆರೆಯ ಬಳಿ ಚಿಟ್ಟೆಗಳು ವಾಸ್ತವ್ಯ ಹೂಡಿದ್ದನ್ನು ಕಂಡು ಚಿಟ್ಟೆ ಪಾರ್ಕ್ ಸ್ಥಾಪನೆ ಮಾಡಲಾಯಿತು. ವಿಶ್ವವಿದ್ಯಾಲಯದ ಸದಾನಂದ ಎಂಬುವರು ಈ ಚಿಟ್ಟೆ ಪಾರ್ಕ್‌ಗೆ ಜೀವ ತುಂಬಿದರು. ಚಿಟ್ಟೆ ಪಾರ್ಕ್ ಸ್ಥಾಪನೆಯಾದ್ದರಿಂದೇನೂ ಕೆರೆ ಖ್ಯಾತಿಯಾಗಲಿಲ್ಲ.

ಕಲುಷಿತ ನೀರು, ಹೂಳು ತುಂಬಿ ಗಬ್ಬೆದ್ದು ನಾರುತ್ತಿದ್ದ ಕೆರೆಗೊಂದು ಮರುಹುಟ್ಟನ್ನು ಮೃಗಾಲಯ ಪ್ರಾಧಿಕಾರ ನೀಡಿತು. ಪ್ರಾಧಿಕಾರದ ಆಗಿನ ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ಕುಮಾರ್ ಪುಷ್ಕರ್ ಹಾಗೂ ಮನೋಜ್‌ಕುಮಾರ್ ಅವರು ಕಾರಂಜಿಕೆರೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ಕೆರೆಯ ತುಂಬಾ ತುಂಬಿದ್ದ ಹೂಳನ್ನೆಲ್ಲಾ ಹೊರ ತೆಗೆದರು.

ಕೆರೆಗೆ ಬರುವ ಕೊಳಚೆ ನೀರನ್ನೆಲ್ಲಾ ತಪ್ಪಿಸಲು ಸಾಧ್ಯವಾಗದ ಕಾರಣ ಅದನ್ನು ಇಂಗುಗುಂಡಿಯ ಮೂಲಕ ಇಂಗಿಸಿ ತಿಳಿನೀರು ಮಾತ್ರ ಕೆರೆಯತ್ತ ಹರಿಯುವಂತೆ ಮಾಡಿದರು. ಕೆರೆಗಳ ಮಧ್ಯೆ ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ಮರ ಬೆಳೆಸಿ ವಲಸೆ ಬರುವ ಹಕ್ಕಿಗಳಿಗೆ ನೆಲೆ ಕಲ್ಪಿಸಿಕೊಟ್ಟರು. ಕೆರೆಯ ನೀರಲ್ಲಿ ಸವಾರಿ ಮಾಡಲು ಬರುವವರಿಗೆ ದೋಣಿಗಳ ವ್ಯವಸ್ಥೆ ಮಾಡಿದರು.

ಕೆರೆಯ ದಂಡೆಯಲ್ಲಿ ಸುಂದರ ಮರಗಿಡಗಳನ್ನು ಬೆಳೆಸಿದರು. ಓಡಾಡಲು ಅನುಕೂಲವಾಗುವಂತೆ ಕಾಲುದಾರಿಗಳನ್ನು ನಿರ್ಮಿಸಿದರು. ಕೆರೆಯ ಸುತ್ತಲೂ ಏರಿ ನಿರ್ಮಿಸಿ ಸುಂದರವಾದ ಆಕರ್ಷಣೀಯವಾದ ಪ್ರವೇಶ ದ್ವಾರವನ್ನು ನಿರ್ಮಿಸಲಾಯಿತು. ಹೀಗೆ ನವೀಕರಣಗೊಂಡ ಕೆರೆಗೆ "ಕಾರಂಜಿ ಪ್ರಕೃತಿ ಉದ್ಯಾನವನ" ಎಂಬ ಹೆಸರನ್ನಿಟ್ಟು 2004 ಜನವರಿ 25 ರಂದು ಪ್ರವಾಸಿಗರ ವೀಕ್ಷಣೆಗೆ ಅನುವುಮಾಡಿಕೊಡಲಾಯಿತು. ಅಲ್ಲಿಂದ ಇಲ್ಲಿಯ ತನಕ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತಾ ಸೆಳೆಯುತ್ತಾ ಬಂದಿದೆ.

ಜೀವ ವೈವಿಧ್ಯಗಳ ತಾಣ: ಇವತ್ತು ಕಾರಂಜಿಕೆರೆಯಲ್ಲಿ ಮೀನು, ಮೊಸಳೆಯಂತಹ ಜಲಚರಗಳು, ಬ್ಲೂಜೆ, ಪೇಂಟೆಡ್ ಸ್ಟಾರ್ಕ್, ವೈಟ್ ಐಬೀಸ್, ಕಾಜಾಣಗಳಂತಹ ಬಾನಾಡಿಗಳು ಬೀಡು ಬಿಟ್ಟಿವೆ. ಸುಮಾರು ಎಪ್ಪತ್ತು ಪ್ರಭೇದದ ಚಿಟ್ಟೆಗಳು ವಾಸ್ತವ್ಯ ಹೂಡಿವೆ. ಔಷಧಿವನ, ಶ್ರೀಗಂಧದ ಮರಗಳು ಇಲ್ಲಿವೆ. ಪಕ್ಷಿಗಳ ಹಾರಾಟವನ್ನು ವೀಕ್ಷಿಸಲೆಂದೇ "ವಾಚ್‌ಟವರ್"ನ್ನು ನಿರ್ಮಿಸಲಾಗಿದೆ. ಅಲ್ಲದೆ ಈ ತಾಣವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಉದ್ದೇಶವೂ ಇದೆ ಎನ್ನಲಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಫಲಪುಷ್ಪ ಪ್ರದರ್ಶನ ಅದ್ಭುತವಾಗಿರುತ್ತದೆ.

ಹಕ್ಕಿಗಳ ಚಿಲಿಪಿಲಿ ಇಂಚರ, ಬೀಸುವ ತಂಗಾಳಿ, ದೋಣಿ ಸವಾರಿ ಹೀಗೆ ನಿಸರ್ಗದ ಚೆಲುವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಕಾರಂಜಿಕೆರೆಗೊಂದು ಸುತ್ತು ಹಾಕಿಹೋದವರು ಇಲ್ಲಿನ ರಸಮಯ ಕ್ಷಣಗಳನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ.

English summary
Finally one can see some restoration and development of Karanji lake in Mysore. Ecologically sensitive lake is owned by the Mysore Zoo Authority. It is great place for sighting water birds, butterflies. Lake arena has become good spot for lovers too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X