ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಜಾವರ ಶ್ರೀಗಳಿಗೇಕೆ ಡಾಕ್ಟರೇಟ್ ಗೌರವ: ದಲಿತರು

By Mahesh
|
Google Oneindia Kannada News

Dalit protest over Pejawar Seer
ತುಮಕೂರು, ನ.29: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಅಧ್ಯಾತ್ಮದ ಹೆಸರಿನಲ್ಲಿ ಪೇಜಾವರ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡುವುದಾಗಿ ಘೋಷಿಸಿರುವುದು ಖಂಡನಾರ್ಹ. ವಿವಿಯ ಆಡಳಿತ ಮಂಡಳಿಯು ವಿಶ್ವೇಶತೀರ್ಥರಿಗೆ ನೀಡಲಿರುವ ಗೌರವ ಡಾಕ್ಟರೇಟ್ ಪದವಿಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಪ್ರಗತಿಪರ ಸಂಘಟನೆಗಳು, ದಲಿತರು ಒಗ್ಗೂಡಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ದಲಿತ ಮುಖಂಡ ಚೇಳೂರು ವೆಂಕಟೇಶ್ ಕುಲಪತಿಗಳಿಗೆ ಒತ್ತಾಯಪೂರ್ವಕ ಮನವಿ ಸಲ್ಲಿಸಿದ್ದಾರೆ.

ಹಣಕ್ಕೆ ಡಾಕ್ಟರೇಟ್ ಮಾರಾಟ?: ಕಳೆದ ಸಾಲಿನಲ್ಲಿ ಕುಲಪತಿಗಳು ಗೌರವ ಡಾಕ್ಟರೇಟ್ ಪದವಿಗಳನ್ನು ಹಣಕ್ಕೆ ಮಾರಿಕೊಂಡ ಆರೋಪ ಎದುರಿಸುತ್ತಿದ್ದರೂ ಸಹ ಮತ್ತೊಮ್ಮೆ ಹಿಂದೂ ಧರ್ಮದ ಪ್ರತಿಪಾದಕ ಹಾಗೂ ಆರೆಸ್ಸೆಸ್ ವಕ್ತಾರರಂತೆ ಕೆಲಸ ಮಾಡುವ ವಿಶ್ವೇಶರ ತೀರ್ಥ ಸ್ವಾಮೀಜಿಗೆ ಡಾಕ್ಟರೇಟ್ ನೀಡುವ ಮೂಲಕ ವಿವಿಯನ್ನು ಆರೆಸ್ಸೆಸ್ ಗುಪ್ತ ಅಜೆಂಡಾವನ್ನು ಜಾರಿಗೆ ತರಲು ಹೋರಟಿದ್ದಾರೆ ಎಂದು ವೆಂಕಟೇಶ್ ಆಪಾದಿಸಿದರು.

ಪೇಜಾವರ ಶ್ರೀಗಳ ಸಾಧನೆಯಾದರೂ ಏನು?: ಗೌರವ ಡಾಕ್ಟರೇಟ್ ಪಡೆಯಲು ಶ್ರೀಗಳು ಮಾಡಿರುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದ ಅವರು, ಧರ್ಮ ಮತ್ತು ರಾಜಕಾರಣ ಎರಡನ್ನು ಅಪವಿತ್ರಗೊಳಿಸಿ, ದಲಿತರ ಮನೆಗೆ ಭೇಟಿ ನೀಡಿ ಸಮಾಜದಲ್ಲಿರುವ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬಹುದೆಂಬ ಭ್ರಮೆಯಲ್ಲಿರುವ ಪೇಜಾವರಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಮೂಲಕ ತುಮಕೂರು ವಿವಿಯ ಕುಲಪತಿಗಳು ದಲಿತ ವಿರೋಧಿ ನೀತಿಯಿಂದ ಅಲುಗಾಡುತ್ತಿದ್ದ ತಮ್ಮ ಸ್ಥಾನವನು ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪೇಜಾವರ ಶ್ರೀಗಳು ಇದುವರೆಗೂ ಒಂದು ಶಾಲೆ, ಆಶ್ರಮ ನಡೆಸಿದ ಉದಾಹರಣೆ ಇಲ್ಲ. ಜೊತೆಗೆ ಯಾವುದೇ ಶ್ರಮವಿಲ್ಲದೆ ಭಕ್ತರಿಂದ ಬರುವ ಕಾಣಿಕೆಯನ್ನೇ ಬೇಕಾದಂತೆ ಖರ್ಚು ಮಾಡುವ ಇವರ ಯಾವ ಸಾಧನೆಯನ್ನು ಮುಂದಿಟ್ಟುಕೊಂಡು ಡಾಕ್ಟರೇಟ್ ನೀಡಲಾಗುತ್ತಿದೆ ಎಂಬುದನ್ನು ಕುಲಪತಿಗಳು ಬಹಿರಂಗ ಪಡಿಸಬೇಕು ಎಂದು ಚೇಳೂರು ವೆಂಕಟೇಶ್ ಆಗ್ರಹಿಸಿದರು.

ವಿದ್ಯಾರ್ಥಿಗಳಿಗೆ ಅನ್ಯಾಯ: ತುಮಕೂರು ವಿವಿಯ ಕುಲಪತಿ ಡಾ.ಎಸ್.ಸಿ. ಶರ್ಮರ ಇತ್ತೀಚಿನ ನಡವಳಿಕೆಗಳು ಅವರ ದಲಿತ ವಿರೋಧಿ ನೀತಿಯನ್ನು ಬಹಿರಂಗಗೊಳಿಸಿವೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ದೊರೆಯ ಬೇಕಾಗಿದ್ದ ಸೀಟುಗಳನ್ನು ಕಡಿತಗೊಳಿಸಿದರು. 22ದಿನ ದಲಿತರು, ಪ್ರಗತಿಪರ ಮುಖಂಡರು ವಿವಿಯ ಮುಂದೆ ಹೋರಾಟ ನಡೆಸಿದರೂ ಅವರ ಬೇಡಿಕೆಗಳ ಈಡೇರಿಸುವತ್ತ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ವಾರ್ಷಿಕ ಮೂರು ಕೋಟಿ ರೂ. ಆದಾಯ ತಂದುಕೊಡುವ ಶ್ರೀಕೃಷ್ಣಮಠವನ್ನು ಡಿನೋಟಿಫೈ ಮಾಡಿ ಅಷ್ಟಮಠಗಳ ಅಧೀನಕ್ಕೆ ತೆಗೆದುಕೊಳ್ಳುವ ಮೂಲಕ ಸರಕಾರಕ್ಕೆ ಮತ್ತು ಸಮಾಜಕ್ಕೆ ದ್ರೋಹ ಬಗೆದಿರುವ ಇಂತಹ ಸೋಗಲಾಡಿತನದ ಸ್ವಾಮೀಜಿ ಗಳಿಗೆ ಡಾಕ್ಟರೇಟ್ ನೀಡುವುದರಲ್ಲಿ ಅರ್ಥವಿದೆಯೇ ಎಂದು ವೆಂಕಟೇಶ್ ಪ್ರಶ್ನಿಸಿದರು.

English summary
Dalits organization in Tumkur has demanded Tumkur university VC Dr.NC Sharma to take back the order to confer Honorary Doctorate to Pejawar seer. Dalits claim that Visheshathirtha Swamiji never contributed to the progress of the society. Dalit organization leaders warned VC to desist from conferring doctorate else he may have to face agitations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X