• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಗರದ ಉಮಾ ಮಹೇಶ್ವರಿ ದೇಗುಲದಲ್ಲಿ ದೀಪೋತ್ಸವ

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News
ಸಾಗರ, ನ.24: ನಿಜವಾದ ಭಕ್ತಿ ಇಂದು ಮರೆಯಾಗುತ್ತಿದೆ. ಅಂತರಂಗ ಶುದ್ಧಿ ಇಲ್ಲದ ಆಡಂಬರದ ಪೂಜೆ ವಿಜೃಂಭಿಸುತ್ತಿದೆ. ಸ್ವಾಮಿಗಳು ಸಮಾಜದಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ನವದೆಹಲಿಯ ಭಾರತಿ ಪೀಠದ ಸರ್ವಾನಂದ ಸರಸ್ವತಿ ಮಹಾಸ್ವಾಮಿಗಳು ನುಡಿದರು. ತಾಲ್ಲೂಕಿನ ಹೊಸಗುಂದದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಕಾರ್ತೀಕ ದೀಪೋತ್ಸವ ಕಾರ್ಯಕ್ರಮದಲ್ಲಿ 108 ರೈತರಿಗೆ ಟ್ರಸ್ಟ್ ವತಿಯಿಂದ ಕಂಬಳಿ ವಿತರಿಸಿ ಮಾತನಾಡುತ್ತಿದ್ದರು.

ಜ್ಞಾನ ಮತ್ತು ವೈರಾಗ್ಯ ಎಲ್ಲಿ ಇರುತ್ತದೆಯೋ ಅಲ್ಲಿ ನಿಜವಾದ ಭಕ್ತಿ ಇರುತ್ತದೆ. ಬೇರೆಯವರಿಗೆ ಪ್ರದರ್ಶಿಸಲು ನಮ್ಮ ಪೂಜೆ ಪುನಸ್ಕಾರಗಳು ಎಂದಿಗೂ ಸಲ್ಲದು. ಇಂದು ವೈಯಕ್ತಿಕ ಬೆಳವಣಿಗೆಯ ಬಗ್ಗೆಯೇ ಮನುಷ್ಯ ಪ್ರಯತ್ನಗಳು ನಡೆಯುತ್ತವೆ ಹೊರತು ಗುಂಪಾಗಿ ಬದುಕುವುದನ್ನು ಮರೆತಿದ್ದೇವೆ. ಪ್ರಾಚೀನ ಉಮಾಮಹೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಇಲ್ಲಿಯ ಗ್ರಾಮಸ್ಥರು ಗುಂಪಾಗಿ ಕಾರ್ಯನಿರ್ವಹಿಸುತ್ತಿರುವುದು, ಪೂಜೆಯ ಜೊತೆಯಲ್ಲಿ ರೈತ ಕುಟುಂಬಗಳಿಗೆ ಕಂಬಳಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಗರದ ತಹಶೀಲ್ದಾರ್ ಯೋಗೀಶ್ವರ್ ಮಾತನಾಡಿ, ತಾಯಿಯ ಋಣ, ಭೂಮಿಯ ಋಣ ತೀರಿಸಲು ಸಾಧ್ಯವಿಲ್ಲ. ಆಧುನಿಕತೆಯ ಜಾಡಿನಲ್ಲಿ ಜಾಗತಿಕ ತಾಪಮಾನ ಎಲ್ಲರಲ್ಲೂ ಸುಡುತ್ತಿದೆ. ದೇವರು ಧರ್ಮ ಎಂದರೆ ಪೂಜೆಯ ಜೊತೆಯಲ್ಲಿ ಸತ್ಯದ ಪ್ರತಿಪಾದನೆ ಎಂದರ್ಥ. ನಮ್ಮ ಪರಿಸರವನ್ನು ನಾವೇ ಹಾಳುಮಾಡುತ್ತಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸುವ ಭಾಷಣಗಳಿಗಿಂತ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಪ್ರಾಚೀನ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕ. ಅವುಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಗಳು ಆಗಬೇಕು. ಅಂಹತ ಒಂದು ಪ್ರಯತ್ನ ಹೊಸಗುಂದದಲ್ಲಿ ನಡೆದಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟಿನ ಮುಖ್ಯಸ್ಥ ಸಿ.ಎಂ.ಎನ್.ಶಾಸ್ತ್ರಿ ಮಾತನಾಡಿ, ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವುದು ಕತ್ತಲಿನಿಂದ ಬೆಳಕಿಗೆ ಬರುವ ಸಂಕೇತ. ಜ್ಯೋತಿ ಜ್ಞಾನದ ಸಂಕೇತ. ದೇವಾಲಯದ ಜೀರ್ಣೋದ್ಧಾರದ ಕಾರ್ಯದಲ್ಲಿ ಸಾಧು-ಸಂತರು, ದಾರ್ಶನಿಕರು, ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ಹೆಚ್ಚಿನ ಸಲಹೆ ಸಹಕಾರ ನೀಡಬೇಕು ಎಂದು ಅವರು ಮುಂದಿನ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಘನಶೀಲ, ಉಪಾಧ್ಯಕ್ಷ ಲೋಕೇಶ್, ಸಂಸ್ಥೆಯ ಕೋವಿ ಪುಟ್ಟಪ್ಪ, ಹೆಡತ್ರಿ ಬಸವರಾಜಪ್ಪಗೌಡ, ಚಕ್ರಕೋಡಿ ಸುಬ್ಬರಾವ್, ಶೋಭಾಶಾಸ್ತ್ರಿ, ಇನ್ನಿತರರು ಉಪಸ್ಥಿತರಿದ್ದರು. ಶೀಲಾ ಸಿ.ರಾವ್ ಪ್ರಾರ್ಥಿಸಿದರು. ಜ್ಯೋತಿ ಮುರಳೀಧರ್ ನಿರ್ವಹಿಸಿದರು. ನಂತರ ಹೆಸರಾಂತ ಶಿಳ್ಳೆ ವಾದಕ ಸಿ.ಎನ್.ಮಾಧವಭಟ್ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

English summary
Shri Uma Maheshwari Temple in Hosagunda in Sagar Taluk, Shivamogga celebrated Karthika Deepotsava hindu festival. On this occasion Sarvananda Swamiji distributed blankets to farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X