ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಗದ್ದುಗೆ ಮೇಲೆ ಯಡಿಯೂರಪ್ಪ ಉಡದ ಪಟ್ಟು

By Prasad
|
Google Oneindia Kannada News

Karnataka Chief Minister BS Yeddyurappa
ನವದೆಹಲಿ, ನ. 22 : ಮುಖ್ಯಮಂತ್ರಿ ಪಟ್ಟದ ಮೇಲೆ ಹಿಡಿದಿರುವ ಉಡದ ಪಟ್ಟನ್ನು ಕಿಂಚಿತ್ ಬಿಡಲೂ ಬಿಎಸ್ ಯಡಿಯೂರಪ್ಪ ಸಿದ್ಧರಿಲ್ಲ. ರಾಜೀನಾಮೆ ಕೊಡು ಅಂತ ಯಾವ ನಾಯಕರೂ ಕೇಳಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಯಡಿಯೂರಪ್ಪ ನವದೆಹಲಿಯಲ್ಲಿ ಅತ್ಯಂತ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.

ಇಂದು ಪುಟ್ಟಪರ್ತಿಯಲ್ಲಿ ಸಾಯಿಬಾಬಾ ಅವರ 85ನೇ ಜನ್ಮದಿನ ಸಂಭ್ರಮದಲ್ಲಿ ಭಾಗವಹಿಸಿ ಸಾಯಿಬಾಬಾ ಅವರ ಆಶೀರ್ವಾದ ಪಡೆದ ನಂತರ ವಿಶೇಷ ವಿಮಾನದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೊತೆಯಲ್ಲಿ ದೆಹಲಿಗೆ ತೆರಳಿ, ಸಂಜೆ ಕರ್ನಾಟಕ ಭವನದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ಅವರ ಮುಖದಲ್ಲಿ ಯಾವುದೇ ಬಗೆಯ ಕಳವಳ ಕಂಡುಬರಲಿಲ್ಲ. ಪಕ್ಕದಲ್ಲೇ ಇದ್ದ ಸದಾನಂದ ಗೌಡರ ಮುಗುಳ್ನಗೆ ಮೆರೆದಾಡುತ್ತಿತ್ತು. ಅತ್ಯಂತ ಪ್ರಸನ್ನವದನರಾಗಿ ಕೆಲಕ್ಷಣ ಮಾತನಾಡಿದ ಯಡಿಯೂರಪ್ಪ ವರಿಷ್ಠರೊಡನೆ ಮಾತುಕತೆ ನಡೆಸುವುದಾಗಿ ಹೇಳಿದರು.

ದೆಹಲಿಗೆ ತೆರಳುತ್ತಿದ್ದಂತೆ ವರಿಷ್ಠರನ್ನು ನೇರವಾಗಿ ಸಂಧಿಸಿ ಮಾತುಕತೆ ನಡೆಸುವ ಗೋಜಿಗೆ ಯಡಿಯೂರಪ್ಪ ಹೋಗಿಲ್ಲ. ಲೀಲಾ ಪ್ಯಾಲೇಸಿನಲ್ಲಿ ಅರುಣ್ ಜೇಟ್ಲಿ ಅವರೊಡನೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ನಂತರ ಕರ್ನಾಟಕ ಭವನಕ್ಕೆ ತೆರಳಿ ಮಾಧ್ಯಮದವರಿಗೆ ತಮ್ಮ ನಿರ್ಧಾರ ತಿಳಿಸಿದ್ದಾರೆ. ಅವರ ಈ ನಿರ್ಧಾರದೊಂದಿಗೆ ಈ ರಾಜೀನಾಮೆ ಪ್ರಕರಣ ರೋಚಕ ಘಟಕ್ಕೆ ಬಂದು ತಲುಪಿದೆ.

ರಾಜ್ಯ ಮತ್ತು ಕೇಂದ್ರದ ವಿರೋಧ ಪಕ್ಷಗಳು ಮಾತ್ರವಲ್ಲ ಅನೇಕ ಬಿಜೆಪಿಯ ಶಾಸಕರು ಯಡಿಯೂರಪ್ಪನವರ ತಲೆದಂಡಕ್ಕೆ ಚಕ್ಕಳಮಕ್ಕಳ ಹಾಕಿ ಕುಳಿತಿದ್ದಾರೆ. ಅವರನ್ನು ಕೆಳಗಿಳಿಸಲು ಅರವನ್ನೇ ಬೆಂಬಲಿಸಿದವರು ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ, ಯಡಿಯೂರಪ್ಪನವರು ಕೆಲವೇ ಕೆಲವು ನಿಷ್ಠರ ಬೆಂಬಲದೊಂದಿಗೆ ನಿಂತಿದ್ದು, ಮುಖ್ಯಮಂತ್ರಿ ಆದರೆ ನಾನೊಬ್ಬನೇ ಆಗಿರಬೇಕು, ಬೇರೆ ಯಾರಿಗೂ ಅವಕಾಶವಿಲ್ಲ ಎಂದು ಹಠಹಿಡಿದು ಕುಳಿತಿದ್ದಾರೆ. ನಿಷ್ಠ ಶಾಸಕರು ಇಂದು ಮೊದಲೇ ದೆಹಲಿಗೆ ತೆರಳಿ ಯಡಿಯೂರಪ್ಪ ಪರ ಲಾಬಿ ನಡೆಸಿದ್ದು ಅವರ ನೆರವಿಗೆ ಬಂದಂತಿದೆ. ಕರ್ನಾಟಕದಲ್ಲಿ ಕೂಡ ವೀರಶೈವ ಮಠಾಧಿಪತಿಗಳು ಯಡಿಯೂರಪ್ಪನವರನ್ನು ಯಾಕೆ ಕೆಳಗಿಳಿಸಬೇಕು ಎಂದು ಪ್ರತ್ಯಕ್ಷವಾಗಿಯೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಜೊತೆಗೆ ಕೇಂದ್ರ ಬಿಜೆಪಿ ನಾಯಕರಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಯಡಿಯೂರಪ್ಪ ಅವರು ಭಾಗಿಯಾಗಿದ್ದಾರೆನ್ನಲಾದ ಭ್ರಷ್ಟಾಚಾರ ಮತ್ತು ರಾಜೀನಾಮೆಗೆ ಸಂಬಂಧಿಸಿದಂತೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗಿರುವುದು ಮೇಲು ನೋಟಕ್ಕೆ ಕಂಡುಬಂದಿದೆ. ಮೊದಲು ಬೆಳಿಗ್ಗೆ 11 ಗಂಟೆಗೆ ರಾಜೀನಾಮೆ ನೀಡಲು ಗಡುವು ನೀಡಿದ್ದರು. ನಂತರ, ಅವರು ಬಂದ ನಂತರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ನಿರ್ಣಯಕ್ಕೆ ಬಂದಿತು. ಒಟ್ಟಾರೆಯಾಗಿ ಯಡಿಯೂರಪ್ಪನವರು ಬಿಜೆಪಿ ವರಿಷ್ಠರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.

ತನಿಖೆಗೆ ಆಯೋಗ : ಅತ್ತ ದೆಹಲಿಯಲ್ಲಿ ರಾಜಕೀಯ ನಾಟಕ ನಡೆದಿರುವ ಹಂತದಲ್ಲಿ, ನವೆಂಬರ್ 1, 1995ರಿಂದ ಇಲ್ಲಿಯವರೆಗೆ ಬಿಡಿಎ, ಕೆಐಎಡಿಬಿ ಭೂಹಗರಣ, ಡಿನೋಡಿಫಿಕೇಷನ್, ಕೆಎಚ್ ಬಿಗಳಲ್ಲಿ ನಡೆದಿರುವ ಎಲ್ಲಾ ಹಗರಣಗಳ ನ್ಯಾಯಾಂಗ ತನಿಖೆಗೆಂದು ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ ಪದ್ಮರಾಜ್ ಅವರ ನೇತೃತ್ವದ ಆಯೋಗವನ್ನು ರಚಿಸಿ ಸುತ್ತೋಲೆ ಹೊರಡಿಸಿದೆ. ಒಂದು ವರ್ಷದೊಳಗೆ ವರದಿಯನ್ನು ಆಯೋಗ ನೀಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X