ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕೊಡಗಿನಲ್ಲಿ ಹುತ್ತರಿ ಆಚರಣೆ ಸಂಭ್ರಮ

By * ಬಿ.ಎಂ.ಲವಕುಮರ್, ಮೈಸೂರು
|
Google Oneindia Kannada News

Huttari habba, Madikeri
ಮಡಿಕೇರಿ, ನ. 22 : ಇವತ್ತು ಕೊಡಗಿನಲ್ಲಿ ಸುಗ್ಗಿಯ ಹಬ್ಬ ಹುತ್ತರಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯಿಂದ ಹೊರಗೆ ನೆಲೆಸಿರುವ ಕೊಡವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸೇರಿ ಹಬ್ಬ ಆಚರಿಸುವ ಸಲುವಾಗಿ ತಮ್ಮ ತಮ್ಮ ಊರಿಗೆ ಆಗಮಿಸುತ್ತಿದ್ದು, ಈಗಾಗಲೇ ಸರ್ಕಾರ ಬೆಂಗಳೂರು, ಮೈಸೂರು ಮುಂತಾದ ಕಡೆಗಳಿಂದ ಕೊಡಗಿಗೆ ಸುಮಾರು 20 ಹೆಚ್ಚುವರಿ ಬಸ್ಸುಗಳ ಸೌಲಭ್ಯವನ್ನು ಕಲ್ಪಿಸಿದೆ.

ಈ ಬಾರಿ ಮಳೆಯ ಕಾರಣ ಹಬ್ಬ ಆಚರಣೆ ಮಂಕಾದಂತೆ ಕಂಡು ಬರುತ್ತಿದೆ. ಕಾಫಿ, ಗದ್ದೆ ಕೊಯ್ಲು ಕೆಲಸಕ್ಕೂ ಮಳೆ ಅಡಚಣೆ ಮಾಡಿದೆ ಅಲ್ಲದೆ, ಲಕ್ಷಾಂತರ ರೂಪಾಯಿಯ ನಷ್ಟವೂ ಸಂಭವಿಸಿದೆ. ಇನ್ನೊಂದೆಡೆ ತಡವಾಗಿ ಆರಂಭವಾದ ಮುಂಗಾರು ಮಳೆಯ ಕಾರಣ ನೀರಿನ ಕೊರತೆಯಿಂದ ಕೆಲವರು ಗದ್ದೆ ನಾಟಿ ಮಾಡಿಲ್ಲ. ಇನ್ನು ಕೆಲವರು ಭತ್ತದ ಕೃಷಿಯ ಬದಲಿಗೆ ಶುಂಠಿ ಬೆಳೆದಿದ್ದಾರೆ. ಆದರೂ ಕದಿರು ಕೊಯ್ಯುವ ಮೂಲಕ ಹುತ್ತರಿ ಹಬ್ಬ ಆಚರಣೆ ಸಂಪ್ರದಾಯವಾಗಿರುವುದರಿಂದ ಕೆಲವರು ಚಿಕ್ಕ ಚಿಕ್ಕ ಗದ್ದೆಯಲ್ಲಿ ನಾಟಿ ನೆಟ್ಟಿದ್ದರೆ, ಇನ್ನು ಗದ್ದೆಯಿಲ್ಲದವರು ತಮ್ಮ ಮನೆಯ ಮುಂದಿನ ಕಾಂಪೌಂಡ್‌ನಲ್ಲಿಯೇ ಭತ್ತ ಬೆಳೆಸಿ ಕದಿರು ಕೊಯ್ಯುವ ಸಂಪ್ರದಾಯದೊಂದಿಗೆ ಹುತ್ತರಿ ಆಚರಿಸುತ್ತಿದ್ದಾರೆ.

ಒಂದೆಡೆ ಕುಟುಂಬದವರು ಕೂಡಿ ಕದಿರು ಕೊಯ್ದರೆ, ಮತ್ತೊಂದೆಡೆ ದೇವಸ್ಥಾನಗಳಲ್ಲಿ ಕದಿರು ಕೊಯ್ದು ವಿತರಿಸಲಾಗುತ್ತಿದೆ. ಕದಿರು ತೆಗೆಯುವ ಗದ್ದೆಯಲ್ಲಿ ಮಾವಿನ ತೋರಣ ಕಟ್ಟಿ, ಬಾಳೆ ಕಟ್ಟಿ, ಹೂವಿನಿಂದ ಅಲಂಕರಿಸಲಾಗಿದ್ದು, ರಾತ್ರಿ ಕುಟುಂಬದ ಮುಖ್ಯಸ್ಥ ಕದಿರು ಕೊಯ್ದು ಪೊಲಿ.. ಪೊಲಿ.. ದೇವಾ ಎನ್ನುತ್ತಾ ಕೊಂಡೊಯ್ಯುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವುದರೊಂದಿಗೆ ಸದಾ ಕಾಲ ಮನೆಯಲ್ಲಿ ಧವಸ ಧಾನ್ಯ ತುಂಬಿರುವಂತೆ ತಾಯಿ ಕಾವೇರಮ್ಮ ಹಾಗೂ ಪಾಡಿ ಇಗ್ಗುತ್ತಪ್ಪನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.

ಹುತ್ತರಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಅಮ್ಮಂಗಾಲ ಜ್ಯೋತಿಷ್ಯರು, ದೇವತಕ್ಕರು, ನಾಡ ಮುಖ್ಯಸ್ಥರು ಸೇರಿ ಸಮಯ ನಿಗದಿಪಡಿಸಿದ್ದು ಅದರಂತೆ ಮೊದಲಿಗೆ ಪಾಡಿ ಇಗ್ಗುತ್ತಪ್ಪ ಸನ್ನಿಧಾನದಲ್ಲಿ ರಾತ್ರಿ 7.45ಕ್ಕೆ ನೆರೆಕಟ್ಟುವ ಕಾರ್ಯಕ್ರಮ ನಡೆಯಲಿದ್ದು ಬಳಿಕ 8.45ಕ್ಕೆ ಗದ್ದೆಯಿಂದ ಕದಿರು ತೆಗೆಯಲಾಗುವುದು. ಇದಾದ ನಂತರ 9.45ಕ್ಕೆ ತೀರ್ಥಪ್ರಸಾದ ಹಾಗೂ ಕದಿರು ವಿತರಣೆ ನಡೆಯಲಿದೆ. ಇನ್ನು ಜಿಲ್ಲೆಯ ಜನತೆಗೆ ಹಬ್ಬ ಆಚರಣೆಗೆ ಸಮಯ ನಿಗದಿಯಾಗಿರುವಂತೆ ರಾತ್ರಿ 8ಕ್ಕೆ ನೆರೆ ಕಟ್ಟುವಂತೆಯೂ, 9ಕ್ಕೆ ಗದ್ದೆಯಿಂದ ಕದಿರು ತೆಗೆಯಲು, 10ಕ್ಕೆ ಪ್ರಸಾದ (ಭೋಜನ) ಸ್ವೀಕಾರ ಮಾಡುವಂತೆ ಸೂಚಿಸಲಾಗಿದೆ. ಅದರಂತೆ ಹುತ್ತರಿ ಹಬ್ಬಾಚರಣೆಗೆ ಜನತೆ ಮುಂದಾಗಿದ್ದಾರೆ.

ಈ ನಡುವೆ ಹಬ್ಬವನ್ನು ಕೊಡಗಿನಲ್ಲಿ ಮಾತ್ರವಲ್ಲದೆ, ಕೊಡವರು ಎಲ್ಲೆಲ್ಲಿ ನೆಲೆಸಿದ್ದಾರೆಯೋ ಅಲ್ಲೆಲ್ಲಾ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಕೊಡವ ಸಮಾಜಗಳ ಮೂಲಕ ಹುತ್ತರಿ ಆಚರಣೆ ನಡೆಯುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X