ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಚಂದ್ರಾಪುರದ ಮಠದ ಸ್ವಾಮಿ ಹೇಗಿದ್ದಾರೆ?

By * ಶೃಂಗೇಶ್
|
Google Oneindia Kannada News

Raghaveshwara Bharathi Swamiji, Ramachandrapura Math
ಇದು ಆತಂಕದ ಸಂಗತಿ. ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗಳಿಗೆ ಅನಾರೋಗ್ಯವಾಗಿದೆಯೆ? ಅವರ ಗಂಟಲು, ಅನ್ನನಾಳ ಸಮಸ್ಯೆಯಿಂದ ನರಳತೊಡಗಿದೆಯೆ? ಅವರೇಕೆ ಎಲ್ಲೂ ಮಾತನಾಡುತ್ತಿಲ್ಲ? ಇಷ್ಟಕ್ಕೂ ರಾಘವೇಶ್ವರರು ಇದ್ದಾರಾದರೂ ಎಲ್ಲಿ? ಗೋಕರ್ಣದಲ್ಲಾ, ಬೆಂಗಳೂರಿನ ಗಿರಿನಗರ ಮಠದಲ್ಲಾ, ಕಲ್ಕತ್ತಾದಲ್ಲಾ, ರಾಮಚಂದ್ರಾಪುರದಲ್ಲಾ? ಅವರಿಗೆ ಮಾತನಾಡದೆ ಇರುವಂತೆ ವೈದ್ಯರು ತುಂಬ ಗಂಭೀರವಾಗಿ ಸೂಚಿಸಿರುವುದು ಹೌದಾ? ಕಲ್ಕತ್ತಾದಲ್ಲಿ ಗುಪ್ತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರಾ? ಇಷ್ಟಕ್ಕೂ ಅವರಿಗೆ ಏನಾಗಿದೆ? ಗಂಟಲ ನಾಳಕ್ಕೆ ಗಂಡಾಂತರಕಾರಿ ಸಮಸ್ಯೆಯಾಗಿದೆಯಾ? ಇತ್ತೀಚೆಗಷ್ಟೆ ಚಾತುರ್ಮಾಸ ಮುಗಿಸಿದ ರಾಘವೇಶ್ವರರು ಮತ್ತೆ ಮೌನ ಧರಿಸಿರುವುದೇಕೆ? ಅವರ ಆಪ್ತ ಶಿಷ್ಯರು ತಲೆಗೊಂದು ಕಾರಣ ನೀಡುತ್ತಿರುವುದೇಕೆ?

ಇವು ಕೇಲವ ರಾಮಚಂದ್ರಾಪುರ ಮಠದ ಭಕ್ತರ, ಹವ್ಯಕ ಸಮುದಾಯದವರ ಪ್ರಶ್ನೆಗಳಲ್ಲ. ರಾಘವೇಶ್ವರರು ರಾಜಕೀಯ ವಲಯದಲ್ಲೂ ಪ್ರಭಾವಿಗಳಾದ್ದರಿಂದ ಅಲ್ಲೂ ಪ್ರೆಶ್ನೆಯೆದ್ದಿದೆ. ಚರ್ಚೆಗಳಾಗುತ್ತಿವೆ. ರಾಘವೇಶ್ವರರು ಅನೇಕ ವಿವಾದಗಳಿಗೆ ಒಳಗಾದವರು. ಅವರ ಭಕ್ತರಲ್ಲೇ ಅವರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಆದರೆ, ಚಿಕ್ಕ ವಯಸ್ಸಿನವರಾದ ಅವರು ಆರೋಗ್ಯದಿಂದಿರಲಿ ಎಂಬುದು ಸಮಸ್ತರ ಅಭಿಪ್ರಾಯ. ಅದು ಪತ್ರಿಕೆಯ ಆಶಯವೂ ಹೌದು.

ಎಷ್ಟೊಂದು ವಿವಾದ : ಮೊಟ್ಟಮೊದಲ ಬಾರಿಗೆ ಕುರಿ ಸಿಗಿದು, ಅದರ ವಪೆ ತಿನ್ನುವ ಯಜ್ಞ ಪರಮಪವಿತ್ರವಾದುದು ಎಂಬ ನಿಲುವಿಗೆ ಬದ್ಧರಾದ ರಾಘವೇಶ್ವರರು ಅದೇ ವಿವಾದದಿಂದಾಗಿ ಖ್ಯಾತಿಗೆ - ಅಪಖ್ಯಾತಿಗೆ ಈಡಾದರು. ಅದಕ್ಕೂ ಮುಂಚೆ ಅವರ ಪೀಠಾರೋಹಣವೇ ವಿವಾದಕ್ಕೀಡಾಗಿತ್ತು. ಮುಂದು ಹಸು ರಕ್ಷಣೆ, ಭೂ ಕಬಳಿಕೆ, ರಹಸ್ಯ ಸಿಡಿ ಸೃಷ್ಟಿ, ಶ್ರೀಮಂತರ ಸ್ನೇಹ, ರಾಜಕಾರಣಿಗಳ ಒಡನಾಟ, ಗೋಕರ್ಣ ವಶೀಕರಣ, ಪೊಲೀಸರ ಸಹವಾಸ, ಸಿನೆಮಾದವರ ಸಾಂಗತ್ಯ, ತಂಗಿಯ ದಾಂಪತ್ಯದ ಅಪಸವ್ಯ, ಅವರ ಭಾವ ಮೈದುನ ಜಗದೀಶನ ಶಿಶುಪೀಡನಾ ಹಗರಣ - ಹೀಗೆ ಒಂದಾದ ಮೇಲೊಂದಂತೆ ಅತ್ಯಲ್ಪ ಕಾಲದಲ್ಲಿ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡರು. ಕೆಲವನ್ನು ರಾಜಕೀಯದ ನೆರವಿನಿಂದಾಗಿ ಮುಚ್ಚಿಯೂ ಹಾಕಿದರು.

ಗಂಟಲ ಸಮಸ್ಯೆ : ಈಗ ಅವರ ಗಂಟಲಿಗೆ ಆತಂಕಕಾರಿಯಾದ ಸಮಸ್ಯೆಯಾಗಿದೆ ಎಂಬ ವದಂತಿ ಹುಟ್ಟಿದೆ. ಅದು ಖಚಿತವೂ ಆಗುತ್ತಿಲ್ಲ. ಮಠದ ಉಸ್ತುವಾರಿಯಲ್ಲಿರುವವರು ಸ್ಪಷ್ಟನೆಯನ್ನು ನೀಡುತ್ತಿಲ್ಲ. ಅದಕ್ಕೆ ಸರಿಯಾಗಿ ರಾಘವೇಶ್ವರರು ಯಾರಿಗೂ ಸಿಗುತ್ತಿಲ್ಲ. ಅವರು ಮಾತೂ ಆಡುತ್ತಿಲ್ಲವಂತೆ ಎಂಬುದು ಗಾಳಿ ಸುದ್ದಿ. ಇತ್ತೀಚೆಗೆ ಚಾತುರ್ಮಾಸದ ಸಂದರ್ಭದಲ್ಲಿ ಅವರಿಗೆ ಗಂಟಲು ಕಟ್ಟಿಕೊಂಡಿತ್ತು. ಆಶೀರ್ವಚನದ ಭಾಷಣ ಮಾಡುವಾಗ ಎಡವಟ್ಟಾಗುತ್ತಿತ್ತು. ಗಂಟಲು ನೋವು ತೀವ್ರವಾದಾಗ ಅವರಿಗೆ ಮಾತನಾಡದೆ, ಗಂಟಲಿಗೆ ರೆಸ್ಟ್ ಕೊಡಿ ಎಂದು ವೈದ್ಯರು ಸಲಹೆ ಮಾಡಿಯೂ ಆಗಿತ್ತು. ಆದರೆ ಸ್ವಾಮಿಗಳು ಮನೆ ವೈದ್ಯವನ್ನೇ ಮಾಡಿ ದಿನ ನೂಕಿದರು. ಈಗೊಂದು ತಿಂಗಳಿನಿಂದ ಅವರಿಗೆ ತಾಪತ್ರಯ ಹೆಚ್ಚಿದಂತಿದೆ. ಈಗ್ಗೆ ಹದಿನೈದಿಪ್ಪತ್ತು ದಿನದ ಹಿಂದೆ ಕೊಲ್ಲೂರಿಗೆ ಬಂದವರು ಎದುರಿಗೆ ಕುಳಿತು ಹೋಮ ಹವನ ಮಾಡಿಸಿದರಾದರೂ, ಮೌನ ಧರಿಸಿ ಕುಳಿಸಿದ್ದರು. ಆಶೀರ್ವಾದಕ್ಕೆ ಬಂದವರಿಗೆ ಸುಮ್ಮನೆ ಫಲ ಮಂತ್ರಾಕ್ಷತೆ ಕೊಟ್ಟು ಕಳಿಸಿದರು.

ಹೋಮದ ಘಾಟು : ಸ್ವಾಮಿಗಳಿಗೆ ಹೋಮದ ಹೊಗೆಯಿಂದಾಗಿ ಗಂಟಲು ಸಮಸ್ಯೆಯಾಗಿದೆ ಅಂತ ಅವರ ಆಪ್ತವಲಯ ಹೇಳತೊಡಗಿತು. ನಿಮಗೆ ಆಶ್ಚರ್ಯವಾಗಬಹುದು. ಹೋಮ ಹವನಗಳಿಂದ ಎಷ್ಟು ಪುಣ್ಯ ಬಂತು ಎಂಬುದು ಗೊತ್ತಿಲ್ಲವಾದರೂ, ಕನಕಪುರದ ಲೋಕಸಭಾ ಸದಸ್ಯರಾಗಿದ್ದ ಚಂದ್ರಶೇಖರ ಮೂರ್ತಿಯವರು ಕ್ಯಾನ್ಸರ್ ಬಂದು ತೀರಿಯೇ ಹೋದರು. ಇದು ಹೋಮದ ಹೊಗೆಯದೇ ಏಟು ಎಂದು ವೈದ್ಯರೂ ಹೇಳಿದ್ದರು. ಇಂಥ ಹೋಮ-ಧೂಮದ ಹೊಗೆಯೊಂದಿಗೆ, ಕುಡಿಯುವ ನೀರು ಬದಲಾದದ್ದು ಕೂಡ ಸ್ವಾಮಿಗಳಿಗೆ ಗಂಟಲಿನ ಸಮಸ್ಯೆ ಉಂಟು ಮಾಡಿದೆ ಎಂಬುದು ಶಿಷ್ಯರು ನೀಡುವ ವಿವರಣೆ. ಕೆಲವರ ಪ್ರಕಾರ ಅವರು ಪುತ್ತೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಮಣಿಪಾಲದಲ್ಲಿ ಮೊದಲು ಚಿಕಿತ್ಸೆ ಪಡೆದು ನಂತರ ಕಲ್ಕತ್ತಾದಲ್ಲಿ ತೋರಿಸಿಕೊಳ್ಳುತ್ತಿದ್ದಾರೆ ಎಂಬ ದಟ್ಟ ವದಂತಿ ಹರಡಿದೆ.

ಚರ್ಚೆ ಆರಂಭ : ಮಠದಲ್ಲೇ ಇರುವ ಕೆಲ ಶ್ರೀಮಂತ ಭಕ್ತರಿಗೆ ಸ್ವಾಮಿಗಳ ಆರೋಗ್ಯಕ್ಕೆ ಸಂಬಂಧಿಸಿದ ಹೆಲ್ತ್ ರಿಪೋರ್ಟು ಹುಡುಕುವ ತವಕ. ನಿಜಕ್ಕೂ ಗಂಭೀರಕರ ಖಾಯಿಲೆ ಬಂದಿರುವುದೇ ಆದಲ್ಲಿ ಅದಕ್ಕೆ ಚಿಕಿತ್ಸೆ ಪಡೆಯಲಾರಂಭಿಸಿದರೆ ಸನ್ಯಾಸದ ನೇಮ-ನಿಷ್ಠೆಗಳನ್ನು ಪಾಲಿಸಲಾಗುವುದಿಲ್ಲ. ಪೂಜೆ ಪುನಸ್ಕಾರ ಅಸಾಧ್ಯ. ಹೀಗಾಗಿ ರಾಘವೇಶ್ವರರು ಪೀಠ ತ್ಯಾಗ ಮಾಡುತ್ತಾರಾ? ಮಾಡಿದ್ದೇ ಆದರೆ ಪರ್ಯಾಯ ಆಯ್ಕೆ ಯಾರದು ಎಂಬಲ್ಲಿಯ ತನಕ ಈ ಗುಂಪು ಮಾತನಾಡತೊಡಗಿದೆ.

ಎಂಥ ಖಯಾಲಿ? : ಹೀಗೆ ಗಾಸಿಪ್ ಹುಟ್ಟುವುದಕ್ಕೆ ರಾಘವೇಶ್ವರರ ನಿಗೂಢ ಅಂತರ್ದಾನವೂ ಕಾರಣವಾಗಿರಬಹುದು. ಅದೇನೋ ಗೊತ್ತಿಲ್ಲ, ಅವರಿಗೆ ಮೊದಲಿನಿಂದಲೂ ಗುಟ್ಟುಗುಟ್ಟಾಗಿ ಓಡಾಡಿಕೊಂಡಿರುವ ಖಯಾಲಿ. ಅನೇಕ ಸಲ ಅವರ ಬಗ್ಗೆ ಗಾಸಿಪ್ ಹುಟ್ಟಿಕೊಳ್ಳಲು ಈ ಖಯಾಲಿಯೇ ಕಾರಣವಾದದ್ದುಂಟು. ಅವರು ಎಲ್ಲಿದ್ದಾರೆ ಅಂತ ಗಿರಿನಗರದ ಮಠದಲ್ಲಿ ಕೇಳಿದರೆ, ಗೋಕರ್ಣದಲ್ಲಿದ್ದಾರೆ ಎಂಬ ಉತ್ತರ ಸಿಗುತ್ತದೆ. ಗೋಕರ್ಣದಲ್ಲಿ ಕೇಳಿದರೆ ರಾಮಚಂದ್ರಾಪುರದೆಡೆಗೆ ತೋರಿಸುತ್ತಾರೆ. ಕೆಲವೊಮ್ಮೆ ನಿಜವಾದ ಆಧ್ಯಾತ್ಮಿಕ ಸಮಾಧಾನ ಹೊಂದಬಯಸಿ ಸ್ವಾಮಿಗಳ ದರ್ಶನಕ್ಕೆ ಹೋದವರಿಗೆ ಮಠದ ಮಾಣಿಗಳು ಕೊಡುವ ಉತ್ತರ ಬೇಸರ ತರಿಸುತ್ತದೆ. ತಮ್ಮನ್ನು ಯಾಮಾರಿಸುತ್ತಿದ್ದಾರೆ ಎಂಬ ಭಾವನೆ ಹುಟ್ಟುತ್ತದೆ. ಹೀಗಾಗಿ ಗಾಸಿಪ್ ಗಳು ಹುಟ್ಟಿಕೊಳ್ಳುತ್ತವೆ.

ಇದು ಹಾರೈಕೆ : ಇನ್ನೂ ಒಂದು ಸಂಗತಿಯೆಂದರೆ, ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ಆರೋಗ್ಯ ಸಂಬಂಧಿಯಾದ ಇಂಥ ವದಂತಿಗಳು ಆಗಿಂದಾಗ್ಗೆ ಹುಟ್ಟುವುದೂ ಸಹಜ. ಅಂಬರೀಷ್ ಸತ್ತೇ ಹೋದರಂತೆ ಎಂಬ ಸುದ್ದಿ ಹುಟ್ಟಿ ಅಕ್ಷರಶಃ ಅವರ ಮನೆಗೆ ಪೊಲೀಸ್ ಕಾವಲು ಹಾಕಬೇಕಾಗಿ ಬಂದದ್ದು ಇತ್ತೀಚಿನ ಘಟನೆ. ರಾಘವೇಶ್ವರರ ಬಗ್ಗೆಯೂ ಹೀಗೊಂದು ವದಂತಿ ಹುಟ್ಟಿಕೊಂಡಿರಬಹುದು. ಅದು ಸುಳ್ಳಾಗಲಿ. ಎಲ್ಲ ವಿವಾದಗಳ ಮಧ್ಯೆಯೂ ಈ ಚಿಕ್ಕ ವಯಸ್ಸಿನ ಸ್ವಾಮಿ ಆರೋಗ್ಯವಂತರಾಗಿ ಓಡಾಡಿಕೊಂಡಿರಲಿ. ಹಾಗಂತ ಪತ್ರಿಕೆ ಹಾರೈಸುತ್ತದೆ. (ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X