ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೇರಿಯಾ : ಮಾಧ್ಯಮಗಳೊಂದಿಗೆ ಸೆಟಗೊಂಡ ರೆಡ್ಡಿ

By * ರೋಹಿಣಿ ಬಳ್ಳಾರಿ
|
Google Oneindia Kannada News

Janardhan Reddy
ಬಳ್ಳಾರಿ, ನ. 3 : ಭುವನಹಳ್ಳಿ ಪ್ರಕರಣವನ್ನು ಮಾಧ್ಯಮಗಳು ಅತಿರಂಜಿತವಾಗಿ ವರದಿ ಮಾಡುತ್ತಿವೆ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಬೇಸರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಪ್ರಕರಣವನ್ನು ವೈಭವೀಕರಿಸುತ್ತಿವೆ. ಮಲೇರಿಯಾದಿಂದ ಮೃತಪಟ್ಟವರು ಕೇವಲ 8 ಜನ. ಹೀಗಿದ್ದಾಗಲೂ ಬಾಯಿ ಬಂದ ಹಾಗೆ ಸಾವಿನ ಸಂಖ್ಯೆ ಏರಿಸತೊಡಗಿವೆ. ಆದ್ದರಿಂದ ಮಾಧ್ಯಮಗಳ ಜೊತೆ ನಾನಿನ್ನು ಮಾತನಾಡುವುದಿಲ್ಲ ಎಂದು ರೆಡ್ಡಿ ಮುನಿಸಿನ ಮಾತುಗಳನ್ನಾಡಿದ್ದಾರೆ.

ಗಾದಿಗನೂರು ಗ್ರಾಮದಲ್ಲಿ ಮಂಗಳವಾರ ನಡೆದ ಮಲೇರಿಯಾ, ಇಲಿಜ್ವರ ಸೇರಿ ಸಾಂಕ್ರಾಮಿಕ ರೋಗಗಳಿಂದ ಸಂತ್ರಸ್ತ ಕುಟುಂಬಗಳ ವಾರಸುದಾರರಿಗೆ ಚೆಕ್ ವಿತರಿಸಿ ಮಾತನಾಡುತ್ತಿದ್ದರು. ಈ ಪ್ರಕರಣದಲ್ಲಿ ಮೃತಪಟ್ಟವರು ಒಟ್ಟು 14 ಜನ. ಅದರಲ್ಲೂ ಮಲೇರಿಯಾದಿಂದ ಮೃತಪಟ್ಟವರು ಕೇವಲ 8 ಜನ. ಜಿಲ್ಲಾಡಳಿತ 18 ಜನರ ವಾರಸುದಾರರಿಗೆ ಪರಿಹಾರ ನೀಡುತ್ತಿದೆ ಎಂದರು.

ಮಾಧ್ಯಮಗಳು ಮೃತರ ಸಂಖ್ಯೆಯನ್ನು ತಪ್ಪು ತಪ್ಪಾಗಿ ಪ್ರಕಟಿಸುತ್ತಿವೆ. ಇಡೀ ಪ್ರಕರಣ ಕುರಿತು ಮಾಧ್ಯಮಗಳು ವೈಭವೀಕರಣಕ್ಕೆ ನಿಂತಿವೆ. ಮಾಧ್ಯಮಗಳು ನೈರ್ಮಲ್ಯ, ಸ್ವಚ್ಛತೆ, ಆರೋಗ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ವೈಭವೀಕರಿಸಿದ ವರದಿಗಳ ಮೂಲಕ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡುತ್ತಿವೆ ಎಂದು ಕಿಡಿಕಾರಿದರು.

ಶಾಲೆಗಳಿಗೆ ರಜೆ : ಹೊಸಪೇಟೆ ತಾಲೂಕಿನ ಭುವನಹಳ್ಳಿ, ಗಾದಿಗನೂರು, ಬೈಲುವದ್ದಿಗೇರಿ, ಕುಟುಗಿನಾಳ್, ಧರ್ಮಸಾಗರ, ಕಾಕುಬಾಳು, ಗುಂಡ್ಲ ವದ್ದಿಗೇರಿ, ಪಾಪಿನಾಯಕನಹಳ್ಳಿ ಹಾಗು ವಡ್ಡರಹಳ್ಳಿ ಗ್ರಾಮದಲ್ಲಿರುವ ತೀವ್ರವಾಗಿ ಕಾಣಿಸಿಕೊಂಡಿರುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಾಥಮಿಕ - ಪ್ರೌಢಶಾಲೆಗಳಿಗೆ ನವೆಂಬರ್ 3 ರಿಂದ 8 ರವರೆಗೆ ರಜೆ ಘೋಷಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರ ನಿರ್ದೇಶನದ ಮೇರೆಗೆ ನವೆಂಬರ್ 3 ರಿಂದ 8 ರವರೆಗೆ ರಜೆಯನ್ನು ಘೋಷಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಬಾಲರಾಜು ಅವರು ತಿಳಿಸಿದ್ದಾರೆ.

ಮೃತರ ಸಂಬಂಧಿಕರಿಗೆ ಚೆಕ್ ವಿತರಣೆ : ಗಾದಿಗನೂರು, ಭುವನಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳಿಂದಾಗಿ ಮೃತಪಟ್ಟ 18 ಜನರ ವಾರಸುದಾರರಿಗೆ ಬಳ್ಳಾರಿ ಅಜೆಂಡಾ ಟಾಸ್ಕ್‌ಫೋರ್ಸ್‌ನಿಂದ ತಲಾ ಒಂದು ಲಕ್ಷ ರುಪಾಯಿ ಮೊತ್ತದ ಚೆಕ್ ಅನ್ನು ಜಿಲ್ಲಾಡಳಿತ ಮಂಗಳವಾರ ವಿತರಣೆ ಮಾಡಿದೆ. ಗಾದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಿ. ಜನಾರ್ದನ ರೆಡ್ಡಿ ಹಾಗೂ ಸಚಿವ ಬಿ. ಶ್ರೀರಾಮುಲು ಅವರು ಚೆಕ್‌ಗಳನ್ನು ವಿತರಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X