ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ಸ್ವಾಗತ, ವಿಪಕ್ಷಗಳಿಂದ ವಿರೋಧ

By Prasad
|
Google Oneindia Kannada News

YSV Datta
ಬೆಂಗಳೂರು, ಅ. 28 : ಪಕ್ಷಾಂತರ ಚಟುವಟಿಕೆಗಾಗಿ ವಿಧಾನಸಭೆ ಶಾಸಕತ್ವದಿಂದ ಅನರ್ಹಗೊಳಿಸಿ ಸಭಾಧ್ಯಕ್ಷ ಕೆಜಿ ಬೋಪಯ್ಯ ನೀಡಿದ ನಿರ್ಣಯವನ್ನು ಕರ್ನಾಟಕ ಹೈಕೋರ್ಟನ್ನು ಎತ್ತಿಹಿಡಿದಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.

ಸಹಜವಾಗಿ ಆಡಳಿತಾರೂಢ ಬಿಜೆಪಿ ಸಂತಸ ವ್ಯಕ್ತಪಡಿಸಿದ್ದರೆ, ಬಾಲ ಸುಟ್ಟ ಬೆಕ್ಕಿನಂತಾಗಿರುವ ಜೆಡಿಎಸ್ ಬಿಜೆಪಿ ಅನರ್ಹ ಶಾಸಕರ ಸೋಲನ್ನು ತನ್ನ ಸೋಲು ಎಂಬಂತೆ ಬಣ್ಣಿಸಿದೆ, ಕಾಂಗ್ರೆಸ್ ಕೂಡ ಜೆಡಿಎಸ್ ದನಿಯನ್ನೇ ಪ್ರತಿಧ್ವನಿಸಿದೆ.

ಯಡಿಯೂರಪ್ಪ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದು ರಾಜ್ಯಪಾಲರಿಗೆ ಪತ್ರ ನೀಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಅಣತಿಯ ಮೇರೆಗೆ ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅಕ್ಟೋಬರ್ 10ರಂದು ಸ್ವತಂತ್ರ ಶಾಸಕರನ್ನು ಸೇರಿಸಿ ಭಿನ್ನಮತೀಯ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಭಿನ್ನಮತೀಯರು ಹೈಕೋರ್ಟ್ ಮೆಟ್ಟಲೇರಿದ್ದರು.

ಜೆಡಿಎಸ್ ಪ್ರತಿಕ್ರಿಯೆ : ಹೈಕೋರ್ಟಿನ ಈ ತೀರ್ಪಿನಿಂದ ನಾವು ಎದೆಗುಂದಿಲ್ಲ. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಲೇರುವುದು ಗ್ಯಾರಂಟಿ. ಅಲ್ಲಿ ನಮಗೆ ಜಯ ಸಿಕ್ಕೇ ಸಿಗುತ್ತದೆ ಎಂದು ಜನತಾದಳ (ಜಾತ್ಯತೀತ) ಪಕ್ಷದ ವಕ್ತಾರ ವೈಎಸ್ ವಿ ದತ್ತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸಂತಸ : ಸಭಾಧ್ಯಕ್ಷರ ನಿರ್ಣಯವನ್ನು ಎತ್ತಿಹಿಡಿದು ಕರ್ನಾಟಕ ಹೈಕೋರ್ಟ್ ಇಡೀ ರಾಜ್ಯಕ್ಕೆ ಗಟ್ಟಿ ಸಂದೇಶ ನೀಡಿದೆ. ಯಡಿಯೂರಪ್ಪ ಎರಡೂವರೆ ವರ್ಷಗಳಿಂದ ಸ್ಥಿರ ಸರಕಾರ ನೀಡುತ್ತಿದ್ದಾರೆ. ಇಂದಿನ ತೀರ್ಪು ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಾಗಿದೆ. ಯಾರ್ಯಾರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಕ್ಷಾಂತರ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಿದ್ದರೋ ಅವರಿಗೆ ಚಾಟಿ ಏಟು ನೀಡಿದಂತಾಗಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಆಕ್ರೋಶ : ಬಿಜೆಪಿಯ 11 ಶಾಸಕರ ಅನರ್ಹತೆಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ನಾವು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್ ವರೆಗೂ ನಾವು ಕಾನೂನು ಸಮರ ಮುಂದುವರೆಸುತ್ತೇವೆ. ಸುಪ್ರೀಂ ಕೋರ್ಟ್ ತೀರ್ಮಾನವೇ ಅಂತಿಮ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೈಕೋರ್ಟ್ ಬಗ್ಗೆ ಗೌರವವಿದೆ. ನ್ಯಾಯಮೂರ್ತಿ ಕುಮಾರ್ ನೀಡಿರುವ ತೀರ್ಪು ಸರಿಯಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ನ್ಯಾಯಮೂರ್ತಿಯನ್ನು ವಿಜಿ ಸಭಾಹಿತ್ ಅವರನ್ನು ನೇಮಿಸಿದ್ದು ಮುಖ್ಯ ನ್ಯಾಯಮೂರ್ತಿಗಳೇ. ಹೀಗಾಗಿ ಈ ತೀರ್ಪು ನ್ಯಾಯಯುತವಾಗಿಲ್ಲ ಎನ್ನುವುದು ನನ್ನ ವೈಯಕ್ತಿಕ ಭಾವನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X