ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿನ್ನಮತೀಯ ಶಾಸಕರಿಂದ ಕ್ಷಮೆ ಯಾಚನೆ!

By Prasad
|
Google Oneindia Kannada News

3 dissident BJP MLAs ready to apologize
ಬೆಂಗಳೂರು, ಅ. 27 : ಭಿನ್ನಮತದ ಕಿಡಿಹಚ್ಚಿ ಅನರ್ಹಗೊಂಡಿದ್ದ ಬಿಜೆಪಿ ಶಾಸಕರ ಬಣದಲ್ಲಿಯೇ ಭಿನ್ನಮತ ಭುಗಿಲೆದ್ದಿದ್ದು, ಜನಾರ್ದನ ರೆಡ್ಡಿ ಸಂಧಾನದ ಫಲವಾಗಿ ನಾಲ್ವರು ಶಾಸಕರು 'ತಾವು ಮಾಡಿದ್ದು ತಪ್ಪಾಗಿದೆ, ಇನ್ನೆಂದೂ ಹೀಗೆ ಮಾಡುವುದಿಲ್ಲ' ಎಂದು ಕ್ಷಮೆ ಯಾಚಿಸಲು ಸಿದ್ಧರಾಗಿದ್ದಾರೆ.

ಇಂಡಿ ಶಾಸಕ ಡಾ. ಸಾರ್ವಭೌಮ ಬಗಲಿ, ಬಸನವ ಬಾಗೇವಾಡಿ ಶಾಸಕ ಎಸ್ ಕೆ ಬೆಳ್ಳುಬ್ಬಿ, ಕಾರವಾರದ ಶಾಸಕ ಆನಂದ ಆಸ್ನೋಟಿಕರ್ ಮತ್ತು ಲಿಂಗಸೂರಿನ ಶಾಸಕ ಮಾನಪ್ಪ ವಜ್ಜಲ ಅವರು ಜನಾರ್ದನ ರೆಡ್ಡಿಯೊಡನೆ ಇಂದು ಬಿಜೆಪಿ ಕಚೇರಿಗೆ ತೆರಳಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರನ್ನು ಭೇಟಿಯಾಗಿ ಕ್ಷಮೆ ಯಾಚಿಸಲಿದ್ದಾರೆ. ಸಂಧಾನದ ಸೂತ್ರಧಾರಿ ಜನಾರ್ದನ ರೆಡ್ಡಿ ಅವರ ಪ್ರಯತ್ನದಿಂದಾಗಿ ಇವರು ಭಿನ್ನಮತೀಯರ ಬಣದಿಂದ ಹೊರಬಂದಿದ್ದಾರೆ.

ಇವರಲ್ಲಿ ಬಗಲಿ, ಆಸ್ನೋಟಿಕರ್ ಮತ್ತು ಬೆಳ್ಳುಬ್ಬಿಯವರು ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅವರಿಂದ ಅನರ್ಹತೆಗೊಳಗಾಗಿದ್ದಾರೆ. ಮಾನಪ್ಪ ವಜ್ಜಲ ಅವರು ಅ.14ರಂದು ನಡೆದ ಎರಡನೇ ವಿಶ್ವಾಸಮತ ಯಾಚನೆಯಲ್ಲಿ ಹೊರಗುಳಿದು ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು ಮತ್ತು ಅನರ್ಹರಾಗುವ ಅಪಾಯ ತಂದುಕೊಂಡಿದ್ದರು.

ಶಾಸಕರ ಅನರ್ಹತೆಯ ಪ್ರಕರಣ ಸದ್ಯಕ್ಕೆ ಕರ್ನಾಟಕ ಹೈಕೋರ್ಟಿನ ಮುಂದಿದೆ. ನ್ಯಾಯಮೂರ್ತಿ ಸಭಾಹಿತ್ ಮುಂದೆ ವಿಚಾರಣೆ ಮುಗಿದಿದ್ದು ತೀರ್ಪಿಗೆ ಕಾಯ್ದಿರಿಸಲಾಗಿದೆ. ಈಗ ಅನರ್ಹಗೊಂಡ ಶಾಸಕರು ಕ್ಷಮೆಯಾಚಿಸಿ ಬಿಜೆಪಿ ಕೈಹಿಡಿಯಲು ಮುಂದಾಗಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಹೈಕೋರ್ಟ್ ಅನರ್ಹತೆಯನ್ನು ಎತ್ತಿಹಿಡಿದರೆ ಹೇಗೆ? ಸಭಾಧ್ಯಕ್ಷರ ಆದೇಶ ಹೈಕೋರ್ಟ್ ತಳ್ಳಿಹಾಕಿದರೆ ಮುಂದಿನ ಪ್ರಶ್ನೆಯೇನು? ಎಂಬ ಪ್ರಶ್ನೆಗಳು ಈ ಬೆಳವಣಿಗೆಯಿಂದಾಗಿ ಕುತೂಹಲ ಕೆರಳಿಸಿವೆ.

ಒಂದು ವೇಳೆ ಶಾಸಕರ ಅನರ್ಹತೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದರೆ, ಇವರು ಕ್ಷಮೆ ಯಾಚಿಸಿದರೂ ಪ್ರಯೋಜನವಿಲ್ಲ. ಅನರ್ಹಗೊಂಡವರು ಸಾಧಾರಣ ಕಾರ್ಯಕರ್ತರಾಗಿ ಮುಂದುವರಿಯಬೇಕಾಗುತ್ತದೆ. ಶಾಸಕರ ಅನರ್ಹತೆ ಅಸಿಂಧುವಾದರೆ ಮಾತ್ರ ಬಿಜೆಪಿಯ ಸಂಖ್ಯೆ ಹೆಚ್ಚುತ್ತದೆ. ಏನೇ ಆದರೂ ಲಾಭ ಬಿಜೆಪಿಗೇ. ಜನಾರ್ದನ ರೆಡ್ಡಿ ಹಾಕಿರುವ ಈ ದಾಳ ವಿರೋಧ ಪಕ್ಷಗಳಿಗೆ ಮಾತ್ರ ಗೋಳಾಗಲಿದೆ.

ಪಕ್ಷದಲ್ಲಿಯೇ ವಿರೋಧ : ಭಿನ್ನಮತೀಯ ಚಟುವಟಿಕೆ ನಡೆಸಿ ಸರಕಾರವನ್ನೇ ಅಳಿವಿನ ಅಂಚಿಗೆ ತಳ್ಳಿದ್ದ ಈ ಭಿನ್ನಮತೀಯರಿಗೆ ಕ್ಷಮೆ ನೀಡಿ ಪಕ್ಷದೊಳಗೆ ಮತ್ತೆ ಸೇರಿಸಬಾರದೆಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ವರ್ಚಸ್ಸನ್ನು ಹಾಳು ಮಾಡಿದ ಇವರ ಮೊಸಳೆ ಕಣ್ಣೀರಿಗೆ ಪಕ್ಷದ ವರಿಷ್ಠರು ಮೋಸಹೋಗಬಾರದು ಎಂದು ಕಾರ್ಯಕರ್ತರು ಅಂಗಲಾಚಿದ್ದಾರೆ. ಅಲ್ಲದೆ, ಶಾಸಕರ ಅನರ್ಹತೆ ಕುರಿತ ಪ್ರಕರಣ ಹೈಕೋರ್ಟಿನ ಮುಂದಿದ್ದು, ಅದು ತೀರ್ಮಾನವಾದ ಮೇಲೆಯೇ ಮುಂದಿನ ನಡೆಯನ್ನು ನಿರ್ಧರಿಸಬೇಕೆಂದು ಹೇಳಿದ್ದಾರೆ.

ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಿನ್ನಮತೀಯ ಬಿಜೆಪಿ ಶಾಸಕರ ಕ್ಷಮೆ ಯಾಚನೆಯ ನಾಟಕಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಆದರೂ ಪಟ್ಟನ್ನು ಬಿಡದ ಜನಾರ್ದನ ರೆಡ್ಡಿ, ಕ್ಷಮೆ ಯಾಚಿಸುವ ಶಾಸಕರನ್ನು ಮತ್ತೆ ಪಕ್ಷದೊಳಗೆ ಸೇರಿಸುವ ಕುರಿತು ಕೇಂದ್ರದ ನಾಯಕರೊಂದಿಗೆ ಮಾತಾಡಲಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X