ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐವರಿಗೆ ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿ

By Mrutyunjaya Kalmat
|
Google Oneindia Kannada News

Infosys
ಮುಂಬೈ, ಅ. 26 : ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್, ಐವರು ವಿಜ್ಞಾನಿಗಳಿಗೆ ಪ್ರತಿಷ್ಠಿತ ಇನ್ಫೋಸಿಸ್ ಪ್ರಶಸ್ತಿ 2010ಯನ್ನು ಘೋಷಿಸಿದೆ. ಗಣಿತ ವಿಜ್ಞಾನ, ಭೌತ ವಿಜ್ಞಾನ,ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಜೀವ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಲಯದಲ್ಲಿ ಸಲ್ಲಿಸಿದ ಸೇವೆ ಮತ್ತು ಸಂಶೋಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡ ಲಾಗಿದೆ ಎಂದು ಇನ್ಫೋಸಿಸ್ ಸೈನ್ಸ್ ಫೌಂಡೇಷನ್‌ನ ಟ್ರಸ್ಟಿಗಳಾದ ಎನ್.ಆರ್ ನಾರಾಯಣಮೂರ್ತಿ, ಕೆ. ದಿನೇಶ್ ಮತ್ತು ಎಸ್.ಗೋಪಾಲಕೃಷ್ಣನ್ ತಿಳಿಸಿದರು.

ಪ್ರಶಸ್ತಿಯು ತಲಾ 50 ಲಕ್ಷ ರೂ. ನಗದು, ಸ್ವರ್ಣ ಪದಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಮುಂಬೈನಲ್ಲಿ ಜನವರಿ 6ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ನಾರಾಯಣಮೂರ್ತಿ ತಿಳಿಸಿದರು.

ಪ್ರಶಸ್ತಿ ವಿಜೇತರ ವಿವರ ಇಂತಿದೆ

ಸಂದೀಪ್ ತ್ರಿವೇದಿ : ಭೌತ ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸಂದೀಪ್ ತ್ರಿವೇದಿಯವರಿಗೆ ಇನ್ಫೋಸಿಸ್ ಪ್ರಶಸ್ತಿ ನೀಡಲಾಗಿದೆ. 1985ರಲ್ಲಿ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದ ಪ್ರೊ. ಸಂದೀಪ್ ತ್ರಿವೇದಿ ಅವರಿಗೆ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ.

ಆಶುತೋಷ್ ಶರ್ಮಾ : ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಲಯದಲ್ಲಿ ನಡೆಸಿದ ಸಂಶೋಧನೆಯನ್ನು ಗೌರವಿಸಿ ಆಶುತೋಷ್ ಶರ್ಮಾ ಅವರಿಗೆ ಇನ್ಫೋಸಿಸ್ ಪ್ರಶಸ್ತಿ ನೀಡಿದೆ. ಇಂಧನ ದಾಸ್ತಾನು, ಮೈಕ್ರೋ ಎಲೆಕ್ಟ್ರೊ ಮೆಕಾನಿಕಲ್ ಸಿಸ್ಟಮ್ಸ್ ಮುಂತಾದ ನಾನಾ ವಲಯಗಳಲ್ಲಿ ಅವರು ಶ್ರಮಿಸಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‌ನ ಫೆಲೋ ಆಗಿರುವ ಆಶುತೋಷ್ ಶರ್ಮಾ ಅವರಿಗೆ ನೈಸರ್ಗಿಕ ವಿಜ್ಞಾನ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಚಂದ್ರಶೇಖರ್ ಖಾರೆ : ಗಣಿತ ಶಾಸ್ತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಚಂದ್ರಶೇಖರ್ ಖಾರೆ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಸಂಖ್ಯಾ ಶಾಸ್ತ್ರದಲ್ಲಿ ಚಂದ್ರಶೇಖರ್ ವಿಪುಲ ಅಧ್ಯಯನ ಮತ್ತು ಸಂಶೋಧನೆ ನಡೆಸಿದ್ದಾರೆ. ಲಾಸ್ ಏಂಜಲ್ಸ್‌ನ ಕ್ಯಾಲಿಫೋರ್ನಿಯಾ ವಿ.ವಿಯಲ್ಲಿ ಅವರು ಪ್ರೊಫೆಸರ್ ಆಗಿದ್ದಾರೆ.

ಅಮಿತಾ ಬಾವಿಸ್ಕರ್ : ಸಮಾಜ ವಿಜ್ಞಾನ ವಲಯದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಅಮಿತಾ ಬಾವಿಸ್ಕರ್ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಪರಿಸರ, ಮಾಹಿತಿ ಮತ್ತು ಅಭಿವೃದ್ಧಿಪರ ಸಮಾಜ ವಿಜ್ಞಾನ ವಲಯದಲ್ಲಿ ಅಮಿತಾ ಬಾವಿಸ್ಕರ್ ಜನಪ್ರಿಯರಾಗಿದ್ದಾರೆ.

ನಂದಿನಿ ಸುಂದರ್ : ಸಾಮಾಜಿಕ ಮಾನವ ವಿಜ್ಞಾನ ವಲಯದಲ್ಲಿ ಸಂಶೋಧನೆಗಾಗಿ ನಂದಿನಿ ಸುಂದರ್ ಅವರಿಗೆ ಇನ್ಫೋಸಿಸ್ ಪ್ರಶಸ್ತಿ ಸಂದಿದೆ. ಬುಡಕಟ್ಟು ಜನರ ಸಾಮಾಜಿಕ ಜನಜೀವನ, ಆಧುನಿಕ ಭಾರತದ ಬಗೆಗಿನ ಜ್ಞಾನ ಹಾಗೂ ಇತರ ವಿಚಾರಗಳ ಬಗ್ಗೆ ಅವರು ಸಂಶೋಧನೆ ನಡೆಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X