ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ದಾಳಿ ಬಗ್ಗೆ ರೆಡ್ಡಿಗಳಿಗೆ ಸುಳಿವಿತ್ತು

By Mahesh
|
Google Oneindia Kannada News

Reddy brothers may face IT Raids again
ಬಳ್ಳಾರಿ, ಅ. 26: ಆದಾಯ ತೆರಿಗೆ ಅಧಿಕಾರಿಗಳು ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ಜನಪ್ರತಿನಿಧಿಗಳು ಮತ್ತು ಅವರ ವ್ಯವಹಾರಗಳ ಮೇಲೆ ದಾಳಿ ನಡೆಸುವ ಸ್ಪಷ್ಟವಾದ ಮಾಹಿತಿ 3 ದಿನಗಳಿಂದಲೇ ಗಣ್ಯಾತಿಗಣ್ಯರ ಬಳಿ ಇತ್ತು ಎಂದು ಮೂಲಗಳು ತಿಳಿಸುತ್ತಿವೆ. ಅಲ್ಲದೇ, ಬೆಂಗಳೂರಲ್ಲಿ ಬೀಡುಬಿಟ್ಟಿದ್ದ ಈ ರಾಜಕಾರಣಿಗಳು ಸುಳಿವನ್ನು ಖಚಿತಪಡಿಸಿಕೊಂಡು ಬಳ್ಳಾರಿಗೆ ಆಗಮಿಸಿ ತಮ್ಮ ರಹಸ್ಯ ವ್ಯವಹಾರಗಳ ದಾಖಲಾತಿಗಳನ್ನು ನಾಶಪಡಿಸಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೇ, ಈ ದಾಳಿಯ ಹಿನ್ನಲೆಯಲ್ಲಿ ಭಾನುವಾರ ರಾತ್ರಿಯೇ ಸಚಿವ ಜಿ. ಜನಾರ್ದನರೆಡ್ಡಿ ಅವರು ಹೈದರಾಬಾದ್‌ಗೆ ವಿಶೇಷ ವಿಮಾನದಲ್ಲಿ ತೆರಳುವ ಉದ್ದೇಶ ಹೊಂದಿದ್ದರು. ಆದರೆ, ಭಾನುವಾರ ಸಂಜೆ ಸುರಿದ ಭಾರೀ ಮಳೆಯ ಕಾರಣ ವಿಮಾನ ಜಿಂದಾಲ್‌ನ ಏರ್‌ಸ್ಟ್ರಿಪ್‌ನಲ್ಲಿ ಇಳಿಯಲು ಸಿಬ್ಬಂದಿ ಪರವಾನಿಗೆ ನೀಡಲಿಲ್ಲ. ಕಾರಣ ವಿಮಾನ ಬೆಂಗಳೂರಿಗೆ ಹಿಂದಿರುಗಿತು. ಜಿ. ಜನಾರ್ದನರೆಡ್ಡಿ ಸೋಮವಾರ ಬಳ್ಳಾರಿಯಲ್ಲೇ ಉಳಿಯಬೇಕಾಯಿತು ಎಂದು ಮೂಲಗಳು ದೃಢಪಡಿಸಿವೆ.

ಏನೇನು ಆಯ್ತು, ಎಷ್ಟೋತ್ತಿಗೆ? : ಸಚಿವರಾದ ಜಿ. ಜನಾರ್ದನರೆಡ್ಡಿ ನಿತ್ಯದ ಆಪ್ತರ ಬಳಗದ ಬಳ್ಳಾರಿ ಮತ್ತು ಹೊಸಪೇಟೆ ಸದಸ್ಯರುಗಳ ಕಚೇರಿ ಮತ್ತು ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆಯಿಂದಲೇ ಆದಾಯ ತೆರಿಗೆ ಅಧಿಕಾರಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದರು.

ಸೋಮವಾರ ನಸುಕಿನಲ್ಲಿ ಬಳ್ಳಾರಿಯ ಸ್ಟಾರ್ ಹೋಟಲ್‌ಗಳಲ್ಲಿ (ಪೋಲ ಪ್ಯಾರಡೈಸ್) ಕಾಣಿಸಿಕೊಂಡ ಐಟಿ ಅಧಿಕಾರಿಗಳ ತಂಡ 8 ಗಂಟೆ ಸುಮಾರಿಗೆ ಉದ್ದೇಶಿತ ವ್ಯಕ್ತಿಗಳ, ಸಂಸ್ಥೆಗಳ ಪ್ರದೇಶದ ನೀಲನಕ್ಷೆಗಳನ್ನು ಕೈಯಲ್ಲಿ ಹಿಡಿದುಕೊಂಡು ಒಂದು ಸುತ್ತು ಹಾಕಿ ಅವುಗಳ ಸುತ್ತಲೂ ಬಿಗಿ ಪಹರೆಯನ್ನು ಹಾಕಿದ್ದರು.

ಈ ಮಧ್ಯೆ ಬೆಂಗಳೂರು, ಹುಬ್ಬಳ್ಳಿ, ಇನ್ನಿತರೆ ಸ್ಥಳಗಳ ರಿಜಿಷ್ಟ್ರೇಷನ್ ನಂಬರ್ ಹೊಂದಿದ್ದ ಕಾರ್‌ಗಳು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿ - ಹೊಸಪೇಟೆಯಲ್ಲಿ ಏಕಾಏಕಿ ಪ್ರತ್ಯಕ್ಷವಾಗಿ ಅನೇಕರಲ್ಲಿ ಅಚ್ಚರಿ ಮೂಡಿಸಿದವು. ಈ ವಾಹನಗಳಲ್ಲಿ 300ಕ್ಕೂ ಹೆಚ್ಚಿನ ಸಿಬ್ಬಂದಿ ಹಾಗೂ ಕೇಂದ್ರ ಸರ್ಕಾರದ ಆರ್ಮ್ಡ್ (ಶಸ್ತ್ರಸಜ್ಜಿತ) ಭದ್ರತಾ ಸಿಬ್ಬಂದಿ ಉದ್ದೇಶಿತ ದಾಳಿಗಾಗಿ ನಿಯೋಜನೆಗೊಂಡು ಪ್ರಯಾಣಿಸಿದ್ದರು.

ಕೂಡ್ಲಿಗಿ ಶಾಸಕ ಮೊದಲ ಟಾರ್ಗೆಟ್ : ಅಧಿಕಾರಿಗಳ ತಂಡ ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಅವರ ನೆಹರೂ ಕಾಲೋನಿಯ ಮನೆಯನ್ನು ಪ್ರವೇಶಿಸಿ ದಾಳಿಯನ್ನು ಪ್ರಾರಂಭ ಮಾಡಿದರು. ನಂತರ ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಅವರ ಬಳ್ಳಾರಿಯ ಬಸವನಕುಂಟೆಯ ಮನೆಯ ಮೇಲೆ ದಾಳಿಯನ್ನು ಪ್ರಾರಂಭ ಮಾಡಿದರು.

ನಂತರ, ಸಚಿವ ಜಿ. ಜನಾರ್ದನರೆಡ್ಡಿಯ ಖಾಸಗಿ ಆಪ್ತಕಾರ್ಯದರ್ಶಿ ಅಲಿಖಾನ್‌ನ ಇನ್ನಾರೆಡ್ಡಿ ಕಾಲೊನಿಯ ಮನೆಯ ಸುತ್ತಲೂ ಬಿಗಿಪಹರೆಯನ್ನು ಏರ್ಪಡಿಸಿದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯ ತಂಡ, 9 ಗಂಟೆ ಸುಮಾರಿಗೆ ಒಳ ಪ್ರವೇಶಿಸಿ ದಾಳಿಯನ್ನು ಪ್ರಾರಂಭಿಸಿತು.

ಅಲಿಖಾನ್‌ನ ಮನೆಯ ಆಸುಪಾಸಿನ ಕಾರ್ ಶೆಡ್‌ಗಳಲ್ಲಿ ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಅವರ ಕಾರ್‌ಗಳು ಇದ್ದು, ಆ ಕಾರ್‌ಗಳನ್ನು ಕೂಡ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಈ ಕಾರ್‌ಗಳಲ್ಲಿ ಅವರ ಅದಿರು ಸಾಗಾಣಿಕೆಯ ಭಾರೀ ವ್ಯವಹಾರದ ದಾಖಲಾತಿಗಳು ಇವೆ ಎನ್ನುವ ಶಂಕೆ ಅಧಿಕಾರಿಗಳ ವಲಯದಲ್ಲಿದೆ.

ಟಾರ್ಗೆಟ್ ಓಎಂಸಿ: ಆದಾಯ ತೆರಿಗೆ ಅಧಿಕಾರಿಗಳ ತಂಡ ಸಚಿವ ಜಿ. ಜನಾರ್ದನರೆಡ್ಡಿ ಮತ್ತು ಅವರ ವ್ಯವಸ್ಥಾಪಕ ನಿರ್ದೇಶಕತ್ವದ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ ಕಚೇರಿ ಮತ್ತು ಮನೆಗಳ ಮೇಲೆ ಮಧ್ಯಾಹ್ನ 3 ಗಂಟೆಯವರೆಗೂ ಯಾವುದೇ ದಾಳಿ ನಡೆದಿರಲಿಲ್ಲ. ಕಬ್ಬಿಣದ ಅದಿರು ಸಾಗಿಸುವ ಏಜೆಂಟ್, ಖಾಸಗಿ ಹಣಕಾಸು ವ್ಯವಹಾರ ನಿರ್ವಹಿಸುವ, ಬಡ್ಡಿ ವ್ಯಾಪಾರಿ ಚೋರ್ ಬಾಬುಲಾಲ್ ಎನ್ನುವವರ ಮನೆ, ಕಚೇರಿ ಸೇರಿ ಇನ್ನಿತರೆ ಕೇಂದ್ರಗಳ ಮೇಲೆ ಕೂಡ ದಾಳಿ ನಡೆದಿದೆ.

ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್‌ನ ಬಳ್ಳಾರಿಯ ವಕೀಲ ಪಾಟೀಲ್ ಸಿದ್ಧಾರೆಡ್ಡಿ ಅವರ ಸುಕೃತ ನರ್ಸಿಂಗ್ ಹೋಂ ಪಕ್ಕದ ಮನೆಯ ಮುಂದೆ ಮಧ್ಯಾಹ್ನದ ವೇಳೆಗೆ ಭದ್ರತಾ ಸಿಬ್ಬಂದಿ ಜಮಾವಣೆಗೊಂಡಿತ್ತು. ಈ ಮನೆಯ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ನಡೆಯುವ ಸಾಧ್ಯತೆಗಳಿವೆ.

ಆಕ್ಸಿಸ್ ಬ್ಯಾಂಕ್‌ನ ಬಳ್ಳಾರಿಯ ಪಾರ್ವತಿನಗರ ಶಾಖೆ, ಹೊಸಪೇಟೆಯ ಶಾಖೆಗಳ ಮೇಲೆ ದಾಳಿ ನಡೆಸಿದ ತಂಡ, ಉದ್ದೇಶಿತ ವ್ಯಕ್ತಿ - ಸಂಸ್ಥೆಗಳ ವಿವಿಧ ಖಾತೆಗಳ ಮಾಹಿತಿ ಪಡೆದು ಅವುಗಳನ್ನು ಜಪ್ತಿ (ಸೀಜ್) ಮಾಡಿದ್ದಾರೆ.

ಹೊಸಪೇಟೆ: ಹೊಸಪೇಟೆಯ ವಿವಾದಿತ ಬೆಲಿಕೇರಿ ಬಂದರು ಅದಿರು ಕಳ್ಳತನ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಐಎಲ್‌ಸಿ ಕಂಪನಿಯ ಪಾಲುದಾರ ಸೋಮಶೇಖರ್, ಗೊಗ್ಗ ಬ್ರದರ್‍ಸ್‌ನ ಓರ್ವ ಪಾಲುದಾರ, ಆರ್‌ಪಿಸಿ ಮೈನ್ಸ್‌ನ ಹಿರಿಯ ಸಿಬ್ಬಂದಿ ಜಂಬಯ್ಯ ಅವರ ಮನೆ ಮೇಲೆ ದಾಳಿ ನಡೆಯಿತು.

ನಂತರ ಬೆಲಿಕೇರಿ ಬಂದರು ಅದಿರು ಕಳ್ಳತನ ಪ್ರಮುಖ ಆರೋಪಿಗಳಾದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಈ ಎಲ್ಲಾ ವ್ಯಕ್ತಿ - ಸಂಸ್ಥೆಗಳು ವ್ಯವಹಾರ ನಡೆಸಿದ ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ವಿಕಾಸ್ ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ ದಾಳಿ ನಡೆಸಿ ವಿವಿಧ ಖಾತೆಗಳ ಮಾಹಿತಿ ಪಡೆದು, ಕೆಲವನ್ನು ಜಪ್ತಿ ಮಾಡಿದ್ದಾರೆ. ಈ ದಾಳಿ 3 ದಿನಗಳ ಕಾಲ ನಡೆಯುವ ಮಾಹಿತಿ ಇದೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X