ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನಾ ಸಂಘಟನೆಗಳಿಂದ ರಾಜ್ಯದ ಎಲ್ಲೆಡೆ ಪ್ರತಿಭಟನೆ

By Prasad
|
Google Oneindia Kannada News

Narayana Gowda, Suresh Gowda and Agni Sridhar
ಬೆಂಗಳೂರು, ಅ. 23 : ಇಂದು ಪ್ರತಿಭಟನೆಗಳ ದಿನ. ಈ ಬಗೆಯ ಆಚರಣೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ಎಲ್ಲೂ ಆಚರಿಸದಿದ್ದರೂ ಕರ್ನಾಟಕದಲ್ಲಿ ಮಾತ್ರ ವಿವಿಧ ಸಂಘಟನೆಗಳು ಈ ದಿನವನ್ನು ಪ್ರತಿಭಟನೆಗೆ ಮೀಸಲಾಗಿಟ್ಟಿವೆ. ವಿವಿಧ ಸಂಘಟನೆಗಳು ನ್ಯಾಯಕ್ಕಾಗಿ ಸತ್ಯಾಗ್ರಹ ನಡೆಸುತ್ತಿವೆ.

ಆಪರೇಷನ್ ಕಮಲದ ವಿರುದ್ಧ ಕಾಂಗ್ರೆಸ್ ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಿದ್ದರೆ, ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಸುಟ್ಟಿದ್ದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಕರವೇಯಿಂದ ಪ್ರತಿಭಟನೆ ವ್ಯಕ್ತವಾಯಿತು. ಅನರ್ಹ ಶಾಸಕರ ಪ್ರಕರಣದಲ್ಲಿ ಸರಕಾರದ ಪರ ತೀರ್ಪು ನೀಡಿದ್ದಕ್ಕಾಗಿ ಪ್ರಗತಿಪರ ಸಂಘಟನೆಗಳು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದವು.

ಕರವೇಯಿಂದ ಡಿಜಿಪಿ ಕಚೇರಿ ಮುತ್ತಿಗೆ : ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ಕನ್ನಡ ಧ್ವಜ ಸುಟ್ಟ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರನ್ನು ಕೂಡಲೆ ಬಂಧಿಸಬೇಕೆಂದು ಒತ್ತಾಯಿಸಿ ಡಿಜಿಪಿ ಕಚೇರಿಗೆ ಮುತ್ತಿಗೆ ಹಾಕಿದರು. ಯಡಿಯೂರಪ್ಪ ಸರಕಾರಕ್ಕೆ ಕರ್ನಾಟಕದ ಬಗ್ಗೆ ಕಳಕಳಿಯೇನಾದರೂ ಇದ್ದರೆ ರಾಜಕೀಯ ದೊಂಬರಾಟವನ್ನು ನಿಲ್ಲಿಸಿ ಎಲ್ಲ ಎಂಇಎಸ್ ಮುಖಂಡರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಧ್ವಜಕ್ಕೆ ಎಂಇಎಸ್ ಬೆಂಕಿ ಹಚ್ಚಿ ಕನ್ನಡಿಗರ ಸ್ವಾಭಿಮಾನಕ್ಕೆ ಬೆಂಕಿ ಹಚ್ಚಿದೆ. ಇಂಥವರನ್ನು ಬಗ್ಗುಬಡಿಯಲೇಬೇಕು. ಸರಕಾರ ಇವರ ವಿರುದ್ಧ ಕೂಡಲೆ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನೆಲ, ಜಲ, ಭಾಷೆಯ ಉಳಿವಿಗಾಗಿ ಪುಂಡ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು.

ಬೆಳಗಾವಿಯಲ್ಲಾದ ಘಟನೆಯ ವಿರುದ್ಧ ಚಾಮರಾಜನಗರ, ಮಂಡ್ಯದಲ್ಲಿಯೂ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಎಂಇಎಸ್ ಧ್ವಜವನ್ನು ಸುಟ್ಟಹಾಕಿ, ಪುಂಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾ.ಖೇಹರ್ ವಿರುದ್ಧ ಕೂಗು : ಬೆಂಗಳೂರಿನ ಪ್ರಗತಿಪರ ಸಂಘಟನೆಗಳು ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜಗದೀಶ್ ಖೇಹರ್ ವಿರುದ್ಧ ಮತ್ತೆ ಸಿಡಿದೆದ್ದಿವೆ. ಅಗ್ನಿ ಶ್ರೀಧರ್, ಕೋಡಿಹಳ್ಳಿ ಚಂದ್ರಶೇಖರ್, ಇಂದೂಧರ ಹೊನ್ನಾವರ ಮುಂತಾದವರ ನೇತೃತ್ವದಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ನೂರಾರು ಚಳವಳಿಗಾರರು, ಖೇಹರ್ ಅವರು ಶಾಸಕರ ಅನರ್ಹತೆ ಕುರಿತ ಪ್ರಕರಣದಲ್ಲಿ ಸರಕಾರದ ಪಕ್ಷಪಾತಿಯಾಗಿ ತೀರ್ಪು ನೀಡಿದ್ದಾರೆ ಎಂದು ಆರೋಪಿಸಿದರು. ಖೇಹರ್ ಅವರು ಸಾರ್ವಜನಿಕವಾಗಿ ಯಡಿಯೂರಪ್ಪನವರಿಗೆ ಹಸ್ತಲಾಘವ ಮಾಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಅಗ್ನಿ ಶ್ರೀಧರ್ ಹೇಳಿದರು.

ಸುರೇಶ್ ಗೌಡ ಬಂಧನಕ್ಕೆ ಕಾಂಗ್ರೆಸ್ ಆಗ್ರಹ : ಗುಬ್ಬಿ ಶಾಸಕ ಶ್ರೀನಿವಾಸ್ ಗೆ ಹಣದ ಆಮಿಷ ಒಡ್ಡಿ ಬಿಜೆಪಿಗೆ ಸೆಳೆಯಲು ಯತ್ನಿಸಿದ ಸುರೇಶ್ ಗೌಡ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಸುರೇಶ್ ಗೌಡ ಅವರ ಮುಖವಾಡ ಮತ್ತು ಹಣದ ಗಂಟನ್ನು ಇಟ್ಟುಕೊಂಡು ಅಣಕು ಪ್ರದರ್ಶನ ಮಾಡಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X