ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಅರಾಜಕತೆಗೆ ಕೊನೆ ಎಂದು?

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

H Anandarama Shatri on TV talk shows
ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯವನ್ನು ಕಾಡುತ್ತಿರುವ ಅರಾಜಕತೆಯೆಂಬ ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರ ಏನು? ಇದು ಈ ರಾಜ್ಯದ ಆರು ಕೋಟಿ ಜನರ ಮನದಲ್ಲಿಂದು ಎದ್ದಿರುವ ದುಗುಡಭರಿತ ಪ್ರಶ್ನೆ.

ಅಲ್ಪಮತವನ್ನು ಬಹುಮತವಾಗಿ ಪರಿವರ್ತನೆ ಮಾಡಿಕೊಳ್ಳಲು ಚುನಾಯಿತ ಶಾಸಕರಿಂದ ರಾಜಿನಾಮೆ ಕೊಡಿಸಿ, ಮತ್ತೆ ಚುನಾವಣೆ ನಡೆಸಿ ಅವರನ್ನು ಗೆಲ್ಲಿಸಿ ತರುವುದಾಗಲೀ ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡಲು ವಿರೋಧ ಪಕ್ಷಗಳು ಯತ್ನಿಸುವುದಾಗಲೀ ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆಯೆಂಬುದು ಎಲ್ಲರಿಗೂ ಗೊತ್ತು. ಆದರೆ, ಸಂವಿಧಾನ, ಕಾನೂನುಗಳನ್ನು ಹೇಗೇ ತಿದ್ದಿ ತೀಡಿದರೂ ಅವುಗಳ ಆಶಯಕ್ಕೆ ವ್ಯತಿರಿಕ್ತವಾಗಿ ಸಾಗಿ ದಕ್ಕಿಸಿಕೊಳ್ಳುವ ಜಾಣ್ಮೆ ನಮ್ಮ ರಾಜಕೀಯ ನೇತಾರರಿಗಿದೆ. ಇದೇ ಜಾಣ್ಮೆಯನ್ನವರು ರಾಜ್ಯಾಡಳಿತದಲ್ಲಿ ತೋರಿದ್ದರೆ ರಾಜ್ಯದ ಮತ್ತು ಆ ನೇತಾರರ ಭವಿಷ್ಯ ಎರಡೂ ಹಸನಾಗುತ್ತಿದ್ದವು. ಅಷ್ಟು ವಿಶ್ವಾಸ ಮತ್ತು ತಾಳ್ಮೆ ನಮ್ಮ ನೇತಾರರಿಗಿಲ್ಲ. ಅವರ ಅತೀವ ದುಃಸ್ವಾರ್ಥ ಇದಕ್ಕೆ ಕಾರಣ.

ಹೀಗಿರುವಾಗ, ನಿಸ್ಪೃಹರನ್ನು, ಕನಿಷ್ಠಪಕ್ಷ ದುಃಸ್ವಾರ್ಥಿಗಳಲ್ಲದವರನ್ನು ಶಾಸನಸಭೆಗೆ ಆರಿಸಿ ಕಳಿಸುವುದೊಂದೇ ಇಂದಿನಂತಹ ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರ. ಹಣಬಲದಿಂದ ಚುನಾವಣೆಗಳನ್ನು ಗೆಲ್ಲುವ ಇಂದಿನ ದಿನಗಳಲ್ಲಿ ನಿಸ್ಪೃಹರ ಆಯ್ಕೆ ಅಸಾಧ್ಯವೆಂದು ಮೇಲ್ನೋಟಕ್ಕೆ ಕಂಡುಬಂದರೂ ಮತದಾರರಾದ ನಮ್ಮಲ್ಲಿ ತಕ್ಕ ಎಚ್ಚರ ಮೂಡಿದರೆ ಯೋಗ್ಯರ ಆಯ್ಕೆ ಅಸಾಧ್ಯವೇನಲ್ಲ.

ಮತದಾರರಾದ ನಾವು, ಮುಖ್ಯವಾಗಿ ವಿದ್ಯಾವಂತರು ಮತದಾನವನ್ನು ತಪ್ಪದೇ ಮಾಡಬೇಕು. ಆಗ ಕೆಲವಾದರೂ ಕ್ಷೇತ್ರಗಳಲ್ಲಿ ಅಯೋಗ್ಯರಿಗೆ ಹಿನ್ನಡೆಯಾಗುವುದು ನಿಶ್ಚಿತ. ಈ ಇತ್ಯಾತ್ಮಕ ಬೆಳವಣಿಗೆಯನ್ನು ಗಮನಿಸುವ ರಾಜಕೀಯ ಪಕ್ಷಗಳು ಕ್ರಮೇಣ ಯೋಗ್ಯ ಅಭ್ಯರ್ಥಿಗಳೆಡೆಗೆ ವಾಲುವುದು ಅನಿವಾರ್ಯವಾಗುತ್ತದೆ. ಪಕ್ಷೇತರನೇ ಯೋಗ್ಯನೆಂದಾದಲ್ಲಿ ಅವನನ್ನೇ ಗೆಲ್ಲಿಸುವ ಇಚ್ಛಾಶಕ್ತಿಯನ್ನು ಮತದಾರರು ಬೆಳೆಸಿಕೊಂಡಲ್ಲಿ ಇದು ಕ್ರಮೇಣ ರಾಜಕೀಯ ಪಕ್ಷಗಳ ಶುದ್ಧೀಕರಣಕ್ಕೆ ಬಲವಾದ ಪ್ರೇರಣೆಯಾದೀತು.

ವಿದ್ಯಾವಂತರಾದ ನಾವು ಬರಿದೆ ಮಾತಾಡುತ್ತೇವೆ. ಮತಗಟ್ಟೆಗೆ ಹೋಗಿ ಮತದಾನ ಮಾಡುವುದಿಲ್ಲ. ಬೆಂಗಳೂರಿನ ಅತಿ ಶ್ರೀಮಂತ ಮತ್ತು ವಿದ್ಯಾವಂತ ಮತದಾರರ ಏರಿಯಾದಲ್ಲಿ ಅತಿ ಕಡಿಮೆ ಪ್ರಮಾಣದ ಮತದಾನ ಆಗುತ್ತಿರುವುದು ಇದಕ್ಕೆ ಸಾಕ್ಷಿ. ಅಮಾಯಕ ಮತದಾರರ ಬಡತನ, ದೂರದೃಷ್ಟಿಯ ಕೊರತೆ, ಚಟಗಳು ಇವುಗಳನ್ನು ದುರುಪಯೋಗ ಪಡಿಸಿಕೊಂಡು ದುಡ್ಡು ಚೆಲ್ಲಿ ಚುನಾವಣೆ ಗೆಲ್ಲುವವರೇ ರಾಜಕೀಯ ಸಮಸ್ಯೆಗಳಿಗೆ ಕಾರಣರು. ಇಂತಹವರನ್ನು ಸೋಲಿಸಬೇಕೆಂದರೆ, ಬಡತನವೆಂಬ ಅಸಹಾಯಕತೆ ಆವರಿಸಿರದ, ದೂರದೃಷ್ಟಿಯುಳ್ಳ ಮತ್ತು ಚಟಗಳಿಗಾಗಿ ಧನಾಪೇಕ್ಷೆಯ ಅಗತ್ಯ ಹೊಂದಿರದ ಬಲ್ಲಿದ ವಿದ್ಯಾವಂತರೆಲ್ಲ ಮತಗಟ್ಟೆಗೆ ಹೋಗಿ ಮತ ಹಾಕಬೇಕು. ಇದಕ್ಕಾಗಿ ಮತದಾನವನ್ನು ಕಡ್ಡಾಯಗೊಳಿಸುವುದು ಅವಶ್ಯವೆಂದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ.

ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಇನ್ನೊಂದು ಕೆಲಸವೂ ಆಗಬೇಕು. ಅದೆಂದರೆ, ಎಳೆಯರಲ್ಲಿ ನೈತಿಕ ಮೌಲ್ಯಗಳನ್ನು ಸ್ಥಾಪಿಸುವ ಕೆಲಸ. ಪೋಷಕರು, ಶಿಕ್ಷಕರು ಮಾತ್ರವಲ್ಲ, ಇತರರೂ ಈ ಕೆಲಸ ಮಾಡಬಹುದು. ಲೋಕಾಯುಕ್ತ ಸಂತೋಷ ಹೆಗ್ಡೆಯವರು ಇದಕ್ಕೆ ಉದಾಹರಣೆ. ಶಿಕ್ಷಕನಲ್ಲದ ನಾನು ಶಾಲೆ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ನೈತಿಕತೆಯ ಅಗತ್ಯದ ಅರಿವುಂಟುಮಾಡುವ ಕಾರ್ಯವನ್ನು ವರ್ಷಗಳಿಂದ ಕೈಗೊಂಡಿದ್ದು ನನ್ನ ಪ್ರಯತ್ನಗಳು ಆಶಾದಾಯಕ ಫಲಿತಾಂಶವನ್ನು ನೀಡುತ್ತಿವೆ. ಇಂದಿನ ಎಳೆಯರಲ್ಲಿ ನೈತಿಕತೆಯ ಪ್ರಜ್ಞೆ ಮೂಡಿದರೆ ರಾಜಕೀಯ ರಂಗವೂ ಸೇರಿದಂತೆ ನಾಳೆಯ ಸಮಾಜ ಪರಿಶುದ್ಧ ಸಮಾಜವಾಗುವುದು ನಿಶ್ಚಿತ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X