ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೈ'ಸುಟ್ಟುಕೊಂಡ ಸಿದ್ದರಾಮಯ್ಯ, ಕುಮಾರಸ್ವಾಮಿ?

By * ಮೃತ್ಯುಂಜಯ ಕಲ್ಮಠ
|
Google Oneindia Kannada News

HD Kumaraswamy-Siddaramaiah
ಕಳೆದ ಹದಿನೈದು ದಿನಗಳಿಂದ ನಡೆದ ರಾಜಕೀಯ ದೊಂಬರಾಟ, ಡೆಮಾಕ್ರಸಿಯನ್ನೇ ಹೈಜಾಕ್ ಮಾಡುವ ತಂತ್ರಗಾರಿಕೆ, ಅಧಿಕಾರಕ್ಕಾಗಿ ಏನನ್ನಾದರೂ ಮಾಡಲು ಹೇಸದ ಜನಪ್ರತಿನಿಧಿಗಳು. ಶಾಸಕರ ಖರೀದಿ, ಮಂತ್ರಿಗಿರಿಗಾಗಿ ನಡೆದ ಬ್ಲ್ಯಾಕ್ ಮೇಲ್ ಕುತಂತ್ರಗಳು, ಜನಾದೇಶದ ಮೂಲಕ ಅಧಿಕಾರದಲ್ಲಿರುವ ಸರಕಾರವನ್ನು ಉರುಳಿಸುವ ಭಂಡ ಧೈರ್ಯ. ಕೀಳು ಮಟ್ಟದ ಆರೋಪ ಪ್ರತ್ಯಾರೋಪಗಳು, ಕುಸ್ತಿಯ ಅಖಾಡವಾದ ವಿಧಾನಸಭೆ, ಸರಕಾರದ ವಿರುದ್ಧ ತೊಡೆತಟ್ಟಿದ ಮಾಜಿ ಸಚಿವನೊಬ್ಬ ಅಂಗಿ ಹರಿದುಕೊಂಡು ಲಬೋಲಬೋ ಎಂದು ಬೊಬ್ಬಿಡುವ ಮೂಲಕ ಪ್ರಜಾಪ್ರಭುತ್ವವನ್ನು ಅಣಕಿಸುವಂತ ಘಟನೆಗಳು ನಡೆದು ಹೋದವು.(ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಿನ್ನ ನಿಲುವು ತಳೆದಿದೆ)

ಕಳ್ಳ ಸರಕಾರವೋ, ಸುಳ್ಳು-ಸರಕಾರವೋ ಸಂವಿಧಾನ ಬದ್ಧವಾಗಿ ಜನಾದೇಶದ ಮೂಲಕ ಆಯ್ಕೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸರಕಾರವನ್ನು ಪತನಗೊಳಿಸಲು ಹೊಂಚುಹಾಕಿದ ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಕೆಲಸ ಎಷ್ಟರ ಮಟ್ಟಿಗೆ ಸರಿ ? ಒಬ್ಬರು ಮಾಜಿ ಮುಖ್ಯಮಂತ್ರಿ, ಇನ್ನೊಬ್ಬರು ಮುಖ್ಯಮಂತ್ರಿಯಾಗಲು ಶೂಟ್ ಬೂಟು ರೆಡಿ ಮಾಡಿಟ್ಟುಕೊಂಡವರು?

ಬಿಜೆಪಿ ಸರಕಾರವನ್ನು ಕಿತ್ತೊಗೆದ ನಂತರ ಸಿದ್ದರಾಮಯ್ಯ ಸಿಎಂ ಆಗಲಿ, ಎಚ್ ಡಿ ರೇವಣ್ಣ ಉಪಮುಖ್ಯಮಂತ್ರಿಯನ್ನಾಗಿ ಮಾಡಿ. ಕುಮಾರಸ್ವಾಮಿಯನ್ನು ಕೇಂದ್ರದಲ್ಲಿ ಕ್ಯಾಬಿನೆಟ್ ಮಿನಿಸ್ಟ್ರು ಮಾಡಿ. ಎಲ್ಲರೂ ಸೇರಿ ಬಿಜೆಪಿಯನ್ನು ಧೂಳಿಪಟ ಮಾಡಿಬಿಡೋಣ. ಯಡಿಯೂರಪ್ಪ, ರೆಡ್ಡಿಗಳನ್ನು ರಾಜಕೀಯವಾಗಿ ಮುಗಿಸಿಬಿಡೋಣ ಎಂದು ನಿರ್ಧರಿಸುವುದು ಪ್ರಜಾಪ್ರಭುತ್ವವನ್ನು ಹಾಡುಹಗಲೆ ಕಗ್ಗೊಲೆ ಮಾಡುವಂತ ಕೃತ್ಯವಲ್ಲವೇ? ಸರಕಾರ ಉರುಳಿದ ನಂತರ ಉಳಿದ ಅವಧಿಯನ್ನು ಇಬ್ಬರು ಹಂಚಿಕೊಳ್ಳೋಣ ಎಂದು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದು ಎಷ್ಟರ ಮಟ್ಟಿಗೆ ಸರಿ? ಜನ ನಿಮ್ಮ ಬಗ್ಗೆ ಏನಂದುಕೊಂಡಾರು ಎಂಬ ಪ್ರಜ್ಞೆಯೂ ಇಲ್ಲದೇ ಸರಕಾರದ ಪತನಕ್ಕೆ ಕೈಹಾಕಿದ್ದು ಖಂಡನೀಯವಲ್ಲವೇ.

ಇವರನ್ನೇ ನಂಬಿ ಕೈಯಲ್ಲಿದ್ದ ಸಚಿವಗಿರಿ ಮತ್ತು ಶಾಸಕ ಸ್ಥಾನವನ್ನು ಮರೆತು ಸರಕಾರದ ವಿರುದ್ಧ ಬಂಡೆದಿದ್ದ ಬಿಜೆಪಿ ಅತೃಪ್ತರು ಹಾಗೂ ಪಕ್ಷೇತರ ಸಚಿವರ ಸ್ಥಿತಿ ಅತಂತ್ರವಾಗಿದೆ. ಪರ್ಯಾಯ ಸರಕಾರ ರಚನೆ ಮಾಡಿಯೇ ತೀರುತ್ತೇವೆ ಎಂದು ಬ್ರಹ್ಮಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದ ಈ ಇಬ್ಬರು ನಾಯಕರಿಗೆ ತೀವ್ರ ಮುಖಭಂಗವಾಗಿದೆ? ಕುಮಾರಸ್ವಾಮಿಗೆ ದೇವೇಗೌಡರ ಆಶೀರ್ವಾದವಿತ್ತಾದರೂ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಾಥ್ ನೀಡಲಿಲ್ಲ. ರಾಷ್ಟ್ರಪತಿ ಆಳ್ವಿಕೆಗೆ ಶಿಪಾರಸ್ಸು ಮಾಡಿದ್ದ ರಾಜ್ಯಪಾಲರ ಕ್ರಮಕ್ಕೆ ಕೇಂದ್ರ ಸರಕಾರ ಮತ್ತು ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದರು. ಜನಾದೇಶದ ಸರಕಾರವನ್ನು ಕೆಡವಿದ ಕಳಂಕ ಬೇಡ ಎಂದು ತೀರ್ಮಾನಿಸಿ ರಾಜ್ಯ ಕೈಪಡೆಯ ದುರಾಸೆಯನ್ನು ಭಗ್ನಗೊಳಿಸಿದರು.

ಅದು ಹೋಗಲಿ, ಬಿಜೆಪಿ ಸರಕಾರವನ್ನು ಕೆಡವಿ ಹಾಕಿದ ನಂತರ ನಿಮಗೆ ಮಂತ್ರಿ ಪದವಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿ ಕರೆತಂದಿದ್ದ ಬಿಜೆಪಿ ಅತೃಪ್ತ ಶಾಸಕರು ಮತ್ತು ಪಕ್ಷೇತರರ ಶಾಸಕರ ಗತಿ ಏನು? ಮಂತ್ರಿ ಪದವಿಯೂ ಹೋಯ್ತು, ಶಾಸಕ ಸ್ಥಾನವನ್ನು ಕಳೆದುಕೊಂಡು ಬೀದಿಗೆ ಬಂದು ಅಂಗಿ ಹರಿದುಕೊಳ್ಳುವಂತಾಗಿದ್ದು ಯಾರಿಂದ? ಬಂಡಾಯದ ಬೆಂಕಿಗೆ ತುಪ್ಪ ಸುರಿದು ಸ್ಫೋಟಗೊಳಿಸಿದ್ದು ಯಾವ ಪುರುಷಾರ್ಥಕ್ಕೆ? ಯಡಿಯೂರಪ್ಪ ಭ್ರಷ್ಟ, ಸ್ವಜನಪಕ್ಷಪಾತಿ, ಮಹಾನ್ ಜಾತಿವಾದಿ, ಭೂದಾಹಿ. ಸರಿ ನೀವು ಮಾಡುವ ಎಲ್ಲ ಆರೋಪಗಳು ನೂರಕ್ಕೆ ನೂರು ಸರಿ. ಆದರೆ, ನೀವು ಸರಕಾರ ಬೀಳಿಸುವಂತ ಕೆಲಸ ಮಾಡಿದ್ದು ಸರಿ ಅಂತ ಹೇಳಿದ್ದು ಯಾರು? ರಾಜ್ಯದ 6 ಕೋಟಿ ಮತದಾರರ ನಿಮ್ಮನ್ನು ಅಧಿಕಾರದಿಂದ ದೂರ ಇಟ್ಟಿದ್ದಾರೆ. ಹೀಗಿದ್ದಾಗಲೂ ನಾಚಿಕೆಬಿಟ್ಟು ಅಧಿಕಾರ ಕಬಳಿಸಲು ಯತ್ನಿಸಿದ್ದು ಜನತೆಗೆ ತಿಳಿದಿಲ್ಲವೇ?

ಮಕ್ಕಳು ತಪ್ಪು ಮಾಡಿದಾಗ, ದಾರಿ ತಪ್ಪಿದಾಗ ತಂದೆಯಾದವನ ಕೆಲಸ ಏನು? ಕರೆದು ಎರಡು ಬುದ್ಧಿಮಾತು ಹೇಳಬೇಕು ಎನ್ನುವ ಮಾತು ಎಲ್ಲರ ಬಾಯಿಂದಲೂ ಬರುತ್ತದೆ. ಆದರೆ, ಜನಾದೇಶದ ಸರಕಾರವನ್ನು ಸಂವಿಧಾನ ವಿರೋಧಿಯಾಗಿ ಪತನಗೊಳಿಸಿ ಅಕ್ರಮವಾಗಿ ಅಧಿಕಾರ ಹಿಡಿಯಲು ಮಕ್ಕಳು ಮುಂದಾದಾಗ, ಜನರ ಭಾವನೆಗೆ ವಿರುದ್ಧವಾಗಿ, ಸರಕಾರದೊಂದಿಗೆ ಚೆಲ್ಲಾಟವಾಡಿದ ಮಕ್ಕಳಿಗೆ ಮಾಜಿ ಪ್ರಧಾನಿ ದೇವೇಗೌಡರು ಏಕೆ ಕರೆದು ಬುದ್ಧಿ ಮಾತು ಹೇಳಲಿಲ್ಲ ? ಬಿಜೆಪಿ ಪಕ್ಷ ಅಧಿಕಾರದಲ್ಲಿ ಇರಬಾರದು ಎನ್ನುವುದು ಗೌಡರ ಅಭಿಲಾಷೆಯಾದರೂ, ಸಂವಿಧಾನದ ಪ್ರಕಾರ ನಡೆದುಕೊಳ್ಳುವುದು ಎಲ್ಲರ ಕರ್ತವ್ಯ. ಆದರೆ, ಯಾರದೂ ಮನೆಯ ಪಡಸಾಲೆಯಲ್ಲಿ ಸರಕಾರದ ಹಣೆಬರಹ ಬರೆಯುವುದಾದರೆ ಸಂವಿಧಾನಕ್ಕೆ ನಾವೆಷ್ಟು ಬೆಲೆ ನೀಡುತ್ತಿದ್ದೇವೆ?

2006ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಕೆಡವಿದ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿ 20/20 ಸರಕಾರ ರಚಿಸಿ ಮುಖ್ಯಮಂತ್ರಿಯಾದದ್ದು. ಸೆಕ್ಯುಲರ್ ಪಕ್ಷವಾದ ಜೆಡಿಎಸ್ ನಾನ್ ಸೆಕ್ಯುಲರ್ ಪಕ್ಷ, ಪಕ್ಕಾ ಕಮ್ಯುನಲ್ ಬೆಸ್ಡ್ ಪಕ್ಷದೊಂದಿಗೆ ಸಂಬಂಧ ಕುದುರಿಸಿಕೊಂಡು ಹಿಂಬಾಗಿಲಿನಿಂದ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದದ್ದು. ಜಾತ್ಯಾತೀತ ರಾಜಕಾರಣಿ ಎಂದು ಹಣೆಗೆ ಪಟ್ಟಿ ಹಚ್ಚಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು ಕಮ್ಯುನಲ್ ಪಕ್ಷದೊಂದಿಗೆ ಕೈಜೋಡಿಸಿದ ಮಗನ ಕ್ರಮವನ್ನು ಬೆಂಬಲಿಸಿ ಆಶೀರ್ವದಿಸಿದ್ದು ಯಾರಾದರೂ ಮರೆಯಲು ಸಾಧ್ಯವೇ ? ಇತ್ತೀಚೆಗಿನ ರಾಜ್ಯದ ರಾಜಕೀಯ ವಿದ್ಯಮಾನದಲ್ಲೂ ಗೌಡರು ಮಕ್ಕಳಿಗೆ ಬಿಜೆಪಿ ಸರಕಾರವನ್ನು ಬೀಳಿಸಿ ಎಂದು ಚಿವುಟಿದರೆ?

ಸರಕಾರ ಬೀಳಿಸಲು ವ್ಯರ್ಥ ಪ್ರಯತ್ನ ಮಾಡಿದ ನಾಯಕರು ಅತ್ಮಾವಲೋಕನ ಮಾಡಿಕೊಳ್ಳುವುದು ಒಳಿತು. ಒಂದು ಪಕ್ಷ 73 ಶಾಸಕರನ್ನು ಹೊಂದಿದ್ದರೆ, ಇನ್ನೊಂದು ಪಕ್ಷದಲ್ಲಿರುವ ಶಾಸಕರ ಸಂಖ್ಯೆ ಕೇವಲ 27. ಜೆಡಿಎಸ್ ಶಾಸಕ ಸಂಖ್ಯೆ ಕಡಿಮೆಯಾದರೂ ಸರಕಾರ ಪತನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಕುಮಾರಸ್ವಾಮಿ ಅವರು. ಮೊದಲು ಸರಕಾರವನ್ನು ಮಕಾಡೆ ಮಲಗಿಸಬೇಕು ಎಂದು ಹೂಡಿದ್ದ ಅವರ ಎಲ್ಲ ತಂತ್ರವನ್ನು ಯಡಿಯೂರಪ್ಪ, ರೆಡ್ಡಿಗಳು ಹುಸಿಗೊಳಿಸಿದರು. ಸರಕಾರದ ವಿರುದ್ಧ ಬಂಡೆದಿದ್ದ ಸಚಿವರು, ಶಾಸಕರಿಗೆ ಮುಟ್ಟಿನೋಡಿಕೊಳ್ಳುವಂತಾಗಿದ್ದು ಸುಳ್ಳಲ್ಲ.

ಕೊನೆಯದಾಗ ಯಡಿಯೂರಪ್ಪ ಅವರ ಬಗ್ಗೆ ಹೇಳುವುದಾದರೆ, ಕೆಐಎಡಿಬಿ ಹಗರಣದಲ್ಲಿ ಭಾಗಿಯಾಗಿರುವ ಕಟ್ಟಾ ಸುಬ್ರಮಣ್ಯ ನಾಯ್ಡು, ಮುರುಗೇಶ ನಿರಾಣಿ ಅವರನ್ನು ಸಂಪುಟದಿಂದ ವಜಾಗೊಳಿಸಿ? ಬಿಬಿಎಂಪಿ ಸದಸ್ಯ ಹಾಗೂ ಸಚಿವ ಕಟ್ಟಾ ಅವರ ಮಗ ಜಗದೀಶ ಅವರ ಬಿಬಿಎಂಪಿ ಸದಸ್ಯತ್ವದಿಂದ ಅಮಾನತು ಮಾಡಿ? ಬಂಡಾಯಕ್ಕೆ ತುಪ್ಪ ಸುರಿದ ರೇಣುಕಾಚಾರ್ಯನನ್ನು ಕಿತ್ತು ಬಿಸಾಡಿ? ಮುಖ್ಯವಾಗಿ ಭೂ-ಹಗರಣ ಆರೋಪದಿಂದ ಮುಖ್ಯಮಂತ್ರಿಗಳು ಹೊರಬರಲಿ? ಆಪರೇಷನ್ ಕಮಲ ಕೈಬಿಟ್ಟು, ಇನ್ನಾದರೂ ರಾಜ್ಯದ ಅಭಿವೃದ್ಧಿ ಕಡೆಗೆ ಮುಖ್ಯವಾಗಿ ಸಂತ್ರಸ್ಥರ ಕಡೆಗೆ ಸರಕಾರ ಗಮನ ಹರಿಸಲಿ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X