• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ವಧರ್ಮೀಯರ ಅರಕಲಗೂಡು ನವರಾತ್ರಿ

By * ಅರಕಲಗೂಡು ಜಯಕುಮಾರ್
|

ಅರೆಮಲೆನಾಡು ಅರಕಲಗೂಡು ಸುಮಾರು 800 ವರ್ಷಗಳಷ್ಟು ಹಳೆಯ ಐತಿಹ್ಯವನ್ನು ಹೊಂದಿದ ಸ್ಥಳ. ತ್ರೇತಾಯುಗದಲ್ಲಿ ಗೌತಮ ಮಹಾಋಷಿಗಳು ಇಲ್ಲಿ ತಪಸ್ಸು ಮಾಡಿದರೆಂದು ಪ್ರತೀತಿ. ಅದೇ ಸಂದರ್ಭದಲ್ಲಿ ಗೌತಮ ಋಷಿ ಅರ್ಕೇಶ್ವರನನ್ನು ಇಲ್ಲಿ ಪ್ರತಿಷ್ಠಾಪಿಸಿದ್ದರಿಂದ ಅರ್ಕಪುರಿ ಎಂದು ಕರೆಸಿಕೊಳ್ಳುತ್ತಿದ್ದ ಊರು ಕಾಲಾಂತರದಲ್ಲಿ ಅರಕಲಗೂಡು ಎಂದಾಗಿದೆ.

ಶತಮಾನಗಳ ಹಿಂದೆ ಕೆರೋಡಿಯನ್ನು ಕೇಂದ್ರಸ್ಥಾನವಾಗಿ ಹೊಂದಿದ ಪಾಳೇಗಾರ ಶಿವಪ್ಪನಾಯಕನ ಆಳ್ವಿಕೆಗೆ ಒಳಪಟ್ಟಿದ್ದ ಅರಕಲಗೂಡು ಅಭಿವೃದ್ದಿಯೇ ಕಾಣದ ಒಂದು ಸಣ್ಣ ಪುರ. ಆಗೆಲ್ಲ ಅರಕಲಗೂಡು ತಾಲೂಕು ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಸಾಂಕೇತಿಕವಾಗಿ ಬನ್ನಿ ವೃಕ್ಷ ಕಡಿಯುವ ಮೂಲಕ ದಸರೆಯನ್ನು ಆಚರಿಸಲಾಗುತ್ತಿತ್ತು. ಅದರ ಕುರುಹಾಗಿ ಈಗಲೂ ಪಟ್ಟಣದ ಪೂರ್ವಕ್ಕೆ ಇರುವ ವಿಜಯದಶಮಿ ಮಂಟಪ ಸಾಕ್ಷಿಭೂತವಾಗಿದೆ.

ಆದರೆ ಉತ್ಸವದ ರೀತಿ ಆಚರಿಸಿದ ಮಾಹಿತಿ ಸಧ್ಯ ಲಭ್ಯವಿಲ್ಲ. ನಂತರದ ದಿನಗಳಲ್ಲೂ ಸಣ್ಣ ಪ್ರಮಾಣದಲ್ಲಿ ದಸರೆ ನಡೆಯುತ್ತಿತ್ತಾದರೂ ಬರಬರುತ್ತಾ ದಸರೆ ಸಂಚಾಲನ ಸಮಿತಿಯೊಳಗಿನ ವೈಮನಸ್ಯ ಕಿತ್ತಾಟಗಳು ದಸರೆ ಉತ್ಸವಕ್ಕೆ ಅಡ್ಡಿಯಾಗಿದ್ದವು. 90 ರ ದಶಕದ ಮದ್ಯದಲ್ಲಿ ಪಟ್ಟಣದ ಪ್ರತಿಷ್ಠಿತರೆನಿಸಿದ ನಾಗೇಂದ್ರ ಶ್ರೇಷ್ಠಿ ಹಾಗೂ ಶಶಿಕುಮಾರ್, ವರದಸೇವಾ ಪ್ರತಿಷ್ಠಾನದ ಶ್ರೀನಿವಾಸ್ ಮತ್ತಿತರ ಮುಖಂಡರುಗಳು ಸೇರಿ ದಸರೆ ಉತ್ಸವಕ್ಕೆ ಮರುಚಾಲನೆ ನೀಡಲು ನಿರ್ಧರಿಸಿದರು.

ಈ ಬಗ್ಗೆ ಚರ್ಚಿಸಿ ಪಟ್ಟಣದಲ್ಲಿರುವ ಪಂಚ ಮಠಾಧಿಪತಿಗಳು ಮತ್ತು ವಿವಿಧ ಧರ್ಮದ ಮುಖಂಡರು ಒಂದಾಗಿ ದಸರ ಉತ್ಸವ ರೂಪುಗೊಳ್ಳಲು ಶ್ರಮಿಸಿದ್ದರ ಫಲವೇ ಇಂದಿನ ದಸರೆ. ಒಂದು ಸಾಂಸ್ಕೃತಿಕ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಗೊಂಡ ಅರಕಲಗೂಡು ದಸರ ವಿಶೇಷವೆಂದರೆ ಸರ್ವಧರ್ಮದವರು ಅಂದರೆ 18 ಕೋಮಿನ ಜನರನ್ನು ಸಂಘಟಿಸುವುದೇ ಆಗಿದೆ.

ದಸರಾ ಸಂಸ್ಕೃತಿಗೆ ಹೊಸ ಅರ್ಥ : ಈ ಕೈಕಂರ್ಯದಲ್ಲಿ ಎಲ್ಲರನ್ನೂ ಒಂದೇ ವೇದಿಕೆಗೆ ತರುವ ಪ್ರಯತ್ನದಲ್ಲಿ ಮಠಾಧೀಶರುಗಳು ಮತ್ತು ಧರ್ಮ ಗುರುಗಳು ತಾಲೂಕಿನಾಧ್ಯಂತ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸಿದ್ದರು. ಅದೇ ಸಂಪ್ರದಾಯ ಇವತ್ತಿಗೂ ಮುಂದುವರೆದಿದೆ. ಆದರೆ ಈಗ ಪಾದಯಾತ್ರೆಗೆ ಬದಲಾಗಿ ನವರಾತ್ರಿಗೆ ಮುನ್ನ ಪ್ರತೀ ಹೋಬಳಿ ಕೇಂದ್ರಗಳಿಗೂ ತೆರಳಿ ಧಾರ್ಮಿಕ ಪ್ರವಚನ ನೀಡಿ ವಿಜಯದಶಮಿಯಂದು ಕೇಂದ್ರ ಸ್ಥಾನದಲ್ಲಿ ಸೇರುವಂತೆ ಮನವಿ ಮಾಡುತ್ತಾರೆ. ಆ ಮೂಲಕ ದಸರಾ ಉತ್ಸವಕ್ಕೆ ಸಾಮಾಜಿಕ ರೂಪವೂ ಸಿಗುತ್ತದೆ. ಹೀಗೆ ಅರಕಲಗೂಡು ದಸರಾ ಸಂಸ್ಕೃತಿಗೆ ಹೊಸ ಅರ್ಥವೇ ಸಿಕ್ಕಿದೆ.

ಇನ್ನು ವಿಜಯದಶಮಿಯಂದು ಮದ್ಯಾಹ್ನ ೪ಗಂಟೆ ಸುಮಾರಿಗೆ ಗ್ರಾಮದೇವತೆ ದೊಡ್ಡಮ್ಮ ದೇವತೆಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಮುಗಿಯುವ ವೇಳೆಗೆ ವಿವಿಧ ಕೋಮಿನ ಜನರು ಆರಾಧಿಸುವ ದೇವಾನು ದೇವತೆಗಳನ್ನು ಸಿಂಗರಿಸಿ ಪ್ರತ್ಯೇಕ ವಾಹನಗಳಲ್ಲಿ ತಂದು ಸಾಲಾಗಿ ನಿಲ್ಲಿಸಲಾಗುತ್ತದೆ. ಕೋಟೆ ನರಸಿಂಹ ಸ್ವಾಮಿ ದೇಗುಲದಿಂದ ಆರಂಭವಾಗುವ ಮೆರವಣಿಗೆಗೆ ಸಂಘ ಸಂಸ್ಥೆಗಳು ತಾವು ಉತ್ಸವಕ್ಕಾಗಿಯೇ ಸಿದ್ದಪಡಿಸಿದ ಸ್ಥಬ್ದಚಿತ್ರಗಳನ್ನು ತರುತ್ತಾರೆ. ಉತ್ಸವದ ಅಂಗವಾಗಿ ನಾಡಿನ ವಿವಿಧ ಬಾಗಗಳಿಂದ ಆಗಮಿಸುವ ಕಲಾತಂಡಗಳಾ ಸೋಮನ ಕುಣಿತ, ಚಿಟ್ಟಿಮೇಳ, ಜಾನಪದ ಮೇಳ, ಕೀಲು ಕುದುರೆ, ಗೊಂಬೆ ಮೇಳ ಹಾಗೂ ಸಂಚಾರಿ ರಸಮಂಜರಿ ತಂಡ ಹೀಗೆ ಇನ್ನೂ ಹಲವು ಆಕರ್ಷಣೆಗಳು ದಸರಾ ಮೆರವಣಿಗೆಗೆ ಕಳೆ ನೀಡುತ್ತವೆ.

ಕತ್ತಲಾಗುವ ವೇಳೆಗೆ ರಂಗಾಗುವ ಉತ್ಸವದ ಮೆರವಣಿಗೆಯ ಮುಂಭಾಗ ವಾದ್ಯ ಗೋಷ್ಠಿ ಇರುತ್ತದೆ. ಇವೆಲ್ಲಾ ಬಂದು ಸೇರುವ ಹೊತ್ತಿಗೆ ಸಾವಿರಾರು ಸಂಖ್ಯೆಯ ಜನರು ಸೇರಿರುತ್ತಾರೆ. ಹೂವು ಹಾಗೂ ವಿದ್ಯುದ್ದೀಪಗಳಿಂದ, ತಳಿರು-ತೋರಣಗಳಿಂದ ಊರಿನ ಪ್ರಮುಖ ಬೀದಿಗಳು ಕಂಗೊಳಿಸುತ್ತವೆ. ಈ ಸಂಧರ್ಭದಲ್ಲಿ ಮಡಿಕೇರಿ ದಸರಾಗೆ ತೆರಳುವ ಪ್ರಯಾಣಿಕರು ಸಹಾ ಮಾರ್ಗ ಮದ್ಯೆ ನಿಂತು ಅರಕಲಗೂಡು ದಸರಾ ಉತ್ಸವದ ಆಕರ್ಷಣೆಯನ್ನು ಸವಿಯುತ್ತಾರೆ. ರಾತ್ರಿ 9 ಗಂಟೆ ಸುಮಾರಿಗೆ ಉತ್ಸವ ಪಟ್ಟಣದ ಪೂರ್ವದಿಕ್ಕಿನಲ್ಲಿರುವ ವಿಜಯದಶಮಿ ಮಂಟಪದ ಬಳಿ ಬಂದು ಸೇರುತ್ತದೆ. ಅಲ್ಲಿ ಬನ್ನಿ ವೃಕ್ಷಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಪೂಜಿಸಲ್ಪಟ್ಟ ಬಾಳೆ ಗಿಡವನ್ನು ತಾಲೂಕಿನ ದಂಡಾಧಿಕಾರಿಗಳು ಸಾಂಕೇತಿಕವಾಗಿ ಕತ್ತರಿಸುತ್ತಾರೆ.

ಕದಳಿ ವೃಕ್ಷ ಛೇಧನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯೊಂದಿಗೆ ಉತ್ಸವಕ್ಕೆ ತೆರೆ ಬೀಳುತ್ತದೆ. ಸರ್ಕಾರದ ಕೃಪಾಶೀರ್ವಾದವಿಲ್ಲದೇ ನಡೆಯುವ ಅರಕಲಗೂಡು ನವರಾತ್ರಿ ಸ್ವಾವಲಂಬನೆ ಮತ್ತು ಸಹಬಾಳ್ವೆಗೆ ಮಾದರಿಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more