ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.12ಕ್ಕೆ ಸರಕಾರದ ಹಣೆಬರಹಕ್ಕೆ ಮಹೂರ್ತ ಫಿಕ್ಸ್

By Mrutyunjaya Kalmat
|
Google Oneindia Kannada News

Yeddyurappa to prove majority on Oct 12
ಬೆಂಗಳೂರು, ಅ. 6 : ಹದಿನಾಲ್ಕು ಬಿಜೆಪಿ ಶಾಸಕರು ಮತ್ತು ನಾಲ್ಕು ಮಂದಿ ಪಕ್ಷೇತರ ಶಾಸಕರು ರಾಜೀನಾಮೆ ನೀಡಿರುವುದರಿಂದ ಸರಕಾರ ಅಲ್ಪ ಮತಕ್ಕೆ ಕುಸಿದಿದ್ದು ಅ. 12ರಂದು 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರಕಾರಕ್ಕೆ ಸೂಚನೆ ನೀಡಿದ್ದಾರೆ. ಈ ಮಧ್ಯೆ ಭಿನ್ನರ ಮನವೂಲಿಸಲು ರೆಡ್ಡಿಗಳು, ಶ್ರೀರಾಮುಲು ಸೇರಿದಂತೆ ಅನೇಕ ನಾಯಕರು ಕಸರತ್ತು ನಡೆಸಿದ್ದು, ಇಕ್ಕಟ್ಟಿನಲ್ಲಿರುವ ಬಿಜೆಪಿಯ ಬಿಕ್ಕಟ್ಟು ಪರಿಹಾರಕ್ಕೆ ಬಿಜೆಪಿಯ ದಿಲ್ಲಿ ನಾಯಕರು ರಂಗಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದೆ.

117 ಸಂಖ್ಯಾಬಲ ಹೊಂದಿರುವ ಆಡಳಿತಾರೂಢ ಬಿಜೆಪಿ ಸರಕಾರದ 14 ಶಾಸಕರು ನಾಯಕತ್ವದ ವಿರುದ್ಧ ಬೇಸತ್ತು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ಸಲ್ಲಿಸಿದ್ದಾರೆ. ಹೀಗಾಗಿ ಸರಕಾರದ ಸಂಖ್ಯಾಬಲವೀಗ 103ಕ್ಕೆ ಕುಸಿದಿದೆ. ಆದರೆ, 224 ಸದಸ್ಯ ಬಲ ಹೊಂದಿರುವ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 113 ಮ್ಯಾಜಿಕ್ ಸಂಖ್ಯೆ ಬೇಕು. ಸರಕಾರ ಅಲ್ಪಮತಕ್ಕೆ ಇಳಿದಿದ್ದರಿಂದ ರಾಜ್ಯಪಾಲರು ಅ. 12 ರಂದು 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಸರಕಾರಕ್ಕೆ ಸೂಚನೆ ನೀಡಿದ್ದಾರೆ.

ಬಹುಮತ ಸಾಬೀತು ವಿಫಲವಾದರೆ? : ಒಂದು ವೇಳೆ ಯಡಿಯೂರಪ್ಪ ನೇತೃತ್ವದ ಸರಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದರೆ, ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಾಗುತ್ತದೆ. ಆಗ ರಾಜ್ಯಪಾಲರು ಪ್ರತಿಪಕ್ಷಗಳಿಗೆ ಸರಕಾರ ರಚಿಸಲು ಅವಕಾಶ ನೀಡಬಹುದು. ಆಕಸ್ಮಾತಾಗಿ ಪ್ರತಿಪಕ್ಷಗಳಿಗೆ ಈ ಅವಕಾಶ ಒದಗಿ ಬಂದರೆ ಕಾಂಗ್ರೆಸ್ 73, ಜೆಡಿಎಸ್ 28 ಹಾಗೂ ಪಕ್ಷೇತರ 6 ಶಾಸಕರನ್ನು ಸೇರಿಸಿದರೆ ಒಟ್ಟು 107 ಸಂಖ್ಯಾಬಲ ಆಗುತ್ತದೆ. ಧೈರ್ಯದಿಂದ ಸರಕಾರ ರಚನೆ ಮಾಡಿದರೆ, ಹೊಸ ಸರಕಾರಕ್ಕೆ ಬಹುಮತಕ್ಕೆ ಕೆಲ ದಿನಗಳನ್ನು ನೀಡಬಹುದು.

ಇವರಿಗೆ ಬಿಜೆಪಿಯಲ್ಲಿ ಬಂಡಾಯ ಎದ್ದಿರುವ 14 ಶಾಸಕರು ಬೆಂಬಲ ನೀಡಿದರೆ ಕಾಂಗ್ರೆಸ್ ನೇತೃತ್ವದ ಸರಕಾರ ರಚನೆಯಾಗಬಹುದು. ಇನ್ನೊಂದು ವಿಶೇಷ ಸಂಗತಿಯೆಂದರೆ ಇದೀಗ ಬಿಜೆಪಿ ಭಿನ್ನಮತೀಯ ಶಾಸಕರು ಬಂಡಾಯವೆದ್ದಿರುವುದು ನಾಯಕತ್ವದ ವಿರುದ್ಧ ಮಾತ್ರ. ಹೀಗಾಗಿ ಮುಖ್ಯಮಂತ್ರಿ ಬದಲಾದರೆ ಈ ಬಂಡಾಯ ಶಮನ ಆಗಲೂಬಹುದು. ಇದೆಲ್ಲವನ್ನೂ ಅ. 12ರವರೆಗೆ ಕಾದು ನೋಡಬೇಕು ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರು ಪುಣೆಗೆ ಶಿಫ್ಟ್ : ಬಿಜೆಪಿ ಕುದುರೆ ವ್ಯಾಪಾರ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಎಲ್ಲ ಶಾಸಕರನ್ನು ಅ. 12ರವರೆಗೆ ಪುಣೆಯ ಹೊರವಲಯದಲ್ಲಿರುವ ಆಂಬಿ ವ್ಯಾಲಿಯಲ್ಲಿ ಇರಿಸಲು ನಿರ್ಧರಿಸಿದೆ. ಈಗಾಗಲೇ ಕಾಂಗ್ರೆಸ್ ಶಾಸಕರು ಪುಣೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್, ಅಲ್ಪಮತಕ್ಕೆ ಕುಸಿದಿರುವ ಬಿಜೆಪಿ ಇದೀಗ ಕುದುರೆ ವ್ಯಾಪಾರಕ್ಕೆ ಕೈಹಾಕಿದೆ. ಕಾಂಗ್ರೆಸ್ಸಿನ ಅನೇಕ ಶಾಸಕರನ್ನು ಸಂಪರ್ಕಿಸಿ ಸಚಿವ ಸ್ಥಾನದ ಆಮಿಷ ಮತ್ತು 25 ಕೋಟಿ ರುಪಾಯಿಗಳನ್ನು ನೀಡುವುದಾಗಿ ಹೇಳುತ್ತಿದೆ ಎಂದು ಆರೋಪಿಸಿದರು. ನಮ್ಮ ಶಾಸಕರ ಮೇಲೂ ಬಿಜೆಪಿ ತೀವ್ರ ಒತ್ತಡ ಹಾಕಿರುವ ಅಂಶ ಬೆಳಕಿಗೆ ಬಂದಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ಬಿಜೆಪಿ ಬಣ್ಣವನ್ನು ಬಯಲು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಏನೇ ತಿಪ್ಪರಲಾಗ ಹಾಕಿದರೂ ಯಡಿಯೂರಪ್ಪ ತಮ್ಮ ಸರಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಮತ್ತೊಮ್ಮೆ ಬ್ಲಾಕ್ ಮೇಲ್ ತಂತ್ರ ಆರಂಭಿಸಿದೆ. ಕುದುರೆ ವ್ಯಾಪಾರಕ್ಕೆ ಕೈಹಾಕಿ, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದ್ದಾರೆ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X