ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಾಳ ಶಿಶುವಿನ ಜನಕನಿಗೆ ವೈದ್ಯಕೀಯ ನೋಬೆಲ್

By Prasad
|
Google Oneindia Kannada News

Robert Edwards
ಸ್ಟಾಕ್ ಹೋಮ್, ಅ. 4 : ವಿಶ್ವದ ಅಸಂಖ್ಯ ಬಂಜೆಯರ ಮಡಿಲು ತುಂಬಿದ ಪ್ರಣಾಳ ಶಿಶುವಿನ ಜನಕ ಡಾ. ರಾಬರ್ಟ್ ಎಡ್ವರ್ಡ್ಸ್ 2010ನೇ ಸಾಲಿನ ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೇಂಬ್ರಿಜ್ ವಿಶ್ವವಿದ್ಯಾನಿಯಲದಲ್ಲಿ ಪ್ರೊಫೆಸರಾಗಿರುವ 85 ವರ್ಷದ ಬ್ರಿಟನ್ನಿನ ಲಕ್ಷಾಂತರ ಪ್ರಣಾಳ ಶಿಶುಗಳ 'ಮುದ್ದಿನ ಅಜ್ಜ' 1970ರ ದಶಕದಲ್ಲಿ ಇನ್-ವರ್ಟೋ ಫರ್ಟಿಲೈಸೇಷನ್ ಅಭಿವೃದ್ಧಿಪಡಿಸಿ ಮಕ್ಕಳಿಲ್ಲದೆ ಕೊರಗುತ್ತಿದ್ದ ಹೆಣ್ಣುಮಕ್ಕಳ ಕಂಗಳಲ್ಲಿ ಆನಂದಭಾಷ್ಪ ಉದುರಿಸಿದ್ದರು. ಅವರ ಜೊತೆ ಸಂಶೋಧನೆ ನಡೆಸಿದ ಪ್ಯಾಟ್ರಿಕ್ ಸ್ಟೆಪ್ಟೋ 1988ರಲ್ಲಿ ನಿಧನರಾದರು.

ಈ ಸಂಶೋಧನೆಗೆ ಎಡ್ವರ್ಡ್ಸ್ 1950ರಲ್ಲಿಯೇ ಕೈಹಾಕಿದ್ದರು. ಅವರು ಕಂಡುಹಿಡಿದ ತಂತ್ರಜ್ಞಾನದ ಪ್ರಕಾರ, ಹೆಣ್ಣಿನ ಮೊಟ್ಟೆಯನ್ನು ಹೊರತೆಗೆದು, ಫಲಪ್ರದವಾಗುವಂತೆ ಮಾಡಿ ಮತ್ತೆ ಆಕೆಯ ಹೊಟ್ಟೆಯಲ್ಲಿ ಇಡಲಾಗುವುದು. ಇದು ಎಪ್ಪತ್ತರ ದಶಕದಲ್ಲಿ ಭಾರೀ ಕ್ರಾಂತಿಯನ್ನು ಎಬ್ಬಿಸಿತು. ಈ ತಂತ್ರಜ್ಞಾನ ಬಳಸಿ ಹುಟ್ಟಿಸಿದ ಮೊದಲ ಟೆಸ್ಟ್ ಟ್ಯೂಬ್ ಮಗು ಲೂಯಿಸ್ ಬ್ರೌನ್ ಹುಟ್ಟಿದ್ದು ಜುಲೈ 25ರ 1978ರಂದು.

ಎಡ್ವರ್ಡ್ಸ್ ಅವರ ಸಂಶೋಧನೆಯನ್ನು ಶ್ಲಾಘಿಸಿರುವ ವೈದ್ಯಕೀಯ ಪ್ರಶಸ್ತಿ ಸಮಿತಿ, "ಅವರ ಸಾಧನೆಯಿಂದಾಗಿ ಜಾಗತಿಕವಾಗಿ ಶೇ.10ಕ್ಕಿಂತ ಹೆಚ್ಚಿನ ಬಂಜೆಯರು ಗರ್ಭಧರಿಸುವಂತಾಗಿದೆ. ಇದರಿಂದಾಗಿ ಸುಮಾರು 40 ಲಕ್ಷ ಮಕ್ಕಳು ಇನ್-ವರ್ಟೋ ಫರ್ಟಿಲೈಸೇಶನ್ ನಿಂದ ಹುಟ್ಟಿವೆ" ಎಂದು ಪ್ರಶಂಸಾಪತ್ರದಲ್ಲಿ ತಿಳಿಸಿದೆ.

ಆದರೆ ಈ ಸಂಶೋಧನೆ ಭಾರೀ ವಿವಾದಕ್ಕೂ ಈಡಾಗಿತ್ತು. ಕೆಲ ಧಾರ್ಮಿಕ ಸಂಘಟನೆಗಳು ಮತ್ತು ವೈದ್ಯಕೀಯ ವೃಂದ, ಈ ಸಂಶೋಧನೆ ನೈತಿಕತೆಗೆ ವಿರುದ್ಧವಾಗಿದೆ ಎಂದು ಕೂಗೆಬ್ಬಿಸಿದ್ದವು. ಬ್ರಿಟಿಷ್ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಕೂಡ ಹಣ ನೀಡುವುದಕ್ಕೆ ಹಿಂಜರಿದಿತ್ತು. ಆದರೆ, ದಾನಿಗಳಿಂದ ಹರಿದುಬಂದ ಹಣದ ಸಹಾಯದಿಂದ ಎಡ್ವರ್ಡ್ಸ್ ಸಂಶೋಧನೆ ಮುಂದುವರಿಸಿದರು.

ಸ್ವೀಡನ್ನಿನ ಉದ್ಯಮಿ ಅಲ್ಫ್ರೆಡ್ ನೋಬೆಲ್ ಸ್ಥಾಪಿಸಿದ ಈ ಪ್ರಶಸ್ತಿಯನ್ನು 1901ರಲ್ಲಿ ಮೊದಲಿಗೆ ಕೊಡಲಾಯಿತು. ಪ್ರಶಸ್ತಿ 10 ಮಿಲಿಯನ್ ಸ್ವೀಡಿಶ್ ಕ್ರೋನರ್ (ಅಂದಾಜು 6.6 ಕೋಟಿ ರು.), ಬಂಗಾರದ ಪದಕ ಮತ್ತು ಡಿಪ್ಲೋಮಾ ಪ್ರಶಸ್ತಿ ಹೊಂದಿರುತ್ತದೆ. ಇದು ಈ ವರ್ಷದ ಮೊದಲ ಘೋಷಣೆಯಾಗಿದ್ದು, ಈ ವಾರದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಪ್ರಶಸ್ತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರದ ಪ್ರಶಸ್ತಿಗಳನ್ನು ಘೋಷಣೆಯಾಗಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X