• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರತಿ ಎತ್ತೀರೆ ಕಳ್ಮಂಜಂಗೆ ನಮ್ ಸುಳ್ಮಂಜಂಗೆ

By * ಮೃತ್ಯುಂಜಯ ಕಲ್ಮಠ
|

ಅರ್ಕಾವತಿ ಬಡಾವಣೆಗೆಂದು ಸರಕಾರ ವಶಪಡಿಸಿಕೊಂಡಿದ್ದ ಭೂಮಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಕ್ಕಳಿಗೆ ನೆರವಾಗಲೆಂದು ಅಕ್ರಮವಾಗಿ ಡಿನೋಟಿಪೈ ಮಾಡಿರುವ ಪ್ರಕರಣ ಬಹಿರಂಗಗೊಂಡಿರುವುದು ಒಂದಡೆಯಾದರೆ, ಕೆಐಎಡಿಬಿ ಹಗರಣದಲ್ಲಿರುವ ಸಿಲುಕಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಈ ಸಂಬಂಧ ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಲಂಚ ನೀಡಲೆತ್ನಿಸಿದ ಅವರ ಮಗ ಕಟ್ಟಾ ಜಗದೀಶ್ ಅವರನ್ನು ಲೋಕಾಯಕ್ತ ಪೊಲೀಸರು ಬಂಧಿಸಿರುವುದು ಕಳೆದ ಕೆಲ ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ, ಆಕ್ರೋಶ ವ್ಯಕ್ತವಾಗತೊಡಗಿದೆ.

ಕಟ್ಟಾ ಹಗರಣ : ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿಯನ್ನು ನಕಲಿ ವ್ಯಕ್ತಿಗಳ ಹೆಸರಿಗೆ ದಾಖಲಿಸಿ ಕೆಐಎಡಿಬಿ ಮೂಲಕ ದೇವನಹಳ್ಳಿ ಬಾಗಲೂರು ಜಾಲ ಹೋಬಳಿ ಬಳಿ ಏರೋಸ್ಪೇಸ್, ಹಾರ್ಡ್ ವೇರ್ ಪಾರ್ಕ್ ಹಾಗೂ ಐಟಿ ಪಾರ್ಕ್ ನಿರ್ಮಾಣಕ್ಕೆ ವಶಪಡಿಸಿಕೊಂಡ 1,648 ಎಕರೆ ಭೂಮಿಗೆ ಪರಿಹಾರ ಪಡೆದ ಪ್ರಕರಣದಲ್ಲಿ ಕಟ್ಟಾ ಜಗದೀಶ್ ಒಡೆತನದ ಇಟಾಸ್ಕಿ ಕಂಪನಿ ಭಾಗಿಯಾಗಿತ್ತು. ಪ್ರಕರಣವನ್ನು ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದರು. ಈ ಹಗರಣವನ್ನು ಪ್ರಮುಖ ಪತ್ರಿಕೆಯೊಂದು ಬಯಲಿಗೆ ತಂದಿತ್ತು.

ಆನಂತರ ಹಗರಣದ ಸಾಕ್ಷ್ಯಾಗಳನ್ನು ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮಗ ಹಾಗೂ ವಸಂತನಗರ ವಾರ್ಡಿನ ಬಿಬಿಎಂಪಿ ಸದಸ್ಯ ಜಗದೀಶ್ ಕಟ್ಟಾ ಅವರನ್ನು ಲಂಚದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಇಷ್ಷೆಲ್ಲಾ ಹಗರಣ ಮಾಡಿದ್ದರೂ ಸಚಿವರು ಮಾತ್ರ ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತಿದ್ದಾರೆ. ನನ್ನ ವಿರುದ್ಧ ಪಿತೂರಿ, ಏಳ್ಗೆ ಸಹಿಸದವರ ಪಿತೂರಿ ನಡೆಸಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ನಾನು ಮಾತ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಕಟ್ಟಾ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ನೀಡಲು ತಯಾರಿಲ್ಲದ ಸಚಿವ ಮಹಾಶಯರು, ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವರನ್ನು ಭೇಟಿ ಮಾಡಿ ನನ್ನ ಕುಟುಂಬ ವರ್ಗದವರು ಪ್ರಾಮಾಣಿಕರು. ನಾವು ಕಷ್ಟಪಟ್ಟು ಮೇಲಕ್ಕೆ ಬಂದಿದ್ದೇವೆ. ಇದಕ್ಕೆ ಅಡ್ಡಗಾಲು ಹಾಕಲು ಕೆಲವರು ಯತ್ನಿಸುತ್ತಿದ್ದಾರೆ. ನನಗೆ ನ್ಯಾಯ ದೊರೆಕಿಸಿಕೊಡಿ ಎಂದು ಸಂತೋಷ ಹೆಗ್ಡೆ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು, ಕೆಐಎಡಿಬಿ ಹಗರಣದಲ್ಲಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಕುಟುಂಬದ ಪಾತ್ರ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಗರಣದಲ್ಲಿ ಕಟ್ಟಾ ಅವರ ಪತ್ನಿಯೂ ಭಾಗಿಯಾಗಿದ್ದಾರೆ. 9 ಲಕ್ಷ ರುಪಾಯಿಗೆ ಕೆಲ ಎಕರೆ ಭೂಮಿಯನ್ನು ಖಾಸಗಿಯವರಿಂದ ಖರೀದಿಸಿ ನಂತರ ಸರಕಾರದಿಂದ 4 ಕೋಟಿ ರುಪಾಯಿ ಪರಿಹಾರ ಪಡೆದಿದ್ದಾರೆ. ಕಟ್ಟಾ ಅವರ ಪತ್ನಿಗೆ ಈ ಜಮೀನನ್ನು ಯಾರು ಮಾರಿದರು ? ಅದು ಸರಕಾರದ ಜಮೀನೇ ? ನಕಲಿ ದಾಖಲೆ ಸೃಷ್ಟಿಗೆ ಕಾರಣರಾದವರು ಯಾರು ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೆಗ್ಡೆ ವಿವರಿಸಿದ್ದಾರೆ.

ಇಷ್ಟೆಲ್ಲಾ ಹಗರಣಗಳು ಬೆಳಕಿಗೆ ಬಂದರೂ ಸಚಿವ ಕಟ್ಟಾ ಇನ್ನೂ ಸಚಿವ ಸ್ಥಾನದಲ್ಲಿ ಮುಂದುವರಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸ ತಿಳಿದಿರುವಂತೆ ಮಾಜಿ ಸಚಿವೆ ಲಲಿತಾ ನಾಯ್ಕ್ ಮಗ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಎಂಬ ಕಾರಣಕ್ಕೆ ಅವರಿಂದ ರಾಜೀನಾಮೆ ಪಡೆಯಲಾಯಿತು ಹಾಗೂ ಸಹೋದರ ರೇಹಾನ್ ಬೇಗ್ ಅವರ ಹೆಸರು ನಕಲಿ ಸ್ಟಾಂಪ್ ಪೇಪರ್ ಹಗರಣದಲ್ಲಿ ಕೇಳ ಬಂದ ಹಿನ್ನೆಲೆಯಲ್ಲಿ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ರೋಷನ್ ಬೇಗ್ ಅವರು ರಾಜೀನಾಮೆ ನೀಡಿದರು. ರಾಜೀನಾಮೆ ನೀಡುವಂತೆ ಅಬ್ಬರಿದ್ದು ಹೋರಾಟ, ಪ್ರತಿಭಟನೆ ನಡೆಸಿದ್ದು ಇದೇ ಯಡಿಯೂರಪ್ಪನವರು.

ಆದರೆ, ಇದೀಗ ಪ್ಲೇಟು ಬದಲಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ. ಕಟ್ಟಾ ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬಿಬಿಎಂಪಿ ಸದಸ್ಯ ಗೋವಿಂದರಾಜು ಅವರನ್ನು ಅಮಾನತು ಮಾಡಲಾಗಿದೆ. ಆದರೆ, ಆ ನಿಯಮ ಕಟ್ಟಾ ಜಗದೀಶ್ ಅವರಿಗೆ ಅನ್ವಯವಾಗುತ್ತಿಲ್ಲ ? ತನಿಖೆ ಮುಗಿದು ವರದಿ ಬರಲಿ ಆಗ ಅಮಾನತು ಮಾಡುವುದಾಗಿ ಮೇಯರ್ ಎಸ್ಕೆ ನಟರಾಜ್ ಹೇಳುತ್ತಿದ್ದಾರೆ.

ಡಿನೋಟಿಪೈಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದು, ಮುಖ್ಯಮಂತ್ರಿ ರಾಜೀನಾಮೆಯನ್ನು ಕೇಳುತ್ತಿದ್ದಾರೆ. ಇತ್ತ ಕೈಪಡೆ ರಾಜಭವನ ಪ್ರವೇಶಿಸಿ ಸರಕಾರವನ್ನು ವಜಾಗೊಳಿಸಿ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ನಾವೇನೂ ಕಮ್ಮಿಯಿಲ್ಲ ಎನ್ನುವಂತೆ ಯಡಿಯೂರಪ್ಪ ಯಾರ ಆಡಳಿತದಲ್ಲಿ ಎಷ್ಟೆಷ್ಟು ಡಿನೋಟಿಪೈಗಳಾಗಿವೆ. ಅವುಗಳನ್ನು ತನಿಖೆಗೆ ಒಳಪಡಿಸುತ್ತೇನೆ ಎಂದು ಗುಡುಗಿದ್ದಾರೆ. ಕುಮಾರಸ್ವಾಮಿ ಅವಧಿಯಲ್ಲಿ ಅತಿ ಹೆಚ್ಚು ಡಿನೋಟಿಪೈಗಳು ಆಗಿದ್ದರಿಂದ ತನಿಖೆಗೆ ಒಳಪಡಿಸುವ ಬೆದರಿಕೆಯನ್ನು ಯಡಿಯೂರಪ್ಪ ಅವರಿಗೆ ಹಾಕಿದ್ದಾರೆ.

ಸಿಎಂ ಹಗರಣ : ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೂರುವರೆ ತಿಂಗಳಲ್ಲೇ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ತಮ್ಮ ಮಕ್ಕಳಿಗೆ ಅನುಕೂಲವಾಗಲೆಂದು ಕಾನೂನು ಗಾಳಿಗೆ ತೂರಿ ಕಡತಕ್ಕೆ ಸಹಿ ಹಾಕಿದ್ದಾರೆ. ಅವರ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ, ಅಳಿಯ ಸೋಹನ್ ಕುಮಾರ್ ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಈ ಹಗರಣದ ಫಲಾನುಭವಿಗಳು.

ಸುಮಾರು 10 ಕೋಟಿ ರುಪಾಯಿಗೂ ಹೆಚ್ಚು ಬೆಲೆ ಬಾಳುವ ಈ ಭೂಮಿ ಬೆಂಗಳೂರು ಪೂರ್ವ ತಾಲ್ಲೂಕು ಕೆ ಆರ್ ಪುರಂ ಹೋಬಳಿಯ ರಾಚೇನಹಳ್ಳಿಯಲ್ಲಿದೆ. ಮಕ್ಕಳಿಗೆ 1.16 ಎಕರೆ, ಅಳಿಯನಿಗೆ 16 ಗುಂಟೆ ಭೂಮಿ ಹೀಗೆ ಬಿಡಿಎದಿಂದ ಸ್ವಾಧೀನಪಡಿಸಿಕೊಂಡಿರುವ ಆರೋಪದ ವರದಿಯನ್ನು ಹೆಚ್ಚು ಪ್ರಸಾರವುಳ್ಳ ಪತ್ರಿಕೆಯೊಂದು ಪ್ರಕಟಿಸಿತ್ತು. ಇಂದು ಸಂಚಿಕೆಯಲ್ಲೂ ಕೂಡಾ ನಾಗರಭಾವಿ ಬಳಿಯ 5.13 ಎಕರೆ ಬಿಡಿಎ ಭೂಮಿಯನ್ನು ಮುಖ್ಯಮಂತ್ರಿ ಗುಳುಂ ಮಾಡಿದ್ದಾರೆ ಎಂದು ವರದಿ ಮಾಡಿದೆ.

ಸಾರ್ವಜನಿಕ ಉದ್ದೇಶಕ್ಕೆ ಅಭಿವೃದ್ಧಿಪಡಿಸಲಾದ ಭೂಮಿಯನ್ನು ಡಿನೋಟಿಪೈ ಮಾಡಿರುವುದು ಕಾನೂನು ಬಾಹಿರ. ಇದರಿಂದ 1994ರ ಭೂ ಪರಬಾರೆ ನಿರ್ಬಂಧ ವಿಧೇಯಕದ ಉಲ್ಲಂಘನೆಯಾಗಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಮುಖ ಆರೋಪಿ ಇವರ ವಿರುದ್ಧ ಕ್ರಿಮಿನಲ್ ಕ್ರಮಕೈಗೊಳ್ಳಬೇಕು ಎನ್ನುವುದು ಪ್ರತಿಪಕ್ಷಗಳ ವಾದ.

ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹಗರಣದಲ್ಲಿ ಸಿಕ್ಕು ಒದ್ದಾಡುತ್ತಿರುವುದರಿಂದ ಸರಕಾರಕ್ಕೆ ದಿಕ್ಕು ತೋಚದಂತಾಗಿದೆ. ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ ರಾಮಚಂದ್ರಗೌಡರನ್ನು ವಜಾಗೊಳಿಸಿದಂತೆ ಕಟ್ಟಾ ಅವರನ್ನು ಸಂಪುಟದಿಂದ ಕೈಬಿಡುವುದೊಂದೇ ಯಡಿಯೂರಪ್ಪ ಅವರಿಗೆ ಉಳಿದಿರುವ ದಾರಿ. ಜೊತೆಗೆ ಮುಖ್ಯಮಂತ್ರಿ ಮೇಲಿರುವ ಪೋರ್ಜರಿ ಸಹಿ ಮತ್ತು ಭೂಸ್ವಾಧೀನ ಪ್ರಕರಣಗಳು ಬೆನ್ನು ಬಿದ್ದಿವೆ. ಅದರಿಂದ ಅವರು ಹೇಗೆ ಪಾರಾಗುತ್ತಾರೆ ಎನ್ನುವುದು ಪ್ರಶ್ನೆ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more