ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿನೋಟಿಫಿಕೇಷನ್ ಓಕೆ ನಮ್ ನಮ್ಮಲ್ಲಿ ಕಲಹ ಯಾಕೆ?

By Prasad
|
Google Oneindia Kannada News

DB Chandre Gowda
ಬೆಂಗಳೂರು, ಅ. 2 : ಜಮೀನಿನ ಡಿನೋಟಿಫಿಕೇಷನ್ ಮತ್ತು ಅನಧಿಕೃತ ಭೂಕಬಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಂಸದ ಡಿಬಿ ಚಂದ್ರೇಗೌಡ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 957 ಎಕರೆ ಭೂಮಿ ಡಿನೋಟಿಫಿಕೇಷನ್ ಆಗಿದೆ ಮತ್ತು ಈ ಅವಧಿಯಲ್ಲಿನ ಎಲ್ಲಾ ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆ ಎಂದು ಹೇಳಿ ಜೇನುಗೂಡಿಗೆ ಕಲ್ಲು ಎಸೆದಿದ್ದಾರೆ.

ಶನಿವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕೃಷ್ಣಾ'ದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರೇಗೌಡ, ಮಾಜಿ ಮುಖ್ಯಮಂತ್ರಿ ಎಸ್ಎಮ್ ಕೃಷ್ಣ ಅವರಿಂದ ಹಿಡಿದು ಪ್ರಸ್ತುತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರವರೆಗೆ ಜಮೀನು ಡಿನೋಟಿಫೈ ಆಗಿದೆ. ಎಲ್ಲಕ್ಕಿಂತ ಹೆಚ್ಚಿನ 270 ಎಕರೆ ಜಮೀನು ಡಿನೋಟಿಫಿಕೇಷನ್ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕಾಲದಲ್ಲೇ ಆಗಿದೆ ಎಂದು ಹೇಳಿ ವಿವಾದವನ್ನು ಅವರಿಗೇ ರಿಬೌಂಡ್ ಮಾಡಿದ್ದಾರೆ.

ಇದೆಲ್ಲ ಸಹಜ : ಗಾಜಿನ ಮನೆಯಲ್ಲಿ ವಾಸಿಸುವವರು ಇತರರ ಮನೆಯ ಮೇಲೆ ಕಲ್ಲು ಎಸೆಯಲು ಯತ್ನಿಸಬಾರದು. ಕುಮಾರಸ್ವಾಮಿಯವರು ಇತರ ಮುಖ್ಯಮಂತ್ರಿಗಳು ಡಿನೋಟಿಫೈ ಮಾಡಿದ್ದನ್ನು ಬಯಲಿಗೆಳೆಯಲು ಪ್ರಾರಂಭಿಸಿದರೆ ನಾವು ಕೂಡ ಅವರ ಕಾಲದಲ್ಲಿ ಆದ ಡಿನೋಟಿಫಿಕೇಷನ್ ಗಳನ್ನು ಬಯಲಿಗೆಳೆಯಬೇಕಾಗುತ್ತದೆ ಎಂದು ಹೇಳಿ ಇದೊಂದು ಸಹಜವಾದ ಕ್ರಿಯೆ ಎಂಬಂತೆ ಮಾತನಾಡಿದ್ದಾರೆ ಚಂದ್ರೇಗೌಡ. ನಾವೂ ಮಾಡಿದ್ದೇವೆ ನೀವೂ ಮಾಡಿದ್ದೀರಿ, ಸುಮ್ಮನೆ ಕಲಹ ಯಾಕೆ ಎಂಬ ಅರ್ಥ ಬರುವಂತೆ ಮಾತನಾಡಿ ಕದಡಿದ ನೀರನ್ನು 'ತಿಳಿ' ಮಾಡಲು ಚಂದ್ರೇಗೌಡ ಯತ್ನಿಸಿದ್ದಾರೆ.

ಎಸ್ಎಮ್ ಕೃಷ್ಣ ಮಾತ್ರವಲ್ಲ ಹಿಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಂದ ಕೂಡ 127 ಎಕರೆ ಡಿನೋಟಿಫೈ ಆಗಿದೆ. ವಿವಾದದ ತನಿಖೆ ಆಗಲೇಬೇಕಿದ್ದರೆ ಎಲ್ಲ ಹತ್ತು ವರ್ಷಗಳ ಡಿನೋಟಿಫಿಕೇಷನ್ ತನಿಖೆ ಆಗಲಿ. ಯಡಿಯೂರಪ್ಪನವರು ಕೂಡ ಲೋಕಾಯುಕ್ತರಿಂದ ತನಿಖೆಗೆ ಒಪ್ಪಿದ್ದಾರೆ ಎಂದು ಚಂದ್ರೇಗೌಡ ಹೇಳಿದರು.

ಡಿನೋಟಿಫಿಕೇಷನ್ ಮಾಡುವುದು ಕಾನೂನು ಬಾಹಿರವೇನಲ್ಲ. ಮುಖ್ಯಮಂತ್ರಿಗಳಿಗೆ ಡಿನೋಟಿಫೈ ಮಾಡುವ ಅಧಿಕಾರವಿದೆ. ಐವತ್ತು ಎಕರೆವರೆಗೆ ಡಿನೋಟಿಫೈ ಮಾಡಲು ಅವಕಾಶವಿದ್ದರೂ ಕುಮಾರಸ್ವಾಮಿಯವರೇ ತಮ್ಮ 20 ತಿಂಗಳ ಅಧಿಕಾರಾವಧಿಯಲ್ಲಿ ಒಂದೇ ಬಾರಿಗೆ ಅರವತ್ತು ಎಕರೆ ಜಮೀನು ಡಿನೋಟಿಫೈ ಮಾಡಿದ್ದರು. ತನಿಖೆಗೆ ನಾವೇನು ಹೆದರುವುದಿಲ್ಲ ಎಂದು ಕುಮಾರಸ್ವಾಮಿಗೆ ಮಾತಿನ ಚಾಟಿ ಬೀಸಿದರು.

ಕುಮಾರಸ್ವಾಮಿ ಉತ್ತರ : ಮುಖ್ಯಮಂತ್ರಿಗಳಿಗೆ ಜಮೀನು ಡಿನೋಟಿಫೈ ಮಾಡುವ ಅಧಿಕಾರ ಇರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಈ ಅಧಿಕಾರ ದುರುಪಯೋಗ ಮಾಡಿ ಮಕ್ಕಳಿಗೆ, ಸಂಬಂಧಿಕರಿಗೆ ಲಾಭ ಬರುವಂತೆ ಮಾಡಿದ್ದು ಯಡಿಯೂರಪ್ಪನವರೇ ಎಂದು ತಾವು ಅರ್ಕಾವತಿ ಭೂಕಬಳಿಕೆ ಕುರಿತಂತೆ ಮಾಡಿರುವ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಮೇಲೆಯೇ ಆರೋಪ ಹೊರಿಸುತ್ತಿರುವ ಚಂದ್ರೇಗೌಡ ಅವರ ಮಗಳಿಗೆ ಯಡಿಯೂರಪ್ಪನವರು ಡಾಲರ್ಸ್ ಕಾಲನಿಯಲ್ಲಿ ನಿವೇಶನವನ್ನು ಮಂಜೂರು ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಚಂದ್ರೇಗೌಡ ಅವರು ಯಡಿಯೂರಪ್ಪನವರ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಟ್ಟಾ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು : ಭೂಕಬಳಿಕೆ ಹಗರಣದಲ್ಲಿ ಭಾಗಿಯಾಗಿರುವ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಕೂಡ ಮುಗಿಬಿದ್ದಿದೆ. ಕೆಐಎಡಿಬಿ ಹಗರಣದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಕುಟುಂಬ ಭಾಗಿಯಾಗಿದ್ದನ್ನು ಮುಂದಿಟ್ಟುಕೊಂಡು ಕಟ್ಟಾ ರಾಜೀನಾಮೆಗೆ ಕಾಂಗ್ರೆಸ್ ಪಟ್ಟುಹಿಡಿದಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಅಕ್ಟೋಬರ್ 6ರೊಳಗೆ ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆಯನ್ನು ಬಿಜೆಪಿ ಪಡೆಯದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಸಿದೆ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X