ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ

By * ಪ್ರಸಾದ ನಾಯಿಕ
|
Google Oneindia Kannada News

Katta Subramanya Naidu, BS Yeddyurappa and Ramachandre Gowda
ಇಂದು ಅಕ್ಟೋಬರ್ 2, ಗಾಂಧಿ ಜಯಂತಿ. ಸತ್ಯ, ಅಹಿಂಸೆಯನ್ನೇ ಜೀವವನ್ನಾಗಿಸಿಕೊಂಡಿದ್ದ ಮಹಾನ್ ಚೇತನ ಹುಟ್ಟಿದ ದಿನ. ಈ ದಿನವೇ ಭಾರತ ಕಂಡ ಅತ್ಯಂತ ಸಭ್ಯ, ಸರಳ ಮತ್ತು ಅತ್ಯಂತ ಪ್ರಾಮಾಣಿಕ ರಾಜಕಾರಣಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನ ಕೂಡ.

ಇಂಥ ದಿನದಂದೇ ನಮ್ಮ ರಾಜಕಾರಣಿಗಳು ಯಾವ ರೀತಿ ವರ್ತಿಸುತ್ತಿದ್ದಾರೆ, ಎಂತೆಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅವರ ಪ್ರಾಮಾಣಿಕತೆ ನೈತಿಕತೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ನೋಡಿದರೆ ಇಡೀ ನಾಡೇ ತಲೆ ತಗ್ಗಿಸುವಂತಾಗಿದೆ. ಇಂದಿನ ದಿನ ಬಾಲಭವನದಲ್ಲಿ ಗಾಂಧೀಜಿಗೆ ಹೂವಿನ ಹಾರ ಹಾಕಿ, "ಇಂದು ನಾವು ಗಾಂಧಿ ತತ್ತ್ವಗಳನ್ನು ಪಾಲಿಸದಿದ್ದರೆ ಸತ್ಯ ಸತ್ತುಹೋಗುತ್ತದೆ" ಎಂಬ ಹೇಳಿಕೆ ನೀಡಿದ್ದಾರೆ.

ಅಸಲಿಗೆ ರಾಜಕಾರಣಿಗಳಲ್ಲಿ ಸತ್ಯ ಎಂದೋ ಸತ್ತುಹೋಗಿದೆ, ಗಾಂಧೀಜಿಯ ತತ್ತ್ವಗಳನ್ನು ಎಂದೋ ಗಾಳಿಗೆ ತೂರಲಾಗಿದೆ. ಇತ್ತೀಚಿಗೆ ನಡೆದಿರುವ ವಿದ್ಯಮಾನಗಳನ್ನೇ ಗಮನಿಸಿದರೆ, ದೇವತಾ ಮನುಷ್ಯ ಚಿತ್ರದಲ್ಲಿರುವ ಹಾಡನ್ನು ತಿರುಚಿ 'ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ' ಎಂದು ಹಾಡಿಕೊಳ್ಳುವಂತಾಗಿದೆ.

ಈ ಅಪ್ಪ-ಮಗ ಜೋಡಿಗಳನ್ನು ನೋಡಿ. ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ ; ರಾಮಚಂದ್ರೇಗೌಡ, ಸಪ್ತಗಿರಿಗೌಡ ; ಕಟ್ಟಾ ಸುಬ್ರಮಣ್ಯ ನಾಯ್ಡು, ಕಟ್ಟಾ ಜಗದೀಶ್ ನಾಯ್ಡು... ಈ ಪಟ್ಟಿಗೆ ಅನೇಕ ಹೆಸರುಗಳನ್ನು ಸೇರಿಸಬಹುದು... ಒಂದು ಜೋಡಿ ಅರ್ಕಾವತಿ ಭೂಹಗರಣದಲ್ಲಿ ಗೋಲ್ ಮಾಲ್ ಮಾಡಿದ್ದರೆ, ಇನ್ನೊಂದು ಅಮಾಯಕ ಉದ್ಯೋಗಾರ್ಥಿಗಳಿಗೆ ಮಂಕುಬೂದಿ ಎರಚಿ ಅವ್ಯವಹಾರದಲ್ಲಿ ಭಾಗಿಯಾಗಿದೆ, ಮಗದೊಂದು ಜೋಡಿ ಇನ್ನೊಂದು ಕೆಐಎಡಿಬಿ ಹಗರಣದಲ್ಲಿ ಲಂಚ ನೀಡಿ ಸಿಕ್ಕಿಬಿದ್ದಿದೆ.

ಇವರೆಲ್ಲ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿ. ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ. ಗಾಂಧೀಜಿಯ ಹೆಸರಿನಲ್ಲಿ ಪ್ರಮಾಣ ಮಾಡಿ ತಾವು ಸತ್ಯವಂತರೆಂದು ತಮಗೆ ತಾವೇ ಪ್ರಮಾಣಪತ್ರ ನೀಡಿಕೊಳ್ಳುತ್ತಿದ್ದಾರೆ. ಇವರಿಗೆಲ್ಲ ನಾಚಿಕೆ, ಮಾನ ಮತ್ತು ಮರ್ಯಾದೆ ಕಿಂಚಿತ್ತಾದರೂ ಇದೆಯಾ?

ಮಕ್ಕಳು ಮಾಡಿದ ಹಗರಣಕ್ಕೆ ನಮ್ಮನ್ನೇಕೆ ಎಳೆಯುತ್ತೀರಿ, ಲೋಕಾಯುಕ್ತ ತನಿಖೆಗೆ ಎಲ್ಲಾ ಸಹಕಾರ ನೀಡುತ್ತೇವೆ, ಅನಗತ್ಯವಾಗಿ ನಮ್ಮನ್ನು ಹರಕೆಯ ಕುರಿಗಳನ್ನಾಗಿ ಮಾಡಲಾಗುತ್ತಿದೆ ಎಂಬೆಲ್ಲ ಹೇಳಿಕೆಗಳನ್ನು ನೀಡಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಾವು ಮತ್ತು ತಮ್ಮ ಮಕ್ಕಳು ಪ್ರಾಮಾಣಿಕರು ಎಂಬಂತೆ ಸೋಗು ಹಾಕುತ್ತಿದ್ದಾರೆ. ತಂದೆಯರ ಕುಮ್ಮಕ್ಕು, ಭಾಗೀದಾರಿಕೆ ಇಲ್ಲದೆ ಮಕ್ಕಳು ರಾಜಾರೋಶವಾಗಿ ಇಂಥ ಭ್ರಷ್ಟಾಚಾರದಲ್ಲಿ ಭಾಗಿಯಾಗಲು ಸಾಧ್ಯವೆ? ದಾರಿ ತಪ್ಪಿದ ಮಗನಿಗೆ ಬುದ್ಧಿ ಹೇಳುವ ಕರ್ತವ್ಯ ಅಪ್ಪನದು. ಆದರೆ, ಅಪ್ಪನೇ ದಾರಿ ತಪ್ಪಿದರೆ? ಇಲ್ಲಿ ಆಗಿರುವುದೇ ಅದು.

ಸತ್ಯ ನುಡಿಯುವ, ಜನರನ್ನು ಧೈರ್ಯವಾಗಿ ಎದುರಿಸುವ, ತನಿಖೆಗೆ ಒಳಪಡುವ ಎದೆಗಾರಿಕೆ ಒಬ್ಬರಲ್ಲೂ ಇಲ್ಲ. ಒಬ್ಬರು ಕದ್ದುಮುಚ್ಚಿ ಲೋಕಾಯುಕ್ತರನ್ನು ಭೇಟಿಯಾಗಿ ತಾವು ಅಮಾಯಕರು ತಮ್ಮನ್ನು ರಕ್ಷಿಸಿ ಎಂದು ಗೋಗರೆದಿದ್ದಾರೆ. ಬಿಜೆಪಿ ಸದ್ಯಕ್ಕೆ ಸಿಲುಕಿರುವ ಭ್ರಷ್ಟಾಚಾರದ ಸುಳಿಯಲ್ಲಿ ಒದ್ದಾಡುತ್ತಿರುವ ಯಡಿಯೂರಪ್ಪನವರಂತೂ, ನನಗೆ ರಾಜಕೀಯವೇ ಬೇಜಾರಾಗಿದೆ, ತಾನೇಕೆ ರಾಜಕೀಯದಲ್ಲಿರಬೇಕು? ಎಂದು ಸಾರ್ವಜನಿಕವಾಗಿಯೇ ಅಲವತ್ತುಕೊಂಡಿದ್ದಾರೆ. ಕಣ್ಣೀರು ಹಾಕುವುದೊಂದೇ ಬಾಕಿ.

ಇವರು ಕನಿಷ್ಠ ಈ ದಿನವಾದರೂ ಗಾಂಧೀಜಿಗೆ, ಲಾಲ್ ಬಹಾದ್ದೂರ್ ಶಾಸ್ತ್ರೀಜಿಗೆ ಹೂವಿನ ಹಾರ ಹಾಕಿ ಸತ್ಯ ನುಡಿಯಲಿ. ಇಲ್ಲದಿದ್ದರೆ ಸತ್ಯ ಮತ್ತು ಪ್ರಾಮಾಣಿಕತೆಯ ದ್ಯೋತಕದಂತಿದ್ದ ಆ ಮಹನೀಯರಿಗೆ ಅವಮಾನ ಮಾಡಿದಂತಾದೀತು.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X