ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ದಿನ ನ್ಯಾಯಾಂಗ ಬಂಧನಕ್ಕೆ ಕಟ್ಟಾ ಜಗದೀಶ್

By Mrutyunjaya Kalmat
|
Google Oneindia Kannada News

Katta Jagadish
ಬೆಂಗಳೂರು, ಅ. 1 : ಸುಳ್ಳು ಮಾಹಿತಿ ನೀಡಿ ಕಾರ್ಪೊರೇಟರಾಗಿ ಆಯ್ಕೆಯಾಗಿ, ಕೆಐಎಡಿಬಿ ಹಗರಣದಲ್ಲಿ ಭಾಗಿಯಾಗಿ, ಲಂಚ ಕೊಟ್ಟು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಕಟ್ಟಾ ಜಗದೀಶ್ ನನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸೆ.30ರಂದು ಕಟ್ಟಾ ಜಗದೀಶನನ್ನು ಬಂಧಿಸಲಾಗಿತ್ತು. ಜಾಮೀನು ಕೋರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಸಿಟಿ ಸಿವಿಲ್ ನ್ಯಾಯಾಲಯ ಮುಂದೂಡಿದೆ. ಕಟ್ಟಾ ಜಗದೀಶ್ ಅಮಾನತಿಗೆ ಪಟ್ಟುಹಿಡಿದಿರುವ ಕಾಂಗ್ರೆಸ್ ಪಕ್ಷ, ಲಂಚ ಪಡೆದು ಸಿಕ್ಕಿಬಿದ್ದಿದ್ದ ಗೋವಿಂದರಾಜುವನ್ನು ಅಮಾನತು ಮಾಡಿದಂತೆ ಕಟ್ಟಾ ಜಗದೀಶನನ್ನು ಕೂಡ ಅಮಾನತು ಮಾಡಬೇಕೆಂದು ಹೇಳಿದೆ.

ತಪ್ಪು ಮಗನದು, ಅಪ್ಪನಿಗೇಕೆ ಶಿಕ್ಷೆ? : ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ. ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮಗ ಹಾಗೂ ವಸಂತನಗರದ ಬಿಬಿಎಂಪಿ ಸದಸ್ಯ ಜಗದೀಶ್ ಕಟ್ಟಾ ಲಂಚ ಪ್ರಕರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಇದು.

ಆರ್ ಎಸ್ಎಸ್ ಕಚೇರಿ ಕೇಶವಕೃಪಾದಲ್ಲಿ ಮುಖಂಡರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಪ್ಪು ಯಾರೇ ಮಾಡಿದರೂ ಶಿಕ್ಷೆ ಖಚಿತ, ಆದರೆ, ಮಗ ಕಟ್ಟಾ ಜಗದೀಶ್ ಮಾಡಿದ್ದಾರೆ ಎನ್ನಲಾದ ತಪ್ಪಿಗೆ ಅಪ್ಪ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುಗೇಕೆ ಶಿಕ್ಷೆ. ಲೋಕಾಯುಕ್ತರ ಕೈಯಲ್ಲಿ ಪ್ರಕರಣವಿದೆ. ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಟ್ಟಾ ಜಗದೀಶ್ ವಿಷಯದಲ್ಲಿ ಹೆಚ್ಚಿಗೆ ಹೇಳಲಾರೆ, ಕಾನೂನಿಗೆ ತಲೆಬಾಗುವೆ, ಮುಂದಿನ ಪ್ರತಿಕ್ರಿಯೆ ಏನಿದ್ದರೂ ಲೋಕಾಯುಕ್ತರ ತನಿಖೆ ಮುಗಿದ ಬಳಿಕ ಎಂದು ಯಡಿಯೂರಪ್ಪ ಹೇಳಿದರು. ಆದರೆ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ರಾಜೀನಾಮೆಯನ್ನು ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಳಂಕರ ಕೂಪ : ರಾಜ್ಯದಲ್ಲಿರುವ ಸರಕಾರ ಕಳಂಕಿತರ ಕೂಪ. ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆ ಅಷ್ಟೇ ಅಲ್ಲ. ಕೆಐಎಡಿಬಿ ಹಗರಣದಲ್ಲಿ ಸ್ವಪಕ್ಷಪಾತ ಎಸಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸರಕಾರ ಹೇಗೆಂದರೆ ಎಂದರೆ ಅಲಿಬಾಬಾ ಮತ್ತು 40 ಕಳ್ಳರ ಕೂಟದಂತಿದೆ ಎಂದು ಲೇವಡಿ ಮಾಡಿದರು. ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಠಿಣ ಕ್ರಮ : ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಅವರನ್ನು ರಕ್ಷಿಸುವ ಮಾತೇ ಇಲ್ಲ. ಲೋಕಾಯುಕ್ತರ ತನಿಖೆಯಲ್ಲಿ ಆರೋಪ ಸಾಬೀತಾದರೆ ಕೂಡಲೇ ಅವರನ್ನು ಅಮಾನತುಗೊಳಿಸಲಾಗುವುದು ಮೇಯರ್ ಎಸ್ಕೆ ನಟರಾಜ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಲಂಚ ಆರೋಪದಲ್ಲಿ ಸಿಕ್ಕಿಬಿದ್ದು ಅಮಾನತುಗೊಂಡಿರುವ ಗೋವಿಂದರಾಜು ಪ್ರಕರಣ ಮತ್ತು ಕಟ್ಟಾ ಜಗದೀಶ್ ಪ್ರಕರಣ ಬೇರೆಯಾಗಿದೆ. ಏನೇ ಆದರೂ ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಗೋವಿಂದರಾಜು ಹೇಳಿಕೆ : ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕಟ್ಟಾ ಜಗದೀಶ್ ಅವರನ್ನು ಕೂಡಲೇ ಅಮಾನತುಪಡಿಸಬೇಕು. ಇಲ್ಲದಿದ್ದರೆ ನನ್ನ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಲಂಚ ಪ್ರಕರಣವೊಂದರಲ್ಲಿ ಆರೋಪಿಯಾಗಿ ಅಮಾನತುಗೊಂಡಿರುವ ಬಿಬಿಎಂಪಿ ಸದಸ್ಯ ಗೋವಿಂದರಾಜು ಮೇಯರ್ ಅವರನ್ನು ಒತ್ತಾಯಿಸಿದ್ದಾರೆ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X