ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿಯನ್ನೇ ಭಿಕ್ಷಾಟನೆಗೆ ಬಿಟ್ಟ ಸುಪುತ್ರ

By Mahesh
|
Google Oneindia Kannada News

Old Woman gets justice
ಮೈಸೂರು, ಸೆ.30: ಇದು ಅಚ್ಚರಿಯಾದರೂ ಸತ್ಯ. ಒಂಭತ್ತು ತಿಂಗಳು ಹೊತ್ತು, ಹೆತ್ತು, ಎತ್ತಿ ಆಡಿಸಿದ ತಾಯಿಯನ್ನು ಮುಪ್ಪಿನಲ್ಲಿ ಸಾಕಿ ಸಲಹಬೇಕಾದ ಮಗನೊಬ್ಬ ಆಕೆಯನ್ನು ಭಿಕ್ಷಾಟನೆಗೆ ತಳ್ಳಿ ಅದರಿಂದ ಬರುತ್ತಿದ್ದ ಆದಾಯದಲ್ಲಿ ಕಂಠಪೂರ್ತಿ ಕುಡಿದು ಮಜಾ ಉಡಾಯಿಸುತ್ತಿದ್ದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ತನ್ನ ತಾಯಿಯನ್ನೇ ಭಿಕ್ಷಾಟನೆಗೆ ದೂಡಿ ಅದರಿಂದ ಮಜಾ ಉಡಾಯಿಸುತ್ತಿದ್ದ ಮಗ ನಗರದ ಒಂಟಿಕೊಪ್ಪಲಿನ ನಿವಾಸಿ. ಹೆಸರು ಮಹೇಶ. ಈಗಷ್ಟೇ35 ವರ್ಷ. ದುಡಿದು ಮುಪ್ಪಿನಲ್ಲಿದ್ದ ಹೆತ್ತಾಕೆಗೆ ತುತ್ತು ಅನ್ನ ಹಾಕಿ ನೆಮ್ಮದಿಯಿಂದ ನೋಡಿಕೊಳ್ಳಬೇಕಾದ ಈತ ಹುಟ್ಟು ಸೋಮಾರಿಯಾಗಿದ್ದನು. ಯಾವುದೇ ಕೆಲಸ ಮಾಡದೆ ಸುತ್ತಾಡುವುದು ಹಾಗೂ ಕಂಠ ಪೂರ್ತಿ ಕುಡಿದು ಎಲ್ಲೆಂದರಲ್ಲಿ ಬೀಳೋದು ಇವನ ನಿತ್ಯದ ಕಾಯಕ.

ಇದಕ್ಕೆ ಹಣ ಬೇಕಲ್ಲವೆ ಅದಕ್ಕಾಗಿ ಈತ ಕಂಡು ಕೊಂಡ ಸುಲಭ ಮಾರ್ಗ ತಾಯಿಯನ್ನು ನಗರದ ಯಾವುದಾದರು ಸರ್ಕಲ್‌ನಲ್ಲಿ ಭಿಕ್ಷಾಟನೆಗೆ ಕೂರಿಸುವುದು. ನೋಡಲು ಕೃಶವಾದ ದೇಹ, ಕೆದರಿದ ಕೂದಲು, ನಿತ್ರಾಣಗೊಂಡ ಕೈಕಾಲುಗಳು ತಕ್ಷಣಕ್ಕೆ ಆಕೆಯನ್ನು ನೋಡಿದವರು ಭಿಕ್ಷೆ ಹಾಕದೆ ಇರುತ್ತಿರಲಿಲ್ಲ. ಆಕೆಯ ಬಳಿ ಒಂದಷ್ಟು ದುಡ್ಡು ಬೀಳುತ್ತಿದ್ದಂತಯೇ ಅಲ್ಲಿ ಪ್ರತ್ಯಕ್ಷವಾಗುತ್ತಿದ್ದ ಮಗ ಮಹಾಶಯ ಅದನ್ನು ಎತ್ತಿಕೊಂಡು ಹೋಗಿ ಕಂಠಮಟ್ಟ ಕುಡಿದು ಬಿಡುತ್ತಿದ್ದನು.

ವೃದ್ದೆ ರತ್ನಮ್ಮ ತನ್ನ ಮಗನಿಂದಲೇ ಆಗುತ್ತಿದ್ದ ಅನ್ಯಾಯವನ್ನು ಯಾರೊಂದಿಗೆ ಹೇಳಿಕೊಳ್ಳಲಾಗದೆ ಕಣ್ಣೀರಿನಲ್ಲಿಯೇ ದಿನ ಕಳೆಯುತ್ತಿದ್ದಳು. 80ರ ಇಳಿ ವಯಸ್ಸಿನಲ್ಲಿ ತನಗೆ ಒದಗಿ ಬಂದ ಸಂಕಟವನ್ನು ಯಾರೊಂದಿಗೂ ಹೇಳಿಕೊಳ್ಳುವಂತಿರಲಿಲ್ಲ. ಏನಾದರು ಮಾತನಾಡಿದರೆ ಮಗ ಮಹೇಶ ದನಕ್ಕೆ ಬಡಿಯುವಂತೆ ಹೊಡೆಯುತ್ತಿದ್ದನು.

ಸಾಮಾನ್ಯವಾಗಿ ಮೈಸೂರಿನ ಮಹಾರಾಣಿ ಕಾಲೇಜಿನ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಕರೆ ತಂದು ಕೂರಿಸುತ್ತಿದ್ದ ಮಗ ಮಹೇಶ ಬಳಿಕ ನಾಪತ್ತೆಯಾಗುತ್ತಿದ್ದನು. ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಅಜ್ಜಿಯ ದಯನೀಯ ಸ್ಥಿತಿ ನೋಡಿ ಕನಿಕರದಿಂದ ಭಿಕ್ಷೆ ಹಾಕುತ್ತಿದ್ದರು. ಈ ನಡುವೆ ಅಜ್ಜಿಯನ್ನು ಮಾತನಾಡಿಸಿದ ವಿದ್ಯಾರ್ಥಿನಿಯರು ಆಕೆಯಿಂದ ಎಲ್ಲಾ ಮಾಹಿತಿಯನ್ನು ಪಡೆದರು.

ಮಗನಿಂದಲೇ ಅಜ್ಜಿಗಾಗುತ್ತಿರುವ ಅನ್ಯಾಯದ ಬಗ್ಗೆ ಮೈಸೂರಿನ ಕನ್ನಡ ವೇದಿಕೆಗೆ ದೂರು ನೀಡಿದರು. ಸ್ಥಳಕ್ಕೆ ಬಂದ ಕಾರ್ಯಕರ್ತರು ಮಗ ಮಹಾಶಯನನ್ನು ಹುಡುಕಿ ಚೆನ್ನಾಗಿ ತದಕಿದರಲ್ಲದೆ, ಅಜ್ಜಿಗೆ ಚಿಕಿತ್ಸೆ ನೀಡಿ, ಬಳಿಕ ಆಶ್ರಮವೊಂದಕ್ಕೆ ಸೇರಿಸಿದ್ದಾರೆ. ಸಾರ್ವಜನಿಕರಿಂದ ಗೂಸಾ ತಿಂದ ಮಗ ಮಹೇಶ ಇದೀಗ ನಾಪತ್ತೆಯಾಗಿದ್ದಾನೆ. ಹೀಗೂ ಇರ್ತಾರೆ ನೋಡಿ.....ಜನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X