ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ಕಾರ್ಯವೈಖರಿ ವಿರುದ್ಧ ಪಿಐಎಲ್

By Mrutyunjaya Kalmat
|
Google Oneindia Kannada News

HR Bhardwaj
ಬೆಂಗಳೂರು, ಸೆ. 28 : ಆಡಳಿತಾತ್ಮಕ ವಿಚಾರದಲ್ಲಿ ರಾಜ್ಯಪಾಲರ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಎಚ್ ಆರ್ ವಿಶ್ವನಾಥ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಕೇಹರ್ ಹಾಗೂ ನ್ಯಾ ಎ ಎಸ್ ಬೋಪಣ್ಣ ಅವರಿದ್ದ ವಿಭಾಗೀಯ ಪೀಠ, ಅರ್ಜಿಯಲ್ಲಿ ರಾಜ್ಯಪಾಲರ ಹೆಸರು ಕೈಬಿಡುವಂತೆ ಸೂಚಿಸಿದೆ.

ರಾಜ್ಯಪಾಲರು ತಮ್ಮ ಸಾಂವಿಧಾನಿಕ ಜವಾಬ್ದಾರಿ ನಿರ್ವಹಿಸದೆ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದ್ದಾರೆ. ಗೋ ಹತ್ಯೆ ನಿಷೇಧ ಮಸೂದೆಗೆ ಸಹಿ ಹಾಕುವ ಪರಮಾಧಿಕಾರ ರಾಜ್ಯಪಾಲರಿಗೆ ಇದೆ. ಆದರೆ, ನೇರವಾಗಿ ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಅನೇಕ ಆಡಳಿತಾತ್ಮಕ ವಿಚಾರದಲ್ಲಿ ರಾಜ್ಯಪಾಲರು ವಿರೋಧ ಪಕ್ಷದ ನಾಯಕರಂತೆ ನಡೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಗೋ ವಂಶ ರಕ್ಷಣೆ ಉದ್ದೇಶದಿಂದ ಸರಕಾರ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತರುತ್ತಿದೆ. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದರೆ, ರಾಜ್ಯಪಾಲರು ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಆತಂಕ ಎದುರಿಸುತ್ತಿದ್ದಾರೆ. ಈ ಬಗ್ಗೆ ಅಲ್ಪ ಸಂಖ್ಯಾತರು ಅನೇಕ ಬಾರಿ ದೂರು ಸಲ್ಲಿಸಿದ್ದಾರೆ ಎಂದು ರಾಜ್ಯಪಾಲರು ಹಲವು ಬಾರಿ ಹೇಳಿದ್ದಾರೆ.

ಆದರೆ, ಇದಕ್ಕೆ ಸ್ಪಷ್ಟ ಉದಾಹರಣೆಗಳಿಲ್ಲ. ರಾಜ್ಯಪಾಲರ ಇಂತಹ ಹೇಳಿಕೆಗಳು ಸಮಾಜದಲ್ಲಿ ಒಡಕು ಉಂಟು ಮಾಡುತ್ತವೆ ಮತ್ತು ವೈಷಮ್ಯಕ್ಕೆ ದಾರಿ ಮಾಡಿಕೊಡುತ್ತವೆ. ಈ ನಡವಳಿಕೆಯ ಹಿಂದೆ ನಾನಾ ಹಿತಾಸಕ್ತಿಗಳು ಅಡಗಿವೆ ಎನ್ನುವುದು ಸ್ಪಷ್ಟ. ಆದ್ದರಿಂದ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಅಥವಾ ವಜಾಗೊಳಿಸಬೇಕು ಎಂದು ಕೇಂದ್ರಕ್ಕೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ವಿಚಾರಣೆ ಕೈಗೆತ್ತಿಕೊಂಡ ಪೀಠ, ಇದು ರಾಜಕೀಯ ವಿಚಾರ ಚರ್ಚೆ ಮಾಡುವ ವೇದಿಕೆಯಲ್ಲ. ಅದಕ್ಕೆ ಬೇಕಾದ ವೇದಿಕೆ ಇದೆ ಎಂದು ಅರ್ಜಿದಾರರಿಗೆ ಸೂಚಿಸಿದೆ. ಅಂತಿಮವಾಗಿ ರಾಜ್ಯಪಾಲ ಭಾರದ್ವಾಜ್ ಅವರನ್ನು ನೇರವಾಗಿ ಪ್ರತಿವಾದಿಯನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ಹೆಸರನ್ನು ತೆಗೆದು ಹಾಕಬೇಕು. ರಾಜಭವನದ ಕಚೇರಿ ಹೆಸರನ್ನು ಅರ್ಜಿಯಲ್ಲಿ ಬಳಸಬೇಕು ಹಾಗೂ ಅರ್ಜಿಯಲ್ಲಿರುವ ಲೋಪಗಳನ್ನು ಸರಿಪಡಿಸಿ, ಪರಿಷ್ಕೃತ ಅರ್ಜಿ ಸಲ್ಲಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X