ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.30, ಅ.1 ರಾಜ್ಯದ ಶಾಲಾ ಕಾಲೇಜಿಗೆ ರಜೆ

By Prasad
|
Google Oneindia Kannada News

Schools and colleges closed on Sept 30 and Oct 1
ಬೆಂಗಳೂರು, ಸೆ. 28 : ಸೆಪ್ಟೆಂಬರ್ 30, ಗುರುವಾರದಂದು ಅಯೋಧ್ಯೆ ತೀರ್ಪು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ ಮತ್ತು ಶುಕ್ರವಾರ (ಸೆ.30 ಮತ್ತು ಅ.1) ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ. ಅ.2ರಂದು ಗಾಂಧಿ ಜಯಂತಿ ಇದ್ದು, ಮರುದಿನ ಭಾನುವಾರವಿರುವುದರಿಂದ ವಿದ್ಯಾರ್ಥಿಗಳಿಗೆ ಸತತ ನಾಲ್ಕು ದಿನ ರಜಾ ಮಜಾ ಸಿಗಲಿದೆ.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ರಾಜ್ಯ ಸರಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ತೀರ್ಪು ಪ್ರಕಟವಾಗುವ ದಿನ ಮತ್ತು ಮರುದಿನ ನಗರದಲ್ಲಿ ಎರಡು ದಿನ ಬೆಳಿಗ್ಗೆ 6ರಿಂದ ಮದ್ಯ ಮಾರಾಟವನ್ನು ನಿಷೇಧಿಸಿ ಆಜ್ಞೆ ಹೊರಡಿಸಲಾಗಿದೆ. ಜೊತೆಗೆ ಸೆಪ್ಟೆಂಬರ್ 30ರಿಂದ ಮೂರು ದಿನಗಳ ಕಾಲ ಅಪರಾಧಿ ಪ್ರಕ್ರಿಯಾ ಸಂಹಿತೆ(ಕ್ರಿಮಿನಲ್ ಪ್ರೊಸಿಜರ್ ಕೋಡ್)ಯ ಸೆಕ್ಷನ್ 144ರ ಅಡಿಯಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರಲಿದೆ.

ವಿಜಯೋತ್ಸವ ನಿಷೇಧ : ಈ ವಿವರಗಳನ್ನು ನೀಡಿರುವ ಶಂಕರ ಬಿದರಿ ಅವರು, ಈ ಮೂರು ದಿನಗಳ ಕಾಲ ಎಲ್ಲಾ ಸಾರ್ವಜನಿಕ ಕಾರ್ಯಕ್ರಮ, ವಿಜಯೋತ್ಸವ, ಐದು ಜನಕ್ಕಿಂತ ಹೆಚ್ಚು ಜನ ಗುಂಪಲ್ಲಿ ಓಡಾಡುವುದನ್ನು ನಿಷೇಧಿಸಲಾಗಿದೆ ಎಂದರು. ಸಿಹಿ ಹಂಚುವುದನ್ನು, ಪಟಾಕಿ ಸಿಡಿಸುವುದನ್ನು ಕೂಡ ನಿಷೇಧಿಸಲಾಗಿದೆ. ಸಮಾಜದ ಶಾಂತಿ ಕದಡುವ ಕೆಲ ವ್ಯಕ್ತಿಗಳನ್ನು ಗುರುತಿಸಲಾಗಿದ್ದು ಅವರ ವಿರುದ್ಧ ನಿಗಾ ಇಡಲು ಎಲ್ಲಾ ಠಾಣೆಗಳಿಗೆ ತಿಳಿಸಲಾಗಿದೆ. ನಗರದಲ್ಲಿ ಒಟ್ಟು 18 ಸಾವಿರ ಪೊಲೀಸರು, 15 ಸಾವಿರ ಹೋಂಗಾರ್ಡ್ ಗಳು ಮತ್ತು 20 ಸಾವಿರ ರಿಸರ್ವ್ ಪೊಲೀಸ್ ತುಕುಡಿ ನಗರವನ್ನು ಕಾವಲು ಕಾಯಲಿದೆ ಎಂದು ಅವರು ಹೇಳಿದರು. ನಿಯಮ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಬಿದರಿ ತಿಳಿಸಿದರು.

ಈ ಮೊದಲು, ಭದ್ರತೆಗಾಗಿ ಸರ್ವ ಕ್ರಮಗಳನ್ನು ಕೊಂಡಿರುವುದರಿಂದ ರಜೆಯ ಅಗತ್ಯವಿಲ್ಲವೆಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಹೇಳಿದ್ದರು. ಗೃಹ ಸಚಿವ ಆರ್ ಅಶೋಕ್ ಕೂಡ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಹೇಳಿರಲಿಲ್ಲ. ಆದರೆ, ಪ್ರಕರಣದ ಸಂಕೀರ್ಣತೆ ಮತ್ತು ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲು ಸರಕಾರ ನಿರ್ಧರಿಸಿದೆ.

ಸೆ. 24 ಮತ್ತು 25ರಂದು ರಾಜ್ಯ ಸರಕಾರ ಎರಡು ದಿನಗಳ ರಜೆ ಘೋಷಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟಿಗೆ ತೀರ್ಪು ನೀಡದಂತೆ ತಡೆಯಾಜ್ಞೆ ನೀಡಿದ್ದರಿಂದ ರಜೆಯನ್ನು ರದ್ದುಗೊಳಿಸಿತ್ತು. ಆದರೆ, ಈ ಬಾರಿ ತೀರ್ಪು ಮುಂದೂಡುವ ಯಾವುದೇ ಸಾಧ್ಯತೆಗಳಿಲ್ಲ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಶಾಂತಿ ಕದಡದಂತೆ ಪೊಲೀಸ್ ಬಂದೋಬಸ್ತ್ ಆಯೋಜಿಸಲು ಸೂಚಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸಬೇಕೆಂದು ಆದೇಶ ನೀಡಲಾಗಿದೆ.

ಬೆಂಗಳೂರಿನಲ್ಲಿ 50 ಸಾವಿರ ಪೊಲೀಸರು ಸಾಮಾಜ ವಿರೋಧಿ ಶಕ್ತಿಗಳ ವಿರುದ್ಧ ಹದ್ದಿನ ಕಣ್ಣಿಡಲಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಎರಡು ದಿನಗಳ ಕಾಲ ಅಘೋಷಿತ ಬಂದ್ ಇರಲಿದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ
ಟಾಪ್ 10 ಪುಸ್ತಕ | ಟಾಪ್ 10 ಆಡಿಯೋ | ಟಾಪ್ 10 ವಿಡಿಯೋ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X