ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮಳೆ : ತಲೆಬರಹಗಳ ಸೊಗಸು

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

Titles create havoc in newspapers
ಇಲಿಗೆ ಪ್ರಾಣಸಂಕಟವಾಗಿರುವಾಗ ಬೆಕ್ಕಿಗೆ ಚೆಲ್ಲಾಟವಂತೆ. ಕರ್ನಾಟಕದ ಹಲವು ಪ್ರದೇಶಗಳು ಮಳೆಯ ಹೊಡೆತಕ್ಕೆ ಬಕ್ಕಬೋರಲಾಗಿ ಬಿದ್ದಿರುವಾಗ ನಾನಿಲ್ಲಿ ತಲೆಬರಹ ಕುರಿತ ತಲೆಹರಟೆ ಮಾಡಹೊರಟಿದ್ದೇನೆ, ಕ್ಷಮೆಯಿರಲಿ.

ಬೆಂಗಳೂರು ನಗರವು ನಿನ್ನೆ (ಶುಕ್ರವಾರ) ಕಂಡ ಕಲಶ-ದೊನ್ನೆ ಮಳೆ(!) ಅರ್ಥಾತ್ ಕುಂಭದ್ರೋಣ ಮಳೆಯ ವರದಿಯನ್ನು ಇಂದು (ಶನಿವಾರ) ಮುಖಪುಟದ ಪ್ರಧಾನ ಸುದ್ದಿಯಾಗಿ ಪ್ರಕಟಿಸಿರುವ ಕನ್ನಡ ದಿನಪತ್ರಿಕೆಗಳು ಈ ವರದಿಗೆ ನೀಡಿದ ತಲೆಬರಹಗಳ ಸೊಗಸನ್ನು ತಿಳಿಸುವುದು ನನ್ನೀ ತಲೆಹರಟೆಯ ಉದ್ದೇಶ. ಪೈಪೋಟಿಯಿಂದೆಂಬಂತೆ ನಮ್ಮ ದಿನಪತ್ರಿಕೆಗಳು ಪ್ರತಿದಿನ ಸುದ್ದಿಗಳಿಗೆ ಅರ್ಥಗರ್ಭಿತವೂ ಆಕರ್ಷಕವೂ ಅದ ತಲೆಬರಹಗಳನ್ನು ನೀಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಬೆಂಗಳೂರಿನ ಮಳೆಯ ಸುದ್ದಿಗೆ ಇಂದು ಪತ್ರಿಕೆಗಳು ನೀಡಿರುವ ಮುಖಪುಟ ಶೀರ್ಷಿಕೆಗಳೂ ಈ ಪೈಪೋಟಿಯಿಂದ ಹೊರತಾಗಿಲ್ಲ.

ಸಂಯುಕ್ತ ಕರ್ನಾಟಕವು ರಾಜ್ಯದ ಹಲವೆಡೆಯ ಮಳೆಸುದ್ದಿಗೆ, ಒಟ್ಟಾಗಿ, "ಎಲ್ಲೆಲ್ಲೂ ಮಳೆ ಆರ್ಭಟ" ಎಂದು ಸಾಮಾನ್ಯ ತಲೆಬರಹ ನೀಡಿ, ಬೆಂಗಳೂರಿನ ಬಗ್ಗೆ, "ರಾಜಧಾನಿಯಲ್ಲೂ ವರುಣನ ರೌದ್ರಾವತಾರ" ಎಂಬ ಚರ್ವಿತಚರ್ವಣ ಉಪಶೀರ್ಷಿಕೆ ಕೊಟ್ಟು (ಮಳೆನೀರಿನಲ್ಲಿ) ಕೈತೊಳೆದುಕೊಂಡಿದೆ.

ಪ್ರಜಾವಾಣಿಯು, "ಅಬ್ಬರದ ಮಳೆಗೆ ನಗರ ತತ್ತರ" ಎಂದು ತನ್ನ ಸಾಂಪ್ರದಾಯಿಕ ಶೈಲಿಯಲ್ಲಿ ತಲೆಬರಹ ನೀಡಿದರೆ, ಕನ್ನಡಪ್ರಭವು "ಉತ್ತರೆಗೆ ಬಿಬಿಎಂಪಿ ನಿರುತ್ತರ" ಎಂಬ ಶೀರ್ಷಿಕೆ ನೀಡುವ ಮೂಲಕ ಪ್ರಜಾವಾಣಿಯ ತಲೆಬರಹದ ಲಯ ಮತ್ತು ಪ್ರಾಸದಲ್ಲೇ ದಾಳ ಉದುರಿಸಿರುವುದು ಆಕಸ್ಮಿಕ ಸಂಯೋಗ! ಕನ್ನಡಪ್ರಭದ ಶೀರ್ಷಿಕೆ ಹೆಚ್ಚು ಆಕರ್ಷಕ ಮತ್ತು ಹೆಚ್ಚು ಅರ್ಥಪೂರ್ಣವೆಂಬುದಿಲ್ಲಿ ಗಮನಾರ್ಹ. ಇವೆರಡೂ ಪತ್ರಿಕೆಗಳ ತಲೆಬರಹಗಳ ಸಮ್ಮಿಶ್ರಣವೆಂಬಂತೆ ಉದಯವಾಣಿಯು, "ಉತ್ತರೆಗೆ ಜನ ತತ್ತರ" ಎಂಬ ಶೀರ್ಷಿಕೆ ನೀಡಿರುವುದೂ ಕಾಕತಾಳೀಯ!

ಪದಪ್ರಾಸ ಮತ್ತು ಅಕ್ಷರಚಾತುರ್ಯಗಳಿಗೆ ಹೆಸರಾಗಿರುವ ವಿಜಯ ಕರ್ನಾಟಕವು ಕೇವಲ ಪದಪ್ರಾಸದ ಮೊರೆಹೊಕ್ಕು, "ಮುನಿದ ವರುಣ, ನಗರ ದಾರುಣ" ಎಂಬ ತಲೆಬರಹ ನೀಡಿ, ಜೊತೆಗೆ, "ಎರಡು ಗಂಟೆಯಲ್ಲಿ ದಶಕದ ದಾಖಲೆ ಮಳೆ, ಇನ್ನೂ ಇದೆ ನಾಲ್ಕು ದಿನ ರಗಳೆ" ಎಂದು ಉಪಶೀರ್ಷಿಕೆಯಲ್ಲೂ ಅಂತ್ಯಪ್ರಾಸ ಮೆರೆದಿದೆ. ಆದರೆ ವಿಜಯಿ ಮಾತ್ರ ಹೊಸ ದಿಗಂತ.

"ಮರಣ ಮೃದಂಗ" ಎಂಬ ಜನಪ್ರಿಯ ನುಡಿಗಟ್ಟಿಗೆ ಸಂವಾದಿಯೆಂಬಂತೆ, "ಬೆಂಗಳೂರಿನಲ್ಲಿ ವರುಣ ಮೃದಂಗ" ಎಂಬ ಅರ್ಥಗರ್ಭಿತ ಉಪಶೀರ್ಷಿಕೆ ನೀಡಿದ್ದಲ್ಲದೆ, ಪ್ರಸ್ತುತ ಪ್ರತಿಯೊಬ್ಬರ ಬಾಯಲ್ಲೂ ಧ್ವನಿಸುತ್ತಿರುವ, "ಲೈಫು ಇಷ್ಟೇನೆ!" ಎಂಬ ("ಪಂಚರಂಗಿ" ಚಲನಚಿತ್ರದ) ಉಪಶೀರ್ಷಿಕೆ ಕಂ ಹಾಡಿನ ಸಾಲನ್ನು ಬಳಸಿಕೊಂಡು, "ಸಿಟಿ ಲೈಫು ಇಷ್ಟೇನೇ!!" ಎಂಬ ಅದ್ಭುತ, ಅರ್ಥಪೂರ್ಣ ತಲೆಬರಹ ನೀಡಿದೆ.

ಇದಿಷ್ಟು ಮುದ್ರಣ ಮಾಧ್ಯಮದ ದಿನಪತ್ರಿಕೆಗಳ ಸುದ್ದಿಯಾಯಿತು. ನಮ್ಮೀ ದಟ್ಸ್ ಕನ್ನಡ ಜಾಲತಾಣವು ಕೊಟ್ಟಿರುವ ಶೀರ್ಷಿಕೆಯ ಬಗ್ಗೆಯೂ ಒಂದು ಮಾತು ಹೇಳಲಿಚ್ಛಿಸುತ್ತೇನೆ. "ಉತ್ತರಾ ಮಳೆಗೆ ಬೆಂಗಳೂರು ನಗರ ಜೀವನ ತತ್ತರ" ಎಂಬ ಶೀರ್ಷಿಕೆಯನ್ನು ಕೊಟ್ಟಿದೆ. ಇಲ್ಲಿ ಗಮನಾರ್ಹ ಅಂಶಗಳೆಂದರೆ, (1) ಭಾರಿಯಾಗಿ ಸುರಿದ ಮಳೆಯ ಸಂಕೇತವೆಂಬಂತೆ ಭಾರಿ ಉದ್ದದ ಶೀರ್ಷಿಕೆಯನ್ನೇ ಈ ಜಾಣತಾಣ ಕೊಟ್ಟಿದೆ; (2) ಮೇಲೆ ಉಲ್ಲೇಖಿಸಿರುವ ಹಲವು ಪತ್ರಿಕೆಗಳ ತಲೆಬರಹಗಳ ಧ್ವನಿ ಈ ಜಾಣತಾಣದ ಶೀರ್ಷಿಕೆಯಲ್ಲಿ ಅಡಕವಾಗಿದೆ; (3) "ಉತ್ತರಾ, ಮಳೆಗೆ ಬೆಂಗಳೂರು ನಗರ ಜೀವನ ತತ್ತರ" ಎಂದು (ಒಂದು ಅಲ್ಪವಿರಾಮ ಹಾಕಿ) ಓದಿದಾಗ ಈ ತಲೆಬರಹವು ಉತ್ತರೆಯನ್ನು ಸಂಬೋಧಿಸಿ ನೇರ ದೂರು ನೀಡಿದಂತೆ ಭಾಸವಾಗುತ್ತದೆ! ಇಲ್ಲಿಗೆ ತಲೆಹರಟೆ ಸಮಾಪ್ತಂ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X