ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಜಿಪುರದ ಮಳೆರಾಡಿಯಲಿ ಸಚಿವರ ಈಜಾಟ

By Rajendra
|
Google Oneindia Kannada News

R Ashok, Home minister
ಬೆಂಗಳೂರು, ಸೆ.25 : ಶುಕ್ರವಾರ ಸುರಿದ ವರ್ಷಧಾರೆಗೆ ಈಜಿಪುರ ಶೆಡ್ ವಾಸಿಗಳು ಕಂಗಾಲಾಗಿ ಹೋಗಿದ್ದಾರೆ. ಮಳೆಹಾನಿಯಿಂದ ತತ್ತರಿಸಿದ ಈಜಿಪುರ ನಿವಾಸಿಗಳನ್ನು ಸಂತೈಸಲು ಸಚಿವರ ದಂಡು ಇಂದು ದೌಡಾಯಿಸಿತು. ಗೃಹ ಸಚಿವ ಆರ್ ಅಶೋಕ್ ಮತ್ತು ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿದರು.

ಈಜಿಪುರದಲ್ಲಿ ರೋಗರುಜಿನಗಳು ಬರದಂತೆ ಜಾಗ್ರತೆ ವಹಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಆರ್ ಅಶೋಕ್ ತಿಳಿಸಿದರು. ಬೆಳ್ಳಂದೂರು ಕೆರೆಯಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಮಳೆಯ ನೀರು ಇಲ್ಲಿನ ಕಾಲೋನಿಗಳಿಗೆ ನುಗ್ಗುತ್ತಿದೆ. ಸಮಸ್ಯೆಗೆ ಮೂಲ ಕಾರಣ ಇದು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮಾತನಾಡಿ ಬೆಳ್ಳಂದೂರು ಕೆರೆಯ ಹೂಳು ತೆಗೆಸುವ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಬಿಬಿಎಂಪಿ ಅಧಿಕಾರಿಗಳು, ಕಾರ್ಪೋರೇಟರ್ ಗಳು ರಾತ್ರಿಯಿಡೀ ಜಾಗರಣೆ ಇದ್ದು ಮಳೆಹಾನಿಯನ್ನು ಪರಿಹರಿಸುವಲ್ಲಿ ಶ್ರಮಿಸಿದ್ದಾರೆ. ಬೆಂಗಳೂರಿನ ಮೇಯರ್ ನಟರಾಜ್ ಅವರು ರಾತ್ರಿ ಇಡೀ ನಿದ್ದೆ ಮಾಡದೆ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ ಎಂದು ಅಶೋಕ್ ವಿವರ ನೀಡಿದರು.

ಮಳೆ ಹಾನಿಗೆ ಒಳಗಾದ ಶಾಂತಿನಗರ, ಶೇಷಾದ್ರಿಪುರ ಹಾಗೂ ಮೆಜೆಸ್ಟಿಕ್ ಪ್ರದೇಶಗಳಿಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅಶೋಕ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಸಂದರ್ಭದಲ್ಲಿ ಮೇಯರ್ ನಟರಾಜ್, ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

ಈಜಿಪುರದ ಈಜಾಡಿ ಬಂದ ಸಚಿವರೇ, ಬಿಬಿಎಂಪಿ ಅಧಿಕಾರಿಗಳೇ, ಮಳೆಯಿಂದ ಒದಗಿರುವ ಸಮಸ್ಯೆಯನ್ನು ಈಜಿಯಾಗಿ ತೆಗೆದುಕೊಳ್ಳಬೇಡಿ.

ಮುಖ್ಯಮಂತ್ರಿ ಸಭೆ : ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ಜನತೆ ಎದುರಿಸುತ್ತಿರುವ ನಾನಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಸಂಜೆ ಗೃಹ ಸಚಿವ ಆರ್ ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಹಾಪೌರ ನಟರಾಜ್ ಮತ್ತು ಬಿಬಿಎಂಪಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಹತ್ತು ವರ್ಷಗಳಲ್ಲಿ ಸುರಿದ ಅತಿ ಹೆಚ್ಚು ಮಳೆಯಿಂದಾಗಿ ಮತ್ತು ಹದಗೆಟ್ಟ ಚರಂಡಿ ವ್ಯವಸ್ಥೆಯಿಂದಾಗಿ ಶುಕ್ರವಾರ ನಾಗರಿಕರು ಸಾಕಷ್ಟು ಪರದಾಡುವಂತಾಯಿತು. ಮಳೆಯಿಂದಾಗಿ ಸಾವು-ನೋವು ಸಂಭವಿಸುವ ಮುನ್ನ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ. ನಾಗರಿಕರ ಪ್ರಜ್ಞಾಹೀನತೆಯಿಂದಾಗಿಯೂ ಅನೇಕ ಚರಂಡಿಗಳು ಕಟ್ಟಿಕೊಂಡು ಮಳೆ ನೀರು ಸರಾಗವಾಗಿ ಹರಿಯದಂತಾಗಿದೆ. ಈ ನಿಟ್ಟಿನಲ್ಲಿ, ಚರಂಡಿ, ಕೆರೆಯ ಹೂಳೆತ್ತುವುದನ್ನು ಸರಿಯಾಗಿ ಮಾಡುವುದರ ಜೊತೆಗೆ ನಾಗರಿಕರಲ್ಲಿಯೂ ಪರಿಸರ ಪ್ರಜ್ಞೆಯನ್ನು ಬೆಳೆಸುವ ಕಾರ್ಯಕ್ಕೆ ಸರಕಾರ ಕೈಹಾಕಬೇಕಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X