• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸವಣೂರಲ್ಲಿ ಸತ್ಯಾತ್ಮತೀರ್ಥರ ಚಾತುರ್ಮಾಸ್ಯ ಸಂಪನ್ನ

By * ಚಂದ್ರಶೇಖರ್ ಬಿ., ಸವಣೂರ
|

ಸವಣೂರ, ಸೆ. 25 : ನಗರದ ಶ್ರೀ ಸತ್ಯಬೋಧತೀರ್ಥರ ಮೂಲವೃಂದಾವನ ಸನ್ನಿಧಿಯಲ್ಲಿ ಜರುಗಿದ ಉತ್ತರಾಧಿಮಠಾಧೀಶರ ಚಾತುರ್ಮಾಸ್ಯ ಕಾರ್ಯಕ್ರಮ ಸೀಮೋಲಂಘನ ಕಾರ್ಯಕ್ರಮದೊಂದಿಗೆ ವಿಧಿವತ್ತಾಗಿ ಸಂಪೂರ್ಣಗೊಂಡಿತು.

ಶ್ರೀ ಸತ್ಯಬೋಧ ತೀರ್ಥರ ಜನ್ಮತ್ರಿಶತಮಾನೋತ್ಸವ ಹಾಗೂ ಶ್ರೀ ಸತ್ಯಧ್ಯಾನತೀರ್ಥರ ಪೀಠಾರೋಹಣದ ಶತಮಾನೋತ್ಸವ ಸಂದರ್ಭದಲ್ಲಿ ಜರುಗಿದ ಈ ಚಾತುರ್ಮಾಸ್ಯ ಕಾರ್ಯಕ್ರಮ ಒಂದು ಐತಿಹಾಸಿಕ ಘಟನೆಯಾಗಿ ದಾಖಲಾಯಿತು. ಶ್ರೀ ಸತ್ಯಬೋಧತೀರ್ಥರ ಬಳಿಕ 240 ವರ್ಷಗಳ ತರುವಾಯ ಸವಣೂರಿನಲ್ಲಿ ಉತ್ತರಾಧಿಮಠಾಧೀಶರ ಚಾತುರ್ಮಾಸ್ಯ ಜರುಗಿದ್ದು, ಈ ಭಾಗದ ಸಹಸ್ರಾರು ಸದ್ಭಕ್ತರಲ್ಲಿ ಜ್ಞಾನದ ಭಕ್ತಿಯ ಗಂಗೆಯನ್ನು ಹರಿಸಿತು.

ನವಾಬರ ಸಂಸ್ಥಾನವಾಗಿದ್ದ ಸವಣೂರಿನಲ್ಲಿ ತಮ್ಮ 15ನೇ ಚಾತುರ್ಮಾಸ್ಯವನ್ನು ಯಶಸ್ವಿಯಾಗಿ ಪೂರೈಸಿದ ಉತ್ತರಾಧಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು, ಗುರುವಾರ ಸಂಜೆ ಬಂಕಾಪೂರದ ಐತಿಹಾಸಿಕವಾದ ಗುಹಾ ನರಸಿಂಹ ದೇವರ ಸನ್ನಿಧಿಗೆ ಸೀಮೋಲಂಘನ ಕೈಗೊಂಡರು. ಶ್ರೀಮಠದಲ್ಲಿ ಸತತ 52 ದಿನಗಳ ಕಾಲದ ಚಾತುರ್ಮಾಸ್ಯವನ್ನು ವೈಭವಪೂರ್ಣವಾಗಿ ಕೈಗೊಂಡಿದ್ದ ಶ್ರೀಸತ್ಯಾತ್ಮತೀರ್ಥರು, ಸಹಸ್ರಾರು ಭಕ್ತರ ಜಯಘೋಷಣೆಗಳ ನಡುವೆ ಸೀಮೋಲಂಘನ ಕೈಗೊಂಡು, ಚಾತುರ್ಮಾಸ್ಯವನ್ನು ವಿಧ್ಯುಕ್ತವಾಗಿ ಪೂರ್ಣಗೊಳಿಸಿದರು.

ಶ್ರೀಗಳನ್ನು ಮಠದ ಆವರಣದಿಂದ ಬಂಕಾಪೂರ ಪಟ್ಟಣದವರೆಗೂ ಬೈಕ್ ರ್‍ಯಾಲಿ ಕೈಗೊಂಡು ಬೀಳ್ಕೊಡುಗೆ ನೀಡಿದರು. ಬಂಕಾಪೂರ ಪಟ್ಟಣದಲ್ಲಿಯೂ ಶ್ರೀಗಳಿಗೆ ಪೂರ್ಣಕುಂಭ ಕಲಶಗಳ ಭವ್ಯ ಸ್ವಾಗತ ನೀಡಿ, ಮೆರವಣಿಗೆಯನ್ನು ಕೈಗೊಳ್ಳಲಾಯಿತು. ಡೊಳ್ಳು ಝಾಂಜ್ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀಗಳ ಮೆರವಣಿಗೆಯನ್ನು ಕೈಗೊಂಡರು.

400 ವರ್ಷಗಳ ಇತಿಹಾಸವನ್ನು ಹೊಂದಿರುವ ಬಂಕಾಪೂರದ ಗುಹಾ ನರಸಿಂಹ ದೇವರ ದರ್ಶವನ್ನು ಪಡೆದುಕೊಂಡ ಶ್ರೀ ಸತ್ಯಾತ್ಮತೀರ್ಥರು, ದೇವರಿಗೆ ಪೂಜೆ ಸಲ್ಲಿಸಿದರು. ಪ್ರತಿಯೊಂದು ಸತ್ಕಾರ್ಯಗಳಿಗೂ ಪ್ರೇರಣೆ ನೀಡುವ, ಯಾವದೇ ವಿಘ್ನಗಳು ಬರದಂತೆ ರಕ್ಷಣೆ ಮಾಡುವ ಹಾಗೂ ಅದನ್ನು ಪೂರ್ಣಗೊಳಿಸುವ ನರಸಿಂಹ ದೇವರು ಎಲ್ಲರಿಗೂ ಮಂಗಳವನ್ನು ಉಂಟು ಮಾಡಲಿ ಎಂದು ಹಾರೈಸಿದರು. ಶ್ರೀ ಯಾದವಾರ್ಯರ ಪುಣ್ಯತಿಥಿ ಪ್ರಯುಕ್ತ ಅವರ ವೈರಾಗ್ಯ ಭಾವದ ಸ್ಮರಣೆಯನ್ನು ಕೈಗೊಂಡರು. ಸೀಮೋಲಂಘನ ಕೈಗೊಂಡ ಶ್ರೀ ಸತ್ಯಾತ್ಮತೀರ್ಥರು ಬಳಿಕ ಸವಣೂರಿಗೆ ಮರಳಿದರು.

ಅವಿಸ್ಮರಣೀಯವಾದ ರೀತಿಯಲ್ಲಿ ಜರುಗಿದ ಈ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಸಮಗ್ರ ದಕ್ಷಿಣ ಭಾರತದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು, ಪಂಡಿತರು ವಿದ್ವಾಂಸರು ಪಾಲ್ಗೊಂಡಿದ್ದರು. ತಿರುಪತಿ ಸೇರಿದಂತೆ ವಿವಿಧ ಪುಣ್ಯ ಕ್ಷೇತ್ರಗಳಿಂದ ಪವಿತ್ರ ವಸ್ತ್ರಗಳನ್ನು, ಶೇಷ ವಸ್ತ್ರಗಳನ್ನು, ಪ್ರಸಾದಗಳನ್ನು ಸವಣೂರಿಗೆ ತಂದು ಶ್ರೀಗಳಿಗೆ ಸಮರ್ಪಿಸಲಾಯಿತು. ಹತ್ತಾರು ಧಾರ್ಮಿಕ ಕೃತಿಗಳು ಈ ಸಮಾರಂಭದಲ್ಲಿ ಲೋಕಾರ್ಪಣೆಗೊಂಡವು. ಹಲವಾರು ಸಂಗೀತ ವಿದ್ವಾಂಸರು, ಗಾಯಕರು ಸಂಗೀತ ಸುಧೆಯನ್ನು ಹರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X