ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ತೀರ್ಪು ಮುಂದೂಡಲು ಸುಪ್ರೀಂ ಆದೇಶ

By Prasad
|
Google Oneindia Kannada News

SC directs Allahabad HC to postpone Ayodhya title dispute verdict
ನವದೆಹಲಿ/ಬೆಂಗಳೂರು, ಸೆ. 23 : ವಿವಾದಿತ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಒಡೆತನಕ್ಕೆ ಸಂಬಂಧಿಸಿದ ತೀರ್ಪನ್ನು ಸೆಪ್ಟೆಂಬರ್ 28ರವರೆಗೆ ಪ್ರಕಟಿಸಬಾರದೆಂದು ಅಲಹಾಬಾದ್ ಹೈಕೋರ್ಟಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಬಹುನಿರೀಕ್ಷಿತ ತೀರ್ಪನ್ನು ಸೆ.24ರಂದು ಪ್ರಕಟಿಸುವುದಾಗಿ ಅಲಹಾಬಾದ್ ಹೈಕೋರ್ಟ್ ಹೇಳಿತ್ತು.

ತೀರ್ಪಿನ ದಿನಾಂಕವನ್ನು ಮುಂದೂಡಬೇಕೆಂದು ರಮೇಶ್ ಚಂದ್ರ ತ್ರಿಪಾಠಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್ ಆಜ್ಞೆಯನ್ನು ಪ್ರಶ್ನಿಸಿ ತ್ರಿಪಾಠಿ ಅವರು ವಕೀಲ ಸುನೀಲ್ ಜೈನ್ ಅವರ ಮುಖಾಂತರ ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮತ್ತೆ ವಿಚಾರಣೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಒಂದು ವಾರಗಳ ಕಾಲ ತೀರ್ಪು ಪ್ರಕಟಿಸಬಾರದೆಂದು ಆದೇಶಿಸಿದೆ.

ಅಕ್ಟೋಬರ್ 3ರಿಂದ ಆರಂಭವಾಗುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ, ಅಮೆರಿಕದಲ್ಲಿ ಸೆಪ್ಟೆಂಬರ್ 11ರಂದು ಕುರಾನ್ ಹರಿದುಹಾಕಿದ್ದು ಮತ್ತು ಕಾಶ್ಮೀರದಲ್ಲಿ ಉದ್ಭವಿಸಿರುವ ಗಲಭೆಯ ಹಿನ್ನೆಲೆಯಲ್ಲಿ ಧರ್ಮಸೂಕ್ಷ್ಮವಾದ ತೀರ್ಪನ್ನು ಮುಂದೂಡಬೇಕೆಂದು ತ್ರಿಪಾಠಿ ಹೈಕೋರ್ಟನ್ನು ಕೋರಿದ್ದರು. ಅದಲ್ಲದೆ, ತೀರ್ಪು ಹೊರಬಿದ್ದರೆ ಭಾರತದ ಘನತೆಗೆ ಧಕ್ಕೆಯಾಗುತ್ತದೆ ಮತ್ತು ಕೋಮುಗಲಭೆಗಳಿಗೆ ನಾಂದಿ ಹಾಡಬಹುದು ಎಂಬ ಕಾರಣವನ್ನೂ ಅವರು ನೀಡಿದ್ದರು.

ನಾನಾ ಬಗೆಯ ಸಮಸ್ಯೆಯ ಮೂಟೆಯನ್ನು ದೇಶ ಹೊತ್ತಿರುವಾಗ ತೀರ್ಪು ಹೊರಬಿದ್ದರೆ ಉಂಟಾಗುವ ವ್ಯತಿರಕ್ತ ಪರಿಣಾಮಗಳನ್ನು ಮತ್ತು ದೇಶದ ಸಾಮಾನ್ಯ ಜನತೆ ಎದುರಿಸಬೇಕಾದ ದುಷ್ಪರಿಣಾಮಗಳನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ತೀರ್ಪನ್ನು ಮುಂದೂಡಲು ಹೇಳಿದೆ.

ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂಬಂತೆ ಈ ತೀರ್ಪಿನ ದಿನಾಂಕವನ್ನು ಮುಂದೂಡಿದ್ದರಿಂದ ಇಡೀ ರಾಷ್ಟ್ರ ನಿರಾಳತೆಯಿಂದ ನಿಡುಸುಯ್ಯುವಂತಾಗಿದೆ. ತೀರ್ಪು ಹೊರಬಿದ್ದರೆ ಅಥವಾ ಯಾವುದೇ ಧರ್ಮದ ಪರವಾಗಿದ್ದರೆ ಏನಾಗುವುದೋ ಎಂಬ ಉದ್ವಿಗ್ನತೆ, ಆತಂಕ ಇಡೀ ರಾಷ್ಟ್ರದಲ್ಲಿ ಮನೆಮಾಡಿತ್ತು. ತೀರ್ಪು ಹೊರಬೀಳುವುದು ಖಾತ್ರಿಯಾಗಿದ್ದರಿಂದ ಕರ್ನಾಟಕ ಸೇರಿದಂತೆ ಎಲ್ಲಕಡೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದೆಂದು ಆಯಾ ರಾಜ್ಯಗಳು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದವು.

ಕರ್ನಾಟಕದಲ್ಲಿ ರಜಾ ರದ್ದು : ತೀರ್ಪಿನ ದಿನಾಂಕ ಒಂದು ವಾರ ಕಾಲ ಮುಂದೂಡಲಾಗಿದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೋಷಿಸಿದ್ದ ಸೆ.24 ಮತ್ತು 25 ಎರಡು ದಿನಗಳ ರಜೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಆದ್ದರಿಂದ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಎಂದಿನಂತೆ ಶುಕ್ರವಾರ ಮತ್ತು ಶನಿವಾರ ಪಾಠಗಳಿಗೆ ಹಾಜರಾಗಬೇಕು.

ಕರ್ನಾಟಕದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು ಮತ್ತು ಕಾನೂನು ಸುವ್ಯವಸ್ಥೆ ಹದಗೆಡಬಾರದೆಂದು ಯಡಿಯೂರಪ್ಪನವರು ವಿವಿಧ ಧರ್ಮದ ನಾಯಕರು ಮತ್ತು ರಾಜಕೀಯ ಮುಖಂಡರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶಾಂತಿಯಿಂದಿರಬೇಕೆಂದು ಜನತೆಯನ್ನು ಕೋರಿದ್ದರು. ಜೊತೆಗೆ, ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆಯನ್ನು ಕೂಡ ಪೊಲೀಸ್ ಆಯುಕ್ತರು ಹೇರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X