ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗಳ ನಿಷ್ಠೆ ಪ್ರಶಂಸನೀಯ ಎಂದ ದೇವೇಗೌಡ

By Mrutyunjaya Kalmat
|
Google Oneindia Kannada News

HD Devegowda
ಬೆಂಗಳೂರು, ಸೆ. 23 : ಗಣಿ ವಿಷಯದಲ್ಲಿ ಬಳ್ಳಾರಿ ರೆಡ್ಡಿ ಬ್ರದರ‍್ಸ್ ಬಗ್ಗೆ ಕೆಂಡಾಮಂಡಲವಾಗುತ್ತಿದ್ದ ದೇವೇಗೌಡ, ಇದೇ ಮೊದಲ ಬಾರಿಗೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮನ್ನು ನಂಬಿ, ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಲು ರೆಡ್ಡಿ ಸೋದರರು ಮಾಡುತ್ತಿರುವ ಹೋರಾಟವು ಉಪಕಾರ ಸ್ಮರಣೆ ಧರ್ಮ ಎಂದು ಬಣ್ಣಿಸಿದರು. ಕೆಲವರು ಎಷ್ಟೇ ಕೆಟ್ಟವರಾದರೂ ಅವರಲ್ಲೂ ಒಳ್ಳೆ ಗುಣಗಳು ಇರುತ್ತವೆ. ತಮಗೆ ಸಹಕರಿಸಿದವರ ಬಗ್ಗೆ ಉಪಕಾರ ಮಾಡುವ ಬುದ್ಧಿ ರೆಡ್ಡಿ ಬ್ರದರ‍್ಸ್ ಗಳಲ್ಲಿದೆ ಎಂದರು.

ಎರಡು, ಮೂರು ದಿನಗಳ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ರೆಡ್ಡಿ ಬ್ರದರ‍್ಸ್‌ಗಳಲ್ಲಿರುವ ಉಪಕಾರ ಧರ್ಮ, ನಿಯತ್ತಿನ ಬಗ್ಗೆ ಮೆಚ್ಚುಗೆ ಮಾತನಾಡುವುದು ತಪ್ಪೇನಲ್ಲ ಎಂದು ಹೇಳಿದರು. ಗೂಳಿಹಟ್ಟಿ ಶೇಖರ್ ಕೂಡ ನನ್ನ ಶಿಷ್ಯನೇ. ಏನೋ ಬೇಸರ ಮಾಡಿಕೊಂಡು ಬಂಡಾಯವೆದ್ದು ಹೋಗಿದ್ದ. ಆತ ಗೆಲ್ಲುತ್ತಿದ್ದಂತೆಯೇ ಖುದ್ದು ಕರುಣಾಕರರೆಡ್ಡಿ ಅವರೇ ಮನೆಗೆ ಬಂದು ಶೇಖರ್‌ನನ್ನು ಕರೆದೊಯ್ದು ಸರಕಾರಕ್ಕೆ ಬೆಂಬಲ ಪಡೆದಿದ್ದರು. ಈಗ ಅದೇ ಉಲ್ಟಾ ಆಗಿದೆ ಎಂದರು.

ಶಿವನಗೌಡ ನಾಯಕ ನಮ್ಮ ಪಕ್ಷದ ಶಾಸಕ. ಆತನನ್ನು ಶ್ರೀರಾಮುಲು ನಂಬಿಸಿ ಕರೆತಂದಿದ್ದರು. ಅಂದು ಜೆಡಿಎಸ್ ಬಿಟ್ಟಿದ್ದು ತಪ್ಪಾಯಿತು ಎಂದು ಇಂದು ಹೇಳುತ್ತಿದ್ದಾರೆ. ಇನ್ನು ಕೆಲ ದಿನ ಕಳೆಯಲಿ. ಎಲ್ಲ ಬಣ್ಣ ಬಯಲಾಗುತ್ತದೆ ಎಂದು ನುಡಿದರು. ರೆಡ್ಡಿ ಬ್ರದರ್ಸ್ ಗಣಿ ವ್ಯವಹಾರದ ಬಗ್ಗೆ ನಾನೇ ಸಂಸತ್ತಿನಲ್ಲಿ ಮಾತನಾಡಿದ್ದೇನೆ.

ಅವರು ನನ್ನ ಕುಟುಂಬದ ಬಗ್ಗೆ ಆರೋಪ ಮಾಡಿದ್ದಾರೆ. ಏನೇ ಇರಲಿ. ವಚನ ಭ್ರಷ್ಟರಾಗಬೇಡಿ ಎಂದು ಸಿಎಂಗೆ ಹೇಳುವ ಮೂಲಕ ಸರಿ ಹೆಜ್ಜೆ ಇಟ್ಟಿದ್ದಾರೆ ಎಂದರು
ಸಚಿವ ಸಂಪುಟದಿಂದ ಕೈ ಬಿಡುವುದಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಬೆಳವಣಿಗೆ ನಡೆದಿದ್ದು ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು. ಹಿಂದೆಂದೂ ಇಂಥ ಘಟನೆ ನಡೆದಿರಲಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X