ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಮಸೀದಿ : ಧರ್ಮಯುದ್ಧದಲ್ಲಿ ಯಾರಿಗೆ ಗೆಲುವು?

By * ಮೃತ್ಯುಂಜಯ ಕಲ್ಮಠ
|
Google Oneindia Kannada News

Ayodhya Ram-Janmabhoomi-Babri masjid
ಸೆ.24, 2010 ಭಾರತದ ಇತಿಹಾಸದ ಮಟ್ಟಿಗೆ ಐತಿಹಾಸಿಕ ದಿನ. ಕಳೆದ ಆರು ದಶಕಗಳಿಂದ ಭಾರತೀಯರ ನೆಮ್ಮದಿಯನ್ನು ತಿಂದು ಹಾಕಿದ್ದ ನ್ಯಾಯವೊಂದನ್ನು ನಿಖಾಲಿ ಮಾಡುವ ಸುದಿನ. ಅರ್ಥ ಆಗಲಿಲ್ವೇ, ಸತತ 18 ವರ್ಷಗಳ ಕಾಲ ವಿಚಾರಣೆ ನಡೆಸಲಾಗಿರುವ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಮಾಲೀಕತ್ವ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಸೆ.24 ರ ಶುಕ್ರವಾರ ಹೊರಬೀಳಲಿದೆ.

ಬಾಬ್ರಿ ಮಸೀದಿ ಇರುವ ಜಾಗದಲ್ಲಿ ಶ್ರೀರಾಮನ ಮಂದಿರವಿತ್ತು ಎಂದು ಒಂದು ಕೋಮು ಹೇಳುತ್ತೆ. ಮೊಘಲ್ ವಂಶದ ದೊರೆ ಬಾಬರ್ ಮೇಲಿನ ಪ್ರೀತಿಗಾಗಿ ಅಯೋಧ್ಯೆಯಲ್ಲಿ ಮಸೀದಿಯೊಂದನ್ನು ಆತನ ವೈಸ್ ರಾಯ್ ಕಟ್ಟಿಸಿದ್ದ. ಅದಕ್ಕೆ ಬೇಕಿರುವ ಎಲ್ಲ ಸಾಕ್ಷಿ ಪುರಾವೆಗಳು ಇವೆ ಎಂದು ಇನ್ನೊಂದು ಕೋಮಿನ ವಾದ. ಎರಡು ಕೋಮಿನ ಈ ಹಾಕ್ಯಾಟ-ತಿಕ್ಕಾಟ ತಾರಕ್ಕೇರಿದ ಪರಿಣಾಮ 1992 ರ ಡಿಸೆಂಬರ್ 6 ರಂದು ಇತಿಹಾಸಕ್ಕೆ ಕಪ್ಪು ಮಸಿ ಬಳಿಯುವಂತ ದುರ್ಘಟನೆಯೊಂದು ಭಾರತದಲ್ಲಿ ನಡೆದು ಹೋಯಿತು. ಸುಮಾರು ಐತಿಹಾಸಿಕ ಹಿನ್ನೆಲೆಯುಳ್ಳ ಬಾಬ್ರಿ ಮಸೀದಿಯನ್ನು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಒಡೆದು ಹಾಕಿದರು.

ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಮರು ದೇಶದಾದ್ಯಂತ ಪ್ರತಿಭಟನೆ ಆರಂಭಿಸಿದರು. ಡಿಸೆಂಬರ್ 6 ರಿಂದ ತಿಂಗಳುಗಳ ಕಾಲ ಭಾರತದ ವಿವಿಧ ಪ್ರದೇಶದಲ್ಲಿ ನಡೆದ ಕೋಮಗಲಭೆಗಳಿಗೆ, ಸಾವು ನೋವುಗಳಿಗೆ ಲೆಕ್ಕ ಇಲ್ಲ. ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವಿದ್ದರೆ, ಕೇಂದ್ರದಲ್ಲಿ ಪಿ ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಪಡೆ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಆದರೆ, ಬಾಬ್ರಿ ಧ್ವಂಸದಿಂದಾಗಿ ನಡೆದ ಕೋಮುದಳ್ಳುರಿಯನ್ನು ಇವರ ಸರಕಾರಗಳ ಕೈಲಿ ತಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಗಲಭೆಯಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದರು.

ಬಾಬ್ರಿ ಮಸೀದಿಗೆ ಸಂಬಂಧಿಸಿದ ಮೊಟ್ಟಮೊದಲ ತೀರ್ಪು ಇದೇ ಶುಕ್ರವಾರ ಅಲಬಾಹಾದ್ ಹೈಕೋರ್ಟ್ ನ ಮೂವರು ನ್ಯಾಯಮೂರ್ತಿಗಳನ್ನೊಂಡ ಪೀಠ ಅಧಿಕೃತವಾಗಿ ಘೋಷಣೆ ಮಾಡಲಿದೆ. ಆಯೋಧ್ಯೆ ಶ್ರೀರಾಮನದ್ದೂ, ಮೊಘಲರ ಮಹಾರಾಜ ಬಾಬರ್ ನಿಗೆ ಸೇರಿದ್ದೂ ಎಂಬುದನ್ನು ಅಲಹಾಬಾದ್ ನ್ಯಾಯಾಲಯ ಅಂತಿಮಗೊಳಿಸಲಿದೆ.

ಹಿನ್ನೆಲೆ : ಉತ್ತರ ಪ್ರದೇಶದ ಪೈಜಾಬಾದ್ ನಲ್ಲಿರುವ ಅಯೋಧ್ಯೆ ಪಟ್ಟಣ ಶ್ರೀರಾಮನ ಕರ್ಮಭೂಮಿ. ರಾಮ ರಾಜ್ಯಭಾರ ಮಾಡಿದ್ದು ಈ ಪ್ರದೇಶದಲ್ಲಿ ಎನ್ನುವ ಪ್ರತೀತಿ ಇದೆ ಎನ್ನುವುದು ಮೊದಲ ಅಂಶ. ರಾಮಾಯಣದಲ್ಲಿ ಇದರ ಬಗ್ಗೆ ಉಲ್ಲೇಖವಿದೆ ಎನ್ನುವುದು ಉಂಟು. ಇದೇ ಅಯೋಧ್ಯೆಯಲ್ಲಿ ಐತಿಹಾಸಿಕ ಬಾಬ್ರಿ ಮಸೀದಿ ಇತ್ತು. ಈ ಬಾಬ್ರಿ ಮಸೀದಿಗೆ ಹಲವಾರು ವಿಶೇಷ ಹೆಸರುಗಳಿಂದ ಕರೆಯುತ್ತಾರೆ. ಮಸ್ಜೀದ್-ಇ-ಜನ್ಮಸ್ತಾನ್, ಜಾಮಿ ಮಸೀದಿ ಮತ್ತು ಸೀತಾ ರಸೋಯಿ ಮಸ್ಜೀದ್ ಎಂದು ಹೆಸರುಗಳಿಂದಲೂ ಕರೆಯಲಾಗುತ್ತದೆ. ಆದರೆ, ಪ್ರಸಿದ್ಧಿಗೆ ಬಂದಿದ್ದು ಮಾತ್ರ ಬಾಬ್ರಿ ಮಸೀದಿಯೆಂದು.

ಮೊಘಲ್ ಸಾಮ್ರಾಜ್ಯದ ದೊರೆ ಬಾಬರ್ ನೆನಪಿಗಾಗಿ ಆತನ ವೈಸ್ ರಾಯ್ ಮೀರ್ ಬಾಖಿ ಎಂಬುವವರು 1528ರಲ್ಲಿ ಈ ಮಸೀದಿಯನ್ನು ಕಟ್ಟಿಸುತ್ತಾರೆ. (ಮಸೀದಿಯನ್ನು ಕಟ್ಟಿಸುವಾಗ ಈ ಸ್ಥಳದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಯಾವುದೇ ಕುರುಹುಗಳಾಗಿ ಅಲ್ಲಿರಲಿಲ್ಲ ಎನ್ನುವ ಮಾತುಗಳಿವೆ). ಅಯೋಧ್ಯೆ ರಾಮನ ಜನ್ಮಭೂಮಿಯಾಗಿದ್ದರಿಂದ ಹಿಂದುಗಳು ಈ ಸ್ಥಳದಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬಂದಿದ್ದರು. ಅದರಂತೆ ಮುಸ್ಲಿಮರು ನಮಾಜು ಕೂಡಾ ಸಲ್ಲಿಸುತ್ತಿದ್ದರು. ಇದು ಸುಮಾರು 300 ವರ್ಷಗಳ ಕಾಲ ಸ್ನೇಹ ಸೌಹಾರ್ದತೆಯಿಂದ ನಡೆದುಕೊಂಡು ಬಂದಿತು. ಉಭಯ ಕೋಮುಗಳ ಮಂದಿ ಪೂಜೆ, ನಮಾಜು ಮಾಡುತ್ತಿದ್ದರು ಎನ್ನುವ ಮಹತ್ವದ ಅಂಶ ಅಧಿಕೃತವಾಗಿ ಸರಕಾರಿ ದಾಖಲೆಯಲ್ಲಿದೆ.

ಬ್ರಿಟಿಷರು ಭಾರತವನ್ನು ರಾಜ್ಯಭಾರ ಮಾಡುತ್ತಿದ್ದ ಕಾಲ ಅಂದರೆ 1883 ರಂದು ಮೊಟ್ಟಮೊದಲ ಬಾರಿಗೆ ರಾಮಜನ್ಮಭೂಮಿ ಬಾಬ್ರಿ ಮಸೀದಿಯಲ್ಲಿ ಹಿಂದು ಮುಸ್ಲಿಂ ಗಲಾಟೆಗಳು ಆರಂಭವಾಗುತ್ತವೆ. 1889ರಲ್ಲಿ ಈ ವಿವಾದಕ್ಕೆ ಮುಲಾಮು ಹುಡುಕಲು ಬ್ರಿಟಷ್ ರಾಜರು ಪ್ರಯತ್ನಿಸಿ ನಂತರ ಆ ವಿಷಯವನ್ನು ಅಲ್ಲಿಗೆ ಕೈಬಿಡುತ್ತಾರೆ. ಅಮೇಲೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ 1910 ಹೊತ್ತಿಗೆ ಹಿಂದು ಮುಸ್ಲಿಂ ನಡುವೆ ಕೋಮು ಗಲಭೆ ಉಂಟಾಗುತ್ತದೆ. ಅಲ್ಲಿಂದ ಈ ಎರಡೂ ಕೋಮಿನ ಮಧ್ಯೆ ಇದ್ದ ಸಾಮರಸ್ಯ ಕಡಿಮೆಯಾಗುತ್ತಾ ಬರುತ್ತದೆ.

1949 ಡಿಸೆಂಬರ್ 22 ರಂದು ಬಾಬ್ರಿ ಮಸೀದಿಯಲ್ಲಿ ಶ್ರೀರಾಮನ ಮೂರ್ತಿ ಸ್ಥಾಪನೆಯಾಗುತ್ತದೆ. ಸಂತರ ಗುಂಪೊಂದು ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಇದಕ್ಕೆ ಮುಸ್ಲಿಮರಿಂದ ತೀವ್ರ ವಿರೋಧ ಮತ್ತು ದೇಶದಾದ್ಯಂತ ಭಾರಿ ಪ್ರತಿಭಟನೆಗಳು ಆರಂಭವಾಗುತ್ತವೆ. ಅಲ್ಲಿಂದ ಅಯೋಧ್ಯೆಯಲ್ಲಿರುವ ಈ ಸ್ಥಳದ ಮಾಲೀಕತ್ವದ ವಿಷಯಕ್ಕೆ ಸಂಬಂಧಿಸಿದ ವಿವಾದ ಕಿಡಿ ಅಧಿಕೃತವಾಗಿ ಜ್ವಾಲೆಯಾಯಿತು. ತದನಂತರ ವಿವಿಧ ಆಯಾಮಗಳನ್ನು ಪಡೆದುಕೊಂಡಿದ್ದು ಗೊತ್ತಿರುವ ಸಂಗತಿ.

ಗೋಪಾಲ್ ಸಿಂಗ್ ವಿಶಾರದ ಎಂಬುವವರು 1950ರಲ್ಲಿ ಈ ವಿವಾದಿತ ಸ್ಥಳದ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣದ ದಾವೆಯನ್ನು ಪೈಜಾಬಾದ್ ಸಿವಿಲ್ ನ್ಯಾಯಾಲಯದಲ್ಲಿ ಹೂಡುತ್ತಾರೆ. ಅದೇ ವರ್ಷ ಪರಮಹಂಸ ತಮಚಂದ್ರ ದಾಸ್ ಎಂಬುವವರು ಕೂಡಾ ಪ್ರಕರಣ ದಾಖಲಿಸುತ್ತಾರೆ. 1959ರಲ್ಲಿ ನಿರ್ಮೋಹಿ ಆಕಾರ ಎಂಬ ಸಂಸ್ಥೆ ಮತ್ತು ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ಬೋರ್ಡ್ ಆಫ್ ವಕ್ಫ್ ಸಹ ಪೈಜಾಬಾದ್ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತವೆ. 1989ರಲ್ಲಿ ಪೈಜಾಬಾದ್ ನ್ಯಾಯಾಲಯ ಲಖನೌನ ಅಲಹಾಬಾದ್ ಹೈಕೋರ್ಟ್ ಗೆ ಪ್ರಕರಣವನ್ನು ವರ್ಗಾಯಿಸುತ್ತದೆ. ಇದಿಷ್ಟು ಬಾಬ್ರಿ ಮಸೀದಿಯ ಇತಿಹಾಸ.

1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ನಂತರ ಮಾಲೀಕತ್ವದ ವಿಷಯ ಗಂಭೀರ ಸ್ವರೂಪ ಪಡೆದುಕೊಂಡ ನಂತರ ಈ ವಿಷಯಕ್ಕೆ ನ್ಯಾ. ಎಸ್ ಯು ಖಾನ್, ನ್ಯಾ. ಸುಧೀರ್ ಅಗಲ್ ವಾಲ್ ಮತ್ತು ನ್ಯಾ. ಧರ್ಮವೀರ್ ಶರ್ಮಾ ಅವರನ್ನೊಳಗೊಂಡ ಪೀಠವನ್ನು ವಿಚಾರಣೆಗೆ ನಿಯೋಜಿಸಲಾಯಿತು. ಈ ಮೂವರನ್ನೊಳಗೊಂಡ ನ್ಯಾಯಪೀಠ ವಿಚಾರಣೆಯನ್ನು ಜುಲೈ 26ಕ್ಕೆ ಅಂತಿಮ ವಿಚಾರಣೆಯನ್ನು ಕೊನೆಗೊಳಿಸಿ ಸೆ. 8ಕ್ಕೆ ತೀರ್ಪು ನೀಡುವುದಾಗಿ ಹೇಳಿತ್ತು. ನಂತರ ಸೆ.24ಕ್ಕೆ ಕೊನೆಯ ತೀರ್ಪಿಗೆ ಮಹೂರ್ತ ಫಿಕ್ಸ್ ಮಾಡಿದೆ.

ಸುಮಾರು 18 ವರ್ಷಗಳ ಕಾಲ ನಡೆದಿರುವ ವಿಚಾರಣೆಯ ತೀರ್ಪು ಹೊರಬೀಳುತ್ತಿರುವುದು ಸಂತಸ. ಈ ನೆಲದ ಕಾನೂನಿಗೆ ಎಲ್ಲರೂ ತಲೆಬಾಗಬೇಕಾಗಿರುವುದು ಸಂವಿಧಾನದ ಲಿಖಿತ. ತೀರ್ಪು ಯಾರ ಪರ ಬಂದರೂ ಅದನ್ನು ಎಲ್ಲರೂ ಸ್ವಾಗತಿಸಬೇಕು. ಮುಸ್ಲಿಂ ಸಂಘಟನೆಗಳು ನ್ಯಾಯಾಲಯದ ತೀರ್ಪಿಗೆ ಬದ್ಧ ಎಂದು ಘೋಷಿಸಿವೆ. ಆದರೆ, ಹಿಂದು ಸಂಘಟನೆಗಳು ಮಾತ್ರ ಅಯೋಧ್ಯೆ ರಾಮನ ಜನ್ಮ ಭೂಮಿ. ಅಲ್ಲಿ ಅವನನ್ನು ಬಿಟ್ಟು ಮತ್ತ್ಯಾರೂ ಇರಲು ಸಾಧ್ಯವಿಲ್ಲ ಎಂದು ಘೋಷಣೆ ಮಾಡಿವೆ.

ಜೊತೆಗೆ ಇದೇ ವಿವಾದದ ಮೂಲಕ ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಲಾಲ್ ಕೃಷ್ಣ ಅಡ್ವಾಣಿ ಅವರು ತೀರ್ಪು ಹೇಗೆ ಬಂದರೂ ಸ್ವಾಗತಿಸಬೇಕಿತ್ತು. ಆದರೆ. ಅವರು ತೀರ್ಪು ಹಿಂದುಗಳಿಗೆ ವ್ಯತಿರಿಕ್ತವಾಗಿ ಬಂದರೆ ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. 1992ರಲ್ಲಿ ಕುಖ್ಯಾತಿ ಪಡೆದಿದ್ದ ಅಡ್ವಾಣಿ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು 2010ರಲ್ಲಿ ಪ್ರಖ್ಯಾತರಾಗಬೇಕಿತ್ತು. ಆದರೆ, ಹಾಗಾಗಲ್ವೇ? ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಅಯೋಧ್ಯೆ ಸೇರಿದಂತೆ ಸೂಕ್ಷ್ಮ ರಾಜ್ಯಗಳಲ್ಲಿ ಭಾರಿ ಬಂದೋಬಸ್ತ್ ನಿಯೋಜಿಸಲು ಸರಕಾರ ಕ್ರಮಗೊಂಡಿದೆ.

ಈ ಮಧ್ಯೆ, 'ಅಯೋಧ್ಯೆ ರಾಮಜನ್ಮಭೂಮಿ ಬಾಬ್ರಿ ಮಸೀದಿ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದದ ಅಂತಿಮ ತೀರ್ಪನ್ನು ಲಖನೌನ ಅಲಹಾಬಾದ್ ಹೈಕೋರ್ಟ್ ಸೆ.24ರಂದು ಘೋಷಣೆ ಮಾಡಲಿದೆ. ತಮ್ಮ ಧರ್ಮದ ಪರವಾಗಿ ಬಂದರೆ ವಿಜಯೋತ್ಸವ ಆಚರಿಸೋಣ. ಒಂದು ವೇಳೆ ನಮ್ಮ ಧರ್ಮಕ್ಕೆ ವಿರುದ್ಧವಾಗಿ ಬಂದರೆ, ಧರ್ಮ ಸಂಘರ್ಷಕ್ಕೆ ಸಿದ್ಧರಾಗೋಣ" ಎಂಬ ಪ್ರಚೋದನಕಾರಿ ಸಂದೇಶಗಳು ನಿತ್ಯ ಮೊಬೈಲ್ ನಿಂದ ಮೊಬೈಲ್ ಗೆ ಹರಿದಾಡತೊಡಗಿವೆ. ಇದು ಕಳವಳಕಾರಿ ಸಂಗತಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೋಮುಗಲಭೆಗಳಾದಂತೆ ಎಚ್ಚರ ವಹಿಸಿದರೆ ಸಾಕು, ಅಲ್ವೇ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X