ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮುಖ ಸಿಇಒಗಳ ಜತೆ ಸಿಎಂ ಔತಣಕೂಟ

By Mahesh
|
Google Oneindia Kannada News

CM BSY addressing the Dinner meeting, China
ಬೀಜಿಂಗ್, ಸೆ.14: ಚೀನಾದ ಟೀಯಾನ್‌ಜಿನ್‌ನಲ್ಲಿ ಜರುಗಿರುವ ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕಾನಾಮಿಕ್ ಫೋರಮ್) ಸಮಾವೇಶದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ರಾತ್ರಿ ವಿಶ್ವದ 140 ಪ್ರಮುಖ ಉದ್ಯಮ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)ಗಳೊಂದಿಗೆ ಸಮಾಲೋಚನೆ ನಡೆಸಿ ಕರ್ನಾಟಕ ವಿಶ್ವದ ಪ್ರಮುಖ ಮತ್ತು ಪ್ರಶಸ್ತ ಬಂಡವಾಳ ಹೂಡಿಕೆತಾಣವಾಗಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಔತಣಕೂಟ ಸಹಿತ ಸಭೆ : ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕಾನಾಮಿಕ್ ಫೋರಮ್) ಸಮಾವೇಶದಲ್ಲಿ ಭಾಗವಹಿಸಿರುವ 198ದೇಶಗಳ ಪ್ರತಿನಿಧಿಗಳಲ್ಲಿ ಆಯ್ದ 140ದೇಶದ ಪ್ರತಿನಿಧಿಗಳಿಗೆ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರದ ಪರವಾಗಿ ಔತಣಕೂಟ ಏರ್ಪಡಿಸಿದ್ದರು.

ಈ ಔತಣಕೂಟದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಮತ್ತು ರಾಜ್ಯ ಸರ್ಕಾರ ಬಂಡವಾಳ ಹೂಡಿಕೆಗೆ ಪೂರಕವಾಗಿ ಮಾಡಿರುವ ವ್ಯವಸ್ಥೆಗಳ ಬಗ್ಗೆ ವಿವರ ನೀಡಿದರು.

ಕರ್ನಾಟಕ ರಾಜ್ಯ ಅತ್ಯಂತ ಉದ್ಯಮಶೀಲ ರಾಜ್ಯವಾಗಿದ್ದು ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಜ್ಞಾನಾಧಾರಿತ ಉದ್ದಿಮೆಗಳ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಸರಾಗಿದೆ.

ಸರ್ಕಾರ ರಾಜ್ಯದಲ್ಲಿರುವ ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಗೆ ಮತ್ತು ಮೌಲ್ಯವರ್ಧನೆಗೆ ಅವಕಾಶ ಒದಗಿಸುತ್ತಿದೆ. ಬಂಡವಾಳ ಹೂಡಿಕೆಗೆ ನೆರವಾಗುವ ಕ್ರಿಯಾಶೀಲ ಕೈಗಾರಿಕಾ ಮತ್ತು ಖನಿಜ ನೀತಿಗಳನ್ನು ಜಾರಿಗೊಳಿಸಿದೆ. ಇವೆಲ್ಲಾ ಕಾರಣಗಳಿಂದ ಕರ್ನಾಟಕ ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣವಾಗಿ ಹೊರಹೊಮ್ಮಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ತಮ್ಮ ಭಾಷಣದಲ್ಲಿ ಕಳೆದ ಜೂನ್ 3 ಮತ್ತು 4 ರಂದು ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಯಶಸ್ಸನ್ನು ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಲಭ್ಯವಿರುವ ವಿಫುಲ ಅವಕಾಶಗಳನ್ನು ಬಳಸಿಕೊಂಡು ಬಂಡವಾಳ ಹೂಡಲು ಮುಂದೆ ಬರುವಂತೆ ವಿಶ್ವದ ಪ್ರಮುಖ ಉದ್ಯಮಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕರೆ ನೀಡಿದರು.

ಈ ಔತಣಕೂಟದಲ್ಲಿ ಭಾಗವಹಿಸಿದ್ದ ಪ್ರಮುಖರೆಂದರೆ ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪಕ ನಿರ್ದೇಶಕ ಆಂಡ್ರೆಶಿಂಡರ್, ಸೈನೋ ಸ್ಟೀಲ್‌ನ ಜಿಯಾಂಗ್ ಹಾಂಗ್, ಸೆಮಿಲೆಡ್ಸ್ ಕಾರ್ಪೋರೇಷನ್‌ನ ಟ್ರಂಗ್ ಟಿ ಡೋನ್, ಇನ್‌ಫೋಸಿಸ್‌ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣನ್, ಜ್ಯುಬಿಲೆಂಡ್ ಭಾರತೀಯ ಗ್ರೂಪ್‌ನ ಅಧ್ಯಕ್ಷ ಹರಿ ಎಸ್. ಬಾಟಿಯಾ ಮತ್ತಿತರು ಸೇರಿದ್ದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ. ಬಳಿಗಾರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಆರ್ಥಿಕ ಸಲಹೆಗಾರ ಡಾ. ಕೆ.ವಿ. ರಾಜು, ಕೈಗಾರಿಕಾ ಇಲಾಖೆಯ ಆಯುಕ್ತ ರಾಜ್‌ಕುಮಾರ್ ಕತ್ರಿ ಮೊದಲಾದವರು ಇದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X