ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಸುಳಿರುವ ಉಗ್ರರು : ಮುಂಬೈನಲ್ಲಿ ಕಟ್ಟೆಚ್ಚರ

By Prasad
|
Google Oneindia Kannada News

Suspected terrorists enter Mumbai
ಮುಂಬೈ, ಸೆ. 10 : ಗಣೇಶೋತ್ಸವ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶದಿಂದ ಇಬ್ಬರು ಲಷ್ಕರ್-ಎ-ತೊಯ್ಬಾದ ಉಗ್ರರು ಮುಂಬೈ ನಗರದೊಳಗೆ ನುಸುಳಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ನಗರದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಕಲೀಮುದ್ದಿನ್ ಖಾನ್ ಅಲಿಯಾಸ್ ರಾಮೇಶ್ವರ್ ಪಂಡಿತ್ ಮತ್ತು ಹಫೀಜ್ ಷರೀಫ್ ಎಂಬಿಬ್ಬರು ಶಂಕಿತ ಉಗ್ರರ ಚಿತ್ರಗಳನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಬಿಡುಗಡೆಗೊಳಿಸಿದ್ದಾರೆ. ಮತ್ತೊಂದು ಭೀಕರ ದಾಳಿಯ ಬೆದರಿಕೆ ಇರುವ ಮಾಹಿತಿಯನ್ನು ಕೇಂದ್ರ ಸರಕಾರವೇ ರಾಜ್ಯ ಸರಕಾರಕ್ಕೆ ನೀಡಿದೆ ಎಂದು ಚವ್ಹಾಣ್ ತಿಳಿಸಿದ್ದಾರೆ.

"ವಿದೇಶಿ ಮೂಲದ ಉಗ್ರರಿಬ್ಬರು ಮುಂಬೈ ನಗರ ಪ್ರವೇಶಿಸಿದ್ದು, ಜನನಿಬಿಡ ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಜನ ಎಚ್ಚರದಿಂದಿರಬೇಕು" ಎಂದು ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ಹೇಳಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಗರದಾದ್ಯಂತ ಉಗ್ರರ ಬಗ್ಗೆ ನಿಗಾ ಇಡಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಎಲ್ಲೆಡೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಉಗ್ರ ಪತ್ತೆ ಹಚ್ಚಲು ಸಹಕಾರಿಯಾಗಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಒಬ್ಬ ಪಾಕಿಸ್ತಾನಿ ಮತ್ತು ಇನ್ನೊಬ್ಬ ಬಾಂಗ್ಲಾದೇಶಿಯಾಗಿದ್ದು, 25ರಿಂದ 28 ವರ್ಷದೊಳಗಿನವರಾಗಿದ್ದಾರೆ. ಇವರಿಬ್ಬರ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಕೂಡಲೆ ತಿಳಿಸಬೇಕೆಂದು ರಾಯ್ ಜನತೆಯನ್ನು ಕೋರಿಕೊಂಡಿದ್ದಾರೆ. 2008 ನವೆಂಬರ್ 26ರ ಭೀಕರ ಹತ್ಯಾಕಾಂಡದ ನಂತರ ಸಹಜ ಸ್ಥಿತಿಗೆ ಮರಳಿದ್ದ ಮುಂಬೈ ನಗರಿಗೆ ಮತ್ತೊಂದು ಆತಂಕ ಎದುರಾಗಿರುವುದು ಹಬ್ಬದ ಸಂದರ್ಭದಲ್ಲಿ ಕಾರ್ಮೋಡ ಕವಿದಂತಾಗಿದೆ.

ಸಾರ್ವಜನಿಕ ಗಣೇಶೋತ್ಸವವನ್ನು ಮುಂಬೈನಲ್ಲಿ ಭಾರೀ ಸಡಗರದಿಂದ ಆಚರಿಸಲಾಗುತ್ತದೆ. ಭಾರೀ ಗಾತ್ರದ ಗಣೇಶನನ್ನು ಗಲ್ಲಿಗಲ್ಲಿಗಳಲ್ಲಿ ಸ್ಥಾಪಿಸಿದಂದಿನಿಂದ ಸಮುದ್ರದಲ್ಲಿ ವಿಸರ್ಜನೆ ಮಾಡುವವರೆಗೆ ಸಂಭ್ರಮದ ಅಲೆಗಳು ನಗರದೆಲ್ಲೆಡೆ ತೇಲಾಡುತ್ತಿರುತ್ತವೆ. ವಿಶೇಷವಾಗಿ ಅಲಂಕೃತವಾಗಿರುವ ಗಣಪತಿಯನ್ನು ನೋಡಲು ನಗರ ಮಾತ್ರವಲ್ಲ ರಾಜ್ಯದ ಎಲ್ಲೆಡೆಯಿಂದ ಜನ ಆಗಮಿಸಿರುತ್ತಾರೆ. ಇಂಥ ಸಮಯದಲ್ಲಿ ಪೊಲೀಸರ ಕಣ್ತಪ್ಪಿಸಿ ಭಯೋತ್ಪಾದಕರು ನುಸುಳಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X