ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ದತೆ

By Prasad
|
Google Oneindia Kannada News

Udupi Srikrishna
ಉಡುಪಿ, ಸೆ. 1 : ದೇಶದ ಪ್ರಮುಖ ಯಾತ್ರಾ ಸ್ಥಳವಾದ ಉಡುಪಿಯಲ್ಲಿ ಪೊಡವಿಯೊಡೆಯ ಶ್ರೀಕೃಷ್ಣನ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ದತೆ ನಡೆಯುತ್ತಿದೆ. ಉತ್ಸವ ಯಶಸ್ಸಿಗಾಗಿ ಪರ್ಯಾಯ ಶ್ರೀಲಕ್ಷ್ಮೀವರತೀರ್ಥರು ಖುದ್ದು ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇಂದು (01.09.10) ಮಧ್ಯರಾತ್ರಿ 11 .54ಕ್ಕೆ ಚಂದ್ರೋದಯದ ನಂತರ ರೋಹಿಣಿ ನಕ್ಷತ್ರದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯಪ್ರದಾನ ಕಾರ್ಯಕ್ರಮ ನಡೆಯಲಿದೆ.

ಇಂದು ರಾತ್ರಿ 10 ಗಂಟೆಗೆ ಅಲಂಕಾರ ಮತ್ತು ಮಹಾಪೂಜೆಯ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಶ್ರೀಕೃಷ್ಣನ ವಿಗ್ರಹಕ್ಕೆ ತುಳಸಿ ನೀರು ಮತ್ತು ಹಾಲಿನ ಮೂಲಕ ಅರ್ಘ್ಯ ಬಿಟ್ಟು, ನಂತರ ತುಳಸಿ ಕಟ್ಟೆಯಲ್ಲಿ ಕೃಷ್ಣನ ವಿಗ್ರಹಕ್ಕೆ ಹಾಲಿನಿಂದ ಅರ್ಘ್ಯ ಬಿಡುವುದು ವಾಡಿಕೆ. ಅಷ್ಟಮಿಯ ದಿನವಾದರೂ ಇಂದು ಉಪವಾಸ. ಲೀಲೋತ್ಸವದ ದಿನದಂದು (ಸೆ. 2) ರಥಬೀದಿಯಲ್ಲಿ ರಥೋತ್ಸವ ನಡೆಯಲಿದೆ. ನಂತರ ಅನ್ನ ಬ್ರಹ್ಮ ಕ್ಷೇತ್ರವೆಂದೇ ಪ್ರಸಿದ್ದವಾದ ಉಡುಪಿಯಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಪರ್ಯಾಯ ಮಠ ಈ ಬಾರಿ ಬರುವ ಎಲ್ಲಾ ಭಕ್ತಾದಿಗಳಿಗೆ ಲಡ್ಡು ಮತ್ತು ಚಕ್ಕುಲಿ ಪ್ರಸಾದ ನೀಡಲಾಗುವುದಾಗಿ ಪ್ರಕಟಿಸಿದೆ. ಸುಮಾರು ಎರಡು ಲಕ್ಷ ಲಡ್ಡು ಮತ್ತು ಚಕ್ಕುಲಿಯನ್ನು ಈಗಾಗಲೇ ತಯಾರಿಸಲಾಗಿದೆ. ಅಲ್ಲದೆ ಉತ್ಸವದ ಪ್ರಮುಖ ಆಕರ್ಷಣೆಯಾದ ಹುಲಿವೇಷ, ಭೂತಕೋಲ, ಡೊಳ್ಳು ಕುಣಿತ, ವೀರಗಾಸೆ, ಮರಕಾಲು ವೇಷ, ಯಕ್ಷಗಾನ ಮುಂತಾದ ಜಾನಪದ ನೃತ್ಯಗಳಲ್ಲಿ ಭಾಗವಹಿಸುವ ಕಲಾವಿದರಿಗೆ ಸಂಭಾವನೆಯಾಗಿ ಎಂಟು ಲಕ್ಷ ಮೀಸಲಿಡಲಾಗಿದೆ. ಇಂದು ಅಹೋರಾತ್ರಿ ಖ್ಯಾತ ಡ್ರಂ ಕಲಾವಿದ ಶಿವಮಣಿ ತಂಡದಿಂದ ಕಾರ್ಯಕ್ರಮ ನಡೆಯಲಿದೆಯೆಂದು ಮಠ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಉಡುಪಿ ಜಿಲ್ಲಾ ಪೋಲಿಸ್ ಭಾರಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಇಂದು ರಾತ್ರಿ ನಡೆಯುವ ಮಹಾಪೂಜೆ, ಅರ್ಘ್ಯಪ್ರದಾನ ಕಾರ್ಯಕ್ರಮ ಮತ್ತು ನಾಳೆ ನಡೆಯಲಿರುವ ವಿಟ್ಲಪಿಂಡಿ ಉತ್ಸವವನ್ನು ಈ ಟಿವಿ ಕನ್ನಡ ಚಾನಲ್ ನೇರ ಪ್ರಸಾರ ಮಾಡಲಿದೆ.

ಗ್ಯಾಲರಿ: ಯಶೋಧೆ ಕಂದ ಶ್ರೀಕೃಷ್ಣನ ವಿವಿಧ ರೂಪಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X