ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದ ಮೊಗಸಾಲೆಯಲ್ಲಿ ಕಿಲಿಬಿಲ್ಲಿ ಮ್ಯಾಜಿಕ್

By ಮೃತ್ಯುಂಜಯ ಕಲ್ಮಠ
|
Google Oneindia Kannada News

Cartoon
ಮುಖ್ಯಮಂತ್ರಿ ಪದವಿ ಅಂದ್ರೆ ಒಂದೀಡಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಮಹಾರಾಜ. ಇಂತಹ ಮ್ಯಾಜಿಕ್ ಚೇರ್ ಹಿಡಿಯುವುದು ಅಷ್ಟೂ ಸುಲಭದ ಕೆಲಸವಲ್ಲ. ಈ ಕುರ್ಚಿಯಲ್ಲಿ ಕುಳಿತು ಆಡಳಿತ ನಡೆಸುವುದು ಸರಳಾನೂ ಅಲ್ಲ, ಸುಲಭವಂತೂ ಅಲ್ಲವೇ ಅಲ್ಲ. ಆದರೆ, ಆ ಕುರ್ಚಿಯ ಠಾಕುಠೀಕು ಮಾತ್ರ ಎಲ್ಲರ ಕಣ್ಣು ಕುಕ್ಕುವಂತೆ ಇರುತ್ತೆ. ಏನಾದರೂ ಮಾಡಿ ಒಂದು ಸಲ ಮುಖ್ಯಮಂತ್ರಿ ಆಗಬೇಕು ಬಿಡಿ ಎಂದು ಹೊಟ್ಟೆಕಿಚ್ಚುಪಡುವಂತ ಪೀಠ.

ಇಂತಹ ಮಹಾರಾಜನಿಗೆ ಕುರ್ಚಿ ಕಳೆದುಕೊಳ್ಳುವ ಭಯ ಕಾಡುವುದು ಸಹಜ. ಹೀಗಾಗಿ ದೊಡ್ಡ ಹುದ್ದೆಯಲ್ಲಿದ್ದರೂ ಕೆಲವರಿಗಂತೂ ತಗ್ಗಿಬಗ್ಗಿ ನಡೆಯಲೇಬೇಕು. ಹೆದರಿಸುವುದು, ಬೆದರಿಸುವುದು, ಅರಿವೆ ಹಾವು ಬಿಡುವುದು, ತಮ್ಮ ಮೂಗಿನ ನೇರಕ್ಕೆ ಮಹಾರಾಜನನ್ನು ಕುಣಿಸುವ ಮಂದಿ ಅಸ್ಥಾನದಲ್ಲಿ ಇರ್ತಾರೆ. ಇತ್ತೀಚೆಗೆ ಕಿಲಿಬಿಲ್ಲಿ ವಿಧಾನಸೌಧ ವಿಸಿಟ್ ಮಾಡಿದಾಗ ಕಂಡ ಬಂದ ಕೆಲ ಝಲಕಗಳು.

ವಿಧಾನಸಭೆ ಕಾರಿಡಾರ್ ನಲ್ಲಿ ನಿಂತು ಯೋಚನೆ ಮಾಡುತ್ತಿದ್ದಾಗ ಮುಖ್ಯಮಂತ್ರಿಗಳ ಕಾರು ಬಂತು, ಸಿಎಂ ಅಂದ್ರೆ ಗೊತ್ತಿದೆಯಲ್ಲಾ, ಹಿಂದೆ ನಾಲ್ಕು ಮುಂದೆ ನಾಲ್ಕು ಕಾರುಗಳು. ಗರಿ ಗರಿ ಬಟ್ಟೆಗಳ ಸರದಾರರ ಹಿಂಡು. ಖಾಕಿಯ ಕರಾಮತ್ತು. ಇದನ್ನೆಲ್ಲಾ ಬೇಧಿಸಿದ ಕಿಲಿಬಿಲ್ಲಿ ನೇರವಾಗಿ ಮೂರನೇ ಮಹಡಿ ಪ್ರವೇಶ ಪಡೆದ. ಅಷ್ಟೇ ಅಲ್ಲ ವಿಧಾನಸಭೆ ಪ್ರವೇಶ ಪಡೆದ ಅವನಿಗೆ ಅದೇನಾಯಿತು ಗೊತ್ತಿಲ್ಲ. ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿಯಾಗಿ ಭಡ್ತಿ ಪಡೆದ ಕನಸಿನಲ್ಲಿ. ಅಲ್ಲಿ ಏನೇನೆಲ್ಲಾ ನಡೆಯಿತು. ನೀವೆ ಓದಿ.

ಕಿಲಿಬಿಲ್ಲಿ : ಸರ್, ಈ ವರ್ಷವೂ ಉತ್ತರ ಕರ್ನಾಟಕದಲ್ಲಿ ವ್ಯಾಪಕ ಮಳೆ, ಕಳೆದ ಸಲ ಪ್ರವಾಹಕ್ಕೆ ಈಡಾದ ಜಿಲ್ಲೆಗಳು ನೀರು ಪಾಲಾಗಿವೆ?
ಮುಖ್ಯಮಂತ್ರಿ : ಏನ್ಮಾಡ್ಲೀ ರೀ, ನನಗಂತೂ ಸಾಕಾಗಿ ಹೋಯ್ತು, ಒಂದ್ಕಡೆ ಮಳೆ, ಇನ್ನೊಂದು ಆ ಗೌಡ ಮತ್ತು ಅವರ ಮಕ್ಕಳು, ಮತ್ತೊಂದ್ಕಡೆ ರಾಜಭವನ, ಸಿದ್ಧರಾಮಯ್ಯನವರ ಗ್ಯಾಂಗ್ ಇದಿಷ್ಟು ಸಾಲದೆಂಬಂತೆ ಶೇಷಾದ್ರಿಪುರಂ, ಬಳ್ಳಾರಿ, ಯಶವಂತಪುರ, ಗೋವಿಂದರಾಜನಗರ, ಹೊನ್ನಾಳಿ, ಸಾಗರ, ಪದ್ಮನಾಭನಗರದಿಂದ ಚದುರಂಗದಾಟ, ಅಲ್ಲೊಬ್ಬ ಕ್ರಿಶ್ಚಿಯನ್ನರ ಓಡಿಸಬೇಕು ಅಂತಾನೆ, ಇಲ್ಲೊಬ್ಬ ಕೈಕಡಿತೀನಿ ಅಂತಾನೆ, ಇನ್ನೊಬ್ಬ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಅಂತಾನೆ. 35 ವರ್ಷದ ನಂತರ ಕಷ್ಟ ಪಟ್ಟು ಸಂಪಾದಿಸಿದ ಕುರ್ಚಿರ್ರೀ... ತಣ್ಣಗ ಐದು ವರ್ಷ ಇರಾಕ ಬಿಡ್ತಿಲ್ಲ?

ಕಿ : ಸರ್, ಮುಖ್ಯಮಂತ್ರಿಗಳ ಸೀಟ್ ಅಂದ್ರ ಮಹಾರಾಜನ ಪೀಠ ಅಲ್ವೇ... ಇದೆಲ್ಲಾ ಮಾಮೂಲು ಸ್ವಲ್ಪ ರೆಸ್ಟ್ ತಗೋಳಿ ಸರ್, ನಂತರ ನಾನು ನಿಮ್ಮ ಜೊತೆ ಮಾತಾಡ್ತೀನಿ.
ಮುಮ, ಸರಿ, ನಾನು ಸ್ವಲ್ಪ ರೆಸ್ಟ ತಗೋತಿನಿ, ಯಾರ ಬಂದರೂ ಎಬ್ಬಿಸಬೇಡ. ಏನೇ ಇದ್ದರೂ ನೀನೇ ಹ್ಯಾಂಡ್ಲ ಮಾಡಿ ಸಾಗ ಹಾಕು. ಗೊತ್ತಾಯ್ತಾ.
ಕಿ, ಓಕೆ ಸರ್

ಕಿ, ಸರ್
ಮುಮ, ಏನೋ ಕಿಲಿಬಿಲ್ಲಿ...
ಕಿ, ಉತ್ತರ ಕರ್ನಾಟಕ ಸತ್ಯಾನಾಶ ಆಗಿದೆ ಅಂತ, ಅದಕ್ಕ ನಮ್ಮ ಸಚಿವರಿಬ್ಬರು ಅಲ್ಲಿಂದ ಫೋನ್ ಮಾಡಿದ್ರು,
ಮುಮ, ಏನ್ಮಾಡಬೇಕಂತ...
ಕಿ, ಮುಖ್ಯಮಂತ್ರಿಗಳಿಗೆ ಹೇಳು ಪ್ರತಿಪಕ್ಷದವರು ಬರೋದಕ್ಕಿಂತ ಮೊದ್ಲು ಒಂದು ವಿಸಿಟ್ ಕೊಟ್ಟು ಹೋಗು ಅಂತ ಹೇಳಿದ್ರು,
ಮುಮ, ಕಳೆದ ವರ್ಷ ಮನೆ ಕಟ್ಟಿಸಿ ಕೂಡ್ತೀವಿ ಅಂತ ಭರವಸೆ ಕೊಟ್ಟಿದ್ದೆ, ಸಾರ್ವಜನಿಕರಿಂದ ರೊಕ್ಕಾನೂ ಈಸಕೊಂಡಿದ್ದೆ. ಅದು ಇನ್ನೂ ಜನರ ಮನಸ್ಸೊಳಗೆ ಇದೆ. ಪರಿಸ್ಥಿತಿ ಹಿಂಗ್ ಇದೆ, ಏನ್ಮಾಡೋದು ಕಿಲಿಬಿಲ್ಲಿ... ಏನಾದ್ರು ಮಾಡಬೇಕು ಅಲ್ಲಿಯ ಜನರಿಗೆ...
ಕಿ, ಸರ್, ದಿನಾ ಸಾಯೋರಿಗೆ ಅಳೋರ ಯಾರು ? ಪ್ರತಿ ವರ್ಷ ಪ್ರವಾಹ ಬರುತ್ತೆ, ಮನೆಗಳು ಮುಳುಗುತ್ತವೆ. ಕೆಲವರು ಸಾಯುತ್ತಾರೆ. ಅತಿವೃಷ್ಟಿ ಆದ್ರ ಏನ್ಮಾಡಬೇಕು, ಸರಕಾರ ಅದನ್ನು ತಡೆಯಲು ಸಾಧ್ಯವಾ. ಸರ್ ನೀವೇನು ತಲೆ ಕೆಡಿಸಿಕೊಳ್ಳಬೇಡಿ, ನಾನು ಹ್ಯಾಂಡ್ಲ ಮಾಡ್ತೀನಿ. ನೀವು ಸುಮ್ನೆ ತಲೆಯಾಡಿಸಿ...

ಮುಮ
, ಅದೂ ಏನು ಮಾಡ್ತೀಯೋ ಮಾಡಪ್ಪ, ಒಟ್ಟಿನಲ್ಲಿ ನನಗೆ ತಲೆಬಿಸಿ ಮಾಡಬೇಡಾ ಆಯ್ತಾ.
ಕಿ, ಸರಿ ಬಿಡಿ, ಪ್ರವಾಹಕ್ಕೆ ನಾನು ಜವಾಬ್ ಕೊಡ್ತೀನಿ...ಅಂದಂಗ ಸರ್, ಇವತ್ತು ಮತ್ತೆ ರಾಜ್ಯಪಾಲ್ರು ಸರಕಾರದ ಮೇಲೆ ಟೀಕೆ ಮಾಡಿದಾರೆ.
ಮುಮ, (ಮುಮ ಗಳ ಪಿತ್ತ ನೆತ್ತಿಗೇರಿತ್ತು...) ಏನಂತ್ರಿ ಅವಯ್ಯಂದು ತೀರ ಅತಿಯಾಯ್ತು, ಕುಂತ್ರು ಬೈಯೋದು, ನಿಂತ್ರು ಬೈಯೋದು ಎನ್ನುತ್ತಾ ಕೈಯಲ್ಲಿದ್ದ ಹೆಚ್ಚು ಪ್ರಸಾರವುಳ್ಳ ಪೇಪರೊಂದನ್ನು ಗೋಡೆಗೆ ಎಸೆದರು.
ಕಿ, ತಕ್ಷಣ ಪೇಪರನ್ನು ಎತ್ತಿಕೊಂಡು ಸರ್, ಈ ಪೇಪರನ್ನು ಮಾತ್ರ ಹಂಗೆಲ್ಲಾ ಬೀಸಾಡಬೇಡಿ, ಆ ಪತ್ರಿಕೆ ರಿಪೋರ್ಟರ್ ನೋಡಿದ್ರ ಮತ್ತೊಂದು ಫಜೀತಿ. ಈಗಿರೋ ಫಜೀತಿಗಳ ಸಾಕು ನಮಗೆ... ಹಾಲಪ್ಪ, ಬಚ್ಚೇಗೌಡ್ರರಿಂದ ಆಗಿರೋದ ಸಾಕು...
ಮುಮ. ಹೋಗ್ಲಿ, ರಾಜ್ಯಪಾಲ್ರುದು ಏನಂತ
ಕಿ, ಸರಕಾರ ದಾರಿ ತಪ್ಪಿದೆ ಅಂತೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೈಬಿಡಬೇಕಂತೆ ಮತ್ತು ಬಿಜೆಪಿ ಹಮ್ಮಿಕೊಂಡಿರುವ ಗೋಹತ್ಯೆ ಜಾಗೃತಿ ಸಭೆಗಳನ್ನು ಕೈಬಿಡಬೇಕಂತೆ, ಖಾನಾಪುರ ಶಾಸಕರ ಮೇಲೆ ಕ್ರಮ ತಗೊಬೇಕಂತೆ, ದೊಡ್ಡ ಲಿಸ್ಟ್ ಕೊಟ್ಟವ್ರೇ.
ಮುಮ, ಅಲ್ಲಾ ಈ ಮನುಷ್ಯ ರಾಜಭವನದೊಳಗೆ ಲಾಯಾಕ್ಕೇನ್ರೀ, ಅಲ್ಲಿ ಕುಂತು ಸರಕಾರಕ್ಕೆ ಚಟ್ಟಕಟ್ಟ ಕೆಲಸ ಮಾಡ್ತಾನಲ್ರಿ, ಎಐಸಿಸಿ, ಕೆಪಿಸಿಸಿ ಕಚೇರಿಯೊಳಗೆ ಇರಬೇಕಾದ ವ್ಯಕ್ತಿ ರಾಜಭವನಕ್ಕೆ ಬಂದ್ರ ಆಗೋದು ಹಿಂಗೆ...
ಕಿ, ಅದೂ ಅಲ್ದ ದೇವೇಗೌಡ್ರು ಮತ್ತೊಮ್ಮೆ ರಾಜಭವನದೊಳಗ ಕಾಲಿಟ್ಟ ಬಂದಾರು. ಸಿದ್ರಾಮಣ್ಣನೂ...
ಮುಮ. ಹೋಗ್ಲಿ ಬಿಡು ಆ ಗೌಡಪ್ಪನ ಸುದ್ದಿ ತಗೀಬೇಡ.

ಕಿ, ಸರ್ ಶೇಷಾದ್ರಿ ಪುರಂನಿಂದ ಅಣ್ಣವ್ರು ಕಾಲ್ ಮಾಡಿದ್ರು,
ಮುಮ. ಏನಂದ್ರು...ಏನಂದ್ರು
ಕಿ, ಅದೇ ಸರ, ಅದೇನು ಮಾಡ್ತಾರೋ ಗೊತ್ತಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರೋದನ್ನು ಹಿಂದಕ್ಕೆ ಪಡಿಬಾರದಂತೆ, ಗೋಹತ್ಯೆ ಜಾಗೃತಿ ಸಭೆಗಳಿಗೆ ಅಂಗ ಸಂಸ್ಥೆಗಳು ಕೈಜೋಡಿಸ್ತವಂತೆ, ಯಾರಿಗೂ ಹೆದರಬಾರದು ಅಂತ ಹೇಳಿದ್ರು, ಮತ್ತು ಖಾನಾಪುರ ಶಾಸಕರ ಕುರಿತು ನೀವು ಕೊಟ್ಟಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕ ಪ್ರಹ್ಲಾದ್ ರೆಮಾನೆ ಮೇಲೆ ಯಾವ ಕಾರಣಕ್ಕೂ ಕ್ರಮ ಜರುಗಿಸಬಾರದು ಎಂದು ಆರ್ಡರ್ ಮಾಡಿದ್ದಾರೆ.
ಮುಮ. ಯಾರ ಮಾತಂತ ಕೇಳಬೇಕು. ಒಂದ್ಕಡೆ ಪ್ರತಿಪಕ್ಷಗಳು, ರಾಜ್ಯಪಾಲ್ರು, ಪ್ರವಾಹ, ಶೇಷಾದ್ರಿಪುರಂ, ಯಾವ ಕಡೆ ಅಂತ ಸಾಯೋದು ಅಂತೀನಿ.

ಕಿ. ಸರ್ ಬಳ್ಳಾರಿಯಿಂದ ಬ್ರದರ್ಸ್ ಫೋನ್ ಮಾಡಿದ್ರು,
ಮುಮ. ಏನಂತ...
ಕಿ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಲಾಡ್ ಬ್ರದರ್ಸ್ ಗಳನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕು. ಅದಕ್ಕಾಗಿ ಅವರ ಕಂಪನಿಗಳ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡ್ತಾರಂತ ಮುಖ್ಯಮಂತ್ರಿಯವರಿಗೆ ಹೇಳು ಅಂತ ಹೇಳಿದ್ರು.
ಮುಮ. ಈ ರೆಡ್ಡಿಗಳ ವರ್ತನೆ ಅತಿಯಾಯ್ತು. ಅವಕಾಶ ಸಿಕ್ಕಿತ್ತು ಆ ಸಿದ್ರಾಮಣ್ಣ ಮಾತು ಕೇಳಿ ಸಿಬಿಐ ತನಿಖೆಗೆ ವಹಿಸಿದ್ರ ಬೇಷ್ ಇರ್ತಿತ್ತು.
ಕಿ. ಸರ್ ಈಗದು ಮುಗಿದು ಹೋಗಿರೋ ಕಥೆ, ಅವಕಾಶ ಸಿಕ್ಕಿತ್ತು ಹೊಸಕಿ ಹಾಕಿದ್ರ ಆಗ್ತಿತ್ತು. ಆದ್ರ ನೀವೂ ಆ ಸುಷ್ಮಾ ಸ್ವರಾಜ್ ಗೆ ಹೆದರಿ ಅವಕಾಶ ಕಳಕೊಂಡ್ರೀ.
ಮುಮ. ದುಡಿಕಿದ್ರ ಮುಖ್ಯಮಂತ್ರಿ ಸೀಟು ಕಳಕೊಂಡು ಮಂಗ್ಯಾ ಆಗ್ತಿದ್ದೆ. ಕಾರ್ಯವಾಸಿಕತ್ತೆ ಕಾಲು ಹಿಡಿದ್ರಾಯಿತು.
ಕಿ. ಸರ್, ಅನಿಲ್ ಲಾಡ್ ಲೈನ್ ನಲ್ಲಿ ಇದಾರೆ,
ಮುಮ. ಎನಂತ...
ಕಿ. ನಿಮ್ಮ ಜೊತೆ ಮಾತನಾಡಬೇಕೆಂತೆ.
ಮುಮ. ಹಲೋ
ಸರ್ ನಾನು ಅನಿಲ್ ಲಾಡ್ ಬಳ್ಳಾರಿಯಿಂದ
ಮುಮ. ಓಹೋ ಏನ್ರೀ...
ಅ.ಲಾ. ಮುಖ್ಯಮಂತ್ರಿಗಳೆ ನಿಮ್ಮ ಸಚಿವರು ದ್ವೇಷದ ರಾಜಕೀಯ ಮಾಡುತ್ತಿದ್ದು, ಸಚಿವರ ಅಣತಿಯಂತೆ ಇಂದು ನಮ್ಮ ಕಚೇರಿ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮುಮ. ಹೌದಾ ನನಗೆ ಗೊತ್ತೆ ಇಲ್ಲಾ. ಇನ್ನೆರಡು ದಿನ ಬಿಟ್ಟು ನಾನೇ ಖುದ್ದಾಗಿ ಬಳ್ಳಾರಿಗೆ ಬರುವೆ. ಇದರ ಬಗ್ಗೆ ಅಲ್ಲಿ ಪರಿಶೀಲನೆ ನಡೆಸುವೆ (ಫೋನ್ ಕಟ್). ಒಂದರ ಮೇಲೊಂದು ಸಮಸ್ಯೆ ಕ್ರಿಯೇಟ್ ಮಾಡ್ತಾಯಿದ್ದಾರಲ್ರೀ. ಈ ರೆಡ್ಡಿಗಳನ್ನು ಏನ್ ಮಾಡಬೇಕು ಅಂತಾನೆ ತಿಳಿತಾಯಿಲ್ಲ.

ಕಿ. ಸರ್ ನಮ್ಮ ಸರಕಾರಕ್ಕೆ ಮತ್ತೊಂದು ಗಂಡಾತರ ಎದುರಾಗಿದೆ?
ಮುಮ. ಏನದು
ಕಿ, ಇಷ್ಟು ದಿವಸ ಕ್ರಿಶ್ಚಿಯನ್ ಮಷೀನರಿಗಳು ಹಿಂದೂಗಳನ್ನು ಕ್ರಿಶ್ಚಿಯನ್ನ ಧರ್ಮಕ್ಕೆ ಮತಾಂತರ ಮಾಡ್ತಿದ್ವು ಇದೀಗ ನಮ್ಮ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಮತಾಂತರಕ್ಕೆ ಮುಂದಾಗಿದ್ದಾರೆ.
ಮುಮ. ಆಂ ಏನಂದೀ...
ಕಿ, ಹೌದು ಸರ್ ಸುಳ್ಳಲ್ಲ...ಮೊನ್ನೆ ಮೈಸೂರಿನ ದಲಿತರ ಕಾಲೋನಿಗೆ ಭೇಟಿ ನೀಡಿದ ಶ್ರೀಗಳು ದಲಿತರನ್ನು ವೈಷ್ಣವ ಧರ್ಮಕ್ಕೆ ಮತಾಂತರವಾಗಿ ನಾನು ದೀಕ್ಷೆ ಕೊಡುವೆ ಹೇಳಿದ್ದಾರೆ.
ಮುಮ. ಅಯ್ಯೋ ಏನಯ್ಯ ಕಿಲಿಬಿಲ್ಲಿ ಮುಖ್ಯಮಂತ್ರಿ ಪದವಿನೇ ಸಾಕಾಗಿ ಹೋಯ್ತಲ್ಲೋ?
ಕಿ, ಸರ್ ದೌಡು ನೀವು ಶ್ರೀಗಳನ್ನು ಭೇಟಿ ಮಾಡಿ ಚರ್ಚೆ ಮಾಡಿಬಿಡಿ. ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳಬಾರದು. ಅತ್ಲಾಗ ಬರ್ನಾರ್ಡ್ ಮೊರೆಸ್ ಅವರ ಭೇಟಿಗೆ ದಿನಾಂಕ ಪಿಕ್ಸ್ ಮಾಡ್ತೀನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X