ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡತಿನಿ ರೈತರ ಆಹೋರಾತ್ರಿ ಧರಣಿ ಆರಂಭ

By Mahesh
|
Google Oneindia Kannada News

Kudatini Farmers protest
ಬಳ್ಳಾರಿ, ಆ. 30: ಕುಡತಿನಿ ಬಳಿ ನಿರ್ಮಾಣ ಆಗುತ್ತಿರುವ ಲಕ್ಷ್ಮೀ ಮಿತ್ತಲ್ ಮತ್ತು ಬ್ರಹ್ಮಿಣಿ ಕೈಗಾರಿಕೆಗಳಿಗಾಗಿ ಸರ್ಕಾರ ಸ್ವಾಧೀನ ಮಾಡಿಕೊಳ್ಳುತ್ತಿರುವ ಪ್ರತೀ ಎಕರೆಗೆ 77 ಲಕ್ಷ ರು. ಪರಿಹಾರ ಬೆಲೆಯನ್ನು ನಿಗದಿ ಮಾಡಲು ಆಗ್ರಹಿಸಿ ಭೂ ಸಂತ್ರಸ್ತ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು 24 ತಾಸುಗಳ ಅಹೋರಾತ್ರಿ ಪ್ರತಿಭಟನೆಯನ್ನು ಸೋಮವಾರ ಪ್ರಾರಂಭಿಸಿದ್ದಾರೆ.

ಈ ಕೈಗಾರಿಕೆಗಳ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಂಚಾಲಕ ಎಂ. ಬಸವರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಪ್ರಾರಂಭ ಆಗಿದ್ದು, ಕುಡತಿನಿ ಗ್ರಾಮ ವಾಡಾ ವ್ಯಾಪ್ತಿಗೆ ಸೇರಿದೆ. ಕಾರಣ ಇಲ್ಲಿಯ ಭೂಮಿಗಳು ನಿರೀಕ್ಷಿಸಿದ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಕೈಗಾರಿಕೆಗಳಿಗಾಗಿ ಮಾರಾಟ ಆಗುತ್ತವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಈ ನಿಟ್ಟಿನಲ್ಲಿ ಈ ಗ್ರಾಮದ ಸುತ್ತಲೂ ಪ್ರತಿ 30X40 ನಿವೇಶನಕ್ಕೆ ಕನಿಷ್ಠ ಬೆಲೆಯೇ 8 ರಿಂದ 15ಲಕ್ಷ ರು. ಬೆಲೆ ಇದೆ. ಆದರೆ, ಸರ್ಕಾರ ವಶಕ್ಕೆ ತೆಗೆದುಕೊಳ್ಳುತ್ತಿರುವ ಭೂಮಿಗೆ ಅತೀ ಕಡಿಮೆ ಬೆಲೆ ನಿಗಧಿ ಮಾಡಿ ರೈತರನ್ನು ವಂಚಿಸುತ್ತಿದೆ. ರೈತರ ತಾಳ್ಮೆ ಪರೀಕ್ಷಿಸುತ್ತಿದೆ. ರೈತರು ಕೈಗಾರಿಕೆಗಳ ಸ್ಥಾಪನೆಗೆ ಭೂಮಿಯನ್ನು ನೀಡುತ್ತಿರುವುದನ್ನೂ ಹತ್ತಿಕ್ಕಿ, ರೈತ ಚಳವಳಿನ್ನು ಹತ್ತಿಕ್ಕುತ್ತಿದೆ ಎಂದರು.

ಕಂದಾಯ ಇಲಾಖೆ ಮತ್ತು ಕೈಗಾರಿಕೆಗಳಿಗಾಗಿ ಭೂ ಸ್ವಾಧೀನಕ್ಕೆ ತೆಗೆದುಕೊಳ್ಳುವ ಕೆಐಡಿಬಿಯ ಪ್ರಕಾರವೇ ಆಯಾ ತಾಲೂಕಿನ ಅತೀ ಹೆಚ್ಚು ಬೆಲೆಗೆ ಮಾರಾಟ ಆದ ಭೂಮಿಯ ಬೆಲೆಯನ್ನು ಪರಿಹಾರಕ್ಕೆ ಪರಿಗಣಿಸಿ ಅದರ ೧೦ ರಷ್ಟು ಬೆಲೆಯನ್ನು ಹೆಚ್ಚಳ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಇದು ಸರ್ಕಾರವೇ ರೂಪಿಸಿರುವ ವೈಜ್ಞಾನಿಕ ಪದ್ಧತಿ ಎಂದು ಅವರು ತಿಳಿಸಿದ್ದಾರೆ.

ಆದರೆ, ಜಿಲ್ಲಾಡಳಿತ ಮತ್ತು ಸರ್ಕಾರ ಬಂಡವಾಳಶಾಹಿಗಳ ಏಜೆಂಟರಂತೆ ಕಾರ್ಯನಿರ್ವಹಿಸಿ ರೈತರನ್ನು ವಂಚಿಸುತ್ತಿವೆ. ರೈತ ವಿರೋಧಿ ನಿಲುವನ್ನು ತಾಳುತ್ತಿವೆ. ರೈತರು ತಮ್ಮ ಕುಟುಂಬದ ಆದಾಯ ಮೂಲ ಅಥವಾ ಆಧಾರ ಸ್ಥಂಭ ಆಗಿರುವ ಭೂಮಿಯನ್ನೇ ಕೈಗಾರಿಕೆಗಳ ಸ್ಥಾಪನೆಗೆ ನೀಡುವ ಮೂಲಕ ದೇಶದ ಕೈಗಾರಿಕಾ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಈ ವಿಷಯವನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಕಡೆಗಣಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ತೀವ್ರವಾಗಿ ಟೀಕಿಸಿದರು.

ಬಳ್ಳಾವಿ ವಿಮಾನ ನಿಲ್ದಾಣ ವಿವಾದ: ಬಳ್ಳಾರಿ ತಾಲೂಕಿನ ಸಿರವಾರ - ಚಾಗನೂರು ಗ್ರಾಮಗಳ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ರೈತರಿಗೆ ನೀಡಿದ ಪರಿಹಾರ ಪದ್ಧತಿಯನ್ನೇ ಜಿಲ್ಲಾಡಳಿತ ಇವರಿಗೂ ಅನ್ವಯ ಮಾಡಿದಲ್ಲಿ, ಈ ಗ್ರಾಮಗಳ ಕನಿಷ್ಠ ಬೆಲೆ 50 ಲಕ್ಷ ರು. ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ರೈತಪರ ನಿಲುವು ತಾಳಬೇಕು. ಜಿಲ್ಲಾಧಿಕಾರಿಗಳು ರೈತರ ಸಂಕಷ್ಟಗಳನ್ನು, ಭವಿಷ್ಯದ ಸವಾಲುಗಳ ಕುರಿತು ಅರ್ಥ ಮಾಡಿಕೊಳ್ಳಬೇಕು. ರೈತರ ಮತ್ತು ಸರ್ಕಾರದ ಮಧ್ಯವರ್ತಿ ಆಗಿರುವ ಜಿಲ್ಲಾಧಿಕಾರಿಗಳು ರೈತಪರ ನಿಲುವು ತಾಳದೇ ಇದ್ದಲ್ಲಿ ಸರ್ಕಾರ ರೈತವಿರೋಧಿ ನಿಲುವು ತಾಳುವುದು ಖಚಿತ ಎಂದು ಅವರು ಮನವಿ ಮಾಡಿದರು.

ಈ ಪ್ರತಿಭಟನೆಯಲ್ಲಿ ಕುಡತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು, ಎರ್ರಂಗಳಿ, ಸಿದ್ಧಮ್ಮನಹಳ್ಳಿ ಗ್ರಾಮಗಳ ಭೂ ಸಂತ್ರಸ್ತ ರೈತರು ಮತ್ತು ರೈತಪರ ಚಳವಳಿಗಾರರು, ವಿವಿಧ ಸಂಘಟನೆಗಳ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆಗಸ್ಟ್ 31ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಸಮಾರೋಪಗೊಳ್ಳಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X