ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದ್ ಅಸ್ನೋಟಿಕರ್ ರಾಜೀನಾಮೆಗೆ ಸಿಪಿಐ ಪಟ್ಟು

By Prasad
|
Google Oneindia Kannada News

Anand Asnotikar
ಬಳ್ಳಾರಿ, ಆ.28 : ಬೆಲೆಕೇರಿಯ ಬಂದರಿನಿಂದ ಅಕ್ರಮವಾಗಿ ಅದಿರನ್ನು ವಿದೇಶಗಳಿಗೆ ಸಾಗಿಸಿದ ಆರೋಪ ಹೊತ್ತಿರುವ ಸಚಿವ ಆನಂದ್ ಅಸ್ನೋಟಿಕರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಸಿಪಿಐ(ಎಂ) ಪಟ್ಟುಹಿಡಿದಿದೆ.

ರಾಜೀನಾಮೆಗೆ ಆಗ್ರಹಿಸಿರುವ ಸಿಪಿಐ(ಎಂ)ನ ರಾಜ್ಯ ಘಟಕದ ಕಾರ್ಯದರ್ಶಿ ಜಿ.ಎನ್. ನಾಗರಾಜ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 'ಆಪರೇಷನ್ ಕಮಲಕ್ಕೆ' ಪ್ರೋತ್ಸಾಹಿಸಿದ್ದೇ ಅಕ್ರಮ ಗಣಿಗಾರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಹರಿಹಾಯ್ದರು.

ನೈತಿಕವಾಗಿ ಮತ್ತು ಚಾರಿತ್ರಿಕವಾಗಿ ಪರಿಶುದ್ಧರು ಎಂದು ಕರೆದುಕೊಳ್ಳುವ ಬಿಜೆಪಿ ಕಳಂಕಿತರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುವುದಕ್ಕಿಂತ ವಜಾ ಮಾಡಿ ತಮ್ಮ ಶುದ್ಧತೆಯನ್ನು, ಪ್ರಾಮಾಣಿಕತೆಯನ್ನು ತೋರಬೇಕು. ಆದರೆ, ಬಿಜೆಪಿಯವರು ಪರರಿಂದ ಮಾತ್ರ ಪರಿಶುದ್ಧತೆ, ಪ್ರಾಮಾಣಿಕತೆ ನಿರೀಕ್ಷಿಸುವವರು ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಬ್ಬಿಣದ ಅದಿರು ರಫ್ತು ನಿಷೇಧ ಕುರಿತು ರಾಜ್ಯ ಸರಕಾರ ಮೊಸಳೆಕಣ್ಣೀರು ಸುರಿಸುತ್ತಿದೆ. ರಫ್ತು ನಿಷೇಧಿಸಿದ್ದರೂ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿದೆ. ಕಬ್ಬಿಣದ ಅದಿರಿನ ರಫ್ತು ನಿಂತಿಲ್ಲ ಎಂದು ಲೋಕಾಯುಕ್ತರೇ ಸ್ಪಷ್ಟಪಡಿಸಿದ್ದಾರೆ. ಆದರೂ, ಸರಕಾರ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ ಎಂದು ನಾಗರಾಜ್ ಕಂಡ ಕಾರಿದರು.

ಕಾಂಗ್ರೆಸ್ ಕೂಡ ಕಬ್ಬಿಣದ ಅದಿರು ರಫ್ತು ಕುರಿತು ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸುತ್ತದೆ, ಆದರೆ, ಕೇಂದ್ರದಲ್ಲಿ ಕಬ್ಬಿಣದ ಅದಿರು ರಫ್ತು ನಿಷೇಧ ಸಾಧ್ಯವೇ ಇಲ್ಲ ಎನ್ನುತ್ತಿದೆ. ಇದೆಂಥಾ ನೀತಿ ಎಂದು ಅವರು ಪ್ರಶ್ನಿಸಿದರು.

ಅಸ್ನೋಟಿಕರ್ ಪ್ರತಿಕ್ರಿಯೆ : ಸಿಪಿಐ ರಾಜೀನಾಮೆ ಆಗ್ರಹಕ್ಕೆ ರಾಯಚೂರಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಆನಂದ್ ಅಸ್ನೋಟಿಕರ್ ಅವರು. ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದೇನೆ. ಇನ್ನೂ ಹೆಚ್ಚಿನ ಜವಾಬ್ದಾರಿ ಕೊಡುವ ಭರವಸೆಯನ್ನು ಯಡಿಯೂರಪ್ಪ ಅವರು ನೀಡಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X