Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಅತ್ಯುತ್ತಮ ದೇಶಗಳ ಪಟ್ಟಿ ಭಾರತಕ್ಕೆ 78 ನೇಸ್ಥಾನ

Posted by:
Published: Monday, August 23, 2010, 11:07 [IST]
 

ನ್ಯೂಯಾರ್ಕ್, ಆ.23: ವಿಶ್ವದ ಅತ್ಯುತ್ತಮ ದೇಶಗಳ ಪಟ್ಟಿಯಲ್ಲಿ ಭಾರತ 78 ನೇ ಸ್ಥಾನ ಪಡೆದಿದೆ. ನ್ಯೂಸ್‌ವೀಕ್ ನಿಯತಕಾಲಿಕ ಈ ಪಟ್ಟಿಯನ್ನು ಆರೋಗ್ಯ, ಶಿಕ್ಷಣ, ಆರ್ಥಿಕತೆ ಮತ್ತು ರಾಜಕೀಯ ಬೆಳವಣಿಗೆ ಆಧಾರದ ಮೇಲೆ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧಪಡಿಸಲಾಗಿದೆ.

ಭಾರತದ ನೆರೆ ರಾಷ್ಟ್ರಗಳ ಪೈಕಿ ಚೀನಾ 59ನೇ ಸ್ಥಾನದಲ್ಲಿದೆ. ಶ್ರೀಲಂಕಾ 66ನೇ ಸ್ಥಾನದಲ್ಲಿದ್ದರೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಅನುಕ್ರಮವಾಗಿ 88 ಮತ್ತು 89ನೇ ಸ್ಥಾನದಲ್ಲಿವೆ.

ಟಾಪ್ 20 ರಲ್ಲಿ ಏಷ್ಯಾದ ಜಪಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ ಈ ಮೂರು ರಾಷ್ಟ್ರಗಳು ಮಾತ್ರ ಸ್ಥಾನ ಪಡೆದಿವೆ. ಮೊದಲ ನಾಲ್ಕು ಸ್ಥಾನಗಳು ಫಿನ್‌ಲ್ಯಾಂಡ್, ಸ್ವಿಡ್ಜರ್ ಲ್ಯಾಂಡ್, ಸ್ವೀಡನ್ ಮತ್ತು ಆಸ್ಟ್ರೇಲಿಯಾಕ್ಕೆ ಸಂದಿವೆ.

ಅಮೆರಿಕ 11ನೇ ಸ್ಥಾನ, ಜರ್ಮನಿ 12ನೇ ಮತ್ತು ಬ್ರಿಟನ್ 14ನೇ ಸ್ಥಾನದಲ್ಲಿವೆ. ನ್ಯೂಸ್‌ವೀಕ್ ನ ಮೊತ್ತಮೊದಲ ಅತ್ಯುತ್ತಮ ದೇಶಗಳ ವಿಶೇಷ ಸಂಚಿಕೆಯಲ್ಲಿ ಸರಳ ಪ್ರಶ್ನೆಯೊಂದಕ್ಕೆ ಉತ್ತರಿಸುವ ಪ್ರಯತ್ನ ನಡೆಸಲಾಗಿದೆ ಎಂದು ಉಪ ಸಂಪಾದಕ ರಾಣಾ ಫೂರೋಹರ್ ಹೇಳಿದ್ದಾರೆ.

'ಇಂದು ಜನಿಸಿದವರಿಗೆ, ಯಾವ ದೇಶವು ನಿಮಗೆ ಆರೋಗ್ಯಪೂರ್ಣ, ಸುರಕ್ಷಿತ, ಯಶಸ್ವಿ ಮತ್ತು ಅಭ್ಯುದಯದ ಜೀವನ ನಡೆಸಲು ಅತ್ಯುತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ?' ಎಂಬುದೇ ಆ ಪ್ರಶ್ನೆ. ಶಿಕ್ಷಣ, ಆರೋಗ್ಯ, ಆರ್ಥಿಕ ಚಲನಶೀಲತೆ ಮತ್ತು ಜೀವನ ಗುಣಮಟ್ಟದಂತಹ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯ ಆಧಾರದಲ್ಲಿ ಶ್ರೇಯಾಂಕ ನೀಡಲಾಗಿದೆ.

ಭಾರತವನ್ನು 120 ಕೋಟಿ ಜನಸಂಖ್ಯೆ ಹೊಂದಿರುವ ಮತ್ತು ತಲಾ 1,170 ಅಮೆರಿಕ ಡಾಲರ್‌ನಷ್ಟು ಸಣ್ಣ ಪ್ರಮಾಣದ ತಲಾ ಆದಾಯ ಹೊಂದಿರುವ ದೇಶ ಎಂದು ಬಣ್ಣಿಸಲಾಗಿದೆ. ಅಭಿಪ್ರಾಯ ಸ್ವಾತಂತ್ರ್ಯ, ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ಚುನಾವಣಾ ಪ್ರಕ್ರಿಯೆಗಳಿಗಾಗಿ ಭಾರತ, ಪಾಕಿಸ್ತಾನಕ್ಕಿಂತ ಮುಂದಿದೆ.

ಜೀವನ ಗುಣಮಟ್ಟ ವಿಭಾಗದಲ್ಲಿ ಶೇ.75ರಷ್ಟು ಜನರು ದಿನಕ್ಕೆ 2 ಡಾಲರ್‌ಗೂ ಕಡಿಮೆ ವೆಚ್ಚದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಿಶ್ವಬ್ಯಾಂಕ್ ಅಂಕಿಅಂಶವನ್ನು ಉಲ್ಲೇಖಿಸಿ ಹೇಳಲಾಗಿದೆ. ವಿಶ್ವಬ್ಯಾಂಕಿನ ಅಂಕಿಅಂಶ ಪ್ರಕಾರ ವ್ಯವಹಾರ ನಡೆಸುವ ವಿಭಾಗದಲ್ಲಿ ಭಾರತ 133ನೇ ಶ್ರೇಯಾಂಕ ಪಡೆದಿದೆ.

ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like